ತುಮಕೂರು :
ಕಳವು ಮಾಡಿದ್ದ ಆಟೋಗಳನ್ನು ಬಳಸಿಕೊಂಡು ರಾತ್ರಿ ವೇಳೆ ಅಂಗಡಿ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಅವರಿಂದ 4 ಲಕ್ಷ ರೂ. ಮೌಲ್ಯದ ಹಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯ ಯಲ್ಲಾಪುರ ಗ್ರಾಮದ ಯಲ್ಲಾಪುರ ವರ್ತಕರ ಸೌಹಾರ್ದ ಪತ್ತಿನ ಸಹಕಾರ ನಿಯಮಿತಕ್ಕೆ ಸಂಬಂಧಿಸಿದ 3,20,087 ರೂ.ಗಳನ್ನು ಮಾತೃಶ್ರೀ ಮೆಡಿಕಲ್ ಸ್ಟೋರ್‍ನಲ್ಲಿ ಇಟ್ಟಿದ್ದು, ಈ ತಿಂಗಳ 20ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪಿರ್ಯಾದುದಾರರು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳ ಪತ್ತೆಗೆ ಸಿಪಿಐ ರಾಮಕೃಷ್ಣಯ್ಯರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಆರೋಪಿಗಳಾದ ನಗರದ ಕೋತಿತೋಪಿನ ಯಲ್ಲಪ್ಪ, ಸುದೀಪ, ರಾಮಯ್ಯ ಎಂಬುವವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅವರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣ ಹಾಗೂ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿತು. ಆರೋಪಿಗಳಿಂದ 2,33,820 ರೂ. ನಗದು, ಸುಮಾರು 1.5 ಲಕ್ಷ ರೂ. ಬೆಲೆಯ ಆಟೋ, ಹತ್ತು ಸಾವಿರ ರೂ. ಹಾಗೂ 65 ಸಾವಿರ ರೂ. ಬೆಲೆಯ ಮೊಬೈಲ್‍ಗಳು ಸೇರಿ 4 ಲಕ್ಷ ರೂ. ಬೆಲೆಯ ಮಾಲನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿ, ಕಳವು ಮಾಲು ವಶಪಡಿಸಿಕೊಂಡ ಪ್ರಕರಣದಲ್ಲಿ ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಹೆಚ್.ಜಿ.ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಹೆಚ್.ರಾಮಕೃಷ್ಣಯ್ಯರ ನೇತೃತ್ವದಲ್ಲಿ ಪಿಎಸ್‍ಐಗಳಾದ ಎಂ.ಬಿ.ಲಕ್ಷ್ಮಯ್ಯ, ಚಂದ್ರಕಲಾ, ಗಂಗಮ್ಮ ಹಾಗೂ ಸಿಬ್ಬಂದಿಗಳಾದ ಉಮೇಶ್, ನಯಾಜ್‍ಪಾಷ, ಶಾಂತಕುಮಾರ್, ದೇವರಾಜು ಶ್ರಮಿಸಿದ್ದರು. ಈ ತಂಡವನ್ನು ಎಸ್ಪಿ ಡಾ. ವಂಶಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ