ತುಮಕೂರು :
ಕೋವಿಡ್ ಎರಡನೆ ಅಲೆ ಮಾನಸಿಕ ವ್ಯಾಕುಲತೆಯ ಜೊತೆಗೆ ಇನ್ನಿತರ ಸಮಸ್ಯೆಗಳನ್ನು ತಂದೊಡ್ಡಿದೆ. ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಜನತೆಗೆ ವೈದ್ಯಕೀಯ ವೆಚ್ಚಗಳು ದುಬಾರಿಯಾಗತೊಡಗಿವೆ. ಸಣ್ಣಪುಟ್ಟ ಕಾಯಿಲೆಗಳಿಗೂ ನಿಯಮಾನುಸಾರ ತಪಾಸಣೆ ಅನಿವಾರ್ಯವಾಗಿದ್ದು, ಯಾವುದಾದರೊಂದು ಸಣ್ಣ ಕಾಯಿಲೆ ಕಾಣಿಸಿಕೊಂಡರೂ ಜನತೆ ಹೌಹಾರುತ್ತಿದ್ದಾರೆ.
ಕಳೆದ ವರ್ಷದ ಪರಿಸ್ಥಿತಿ ಈ ರೀತಿ ಇರಲಿಲ್ಲ. ಸೋಂಕಿನ ಪ್ರಮಾಣ ಕಡಿಮೆ ಇದ್ದಂತೆ ಸಾವಿನ ಸಂಖ್ಯೆಯೂ ಕಡಿಮೆ ಇತ್ತು. ಒಂದೋ, ಎರಡೋ ಪ್ರಕರಣಗಳೇ ಅತಿರಂಜಿತವಾಗಿ ವರದಿಯಾಗುತ್ತಾ ಅತ್ತ ಕಡೆಗೆ ಎಲ್ಲರ ಕಣ್ಣು ಕೇಂದ್ರೀಕರಿಸುತ್ತಿತ್ತು. ಕೂಡಲೇ ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳು ಜರುಗುತ್ತಿದ್ದವು. ನಿಯಂತ್ರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಸಜ್ಜುಗೊಳ್ಳುತ್ತಿದ್ದವು. ಆರೋಗ್ಯ ಸಮಸ್ಯೆ ಇದ್ದರೂ ಸಹ ಈಗಿನಷ್ಟು ಆತಂಕವಾಗಿರಲಿಲ್ಲ.
ಏಪ್ರಿಲ್‍ನಿಂದ ಏರುಗತಿಯಲ್ಲಿಯೇ ಸಾಗಿದ ಎರಡನೇ ಅಲೆಯ ಸೋಂಕು ಪ್ರಕರಣಗಳು ನಿರೀಕ್ಷೆಗೂ ಮೀರಿ ವರದಿಯಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಗಳೂ ಸಹ ಕೋವಿಡ್ ಚಿಕಿತ್ಸೆ ನೀಡುತ್ತಿವೆ. ಇಷ್ಟಾದರೂ ಜನರಿಗೆ ಬೆಡ್ ಸಿಗುತ್ತಿಲ್ಲ. ತುರ್ತು ಇರುವವರಿಗೆ ಆಕ್ಸಿಜನ್ ವ್ಯವಸ್ಥೆಯಾಗುತ್ತಿಲ್ಲ. ಈ ನಡುವೆ ಸಾವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿವೆ. ಕೋವಿಡ್ ಸೋಂಕು ಹಾಗೂ ಸಾವಿನ ಹೆಚ್ಚಳ ಕಂಡು ಜನತೆ ಅಧೀರರಾಗುತ್ತಿದ್ದಾರೆ. ಈ ಅಧೀರತೆ ಮತ್ತು ಭಯವೇ ಸಾಕಷ್ಟು ರೋಗಿಗಳ ಪ್ರಾಣ ಹಿಂಡಿದೆ.
ದುಬಾರಿ ಚಿಕಿತ್ಸೆ :
ಕೋವಿಡ್‍ಗಿಂತ ಮೊದಲು ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಸಾಮಾನ್ಯ ಕಾಯಿಲೆಗಳಾಗಿದ್ದವು. ಆರಂಭಿಕ ಹಂತದಲ್ಲಿ ಮನೆಯಲ್ಲಿಯೇ ವಾಸಿಯಾಗಬಹುದಾದ ಕಾಯಿಲೆಗಳು ಇವು. ಜ್ವರ ವಿಪರೀತವಾದಾಗ ಮಾತ್ರವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತಿದ್ದರು. ಏಕೆಂದರೆ, ಕೇವಲ ನೂರಾರು ರೂ.ಗಳಲ್ಲಿ ವಾಸಿಯಾಗಬಹುದಾದ ಸಾಮಾನ್ಯ ಕಾಯಿಲೆಗಳಿಗೆ ಜನ ಹೆದರುತ್ತಿರಲಿಲ್ಲ. ಇತರೆ ಕಾಯಿಲೆಗಳಿಗಷ್ಟೆ ಜನ ಹೆದರುತ್ತಿದ್ದರು. ಈಗ ಎಲ್ಲವೂ ಉಲ್ಟಾ ಆಗುತ್ತಿದೆ. ಜ್ವರ, ಕೆಮ್ಮು ಕಾಣಿಸಿಕೊಂಡರೆ ಸಾಕು ಜನ ಭಯಭೀತರಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಅರಿವು ಮೂಡತೊಡಗಿದ್ದು, ಯಾವುದೇ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರ ಬಳಿ ತೆರಳುವುದು ಕಂಡುಬರುತ್ತಿದೆ.
ತಾಲ್ಲೂಕು ಆಸ್ಪತ್ರೆಗಳಿಂದ ಹಿಡಿದು ಜಿಲ್ಲಾ ಮಟ್ಟದ ಆಸ್ಪತ್ರೆಗಳ ತನಕ ಸಾಗಿಬರುತ್ತಿರುವ ರೋಗಿಗಳ ಸಾಲು ದಿನೆ ದಿನೆ ಹೆಚ್ಚುತ್ತಿದ್ದು, ತಮಗರಿವಿಲ್ಲದಂತೆಯೇ ಹಣ ಜೇಬಿನಿಂದ ಖಾಲಿಯಾಗುತ್ತಿದೆ. ಕೋವಿಡ್ ತಪಾಸಣೆ, ವರದಿ, ಎಕ್ಸ್‍ರೇ, ಸಿ.ಟಿ.ಸ್ಕ್ಯಾನ್, ಲ್ಯಾಬ್ ಟೆಸ್ಟ್.., ಹೀಗೆ ಒಂದರ ಹಿಂದೆ ಮತ್ತೊಂದು ತಪಾಸಣೆಗಳು ಹೆಚ್ಚುತ್ತಿದ್ದು, ಇವುಗಳಿಗೆ ಒಳಗಾಗುವುದೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಇವೆಲ್ಲವೂ ಈಗ ಅನಿವಾರ್ಯವಾಗಿದೆ.
ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಈ ಆಸ್ಪತ್ರೆಗಳೆಂದರೆ ಮೂಗು ಮುರಿಯುತ್ತಿದ್ದ, ಬಡವರಿಗಷ್ಟೆ ಸರಿ ಎಂದು ಗೊಣಗುತ್ತಿದ್ದವರೆಲ್ಲ ಈಗ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅವಕಾಶ ಸಿಗದೆ ಸ್ವಲ್ಪ ತಕ್ಕಮಟ್ಟಿಗೆ ಇರುವವರು ಜೀವ ಉಳಿದರೆ ಸಾಕೆಂದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ವೈದ್ಯಕೀಯ ವೆಚ್ಚ ದುಬಾರಿಯಾಗಿದ್ದು, ಹಿಂದೆಲ್ಲ ಕಡಿಮೆ ದರದಲ್ಲಿ ಸಿಗುತ್ತಿದ್ದ ಸಿ.ಟಿ.ಸ್ಕ್ಯಾನ್ ದರ ಈಗ 5 ಸಾವಿರ ರೂ. ಮೇಲ್ಪಟ್ಟಾಗಿದೆ.
ಹಣಕ್ಕಾಗಿ ಪರದಾಟ :
ಕೋವಿಡ್ ಸೋಂಕಿಗೆ ಒಳಗಾಗಿ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳ ಪೋಷಕರ ಸ್ಥಿತಿ ಈಗ ಚಿಂತಾಜನಕ. ಒಂದು ಕಡೆ ಕುಟುಂಬಸ್ಥನ ಪ್ರಾಣ ಉಳಿಸಿಕೊಳ್ಳುವ ಧಾವಂತ. ಮತ್ತೊಂದು ಕಡೆ ಇತರೆ ಸದಸ್ಯರಿಗೆ ಸೋಂಕು ತಗಲುವ ಅಪಾಯ. ಮಗದೊಂದು ಕಡೆ ವೆಚ್ಚ ಹೊಂದಿಸುವ ಹೊಣೆಗಾರಿಕೆ. ಕೋವಿಡ್ ಸಂಕಷ್ಟದಿಂದ ಈಗಾಗಲೇ ಹೈರಾಣಾಗಿ ಹೋಗಿರುವ ಜನತೆ ಆರ್ಥಿಕ ಸಂಕಷ್ಟದಲ್ಲಿ ನರಳುತ್ತಿದ್ದು, ಆಸ್ಪತ್ರೆಯ ವೆಚ್ಚಗಳನ್ನು ಹೊಂದಿಸಲು ಪರದಾಡುತ್ತಿರುವ ದೃಶ್ಯಗಳು ಮನಕಲಕುತ್ತಿವೆ. ಬಂಧು ಬಳಗ, ಆಪ್ತರು ಸಹಾಯ ಮಾಡುವ ಜನರು ಇರುವವರಿಗೆ ತೊಂದರೆ ಇಲ್ಲ. ಆದರೆ ಆರ್ಥಿಕವಾಗಿ ತೀರಾ ಹಿಂದುಳಿದಿರುವ, ಬಂಧು ಬಳಗದಿಂದ ದೂರವೇ ಇರುವವರು ಹಣ ಹೊಂದಿಸಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ.
ಇಲಾಖಾ ಯೋಜನೆಗಳು :
ಸರ್ಕಾರಿ ವ್ಯವಸ್ಥೆ ಅಡಿಯಲ್ಲಿ ಕೆಲವು ಯೋಜನೆಗಳಿವೆ. ಆರೋಗ್ಯಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿದಾಗ ಅಂತಹ ರೋಗಿಗಳನ್ನು ಸರ್ಕಾರಿ ಚಿಕಿತ್ಸಾ ವೆಚ್ಚದಲ್ಲಿಯೇ ನೀಡಬೇಕು. ಆದರೆ ಎಲ್ಲರಿಗೂ ಇದು ಸಾಧ್ಯವಾಗುತ್ತಿಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಎಂಬ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಸೋಂಕಿತರಿಗೆ ಚಿಕತ್ಸಾ ವೆಚ್ಚ ಸಿಗುವಂತಾಗಬೇಕು ಎಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಯಾವ ಪುರುಷಾರ್ಥಕ್ಕೆ ಎಂದು ಟೀಕೆಗಳೂ ವ್ಯಕ್ತವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ