ತುಮಕೂರು : ಬ್ಲಾಕ್ ಫಂಗಸ್‍ಗೆ ಜಿಲ್ಲೆಯಲ್ಲಿ ಮೊದಲ ಬಲಿ?

 ತುಮಕೂರು :

      ಕೋವಿಡ್ ಬಾಧೆಯಿಂದ ತತ್ತರಿಸುತ್ತಿರುವ ಜಿಲ್ಲೆಗೆ ಬ್ಲಾಕ್ ಫಂಗಸ್‍ನ ಕರಿನೆರಳು ಆವರಿಸಿದೆ. ಜಿಲ್ಲೆಯ ಮೂವರಲ್ಲಿ ಫಂಗಸ್ ಲಕ್ಷಣಗಳು ಕಂಡುಬಂದಿದ್ದು, ಕೋವಿಡ್‍ನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದ ಶಿರಾ ನಿವಾಸಿಯೊಬ್ಬರು ತೀವ್ರ ಕಣ್ಣು ಬೇನೆ, ದವಡೆ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಭಾನುವಾರ ಮೃತರಾಗಿದ್ದಾರೆ. ಬ್ಲಾಕ್ ಫಂಗಸ್ ಲಕ್ಷಣಗಳಿಂದ ಸಂಭವಿಸಿದ ಈ ಸಾವು ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಮೊದಲ ಬಲಿ ಶಿರಾದಲ್ಲಿಯಾಗಿದೆಯೇ ಎಂಬ ಅನುಮಾನವನ್ನು ಹುಟ್ಟಿಹಾಕಿದೆ. ಕಳೆದ ಬಾರಿ ಕೋವಿಡ್ ಮೊದಲ ಸಾವು ಜಿಲ್ಲೆಯ ಶಿರಾದಲ್ಲಿ ಸಂಭವಿಸಿತ್ತು ಎಂಬುದು ಗಮನಾರ್ಹ.

ಶಿರಾ ನಗರದಲ್ಲಿ ವಾಸವಿದ್ದ ಹಿರಿಯೂರು ಮೂಲದ ವಕೀಲರೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಇವರಿಗೆ ಮೊದಲು ಕೋವಿಡ್ ಸೋಂಕು ತಗುಲಿ ಗುಣಮುಖರಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದರು. ಇದಕ್ಕಿದ್ದಂತೆ ಇವರಿಗೆ ಕಣ್ಣು ಊದಿಕೊಂಡು, ಹಲು ದವಡ್ಲೆಗಳಲ್ಲೂ ನೋವು ಕಾಣಿಸಿಕೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

 ಮಾಹಿತಿ ಕಲೆ:

 

      ಈ ಸಂಬಂಧ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ ಡಿಎಚ್‍ಓ ಡಾ.ನಾಗೇಂದ್ರಪ್ಪ ಜಿಲ್ಲೆಯಲ್ಲಿ ಮೂವರಿಗೆ ಬ್ಲಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದ್ದು, ಕೋವಿಡ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದ ಶಿರಾದ ಒಬ್ಬರು ಬೆಂಗಳೂರಲ್ಲಿ ಮೃತರಾಗಿದ್ದಾರೆಂಬ ಮಾಹಿತಿ ಇದೆ. ಆದರೆ ಅವರ ಮರಣ ಬ್ಲಾಕ್ ಫಂಗಸ್‍ನಿಂದಲೇ ಸಂಭವಿಸಿದೆಯೇ ಅಥವಾ ಮತ್ತ್ಯಾವ ಕಾರಣದಿಂದಲೇ ಎಂಬುದು ಇನ್ನೂ ಖಚಿತವಾಗಿಲ್ಲ ಈಬಗ್ಗೆ ಸಮಗ್ರ ವಿವರ ಕಲೆಹಾಕುತ್ತಿರುವುದಾಗಿ ತಿಳಿಸಿದ್ದಾರೆ.

      ಅನಿಯಂತ್ರಿತ ಮಧುಮೇಹಿಗಳಲ್ಲಿ ಉಲ್ಬಣ:

     ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅನಿಯಂತ್ರಿತ ಮಧುಮೇಹಿಗಳಲ್ಲಿ ಈ ಬ್ಲಾಕ್ ಫಂಗಸ್ ರೋಗ ಲಕ್ಷಣಗಳು ಕಂಡುಬರುವ ಸಾಧ್ಯತೆಯಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಪ್ರಮುಖವಾಗಿ ಕಣ್ಣು ದಪ್ಪವಾಗುವುದು, ವಿಪರೀತ ಕಣ್ಣು, ನೋವು, ಮೂಗಿನಿಂದ ರಕ್ತ ಸೋರುವಿಕೆ, ದವ ಈ ರೋಗ ಲಕ್ಷಣವಾಗಿದ್ದು, ಕೂಡಲೇ ಸಿಟಿಸ್ಕ್ಯಾನ್ ಮಾಡಿಸಿ ರೋಗ ಪತ್ತೆ ಮಾಡಬೇಕು. ಫಂಗಸ್ ಪತ್ತೆಯಾದ ಕೂಡಲೇ 6 ವಾರಗಳ ಕಾಲ ಆಂಪೊಟೆರಿಸಿನ್-ಬಿ (ಚಿmಠಿhoಣeಡಿಛಿiಟಿ-b)ಎಂಬ ಇಂಜೆಕ್ಸನ್ ಅನ್ನು ನಿಯಮಿತವಾಗಿ ಪಡೆಯಬೇಕು. ತೀರಾ ಉಲ್ಬಣವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಕೋವಿಡ್ ಚಿಕಿತ್ಸೆ ಬಳಸುವ ಸ್ಟಿರಾಯಿಡ್ ಗುಣುಮುಖರಾದ ಬಳಿಕ ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಬ್ಲಾಕ್‍ಫಂಗಸ್‍ಗೆ ಕಾರಣವಾಗುತ್ತಿದೆ. ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಅಲಕ್ಷ್ಯ ವಹಿಸದೆ ರೋಗ ನಿರೋಧಕ ಶಕ್ತಿ ಹೆಚ್ಚುವ ಆಹಾರ ಸೇವನೆ ಜೊತೆಗೆ ಮಧುಮೇಹ ಇದ್ದವರು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಏನಿದು ಬ್ಲಾಕ್ ಫಂಗಸ್(ಕಪ್ಪುಶಿಲೀಂದ್ರ) :

      ಕೊರೊನಾ ರೋಗಿಗಳು ಚಿಕಿತ್ಸೆ ಮುಗಿಸಿ ಹೊರ ಬಂದಾಗ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಅದರಲ್ಲೂ ಸ್ಟಿರಾಯ್ಡ್ ಬಳಸಿದವರಲ್ಲಿ ಮಧುಮೇಹದ ಜೊತೆಗೆ ದೇಹ ಇನ್ನಷ್ಟು ಬಳಲಿರುತ್ತದೆ. ಇಂಥ ಸಂದರ್ಭದಲ್ಲಿ ದೇಹ ಸಣ್ಣ ಸಣ್ಣ ಬಾಹ್ಯಾಕ್ರಮಣಕ್ಕೂ ತಲ್ಲಣಗೊಳ್ಳುತ್ತದೆ. ಬ್ಲ್ಯಾಕ್ ಫಂಗಸ್ ಕೂಡ ಇಂತಹುದ್ದೇ ಒಂದು ಸಮಸ್ಯೆ. ಈ ಕಪ್ಪು ಶಿಲೀಂದ್ರ ಗಾಳಿ ಮತ್ತು ಮಣ್ಣಿನಲ್ಲಿರುತ್ತವೆ. ಗಾಳಿಯಲ್ಲಿರುವ ಕಪ್ಪುಶಿಲೀಂಧ್ರ ಕಣಗಳು ಮೂಗಿಗೆ ಪ್ರವೇಶಿಸುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಇದು ದೊಡ್ಡ ಸಮಸ್ಯೆ ಉಂಟು ಮಾಡುತ್ತದೆ. ಸಾಮಾನ್ಯ ಅಲರ್ಜಿಗೂ ತೊಂದರೆಗೆ ಒಳಗಾಗುವವರಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು, ಶ್ವಾಸಕೋಶದ ಮೂಲಕ ಸಾಗುವ ಶಿಲೀಂದ್ರ ಕಣ ಸೈನಸ್ ಮೂಲಕ ಕಣ್ಣುಗಳನ್ನು ತಲಪುತ್ತದೆ. ಮುಂದೆ ಅದು ಮೆದಳನ್ನೂ ಸೇರುವ ಅಪಾಯವಿದೆ. ಶಿಲೀಂಧ್ರದ ಪರಿಣಾಮ ವಿಪರೀತವಾದರೆ ಮೂಗು ಕತ್ತರಿಸಬೇಕಾದ, ಇಲ್ಲವೆ ಕಣ್ಣನ್ನೇ ತೆಗೆಯಬೇಕಾದ ಪರುಸ್ಥಿತಿ ನಿರ್ಮಾಣವಾಗುವ ಅಪಾಯವಾಗಿದೆ. ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಸೂಕ್ತ ಮುನ್ನೆಚ್ಚರಿಗೆ, ಲಕ್ಷಣಗಳು ಕಂಡುಬಂದ ಕೂಡಲೇ ತುರ್ತು ಚಿಕಿತ್ಸೆ ಪಡೆಯಬೇಕಿದೆ.

ಜಿಲ್ಲಾಡಳಿತ ತಕ್ಷಣ ಕ್ರಮವಹಿಸಿ, ಕಾಳಸಂತೆ ಮಾರಾಟ ನಿಯಂತ್ರಿಸಬೇಕು :

      ಬ್ಲಾಕ್ ಫಂಗಸ್ ಕಾಯಿಲೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದ್ದು, ಕೋವಿಡ್ ಗುಣಮುಖರಾದವರ ಆರೋಗ್ಯದ ವರದಿಯನ್ನುತರಿಸಿಕೊಂಡು ಸೋಂಕಿನ ಲಕ್ಷಣ ಕಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ವ್ಯವಸ್ಥೆಯನ್ನು ಮುಂಜಾಗ್ರತೆಯಾಗಿ ಮಾಡಿಕೊಳ್ಳಬೇಕಿದೆ. ಬ್ಲಾಕ್ ಫಂಗಸ್‍ಗೆ ನೀಡುವ amphotercin-b ಎಂಬ ಇಂಜೆಕ್ಷನ್ ಸಹ ಕೋವಿಡ್ ಸೋಂಕಿತರಿಗೆ ಬಳಸುವ ರೆಮೆಡಿಸಿವರ್ ಇಂಜೆಕ್ಷನ್‍ನಂತೆ ಕಾಳಸಂತೆಯಲ್ಲಿ 5 ರಿಂದ 7ಸಾವಿರಕ್ಕೆ ಮಾರಾಟವಾಗುತ್ತಿರುವ ದೂರುಗಳು ಕೇಳಿಬಂದಿದ್ದು, ಇದನ್ನು ಆರಂಭದಲ್ಲೇ ನಿಯಂತ್ರಿಸದಿದ್ದರೆ 6 ವಾರಗಳ ಕಾಲ ನಿಯಮಿತವಾಗಿ ಪಡೆಯಬೇಕಾದ ಇಂಜೆಕ್ಷನ್ ಅನ್ನು ಬಡಜನರು ಮಧ್ಯಮವರ್ಗದವರು ಪಡೆಯಲು ಸಾಧ್ಯವಿಲ್ಲದಂತಾಗಿ ಪ್ರಾಣ ಬಿಡಬೇಕಾಗುತ್ತದೆ. ಅಂತೆಯೇ ಕೋವಿಡ್ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಕೆ ಬಗ್ಗೆಯೂ ಸೂಕ್ತ ನಿರ್ದೇಶನ ಹೊರಡಿಸುವ ಅಗತ್ಯವಿದೆ.

      ಕೋವಿಡ್ ಮೊದಲ ಅಲೆಯಲ್ಲಿ ಕಾಣದ ಬ್ಲಾಕ್ ಫಂಗಸ್ (ಕಪ್ಪು ಶಿಲೀಂದ್ರ ಸೋಂಕು) ಎರಡನೇ ಅಲೆಯಲ್ಲಿ ಗುಣಮುಖರಾದ ಕೋವಿಡ್ ಸೋಂಕಿತರಲ್ಲಿ ಕಂಡುಬರುತ್ತಿದ್ದು, ಅದರಲ್ಲೂ ಅನಿಯಂತ್ರಿತ ಮಧುಮೇಹಿ ಸೋಂಕಿತರನ್ನು ಕಾಡಲಾರಂಭಿಸಿದೆ. ಜಿಲ್ಲೆಯಲ್ಲೂ ಸೋಂಕು ವ್ಯಾಪಿಸುತ್ತಿರುವ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ ಸಹ ಜಾಗ್ರತವಾಗಿ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ನಿಗದಿತ ನಮೂನೆಯನ್ನು ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ಆಸ್ಪತ್ರೆಗಳಿಗೂ ಕಳುಹಿಸಿ ಬ್ಲಾಕ್ ಫಂಗಸ್ ರೋಗ ಲಕ್ಷಣ ಉಳ್ಳವರು ಚಿಕಿತ್ಸೆಗೆ ದಾಖಲಾಗಿದ್ದರೆ, ಮನೆಯಲ್ಲಿ ಉಳಿದಿದ್ದರೆ ಪತ್ತೆ ಹಚ್ಚಿ ವಿವರ ಕಳುಹಿಸಿಕೊಡಲು ಸೂಚಿಸಲಾಗಿದೆ. ಸರಕಾರ ಆದೇಶದ ಅನುಸಾರ ಚಿಕಿತ್ಸೆಗೆ ಕ್ರಮವಹಿಸಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap