ತುಮಕೂರು : ಪಾಸಿಟಿವ್ ಬಂದ 6 ತಾಸಿನೊಳಗೆ ಔಷಧ ಕಿಟ್ ತಲುಪಿರಬೇಕು

 ತುಮಕೂರು :

      ಕೋವಿಡ್ ಪರೀಕ್ಷಾ ರಿಪೋರ್ಟ್‍ನಲ್ಲಿ ಪಾಸಿಟಿವ್ ಬಂದ 6 ತಾಸಿನೊಳಗೆ ಸೋಂಕಿತರಿಗೆ ಔಷಧ ಕಿಟ್ ಪೂರೈಸಬೇಕು ಎಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲೆಯ ಎರಡು ವೈದ್ಯಕೀಯ ಕಾಲೇಜುಗಳು, ಖಾಸಗಿ ಮೆಡಿಕಲ್ ಲ್ಯಾಬ್‍ಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

      ಜಿಪಂ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್ ಅನ್ನು ಆರಂಭದಲ್ಲೇ ನಿಯಂತ್ರಿಸಬೇಕಾದರೆ ಪರೀಕ್ಷಾ ವರದಿ ಬೇಗ ಕೈ ಸೇರುವ ಜೊತೆಗೆ ಎ ಸಿಮ್ಟಾಮ್ಯಾಟಿಕ್ ಲಕ್ಷಣಗಳುಳ್ಳ ಸೋಂಕಿತರಿಗೆ ಪಾಸಿಟಿವ್ ದೃಢಪಟ್ಟ ಐದಾರು ಗಂಟೆಯೊಳಗೆ ಔಷಧಿ ಕಿಟ್ ಅವರ ಕೈ ಸೇರಬೇಕು. ಚಿಕಿತ್ಸೆಗೆ ಅಗತ್ಯವಾದ ಮಾತ್ರೆಗಳನ್ನು ನಿರಂತರವಾಗಿ ಪೂರೈಸಲಾಗುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಾಲಿಕೆ ಸೇರಿದಂತೆ ನಗರಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಈ ದಿಸೆಯಲ್ಲಿ ಹೆಚ್ಚಿನ ಶ್ರಮ ಹಾಕಿ ಸೋಂಕಿತರಿಗೆ ಮಾತ್ರೆಗಳು ತಲುಪುವಂತೆ ಮಾಡಿ ಸೋಂಕು ವಿಸ್ತರಣೆಯನ್ನು ತಡೆಯಬೇಕಿದೆ ಎಂದರು.

ಶಾಸಕರಾದ ಬಿ.ಸಿ.ನಾಗೇಶ್, ಡಾ.ಕೆ.ರಂಗನಾಥ್ ಅವರುಗಳು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿ ಸಮರ್ಪಕವಾಗಿಲ್ಲ. ಸುವರ್ಣ ಆರೋಗ್ಯ ಟ್ರಸ್ಟ್‍ನಡಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕುವ ಜೊತೆಗೆ ನೇರ ದಾಖಲು ಮಾಡಿಕೊಂಡು ಲಕ್ಷಾಂತರ ಬಿಲ್ ಮಾಡಲಾಗುತ್ತಿದೆ. ಸೋಂಕಿತರಾದ ಬಡವರು ಏನು ಮಾಡಬೇಕು? ಮೆಡಿಕಲ್ ಲ್ಯಾಬ್‍ಗಳಲ್ಲೂ ಸಿಟಿಸ್ಕ್ಯಾನ್ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ನಿಯಮಿತ ಭೇಟಿ ನೀಡುತ್ತಿಲ್ಲ. ನಿಗದಿಯಾದ ಬೆಡ್‍ಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಎಬಿಆರ್‍ಕೆ ಸಮಸ್ಯೆ ಬಗೆಹರಿಸಿಕೊಡಿ:

      ಸ್ಕ್ಯಾನಿಂಗ್ ಯಂತ್ರ ಕೆಟ್ಟುಹೋಗಿದೆ ಎಂದು ಜಿಲ್ಲಾಸ್ಪತ್ರೆಯಿಂದಲೇ ಎರಡು ವಾರಗಳ ಕಾಲ ಹೊರಗಡೆ ಸಿಟಿಸ್ಕ್ಯಾನ್ ಬರೆದುಕೊಡಲಾಗಿದೆ. ಸಮಸ್ಯೆ ನಿವಾರಿಸಲು ನಿಮಗೆ ಎರಡು ವಾರ ಬೇಕಾಯಿತಾ? ಎಂದು ಜಿಲ್ಲಾ ಸರ್ಜನ್ ಅವರನ್ನು ಪ್ರಶ್ನಿಸಿದ ಸಚಿವ ಮಾಧುಸ್ವಾಮಿ ಎಬಿಆರ್‍ಕೆ ಯೋಜನೆಯಡಿ ನಂಬರ್ ಜನರೇಟ್ ಆದ ನಂತರವಷ್ಟೇ ಬಿಲ್ ಪ್ರಕ್ರಿಯೆ ಆಗುತ್ತಿದ್ದು, ಇದು ಸೋಂಕಿತರು ನಂಬರ್ ಜನರೇಟ್ ಆದ ಪೂರ್ವದ ದಿನಗಳಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಹಣ ಪಾವತಿಸುವ ಸಮಸ್ಯೆ ಸೃಷ್ಟಿಯಾಗಿದೆ. ಈ ಸಮಸ್ಯೆಯನ್ನು ಆರೋಗ್ಯ ಸಚಿವರೇ ಸರಕಾರದಿಂದ ಆದೇಶ ಹೊರಡಿಸಿ ಬಗೆಹರಿಸಬೇಕು. ಬಿಲ್ ಸಕಾಲಕ್ಕೆ ಪಾವತಿಯಾಗುವ ಜೊತೆಗೆ ಸೋಂಕಿನಿಂದ ಸತ್ತವರ ಶವವನ್ನು ತಕ್ಷಣವೇ ಕೊಡುವ ಕ್ರಮವಾಗಬೇಕು ಎಂದು ಸಲಹೆ ನೀಡಿದರು. ಆಕ್ಸಿಜನ್ ಬೆಡ್ ಹೊರತಾಗಿ ಸಾಮಾನ್ಯ ಬೆಡ್‍ಗಳಿಗೆ ದಾಖಲಿಸಿ ಬಿಲ್ ಮಾಡಿದರೆ ಅಂತಹ ಅಧಿಕಾರಿಗಳು ಜೈಲಿಗೆ ಹೋಗಲು ಸಿದ್ಧರಾಗಿರಬೇಕು ಎಂದು ಇದೇ ವೇಳೆ ಸಚಿವರು ಎಚ್ಚರಿಸಿದರು.

ಬೆಡ್‍ಗಳ ಸಂಖ್ಯೆ, ಆಕ್ಸಿಜನ್ ಸಂಗ್ರಹ ತ್ವರಿತವಾಗಿ ಹೆಚ್ಚಳವಾಗಬೇಕು :

      ಶ್ರೀದೇವಿ, ಸಿದ್ದಾರ್ಥ ವೈದ್ಯಕೀಯ ಕಾಲೇಜುಗಳ ಆಕ್ಸಿಜನ್ ಬೆಡ್‍ಗಳ ಮಾಹಿತಿ ಪಡೆದ ಸಚಿವರು ಕೇವಲ 100, 120 ಆಕ್ಸಿಜನ್ ಬೆಡ್‍ಗಳನ್ನು ಇಟ್ಟುಕೊಂಡಿದ್ದೀರಿ. ಆಲ್ ಇಂಡಿಯಾ ಮೆಡಿಕಲ್ ಕೌನ್ಸಿಲ್ ಮಾನದಂಡದನ್ವಯ ವೈದ್ಯಕೀಯ ಕಾಲೇಜುಗಳು ರನ್ ಆಗಬೇಕಾದರೆ 400 ರಿಂದ 500 ಆಕ್ಸಿಜನ್ ಬೆಡ್‍ಗಳಾದರೂ ಕನಿಷ್ಠ ಇರಬೇಕು. ಯಾವ ಜಿಲ್ಲೆಯ ಕಾಲೇಜುಗಳಲ್ಲೂ ಇಂತಹ ಸ್ಥಿತಿ ಇಲ್ಲ. 6 ಕೆಎಲ್ ಸಾಮಾರ್ಥ್ಯದ ಆಕ್ಸಿಜನ್ ಸಂಗ್ರಹ ಸಿಲಿಂಡರ್ ಅನ್ನು 13 ಕೆಎಲ್‍ಗೆ ತಕ್ಞಣ ಹೆಚ್ಚಿಸಬೇಕು. ಹೆಚ್ಚುವರಿ ಆಕ್ಸಿಜನ್ ಪಡೆದು ಬೆಡ್‍ಗಳ ವ್ಯವಸ್ಥೆ ಮಾಡುತ್ತಿಲ್ಲವೆಂದರೆ ಹೇಗೆ? ಅಗತ್ಯ ಸಿಬ್ಬಂದಿಗಳ ಕೊರತೆ ಬಗ್ಗೆಯೂ ದೂರು ಬಂದಿದ್ದು, ಕೋವಿಡ್ ಪರೀಕ್ಷೆ ಸಾಮಾರ್ಥ್ಯವೂ ನಿಮ್ಮ ಕಾಲೇಜುಗಳಲ್ಲಿ ಕಡಿಮೆ ಇದೆ. ಶೀಘ್ರದಲ್ಲೇ ನಿಮ್ಮ ವ್ಯವಸ್ಥೆಗಳಲ್ಲಿ ಸುಧಾರಣೆ ಕಾಣಬೇಕು. ಇಲ್ಲವಾದರೆ ಕ್ರಮ ಅನಿವಾರ್ಯವಾಗುತ್ತದೆ ಎಂದರು. ಅಗತ್ಯ ಆಕ್ಸಿಜನ್ ಪೂರೈಸಿದರೆ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಡಾ.ಪ್ರಭಾಕರ್ ಹೇಳಿದರು.

ಖಾಸಗಿ ಆಂಬ್ಯುಲೆನ್ಸ್‍ಗೆ ದರ ನಿಗದಿ:

      ಖಾಸಗಿ ಆಂಬುಲೆನ್ಸ್‍ನಲ್ಲಿ ರೋಗಿಗಳ ಸಾಗಾಟಕ್ಕೆ ದುಬಾರಿ ದರ ಪಡೆಯಲಾಗುತ್ತಿರುವ ಸಂಬಂಧ ಜಿಲ್ಲಾಡಳಿತ ಆರ್‍ಟಿಓ ಸಭೆ ನಡೆಸಿ ನಿನ್ನೇಯಷ್ಟೇ ದರ ನಿಗದಿಪಡಿಸಲಾಗಿದೆ ಎಂದು ಸಚಿವ ಜೆಸಿಎಂ ಜಿಲ್ಲಾಸ್ಪತ್ರೆಯಲ್ಲಿ ಎರಡು ತಿಂಗಳಿಂದ ಆಂಬುಲೆನ್ಸ್ ಕೆಟ್ಟು ನಿಂತಿದೆ ಎಂದು ಆರೋಗ್ಯ ಸಚಿವರ ಗಮನಕ್ಕೆ ತಂದರು. ಸಚಿವ ಸುಧಾಕರ್ ಖಾಸಗಿ ಆಂಬುದರ ನಿಗದಿ ಸಂಬಂಧ ರಾಜ್ಯಮಟ್ಟದಲ್ಲಿ ಪಾಲಿಸಿ ಮಾಡೋಣ. ಹೋಬಳಿಗೊಂದು ಆಂಬುಲೆನ್ಸ್ ಲಭ್ಯವಿರಬೇಕೆಂದು ಸರಕಾರದ ನಿಲುವಾಗಿದೆ. ಈ ಸಂಬಂಧ ಹೆಚ್ಚುವರಿ ಆಂಬುಲೆನ್ಸ್ ಜಿಲ್ಲೆಗೆ ಒದಗಿಸಲಾಗುವುದು ಎಂದರು.

ಕುಣಿಗಲ್ ಶಾಸಕರ ಸಲಹೆಗೆ ಸಹಮತ:

      ಇದೇ ವೇಳೆ ಕುಣಿಗಲ್ ಶಾಸಕ ಡಾ.ರಂಗನಾಥ್ ಸಲಹೆ ನೀಡಿ ಹೆಚ್ಚುವರಿ ಆಂಬುಲೆನ್ಸ್ ಸರಕಾರದಿಂದ ಬರಲು ಹೆಚ್ಚು ಸಮಯವಾಗುತ್ತದೆ. ಅಲ್ಲಿಯವರೆಗೆ ಆಂಬುಲೆನ್ಸ್ ಪಡೆದು ಬಡವರಿಗೆ ಅನುಕೂಲ ಕಲ್ಪಿಸಿ ಎಂದರು. ಸಚಿವದ್ವಯರು ಸಹ ಉತ್ತಮ ಸಲಹೆ ಎಂದು ಹೇಳಿ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು. ಹಳೆಯದಾದ ಸರಕಾರಿ ಆಂಬುಲೆನ್ಸ್ ಅನ್ನು ಶ್ರದ್ಧಾಂಜಲಿ ವಾಹನವಾಗಿ ಬಳಸಲು ಸೂಚಿಸಿದರು.

      ರಾಜ್ಯದಲ್ಲಿ 2015 ವೈದ್ಯರ ನೇಮಕಾತಿ ಆದೇಶ ಆಗಿದ್ದು, ಶೀಘ್ರದಲ್ಲೇ ಖಾಲಿಯಿರುವ ಪಿಎಚ್‍ಸಿ, ಆಸ್ಪತ್ರೆಗಳಲ್ಲಿ ನಿಯೋಜನೆಗೊಳ್ಳಲಿದ್ದಾರೆ. ಸೋಮವಾರದಿಂದ ಬುಧವಾರದೊಳಗೆ ನೇಮಕಗೊಂಡ ವೈದ್ಯರು ಸೇವೆಗೆ ಹಾಜರಾಗಲಿದ್ದಾರೆ. ಇದರಿಂದ ವೈದ್ಯರ ಕೊರತೆ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಆಕ್ಸಿಜನ್ ವ್ಯವಸ್ಥೆ, ಗ್ರಾಮಗಳಲ್ಲಿ ಕೆಂಪು ವಲಯ, ಹಾಟ್‍ಸ್ಪಾಟ್‍ಗಳ ಗುರುತು ಮಾಡಿ ಸ್ವಯಂ ಸೇವಕರ ತಂಡ ರೂಪಿಸಿ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಜಿಪಂ ಸಿಇಓ ವಿದ್ಯಾಕುಮಾರಿ, ಎಸ್ಪಿ ಡಾ.ಕೆ.ವಂಸಿಕೃಷ್ಣ, ಸಂಸದ ಜಿ.ಎಸ್.ಬಸವರಾಜು, ಮೇಯರ್ ಬಿ.ಜಿ.ಕೃಷ್ಣಪ್ಪ, ಶಾಸಕರಾದ ಸಿ.ಎಂ.ರಾಜೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಂ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಲ್ಯಾಬ್‍ಗಳ ಮೇಲೆ ಕ್ರಮಜರುಗಿಸಿ, ಇಲ್ಲವಾದರೆ ನಿಮ್ಮ ಮೇಲೆ ಕ್ರಮ:

ಸಿಟಿಸ್ಕ್ಯಾನ್ ದುಬಾರಿ ಶುಲ್ಕ ಸಂಗ್ರಹಿಸುತ್ತಿರುವ ಸಂಬಂಧ ಸ್ಪಷ್ಟನೆ ಕೇಳಿದ ಆರೋಗ್ಯ ಸಚಿವರು ಡಿಎಚ್‍ಓ ಡಾ.ನಾಗೇಂದ್ರಪ್ಪ ಅವರಿಗೆ ಸಿಟಿ ಸ್ಕ್ಯಾನ್ ಸಂಬಂಧ ನಿಗದಿತ ದರಕ್ಕಿಂತ ಹೆಚ್ಚಿನದರ ಪಡೆಯುತ್ತಿರುವ ಲ್ಯಾಬ್‍ಗಳಿಗೆ ನೋಟಿಸ್ ನೀಡಿ ಸುಮ್ಮನಾಗುವುದಲ್ಲ. ಮೂರು ದಿನಗಳಲ್ಲಿ ನೀವು ಕ್ರಮ ಜರುಗಿಸದಿದ್ದರೆ ನಿಮ್ಮ ಮೇಲೆ ನಾನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿ, ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜುಗಳು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎಲ್ಲವೂ ಇದ್ದರೂ ಸೋಂಕಿತರ ಚಿಕಿತ್ಸೆಯಲ್ಲಿ ಇಷ್ಟೊಂದು ಅವ್ಯವಸ್ಥೆಗಳಾಗುತ್ತಿವೆ ಎಂದರೆ ನಿಜಕ್ಕೂ ಬೇಸರವಾಗುತ್ತದೆ. ಸರ್ಕಾರದ ಆದೇಶದಂತೆ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 75% ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಟಿಎಚ್‍ಓಗಳಿಗೆ ನಿರ್ದೇಶಿಸಿದರು.
 

ರಾಜ್ಯದಿಂದ ಪ್ರತ್ಯೇಕ ಲಸಿಕೆ ನೋಂದಣಿ ಪೋರ್ಟಲ್ ;

      ರಾಜ್ಯದ ಎಲ್ಲರಿಗೂ 2021ರ ವರ್ಷದ ಅಂತ್ಯದೊಳಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕೋವಿನ್ ಪೋರ್ಟಲ್‍ನಲ್ಲಿ ಯಾರು ಎಲ್ಲಿಯಾದರೂ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದಾದ ವ್ಯವಸ್ಥೆಯಿರುವುದರಿಂದ ಬೆಂಗಳೂರಿಗರು ಅಕ್ಕಪಕ್ಕದ ನೆರೆಯ ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲೆಯ ಜನರು ಜಿಲ್ಲೆಯಲ್ಲಿ ಮಾತ್ರ ಲಸಿಕೆ ಪಡೆಯುವಂತೆ ಮಾಡುವ ಸಲುವಾಗಿ ರಾಜ್ಯಮಟ್ಟದ ಪೋರ್ಟಲ್ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

      ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ 6 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನೀಡಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಗೆ ನಿನ್ನೆ (ಬುಧವಾರ)25 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದ್ದು, ಅಗತ್ಯ ಔಷಧಿ, ಸೌಕರ್ಯಗಳನ್ನು ಇಲಾಖೆ ಒದಗಿಸುತ್ತಿದೆ. ಕೆಲವ ಕೊರತೆಯ ನಡುವೆಯು ಸೋಂಕಿನ ಪಾಸಿಟಿವಿಟ್ ರೇಟ್ ತಗ್ಗಿಸುವಲ್ಲಿ ಜಿಲ್ಲಾಡಳಿತ, ಸಚಿವರ ಶ್ರಮ ಉತ್ತಮವಾಗಿದೆ.

 -ಡಾ.ಕೆ.ಸುಧಾಕರ್, ಆರೋಗ್ಯ ಸಚಿವರು.

      ಬಿಇಎಲ್, ರೋಟರಿ, ವಿಪ್ರೋ ಸಂಸ್ಥೆಯವರು ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ಸರಕಾರದಿಂದ ಆರು ಘಟಕ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗು ಇನ್ನೂ 50 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಡಬೇಕು ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿಗೆ 50-100 ಹಾಸಿಗೆಗಳ ಸಮುದಾಯ ಆಸ್ಪತ್ರೆ ಕೊಡಬೇಕು. ಇದರಿಂದ ಮುಂಬರುವ ಕೋವಿಡ್ ಅಲೆಗಳನ್ನು ಎದುರಿಸಲು ಜಿಲ್ಲೆ ಸಜ್ಜಾಗಲು ಸಾಧ್ಯವಾಗಲಿದೆ.

-ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರು.
  

Recent Articles

spot_img

Related Stories

Share via
Copy link
Powered by Social Snap