ತುಮಕೂರು :

ಕೋವಿಡ್ ಸೋಂಕಿತರ ಪಾಸಿಟಿವಿಟಿ ಪ್ರಮಾಣ ಕಳೆದ 9 ದಿನಗಳಿಂದ ಇಳಿಮುಖವಾಗಿದ್ದು, ಕೆಂಪುವಲಯದಲ್ಲಿದ್ದ ಜಿಲ್ಲೆಯು ಕಿತ್ತಲೆ ವಲಯಕ್ಕೆ ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಮುಖವಾಗುವ ಆಶಾಭಾವ ಮೂಡಿದ್ದು, ಸೇಫ್ ಜೋನ್‍ಗೆ ತರಲು ಎಲ್ಲರೂ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ವಾರ ಎಲ್ಲಾ ಜಿಲ್ಲೆಗಳ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ 27,000 ಇದ್ದ ಸಕ್ರಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಪ್ರಸ್ತುತ 17,000 ಕ್ಕೆ ಇಳಿದಿದೆ. ಜಿಲ್ಲಾಡಳಿತ, ಆರೋಗ್ಯ ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಕೊರೊನಾ ಅಬ್ಬರ ದಿನೇ ದಿನೇ ತಗ್ಗಿ ಕಿತ್ತಲೆ ವಲಯಕ್ಕೆ ಬರುವಂತಾಗಿದೆ. ವಿಶೇಷವಾಗಿ ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ತುಮಕೂರು ಮಹಾನಗರದಲ್ಲಿ ಸ್ಥಳೀಯ ಆಡಳಿತದ ವಿಶೇಷ ಪ್ರಯತ್ನಗಳಿಂದ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ ಎಂದರು.
ಸದ್ಯಕ್ಕೆ 82 ಆಕ್ಸಿಜನ್ ಬೆಡ್‍ಗಳು ಖಾಲಿ:
ಕಳೆದ ಮೇ 15 ರಂದು 42.29%ರಷ್ಟಿದ್ದ ಸೋಂಕಿತರ ಸಂಖ್ಯೆ ಮೇ 23ರಂದು 31.66%ಕ್ಕೆ ಇಳಿದಿದೆ. ಸೋಂಕು ಪ್ರಸರಣ ಕಡಿಮೆಯಾಗಿರುವ ಕಾರಣ ಜಿಲ್ಲೆಯಲ್ಲಿ 82 ಆಮ್ಲಜನಕ ಹಾಸಿಗೆ ಖಾಲಿ ಉಳಿದಿವೆ. ಕ್ವಾರಿ ಮತ್ತು ಕೈಗಾರಿಕೋದ್ಯಮಿಗಳು 256 ಕಾನ್ಸಂಟ್ರೇಟರ್ ಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ತಾಲ್ಲೂಕು, ಪಿಎಚ್‍ಸಿಗಳ ಮಟ್ಟದಲ್ಲಿಯೇ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜನ ಎಚ್ಚೆತ್ತುಕೊಳ್ಳದಿದ್ದರೆ ಗುಬ್ಬಿ, ಶಿರಾ ಪೂರ್ಣ ಲಾಕ್‍ಡೌನ್ :
ಗ್ರಾಮಗಳಲ್ಲಿ ಹರಡುತ್ತಿರುವ ಕೊರೋನಾ ಸೋಂಕಿನ ಪ್ರಸರಣ ತಡೆಗೆ ಜಿಲ್ಲಾಡಳಿತದ ಜೊತೆಗೆ ಜನರ ಸಹಕಾರ ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿರುವುದಿಂದ 9 ಮಂದಿ ಸೋಂಕಿತರಿದ್ದರೆ ಆ ಹಳ್ಳಿಗಳ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ ವಿಸ್ತರಣೆ ತಡೆಯಲಾಗುತ್ತಿದೆ. ಗುಬ್ಬಿ, ಶಿರಾದಲ್ಲಿ ಸೋಂಕು ಹೆಚ್ಚಿದ್ದು, ಆಭಾಗದ ಜತೆಗೆ ಅನಗತ್ಯ ಸಂಚಾರ ನಿಲ್ಲಿಸಿ ನಿಯಮಪಾಲಿಸದಿದ್ದರೆ ಈ ಭಾಗದಲ್ಲಿ ಕೆಲವು ದಿನ ಸಂಪೂರ್ಣಲಾಕ್‍ಡೌನ್ ಮಾಡಲು ಚಿಂತಿಸಲಾಗುತ್ತಿದೆ ಎಂದರು.
17 ಕೋವಿಡ್ ಆರೈಕೆ ಕೇಂದ್ರ:
ಜಿಲ್ಲೆಯಲ್ಲಿ ಈವರೆಗೂ 17 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಕೋವಿಡ್ ನಿರ್ವಹಣೆ ವಿಚಾರವಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸ್ವಯಂಸೇವಾ ಸಂಸ್ಥೆಗಳು ತೆರೆದಿರುವ ಕೋವಿಡ್ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಗೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸರಕಾರಿ ಆಸ್ಪತ್ರೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ನಾವು ಒದಗಿಸಿಕೊಡುವುದು ಕಷ್ಟ. ಕೆಲವು ಅಗತ್ಯತೆಗಳನ್ನು ಜಿಲ್ಲಾಡಳಿತ ಪೂರೈಸಿದೆ. ಕೋವಿಡ್ ಕೇರ್ ಸೆಂಟರ್ ಗಳ ಸೂಕ್ತ ನಿರ್ವಹಣೆಗೆಂದೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ವಚ್ಛತೆ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಕೊರತೆಯಿಲ್ಲ ಎಂದ ಸಚಿವರು ಕೋವ್ಯಾಕ್ಸಿನ್ ಎರಡು ಡೋಜ್ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ. ತುಮಕೂರು ನಗರದಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ದಿನಕ್ಕೆ ನೂರರಂತೆ ಲಸಿಕೆ ವಿತರಣೆಗೆ ಕ್ರಮ ವಹಿಸಲಾಗಿದೆ. ಕ್ವಾರಿ ಮತ್ತು ಕ್ರಷರ್ ಮಾಲೀಕರು ಬುಧವಾರ ಕೊಡಲಿರುವ 264 ಆಕ್ಸಿಜನ್ ಕಾನ್ಟರ್‍ಟ್ರೇಟರ್‍ಗಳನ್ನು ತಾಲೂಕು ಆಸ್ಪತ್ರೆ, ಅಗತ್ಯವಿರುವ ಪಿಎಚ್‍ಸಿಗೊಂದರಂತೆ ಕೊಡಲು ತೀರ್ಮಾನಿಸಲಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ವೆಂಟಿಲೇಟರ್ ಲಭ್ಯವಿಲ್ಲ ಎಂದು ಹೇಳಿದರು.
ಬ್ಲಾಕ್ ಫಂಗಸ್‍ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್:

ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈವರೆಗು 21 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಜಿಲ್ಲಾಸ್ಪತ್ರೆಯಲ್ಲಿ 15 ಬ್ಲ್ಯಾಕ್ ಫಂಗಸ್ ಸೋಂಕಿರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದ್ದು, ನಗರದ ಸಿದ್ಧಾರ್ಥ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ. ಈ ರೋಗ ಕಾಣಿಸಿಕೊಂಡವರಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್ ನಿಂದ ಕುಣಿಗಲ್, ತುಮಕೂರಿನಲ್ಲಿ ತಲಾ ಇಬ್ಬರು, ಪಾವಗಡದಲ್ಲಿ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಎಂದು ಹೇಳಿದರು.
ನಿತ್ಯ 6000 ಟೆಸ್ಟ್‍ಗೆ ಸೂಚನೆ:
ಇಂದಿನಿಂದ ನಿತ್ಯ ಆರು ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆರ್ಟಿಪಿಸಿಆರ್ 4500 ಹಾಗೂ 2500 ರ್ಯಾಟ್ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ .ಬೆಂಗಳೂರಿನ ರೋಟರಿ ಸಂಸ್ಥೆಯವರು ಕೋವಿಡ್ ಪರೀಕ್ಷೆ ನಡೆಸಲು ಸಂಚಾರಿ ಬಸ್ ನೀಡಿದ್ದು ಹೆಚ್ಚು ಕೋವಿಡ್ ಪರೀಕ್ಷೆ ಮಾಡಲು ಸಹಕಾರಿಯಾಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲದೆ ಸಿದ್ದಾರ್ಥ, ಶ್ರೀ ದೇವಿ ಮೆಡಿಕಲ್‍ಕಾಲೇಜುಗಲ್ಲಿ ತಲಾ 200 ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
3ನೇ ಅಲೆಗೂ ತಯಾರಿ:
ಗ್ರಾಮೀಣ ಭಾಗದಲ್ಲಿ ಆಮ್ಲಜನಕ ಬೆಡ್ ಕೊರತೆ ನೀಗಿಸಲು ತುಮಕೂರು, ಸಿರಾ, ತಿಪಟೂರು, ಮಧುಗಿರಿ, ಪಾವಗಡದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
ಕುಣಿಗಲ್, ಗುಬ್ಬಿ, ಕೊರಟಗೆರೆ ತಾಲ್ಲೂಕಿನಲ್ಲಿಯೂ ದಾನಿಗಳ ನೆರವಿನಿಂದ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಲಿದೆ. 3ನೇ ಅಲೆಯನ್ನು ಎದುರಿಸಲು ತಾಲೂಕು ಆಸ್ಪತ್ರೆಗಳಲ್ಲೂ ಬೆಡ್‍ಗಳ ಸಂಖ್ಯೆ ಹೆಚ್ಚಳದ ಜೊತೆಗೆ ಜಿಲ್ಲೆಯ ಎಲ್ಲಾ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐದು ಆಮ್ಲಜನಕ ಬೆಡ್‍ಗಳ ವ್ಯವಸ್ಥೆಯಾಗಬೇಕೆಂದು ಈಗಿನಿಂದಲೇ ಕ್ರಮ ವಹಿಸಲಾಗುತ್ತಿದೆ.
ಮಕ್ಕಳ ಮೇಲ್ಲೆ ಲಸಿಕೆ ಪ್ರಯೋಗ ನಡೆಯುತ್ತಿದ್ದು, ಅದು ಯಶಸ್ವಿಯಾದರೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿ ವೈ.ಎಸ್.ಪಾಟೀಲ್, ಎಸ್ಪಿ ಡಾ.ವಂಸಿಕೃಷ್ಣ, ಎಡಿಸಿ ಚನ್ನಬಸಪ್ಪ, ಎಸಿ ಅಜಯ್, ಪಾಲಿಕೆ ಆಯುಕ್ತೆರೇಣುಕಾ, ಡಿಎಚ್‍ಓ ಡಾ.ನಾಗೇಂದ್ರಪ್ಪ, ಜಿಲ್ಲಾಸರ್ಜನ್ ಡಾ.ಸುರೇಶ್‍ಬಾಬು, ಆರ್‍ಸಿಎಚ್‍ಅಧಿಕಾರಿ ಡಾ.ಕೇಶವರಾಜ್ ಹಾಜರಿದ್ದರು.
ಜಿಲ್ಲೆಯಾದ್ಯಂತ 16 ಸಾವಿರ ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಆಕ್ಸಿಜನ್ ಸಮಸ್ಯೆಯಾಗುವುದಕ್ಕೆ ಮುಂಚೆಯೇ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಜನರು ಹೆದರುವ ಅಗತ್ಯವಿಲ್ಲ. ಮೂರನೇ ಅಲೆ ನಿಯಂತ್ರಣಕ್ಕೂ ಅಗತ್ಯ ಸಿದ್ಧತೆಗಳನ್ನು ರೂಪಿಸಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ನೀಡಿದರೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದರು. ಎಬಿಆರ್ ಕೆ ಯಡಿ ದಾಖಲಾದ ಸೋಂಕಿತರು ಯಾರು ಹಣ ನೀಡುವಂತಿಲ್ಲ. ಖಾಸಗಿ ಆಸ್ಪತ್ರೆ ಹಣಕ್ಕೆ ಬೇಡಿಕೆಯಿಟ್ಟರೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ
-ಜೆ.ಸಿ.ಮಾಧುಸ್ವಾಮಿ, ಜಿಲ್ಲಾಉಸ್ತುವಾರಿ ಸಚಿವರು
ಹಳ್ಳಿಗಳಲ್ಲಿ ಜೂಜಾಟದಿಂದ ಸೋಂಕು ವಿಸ್ತರಣೆ: ಸಂಸದ
ಸಂಸದ ಜಿ.ಎಸ್. ಬಸವರಾಜ್ ಮಾತನಾಡಿ, ಹಲವು ಗ್ರಾಮೀಣ ಪ್ರದೇಶಗಳ ಜನರು ಮಾತು ಕೇಳುತ್ತಿಲ್ಲ. ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ಅವಶ್ಯಕ ಇರುವ ಹಳ್ಳಿಗಳಲ್ಲಿ ಪೂರ್ಣ ಲಾಕ್ ಡೌನ್ ಮಾಡುವುದು ಸೂಕ್ತವೆಂದು ಸಲಹೆ. ನಗರ ಪ್ರದೇಶದ ಜನರು ಲಸಿಕೆ ಔಷಧ ಪಡೆದು ಗುಣಮುಖರಾಗುತ್ತಿದ್ದಾರೆ. ಕೆಲವುಹಳ್ಳಿ ಭಾಗಗಳಲ್ಲಿ ಅನುಮತಿ ಇಲ್ಲದೇ ಜಾತ್ರೆ, ಅಕ್ರಮ ಜೂಜಾಟದಲ್ಲಿ ಭಾಗವಹಿಸಿದ ಪರಿಣಾಮ ಸೋಂಕು ಹೆಚ್ಚಾಗಿದೆ ಎಂದು ಪ್ರಜಾಪ್ರಗತಿ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದರು. ಸೋಂಕು ನಿಯಂತ್ರಣವಾಗುವುದೆಂಬ ಹಿನ್ನೆಲೆಯಲ್ಲಿ ಮೂಢನಂಬಿಕೆಯಿಂದ ಜನರು ಕದ್ದು ಮುಚ್ಚಿ ಪೂಜೆ, ಜಾತ್ರೆ ಮಾಡುತ್ತಿದ್ದಾರೆ. ಇದರಿಂದಲೂ ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಇದಕ್ಕೆಲ್ಲಾ ಹಳ್ಳಿಯ ಜನ ಮಾರು ಹೋಗದೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ಕೋವಿಡ್ ನಿಗ್ರಹಕ್ಕೆ ಸಹಕರಿಸುವಂತೆ ಮನವಿ ಮಾಡಿದರು.








