ತುಮಕೂರು : ಕೊರೊನಾ ಸಾವಿನ ಸುಳ್ಳು ಲೆಕ್ಕ ನೀಡಲಾಗುತ್ತಿದೆಯೇ?

 ತುಮಕೂರು :

      ಕೊರೊನಾ ಎರಡನೇ ಅಲೆ ಶುರುವಾದ ಬಳಿಕ ಜಿಲ್ಲೆಯಲ್ಲಿ ಕೊರೊನಾಗೆ ಮರಣವನ್ನುಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದ್ದು, ನಿತ್ಯವೂ 10 ರಿಂದ 20 ಮಂದಿ ಸಾವಿಗೀಡಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯೇ ಮಾಧ್ಯಮ ಪ್ರಕಟಣೆಯಲ್ಲಿ ನೀಡುತ್ತಿದೆ. ಆದರೆ ಇಲಾಖೆ ಅಂಕಿ-ಅಂಶಕ್ಕಿಂತಲೂ ಅಧಿಕ ಮಂದಿ ಸೋಂಕಿಗೆ ಸಾವನ್ನಪ್ಪಿರುವುದು ವಾಸ್ತವವಾಗಿ ಕಂಡುಬರುತ್ತಿದ್ದು, ಮರಣ ಸಂಖ್ಯೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಂಕಿ ಅಂಶಕ್ಕೂ, ಆರೋಗ್ಯ ಇಲಾಖೆ ಅಂಕಿ-ಅಂಶಕ್ಕೂ ತಾಳ-ಮೇಳವಿಲ್ಲದಷ್ಟು ಅಜಗಜಾಂತರ ವ್ಯತ್ಯಾಸ ಕಂಡುಬಂದಿರುವುದು ಕೊರೊನಾ ಸಾವಿನ ಸುಳ್ಳು ಲೆಕ್ಕ ನೀಡಲಾಗುತ್ತಿದೆಯೇ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ.

      ತುಮಕೂರು ಮಹಾನಗರಪಾಲಿಕೆಯ ಜನನ-ಮರಣ ಶಾಖೆಯ ಅಂಕಿ-ಅಂಶವನ್ನೇ ಗಮನಿಸುವುದಾದರೆ ಎರಡನೇ ಅಲೆ ತೀವ್ರವಾದ ಕಳೆದ ಏಪ್ರಿಲ್ ತಿಂಗಳಲ್ಲಿ ತುಮಕೂರು ನಗರದಲ್ಲಿ 360 ಸಾವುಗಳು ದಾಖಲಾಗಿದ್ದು, ಇವರಲ್ಲಿ 233 ಪುರುಷರು, 127 ಹೆಣ್ಣುಮಕ್ಕಳು ಸೇರಿದ್ದಾರೆ. ಆರೋಗ್ಯ ಇಲಾಖೆ ಮೇ 12ರಂದು ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅಂಕಿ ಅಂಶದಂತೆ ಏಪ್ರಿಲ್‍ನಲ್ಲಿ ಇಡೀ ಜಿಲ್ಲೆಯಾದ್ಯಂತ ಮೃತಪಟ್ಟಿರುವವರ ಸಂಖ್ಯೆ 69. ಜಿಲ್ಲಾ ಅಂಕಿ ಅಂಶಗಳ ಇಲಾಖೆ ದಾಖಲಿಸಿರುವ ಮಾಹಿತಿಯನುಸಾರ ಏಪ್ರಿಲ್ ತಿಂಗಳೊಂದರಲ್ಲೇ 2325 ಮಂದಿ ಮೃತಪಟ್ಟಿದ್ದು, ಆರೋಗ್ಯ ಇಲಾಖೆ ನೀಡಿರುವ ಕೋವಿಡ್ ಸಾವಿನ ಸಂಖ್ಯೆಯೂ, ಜಿಲ್ಲೆಯ ಒಟ್ಟು ಸಾವಿನ ಪ್ರಮಾಣದ ಶೇ.5ರಷ್ಟು ಇರದಿರುವುದು ಇದು ಸಾಧ್ಯವೇ? ಕೋವಿಡ್ ಹೊರತಾದ ಅನ್ಯ ಕಾರಣಗಳಿಂದಲೇ ಶೇ.95ರಷ್ಟು ಮಂದಿ ಮೃತಪಟ್ಟರೆ ಎಂಬ ಅಚ್ಚರಿಯ ಪ್ರಶ್ನೆ ಹುಟ್ಟುಹಾಕಿದೆ.

ತುಮಕೂರು ತಾಲೂಕೊಂದರಲ್ಲೇ 600ಕ್ಕೂ ಅಧಿಕ ಸಾವು:

      ಏಪ್ರಿಲ್ ಮಾಹೆಯಲ್ಲಿ ಜಿಲ್ಲಾ ಕೇಂದ್ರವಾದ ತುಮಕೂರು ತಾಲೂಕಿನಲ್ಲೇ ನಗರ ವ್ಯಾಪ್ತಿಯಲ್ಲಿ 360., ಗ್ರಾಮೀಣ ಭಾಗದಲ್ಲಿ 281 ಸಾವುಗಳು ಸಂಭವಿಸಿದ್ದು, ನಗರದ ಗಾರ್ಡನ್ ರಸ್ತೆ, ಕುಣಿಗಲ್ ರಸ್ತೆ ಚಿತಾಗಾರಗಳಲ್ಲಿ ದಿನವೊಂದಕ್ಕೆ ನಗರವಾಸಿಗಳದ್ದೇ ಹತ್ತಕ್ಕೂ ಅಧಿಕ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಆದರೆ ಕೋವಿಡ್ ಸಾವುಗಳು ಕಡಿಮೆ ಎಂದು ತೋರಿಸುವ ಆರೋಗ್ಯ ಇಲಾಖೆ ಅಂಕಿ-ಅಂಶ ಉಳಿದ ಸಾವುಗಳು ಯಾವುದರಿಂದ ಸಂಭವಿಸುತ್ತಿವೆ. ವಿಜಂಭಿಸುತ್ತಿರುವಷ್ಟು ಕೊರೊನಾ ಸಾವುಗಳು ಗತಿಸುತ್ತಿಲ್ಲವೇ ಎಂಬ ಪ್ರಶ್ನೆಗಳನ್ನು ಪ್ರಜ್ಞಾವಂತರು ಕೇಳುವಂತೆ ಮಾಡಿದೆ.

ಕೋವಿಡ್ ಸಾವೆಂದು ದಾಖಲಾಗುತ್ತಿಲ್ಲವೇ?:

      ಕೋವಿಡ್ ಸಾವಿನ ಅಂಕಿ-ಅಂಶ, ಮರಣ ನೋಂದಣಿ ಸಂಖ್ಯೆಯ ನಡುವೆ ಇರುವ ಅಧಿಕ ಅಂತರವನ್ನು ಗಮನಿಸಿದರೆ ಜಿಲ್ಲೆಯ ಕೋವಿಡ್ ರೋಗಿಗಳನ್ನು ಚಿಕಿತ್ಸೆಗೊಳಪಡಿಸುತ್ತಿರುವ ಆಸ್ಪತ್ರೆಯಿಂದ ಕೋವಿಡ್ ಸಾವಿನ ತಪ್ಪು ಲೆಕ್ಕ ಆರೋಗ್ಯ ಇಲಾಖೆಗೆ ರವಾನೆಯಾಗುತ್ತಿದೆಯೇ? ಅಥವಾ ಇಲಾಖೆಯಲ್ಲಿ ಅಂಕಿ-ಅಂಶ ಅಪ್ಡೇಟ್‍ನಲ್ಲಿ ಸಾವನ್ನು ಮರೆಮಾಚಲಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಜನಸಾಮಾನ್ಯರೇ ಕೇಳುವಂತೆ ಮಾಡಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಇನ್ನಾದರೂ ಈ ಬಗ್ಗೆ ಗಂಭೀರ ಗಮನ ಹರಿಸುವುದೇ ಕಾದು ನೋಡಬೇಕಿದೆ.

ಕೊರೊನಾ ಡೆತ್ ಆಡಿಟ್ ಆಗಲಿ :

      ಕೋವಿಡ್ ಸಾವಿನ ಲೆಕ್ಕಾಚಾರದಲ್ಲಿ ಆಗುತ್ತಿರುವ ಲೋಪಗಳು ಬರೀ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ರಾಜ್ಯದ ಅಂಕಿ-ಅಂಶಗಳನ್ನು ಸಾವಿನ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರುಗಳು ಆಗ್ರಹಿಸಿ ಕೊರೊನಾ ಡೆತ್ ಆಡಿಟ್‍ಗೆ ಆಗ್ರಹಿಸಿದ್ದು, ಜಿಲ್ಲೆಯಲ್ಲೂ ಸಹ ಡೆತ್ ಆಡಿಟ್ ಮಾಡಬೇಕೆಂಬ ಒತ್ತಾಯಗಳು ರಾಜಕೀಯ ನಾಯಕರು, ಜಿಲ್ಲೆಯ ಸಂಘ ಸಂಸ್ಥೆಗಳಿಂದಲೂ ಕೇಳಿಬಂದಿದೆ. ಐಸಿಯುವಿನಲ್ಲೇ 441 ಮಂದಿ ಡೆತ್ ಆಗಿದ್ದು, ಸೋಂಕಿಗೆ ಚಿಕಿತ್ಸೆ ಪಡೆಯದೇ ಮನೆಯಲ್ಲೇ ಸಾವಿನ ಪ್ರಕರಣಗಳನ್ನು ಪರಿಗಣಿಸಿ ಡೆತ್ ಆಡಿಟ್ ನಡೆಸಬೇಕಿದೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್ ಆಗ್ರಹಿಸಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ 666, ಈ ಬಾರಿ 2325 ಸಾವು !

      ರೊನಾ ಮೊದಲ ಅಲೆಯ 2020 ಏಪ್ರಿಲ್‍ನಲ್ಲಿ ಜಿಲ್ಲೆಯಲ್ಲಿ 403 ಪುರುಷರು, 263 ಮಹಿಳೆಯರು ಸೇರಿ 666 ಮಂದಿ ಸಾವು ಸಂಭವಿಸಿತ್ತು. ಈ ಬಾರಿಯ ಎರಡನೇ ಅಲೆಯ ಏಪ್ರಿಲ್‍ನಲ್ಲಿ ಒಟ್ಟು 2325 ಮಂದಿ ಸಾವನ್ನಪ್ಪಿದ್ದು, ಕಳೆದ ಬಾರಿಗಿಂತ ಮೂರು ಪಟ್ಟು ಅಧಿಕ ಸಾವು ಏಪ್ರಿಲ್ ಮಾಹೆಯೊಂದರಲ್ಲೇ ಸಂಭವಿಸಿದೆ. ಹಾಗಾಗಿ ಈ ಅಧಿಕ ಸಾವುಗಳು ಕೋವಿಡ್‍ನಿಂದಾದವೇ ಇಲ್ಲವೇ? ಕಾರಣವೇನು ಎಂಬ ಬಗ್ಗೆ ಆರೋಗ್ಯ ಇಲಾಖೆಯೇ ಉತ್ತರ ನೀಡಬೇಕಿದೆ.

       ಕೋವಿಡ್ ಸಾವಿನ ಪ್ರಕರಣದಲ್ಲಿ ವಾಸ್ತವದ ಅಂಕಿ-ಅಂಶವನ್ನು ನೀಡುವಂತೆ ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದು, ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ತುಮಕೂರಿನರ ಸಾವು ಲೆಕ್ಕದಲ್ಲಿ ಸೇರುತ್ತಿಲ್ಲ. ನನ್ನ ಸಹೋದರ ಸಂಬಂಧಿಯೇ ಬೆಂಗಳೂರಲ್ಲಿ ಮೃತರಾಗಿದ್ದು ಅವರದ್ದೇ ಇಲ್ಲಿ ದಾಖಲಾಗಿಲ್ಲ. ನಿಜವಾದ ಅಂಕಿ ಅಂಶ ಕೊಟ್ಟರೆ ಯಾರು ತಲೆ ಕತ್ತರಿಸುವುದಿಲ್ಲ. ಆರೋಗ್ಯಾಧಿಕಾರಿಗಳು ವಾಸ್ತವಾಂಶದ ವರದಿಯನ್ನೇ ನೀಡಬೇಕು.

-ಜಿಎಸ್.ಬಸವರಾಜು, ಸಂಸದರು, ತುಮಕೂರು.

      ಜನ ಗೊಂದಲದಲ್ಲಿದ್ದಾರೆ. ಜಿಲ್ಲಾಡಳಿತ ಸಹ ಗೊಂದಲದಲ್ಲಿದ್ದಾರೆ ಅಂಕಿ-ಅಂಶಗಳು ಸಹ ಗೊಂದಲವನ್ನು ಮೂಡಿಸುತ್ತಿವೆ. ಎಲ್ಲವನ್ನೂ ಕ್ರಮಬದ್ದವಾಗಿಸಿ ರಾಜ್ಯದ ಜನತೆಯ ಮುಂದೆ ಕೋವಿಡ್ ಚಿಕಿತ್ಸೆ, ಬೆಡ್‍ವ್ಯವಸ್ಥೆ, ಸಾವುಗಳು ಎಲ್ಲದರ ಸ್ಪಷ್ಟ ಚಿತ್ರಣ ಇಡಬೇಕಿದೆ. ಜೊತೆಗೆ ಕೋವಿಡ್ ನಿಯಂತ್ರಿಸುವಲ್ಲಿ ಸರಕಾರ ಪ್ರತಿಷ್ಠೆ ಬಿಟ್ಟು, ಎಲ್ಲಾರಾಜಕೀಯ ಪಕ್ಷಗಳು ರಾಜಕೀಯ ಬದಿಗಿರಿಸಿ ಕೋವಿಡ್‍ನಿಂದ ಜನರ ಜೀವ ಉಳಿಸುವ ಕಾರ್ಯವನ್ನು ಸಮಾರೋಪಾದಿಯಲ್ಲಿ ಮಾಡಬೇಕಿದೆ. ಅಭಿವೃದ್ಧಿಯನ್ನು ಬದಿಗಿರಿಸಿ ಆಸ್ಪತ್ರೆಗಳ ಸೌಕರ್ಯ ಹೆಚ್ಚಿಸಬೇಕಿದೆ.

-ಎಸ್.ಪಿ.ಮುದ್ದಹನುಮೇಗೌಡ ಮಾಜಿ ಸಂಸದರು.

 100% ಕೋವಿಡ್ ಡೆತ್ ಆಡಿಟ್ ಆಗ್ಬೇಕು. ನಾನೇ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕುಣಿಗಲ್‍ನ ಸಾರ್ವಜನಿಕ ಆಸ್ಪತ್ರೆಯಲ್ಲೇ ತಿಂಗಳೊಂದರಲ್ಲಿ 69 ಸಾವು ಸಂಭವಿಸಿದ್ದು, 35 ಅಂಥಾ ಲೆಕ್ಕ ತೋರಿಸ್ತಾರೆ. ವ್ಯಾಕ್ಸಿನೇಷನ್, ಬೆಡ್, ಔಷಧಿ ಎಲ್ಲವುದರ ಕೊರತೆ ಇದೆ. ಹೇಳುವ ಅಂಕಿ-ಅಂಶಕ್ಕೂ ವಸ್ತುಸ್ಥಿತಿಗೂ ತಾಳೆಯಿಲ್ಲ.

-ಡಾ.ರಂಗನಾಥ್, ಕುಣಿಗಲ್ ಶಾಸಕರು.

ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap