ತುಮಕೂರು :

ರಾಜ್ಯ ಸರ್ಕಾರವು ಲಾಕ್‍ಡೌನ್ ಹಿನ್ನೆಲೆಯಲ್ಲಿ 1250 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಇದರ ಹಿಂದೆಯೇ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿವೆ. ಕೆಲವು ಕ್ಷೇತ್ರಗಳು ಕಡೆಗಣನೆಯಾಗಿದ್ದರೆ, ಇನ್ನು ಕೆಲವು ಕ್ಷೇತ್ರಗಳ ಜನರಿಗೆ ಪ್ಯಾಕೇಜ್ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂಬ ಮಾತುಗಳು ಚರ್ಚೆಯಲ್ಲಿವೆ. ಯಾರು ಏನು ಹೇಳಿದ್ದಾರೆ ಎಂಬುದರ ಸಂಕ್ಷಿಪ್ತ ವಿವರ.
ಸಂಕಷ್ಟದಲ್ಲಿರುವವರ ರಕ್ಷಣೆ ಸರ್ಕಾರದ ಕರ್ತವ್ಯ :

ಕೋವಿಡ್ ನಂತಹ ಯಾವುದೇ ಸಂಕಷ್ಟ ಪರಿಸ್ಥಿತಿ ಎದುರಾದರೂ ಆ ಸಂದರ್ಭದಲ್ಲಿ ಪ್ರಜೆಗಳನ್ನು ರಕ್ಷಿಸಬೇಕಾದುದು ಸರ್ಕಾರದ ಕರ್ತವ್ಯ. ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈರಾಣು ಹತೋಟಿಗೆ ತರಲು ತೆಗೆದುಕೊಳ್ಳುವ ಉಪಕ್ರಮಗಳ ಜೊತೆಯಲ್ಲಿಯೇ ಪರಿಹಾರಾತ್ಮಕ ಕ್ರಮಗಳೂ ಸೇರಿರುತ್ತವೆ. ಇದನ್ನು ಪ್ಯಾಕೇಜ್ ಎಂದು ಹೇಳಿಕೊಂಡರೂ ಸಹ ವಿಪತ್ತು ನಿರ್ವಹಣೆಯೊಳಗೆ ಅದೆಲ್ಲ ಸೇರಿ ಹೋಗಿರುತ್ತದೆ. ಇದೀಗ ರಾಜ್ಯ ಸರ್ಕಾರ ಘೋಷಿಸಿರುವ 3000 ರೂ.ಗಳ ಲೆಕ್ಕಾಚಾರ ಯಾವುದಕ್ಕೂ ಸಲ್ಲದು. ಈ ಹಣ ಪಡೆಯಲಿಕ್ಕಾಗಿಯೇ ಜನ ಸಾಕಷ್ಟು ಶ್ರಮ ಹಾಕಬೇಕು. ತಾಂತ್ರಿಕ ಕಾರಣಗಳಿಂದಾಗಿ ಈ ಹಣವೂ ಸಹ ಅರ್ಹರಿಗೆ ತಲುಪುವುದಿಲ್ಲ. ನಿಜವಾದ ಬಡವರಿಗೆ, ಅರ್ಹರಿಗೆ ಸರ್ಕಾರದ ಸವಲತ್ತುಗಳು ತಲುಪುವಂತೆ ಮಾಡಬೇಕು ಹಾಗೂ ಕನಿಷ್ಠ ವೆಚ್ಚವನ್ನು ಹೆಚ್ಚಿಸಬೇಕು. ಮೊದಲನೆ ಹಂತದಲ್ಲಿಯೇ ಅರ್ಹರಿಗೆ ಪ್ಯಾಕೇಜ್ ಸಿಗಲಿಲ್ಲ ಎಂಬುದು ತಿಳಿದಿದೆ. ಸಣ್ಣ ಕೈಗಾರಿಕೆಗಳಂತೂ ನೆಲ ಕಚ್ಚುವ ಪರಿಸ್ಥಿತಿಯಲ್ಲಿವೆ. ಇಂತಹ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ವಿವರ, ಉದ್ಯೋಗಧಾತರ ಬಳಿ ಇರುತ್ತದೆ. ಸರ್ಕಾರ ಕೈಗಾರಿಕೆಗಳಿಗೆ ಈಗ ಸಂಬಳ ಕೊಡಲು ನೆರವು ನೀಡಿ ನಂತರದ ದಿನಗಳಲ್ಲಿ ಅವರಿಂದ ಪಡೆಯಬಹುದಿತ್ತು. ಕೆಲಸ ಕಳೆದುಕೊಂಡ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿಯೇ 20 ಲಕ್ಷ ಗಾರ್ಮೆಂಟ್ಸ್ ಉದ್ಯೋಗಿಗಳಿದ್ದಾರೆ. ಅವರೆಲ್ಲ ಈಗ ಊರು ಸೇರಿದ್ದಾರೆ. ಅವರ ಪರಿಸ್ಥಿತಿ ಏನಾಗಬೇಕು..? ಅಸಂಘಟಿತ ವಲಯದ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದು, ಇವರೆಲ್ಲರಿಗೆ ಸರ್ಕಾರದ ಪ್ಯಾಕೇಜ್ ಸಿಗಬೇಕು.
-ಟಿ.ಬಿ.ಜಯಚಂದ್ರ, ಮಾಜಿ ಸಚಿವರು.
ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕು :

ಕಳೆದ ಬಾರಿಯಿಂದಲೂ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸರಿಯಾಗಿ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹವರ ನೆರವಿಗೆ ಸರ್ಕಾರ ಬರಬೇಕು. ಈ ಬಾರಿ ಗ್ರಾಮಾಂತರ ಪ್ರದೇಶಕ್ಕೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದ್ದು, ಅಲ್ಲಿ ಇರುವ ರೈತರು, ಕೂಲಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಹೊಸದಾಗಿ ವೃತ್ತಿಗೆ ಸೇರ್ಪಡೆಯಾಗಿರುವ ಹಾಗೂ ಬಹಳಷ್ಟು ಮಂದಿ ವಕೀಲರು ಆರ್ಥಿಕವಾಗಿ ಸದೃಢರಿಲ್ಲ. ಅವರಿಗೂ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು.
-ಕೆ.ಎ.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯರು.
ಪ್ಯಾಕೇಜ್‍ನೊಳಗೆ ಕಾರ್ಮಿಕರ ನಿಧಿ ಸೇರ್ಪಡೆ ಏಕೆ..?

ಕಟ್ಟಡ ಕಾರ್ಮಿಕರಿಗಾಗಿಯೇ ಕಾರ್ಮಿಕ ಕಲ್ಯಾಣ ನಿಧಿ ಇದೆ. ಆ ಕಾರ್ಮಿಕರಿಗೆ ನಿಧಿಯಿಂದ ಪರಿಹಾರ ತಲುಪುತ್ತದೆ. ಯಾರಿಗೆ ಸಿಗಬೇಕು ಎಂಬುದನ್ನು ಇಲಾಖೆ ನಿರ್ಧರಿಸುತ್ತದೆ. ಅಲ್ಲಿ ನೊಂದಣಿಯಾಗಿರುವ ಪಟ್ಟಿಯೇ ಸಿಗುತ್ತದೆ. ಹೀಗಿರುವಾಗ ಕಟ್ಟಡ ಕಾರ್ಮಿಕರಿಗೆ ಪ್ಯಾಕೇಜ್‍ನಲ್ಲಿ ಪರಿಹಾರ ಎಂದು ಘೋಷಣೆ ಮಾಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಇನ್ನು ರೈತರ ವಿಷಯದಲ್ಲಿ ಸರ್ಕಾರಗಳು ನಿರ್ಲಕ್ಷ್ಯವನ್ನೇ ತಳೆದಿವೆ. ಒಂದು ಕಡೆ ಗೊಬ್ಬರ ಬೆಲೆ ಹೆಚ್ಚಿಸುವುದು. ಮತ್ತೊಂದು ಕಡೆ ಸಬ್ಸಿಡಿ ಎಂದು ಹೇಳುವ ಮೂಲಕ ಕಣ್ಣೊರೆಸುವ ತಂತ್ರ ಮಾಡುತ್ತಿವೆ.
-ಮುರಳೀಧರ ಹಾಲಪ್ಪ, ಮಾಧ್ಯಮ ವಿಶ್ಲೇಷಕರು, ಕ.ರಾ.ಪ್ರ.ಕಾಂಗ್ರೆಸ್ ಸಮಿತಿ.
ಕಳೆದ ಬಾರಿಯ ಲೆಕ್ಕವೇ ಸಿಕ್ಕಿಲ್ಲ

ಕೊರೊನಾ ಲಾಕ್‍ಡೌನ್ ಪರಿಹಾರವೆಂದು ಕಳೆದ ಬಾರಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಸೌಲಭ್ಯವೇ ಎಲ್ಲರಿಗೂ ತಲುಪಿಲ್ಲ. ಈಗ ಮತ್ತೆ ಘೋಷಣೆ ಮಾಡಿದ್ದಾರೆ. ಸೌಲಭ್ಯ ಅರ್ಹ ಎಲ್ಲರಿಗೂ ಸಿಗುವಂತಾಗಬೇಕು. ಕಳೆದ ಬಾರಿ ಎಷ್ಟು ಜನರಿಗೆ ಕೊಟ್ಟಿದ್ದೇವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ. ಕೆಲವು ಮಾನದಂಡಗಳನ್ನು ಮುಂದಿಟ್ಟು ಪರಿಹಾರ ಘೋಷಿಸಿದ್ದು, ಬಹಳಷ್ಟು ಜನ ಪರಿಹಾರ ಪಡೆಯಲು ಸಾಧ್ಯವಾಗಲೇ ಇಲ್ಲ. ನಾಮಕಾವಸ್ಥೆಗೆ ಇಂತಹ ಘೋಷಣೆಗಳನ್ನು ಮಾಡುವುದು ಬಿಟ್ಟು ಅರ್ಹ ಎಲ್ಲರಿಗೂ ಸರ್ಕಾರ ಸೌಲಭ್ಯ ದೊರಕಿಸುವ ಕಡೆಗೆ ಮುಂದಾಗಲಿ.
-ಡಾ.ರಂಗನಾಥ್, ಶಾಸಕರು, ಕುಣಿಗಲ್.
ನೂರರಲ್ಲಿ ಮೂರು ಜನರಿಗೆ ಸಿಗಬಹುದು :

ಕೊರೊನಾ ಉಲ್ಬಣಗೊಂಡ ರೋಗಿಗೆ ಆಕ್ಸಿಜನ್ ಇಲ್ಲದ ಬೆಡ್ ನೀಡಿದಂತಾಗಿದೆ ಸರ್ಕಾರದ ಈ ಪ್ಯಾಕೇಜ್. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರುಗಳಿಗೆ 3000 ರೂ. ಪ್ಯಾಕೇಜ್ ಘೋಷಿಸಲಾಗಿದೆ. ಸರ್ಕಾರ ಘೋಷಿಸಿರುವ ಈ ಪ್ಯಾಕೇಜ್ ನೂರು ಜನರಲ್ಲಿ ಮೂವರಿಗೆ ಸಿಕ್ಕಿದರೆ ಹೆಚ್ಚು. ರಾಜ್ಯದಲ್ಲಿ 10 ಲಕ್ಷ ಜನ ಚಾಲಕರಿದ್ದಾರೆ. ತುಮಕೂರು ಜಿಲ್ಲೆಯೊಂದರಲ್ಲೇ 50 ಸಾವಿರ ಚಾಲಕರುಗಳು ಇದ್ದಾರೆ. ಕಳೆದ ಬಾರಿ 5 ಸಾವಿರ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಆಗಲೂ ಎಲ್ಲರಿಗೂ ಸಿಗಲಿಲ್ಲ. ಆದರೂ ಅದನ್ನು ಸ್ವಾಗತಿಸಿದ್ದೆವು. ಈ ಬಾರಿ ಕೇವಲ ಘೋಷಣೆಯ ಪ್ಯಾಕೇಜ್ ಆಗಿದೆ. ಎಲ್ಲ ದಾಖಲೆಗಳನ್ನು ಒದಗಿಸಿ ಹಣ ಪಡೆಯುವಷ್ಟರಲ್ಲಿ ಹೈರಾಣಾಗಿ ಹೋಗುತ್ತಾರೆ. ರಿಕ್ಷಾ ಖರೀದಿ ಸಂದರ್ಭದಲ್ಲಿ ಶೇ.18 ರಷ್ಟು ತೆರಿಗೆ ಕಟ್ಟಿರುತ್ತೇವೆ. ಆನಂತರ ಪರ್ಮಿಟ್, ಎಫ್.ಸಿ., ಮೀಟರ್ ಅಳವಡಿಕೆ ಇತ್ಯಾದಿಗೆಂದು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಲೇ ಬಂದಿದ್ದೇವೆ. ಹೀಗೆ ತೆರಿಗೆ ಪಾವತಿಸುವ ಈ ವರ್ಗಕ್ಕೆ 10 ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸಬೇಕಾಗಿತ್ತು. ಡಿ.ಎಲ್. ನವೀಕರಣಗೊಂಡಿರುವ ಎಲ್ಲರಿಗೂ ಪ್ಯಾಕೇಜ್ ಸಿಗಬೇಕು. ಲಾಕ್‍ಡೌನ್ ಅವಧಿಯಲ್ಲಿ ಸಾಲಗಾರರು ಕಿರುಕುಳ ನೀಡದಂತೆ ಸರ್ಕಾರ ಎಚ್ಚರಿಕೆ ನೀಡಬೇಕು.
-ವಿ.ಪ್ರತಾಪ್, ಅಧ್ಯಕ್ಷರು, ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ.
ಹಣ್ಣು, ತರಕಾರಿ ಖರೀದಿಸಬಹುದಿತ್ತು :
ಲಾಕ್‍ಡೌನ್ ಸಮಯದಲ್ಲಿ ಹಣ್ಣು, ಹೂ, ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಎಷ್ಟೋ ರೈತರು ಉಚಿತವಾಗಿ ಮಾರುಕಟ್ಟೆಗೆ ಬಿಟ್ಟು ಬಂದಿದ್ದಾರೆ. ಕೆಲವರು ಹೊಲಗಳಲ್ಲೇ ಬಿಟ್ಟರೆ ಮತ್ತೆ ಕೆಲವರು ಟೊಮ್ಯಾಟೋವನ್ನು ರಸ್ತೆಬದಿಗೆ ಸುರಿದಿದ್ದಾರೆ. ಕಳೆದ ಬಾರಿಯ ಲಾಕ್‍ಡೌನ್ ಸಂದರ್ಭದಲ್ಲಿಯೇ ಸರ್ಕಾರ ಎಚ್ಚೆತ್ತು ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಬಹುದಿತ್ತು. ಸರ್ಕಾರ ಖರೀದಿ ಮಾಡಲು ಸಿದ್ಧವಿಲ್ಲದ ಈ ಸಮಯದಲ್ಲಿ ರೈತರ ಬೆಳೆಯನ್ನು ಈ ಸ್ಟೋರೇಜ್‍ಗಳಲ್ಲಿ ಇಡಬಹುದಿತ್ತು. ನರೇಂದ್ರ ಮೋದಿಯವರು ವಸಂತನರಸಾಪುರಕ್ಕೆ ಬಂದು ಫುಡ್ ಪಾರ್ಕ್ ಉದ್ಘಾಟಿಸಿ ಸಾವಿರಾರು ಜನಕ್ಕೆ ಉದ್ಯೋಗ ಸಿಗಲಿದೆ ಎಂದು ಹೇಳಿ ಹೋದರು.
ಅದರಿಂದ ಯಾರಿಗೆ ಅನುಕೂಲವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರಗಳು ರೈತರ ಕಣ್ಣೊರೆಸುವ ತಂತ್ರಗಾರಿಕೆಯಲ್ಲಿ ನಿರತವಾಗಿವೆ. ಕೃಷಿ ಸಮ್ಮಾನ್ ಹೆಸರಿನಲ್ಲಿ ಹಣ ಹಾಕುತ್ತೇವೆ ಎನ್ನುತ್ತಾರೆ. ಎಷ್ಟು ರೈತರಿಗೆ ಈ ಯೋಜನೆಯ ಅನುಕೂಲವಾಗುತ್ತಿದೆ.? ಸರ್ಕಾರ ರೈತರಿಗಾಗಿಯೇ 25 ಸಾವಿರ ಕೋಟಿ ರೂ.ಗಳನ್ನು ತೆಗೆದಿಟ್ಟು ಅದರಲ್ಲಿ ಇಂತಹ ಸಂಕಷ್ಟ ಸಮಯದಲ್ಲಿ ಯೋಜನೆ ರೂಪಿಸಲಿ. ಇಡೀ ಸಮಾಜಕ್ಕೆ ಆಕ್ಸಿಜನ್ ಕೊಡುವ ರೈತರನ್ನು ಕಡೆಗಣಿಸಿ ಇಲ್ಲದ ಕಡೆ ಆಕ್ಸಿಜನ್ ಹುಡುಕಾಡುತ್ತಿದ್ದಾರೆ.
-ಆನಂದ್ ಪಟೇಲ್, ಅಧ್ಯಕ್ಷರು, ಜಿಲ್ಲಾ ರೈತಸಂಘ ಹಾಗೂ ಹಸಿರು ಸೇನೆ
ವಾಸ್ತವವಾಗಿ 600 ಕೋಟಿ ಪ್ಯಾಕೇಜ್ :

ಯಾವ ಆಧಾರದಲ್ಲಿ ಸರ್ಕಾರ 1250 ಕೋಟಿ ರೂ.ಗಳ ಪ್ಯಾಕೇಜ್ ಎಂದು ಹೇಳುತ್ತಿದೆಯೋ ತಿಳಿಯದು. ವಾಸ್ತವವಾಗಿ 600 ಕೋಟಿ ರೂ.ಗಳ ಪ್ಯಾಕೇಜ್ ಅಷ್ಟೆ. ಕಾರ್ಮಿಕ ಕಲ್ಯಾಣ ನಿಧಿ ಸೇರಿದಂತೆ ಇತರೆ ಕೆಲವು ಯೋಜನೆಗಳನ್ನು ಈ ಪ್ಯಾಕೇಜ್ ಒಳಗೆ ಸೇರಿಸಲಾಗಿದೆ. ಅಸಂಘಟಿತ ವಲಯದ 3 ಲಕ್ಷ ಜನರಿಗೆ ಸೌಲಭ್ಯ ದೊರಕಿಸುವುದಾಗಿ ಸರ್ಕಾರ ಹೇಳಿದೆ. ವಾಸ್ತವವಾಗಿ ರಾಜ್ಯದಲ್ಲಿ 25 ರಿಂದ 30 ಲಕ್ಷ ಅಸಂಘಟಿತ ವಲಯದ ಕಾರ್ಮಿಕರು ಇದ್ದಾರೆ. ಸರ್ಕಾರದ ಯೋಜನೆ ಶೇ.10 ರಷ್ಟು ಜನರಿಗೂ ಸಿಗುವುದಿಲ್ಲ. ಏಕೆಂದರೆ ಎಲ್ಲರೂ ನೋಂದಾವಣಿಯಾಗಿಲ್ಲ. ಅಂತಹವರ ಗತಿ ಏನು? ಬೀದಿಬದಿ ವ್ಯಾಪಾರಿಗಳಂತೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನದ ಬಾಡಿಗೆ 40 ರಿಂದ 50 ರೂ. ನೀಡಬೇಕು. ಶೆಡ್‍ಗಳಲ್ಲಿ ನಿತ್ಯವೂ ಬಾಡಿಗೆ ಪಾವತಿಸಬೇಕು. 1200 ರೂ.ಗಳಷ್ಟು ತಳ್ಳುವ ಗಾಡಿಗೆ ಬಾಡಿಗೆಯೇ ಆಗುತ್ತದೆ. ಸರ್ಕಾರ ಕೊಡುವ 2000 ರೂ.ಗಳಲ್ಲಿ ಆತ ಏನು ಮಾಡಬೇಕು.? ಫುಟ್‍ಪಾತ್ ಮತ್ತು ತಳ್ಳುವ ಗಾಡಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರಿಗೆಲ್ಲ ಸರ್ಕಾರ 10 ಸಾವಿರ ರೂ. ಘೋಷಣೆ ಮಾಡಬೇಕು. ಈ ಹಣದಿಂದ ನಷ್ಟವಂತೂ ಆಗಲಾರದು. ಸರ್ಕಾರ ಕೊಡುವ ಈ ಹಣದಿಂದ ಆರ್ಥಿಕ ಪುನಶ್ಚೇತನವಾಗಿ ಸರ್ಕಾರಕ್ಕೆ ವಾಪಸ್ ಆಗುತ್ತದೆ. ಶೇ.60 ರಷ್ಟು ಜನ ಒಪ್ಪೊತ್ತಿನ ಊಟಕ್ಕೆ ಕುಸಿದಿದ್ದಾರೆ ಎನ್ನುವ ವರದಿಗಳನ್ನು ನೋಡಿಯಾದರೂ ಸರ್ಕಾರ ಇತ್ತ ಗಮನ ಹರಿಸಬೇಕು.
-ಸೈಯದ್ ಮುಜೀಬ್, ಕಾರ್ಮಿಕ ಸಂಘಟನೆಗಳ ಮುಖಂಡರು
ಖಾಸಗಿ ಬಸ್‍ಗಳು ನಿಂತಂತೆಯೇ ಸರಿ

ಖಾಸಗಿ ಬಸ್‍ಗಳ ಸ್ಥಿತಿ ಹೇಳತೀರದು. ಅದನ್ನೇ ನಂಬಿಕೊಂಡು ಬಸ್ ನಿರ್ವಹಣೆ ಮಾಡುತ್ತಿದ್ದವರು ಈಗ ಕೈಚೆಲ್ಲಿ ಕೂತಿದ್ದಾರೆ. ನಾಲ್ಕೈದು ಬಸ್‍ಗಳನ್ನು ಇಟ್ಟುಕೊಂಡವರಷ್ಟೆ ಮುಂದಿನ ದಿನಗಳನ್ನು ಎದುರು ನೋಡುತಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರ ಸಂದರ್ಭದಲ್ಲಿ ಸರ್ಕಾರ ನಮ್ಮ ನೆರವು ಕೋರಿತು. ಖಾಸಗಿ ಬಸ್‍ಗಳು ಓಡಾಡಿದವು. ಒಂದು ವರ್ಷದಿಂದ ಖಾಸಗಿ ಬಸ್‍ಗಳ ಪರಿಸ್ಥಿತಿ ಚೆನ್ನಾಗಿಲ್ಲ. ಎಷ್ಟೋ ಮಂದಿ ಮಾಲೀಕರು ಕಂತು ಕಟ್ಟಲಾಗಿಲ್ಲ. ನೋಂದಣಿ ರಿನ್ಯೂವಲ್ ಆಗಿಲ್ಲ. ಹಿಂದೆಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಬಸ್‍ಗಳನ್ನೇ ಅವಲಂಬಿಸಿದ್ದರು. ಟಾಪ್‍ನಲ್ಲಿ ಕುಳಿತು ಹೋಗುತ್ತಿದ್ದರು. ಈಗ ಖಾಸಗಿ ಸ್ವಂತ ದ್ವಿಚಕ್ರ ವಾಹನ, ಕಾರುಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಖಾಸಗಿ ಬಸ್‍ಗಳ ಪರಿಸ್ಥಿತಿ ಚಿಂತಾಜನಕ. ಸರ್ಕಾರ ಈ ಕಡೆಯೂ ಗಮನ ಹರಿಸಬೇಕಾಗಿತ್ತು.
-ಬಲಶಾಮ್ ಸಿಂಗ್, ಅಧ್ಯಕ್ಷರು, ಖಾಸಗೀ ಬಸ್ ಮಾಲೀಕರ ಸಂಘ, ತುಮಕೂರು.








