‘ಗ್ರಾ.ಪಂ. ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಿ’ – ಸಿಎಂ

 ತುಮಕೂರು :

      ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಹರಡುತ್ತಿರುವ ಕೋವಿಡ್19 ಎರಡನೇ ಅಲೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಹಳ್ಳಿಗಳ ಕೋವಿಡ್ ನಿರ್ವಹಣೆಗೆ ಗ್ರಾಮ ಪಂಚಾಯ್ತಿ ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಸೂಚಿಸಿದರು.

      ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಪರಿಶೀಲನಾ ಸಭೆ ನಡೆಸಿದ ಅವರು ಕೋವಿಡ್ 19 ಎರಡನೇ ಅಲೆ ರಾಜ್ಯವನ್ನು ತೀವ್ರವಾಗಿ ಬಾಧಿಸಿದೆ. ಬೆಂಗಳೂರಿನ ನೆರೆಯ ಜಿಲ್ಲೆಯಾದ ತುಮಕೂರಿನಲ್ಲಿಯೂ ಪರಿಸ್ಥಿತಿ ಗಂಭೀರವಾಗಿತ್ತು. ಸಮರ್ಪಕ ನಿರ್ವಹಣೆಯಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಸುಧಾರಣೆ ಕಂಡುಬಂದಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಲ್ಲಿ 18,749 ಕೋವಿಡ್ ಪ್ರಕರಣ ದೃಢವಾಗಿದ್ದು, 131 ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ ಮೇ ಮಾಹೆಯಲ್ಲಿ 48,643 ಪ್ರಕರಣಗಳು ದೃಢಪಟ್ಟಿದ್ದು, 314 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಏಪ್ರಿಲ್ ತಿಂಗಳಿಗಿಂತಲೂ ಮೇ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಮರಣದ ಸಂಖ್ಯೆ ಹೆಚ್ಚಾಗಿದ್ದು, ಜನರ ಜೀವ ಉಳಿಸಲು ಸಹ ಆದ್ಯತೆ ನೀಡಬೇಕಿದೆ ಎಂದು ನಿರ್ದೇಶಿಸಿದರು.

  ಕೋವಿಡ್ ಪರೀಕ್ಷೆ ಹೆಚ್ಚಿಸಿ:

      ಕೋವಿಡ್ ಪರೀಕ್ಷೆಗಳನ್ನೂ ಹೆಚ್ಚಾಗಿ ನಡೆಸಬೇಕಾಗಿದೆ. ಇದಕ್ಕಾಗಿ ನಿನ್ನೆಯಷ್ಟೇ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮುಂದಿನ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಪರೀಕ್ಷಾ ವರದಿಗಳನ್ನು ಬೇಗನೆ ಪಡೆಯಲು ಅನುಕೂಲವಾಗುತ್ತದೆ ಎಂದ ಸಚಿವರು ಜಿಲ್ಲೆಯಲ್ಲಿ ಈವರೆಗೂ 415776 ಮಂದಿಗೆ ಮೊದಲ ಡೋಸ್ ಹಾಗೂ 1,13,781 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಬೇಕು. ಲಭ್ಯತೆ ಆಧಾರದಲ್ಲಿ ಎಲ್ಲಾ ಅರ್ಹರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.

      ಜಿಲ್ಲೆಯಲ್ಲಿ ಒಟ್ಟು 566 ಆಕ್ಸಿಜನ್ ಕಾನ್ಸರ್‍ಟ್ರೇಟರ್ಸ್‍ಗಳು ಲಭ್ಯವಿದ್ದು, ಬಾಕಿಯಿರುವ 300 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಗಳನ್ನು ಹಂಚಿಕೆ ಮಾಡಲು ಕ್ರಮವಹಿಸಿ ಎಂದು ಸೂಚಿಸಿ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು, ಉದ್ಯಮಿಗಳ ನೆರವಿನೊಂದಿಗೆ ಸೋಂಕು ನಿಯಂತ್ರಿಸಬೇಕು. ಗ್ರಾಮೀಣ ಜನರಿಗೆ ಸೋಂಕು ತಗುಲಿದಾಗ ಹೋಂ ಐಸೋಲೇಷಗೆ ಅವರ ಮನೆಯಲ್ಲಿ ಹೆಚ್ಚಿನ ಅನುಕೂಲತೆಗಳು ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಹೆಚ್ಚಿನ ಹೆಜ್ಜೆಯಿಡಬೇಕೆಂದರು.

ಸೋಂಕಿನ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಸಹಕಾರ:

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕೋವಿಡ್-19 ಎರಡನೇ ಅಲೆ ಆರಂಭದಲ್ಲಿ ಜಿಲ್ಲೆಯಲ್ಲಿ 29ಸಾವಿರ ಸೋಂಕಿನ ಪ್ರಕರಣಗಳು ಕಂಡುಬರುತ್ತಿತ್ತು. ಈಗ 15ಸಾವಿರಕ್ಕೆ ಇಳಿದಿದೆ. ಶೇ.47%ರಷ್ಟಿದ್ದ ಸೋಂಕಿನ ಪ್ರಮಾಣ ಶೇ.25ಕ್ಕೆ ಇಳಿದಿದೆ. ಇಡೀ ರಾಜ್ಯದಲ್ಲಿ ಎಲ್ಲರಿಗಿಂತಲೂ ಮೊದಲು ಕೊರೋನಾ ಆರೈಕೆ ಕೇಂದ್ರ ಪ್ರಾರಂಭಿಸಿ ಸೋಂಕಿನ ನಿಯಂತ್ರಣಕ್ಕೆ ಕ್ರಮವಹಿಸಲಾಯಿತು. ಪ್ರತಿ ತಾಲೂಕಿನಲ್ಲಿಯೂ ಆಯಾ ಶಾಸಕರು ಮತ್ತು ಜನಪ್ರತಿನಿಧಿಗಳ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ನಿರೀಕ್ಷೆಗಿಂತಲೂ ಹೆಚ್ಚು ಹತೋಟಿಗೆ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ 285 ಕೋವಿಡ್ ಹಾಸಿಗೆಗಳು ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಿದೆ ಎಂದು ಜಿಲ್ಲೆಯಕೋವಿಡ್ ಚಿಕಿತ್ಸಾ ಸೌಲಭ್ಯಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಂಡು ಸೋಂಕನ್ನು ನಿಯಂತ್ರಣಕ್ಕೆ ತರಲಾಗಿದೆ. ಎಲ್ಲಿಯೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳಿಗೆ ಒದಗಿಸಿದರು.

      ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ನಾರಾಯಣಸ್ವಾಮಿ, ಶಾಸಕರುಗಳಾದ ಡಾ.ರಂಗನಾಥ್, ಜಿ.ಬಿ.ಜ್ಯೋತಿಗಣೇಶ್, ಬಿ.ಸಿ.ನಾಗೇಶ್, ಎಸ್.ಆರ್.ಶ್ರೀನಿವಾಸ್, ಸಿಎಂ ರಾಜೇಶ್‍ಗೌಡ, ಎಂ.ವಿ.ವೀರಭದ್ರಯ್ಯ, ಮಸಾಲೆಜಯರಾಂ, ಎಂಎಲ್ಸಿಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ತಿಪ್ಪೇಸ್ವಾಮಿ, ಬೆಮೆಲ್ ಕಾಂತರಾಜು, ಮೇಯರ್ ಬಿ.ಜಿ.ಕೃಷ್ಣಪ್ಪ, ನಿಗಮ ಮಂಡಳಿ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಪಿಎಲ್‍ಡಿ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಉಸ್ತುವಾರಿ ಕಾರ್ಯದರ್ಶಿ ಡಾ. ರಾಕೇಶ್ ಸಿಂಗ್ ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಎಸ್ಪಿಡಾ.ಕೆ. ವಂಶಿಕೃಷ್ಣ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

      ಚರ್ಚೆಗೆ ಅವಕಾಶ ದೊರೆಯಲಿಲ್ಲ ಶಾಸಕ ಅಸಮಾಧಾನ: ಜಿಲ್ಲೆಯ ಕೋವಿಡ್ ಸಮಸ್ಯೆಗಳು ಬಹಳಷ್ಟಿವೆ. ಆದರೆ ಶಾಸಕರಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಆಸ್ಪದಸಿಗಲಿಲ್ಲ ಎಂದು ಕುಣಿಗಲ್ ಶಾಸಕ ಡಾ.ಕೆ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು.ಮಾಧ್ಯಮ ಪ್ರತಿನಿಧಿಗಳು ಹೊರಕ್ಕೆ ಕಳುಹಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಬಳಿಕ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರುಗಳು ಸಹ ಸಿಎಂ ಸಭೆಯಲ್ಲಿ ಉಪಸ್ಥಿತರಿದ್ದುದು ಚರ್ಚೆಗೆ ಗ್ರಾಸವಾಯಿತು.

 ಸಚಿವರಿಂದ ಸಿಎಂಗೆ ಜಿಲ್ಲೆಯ ಬೇಡಿಕೆ ಪಟ್ಟಿ:

 *ಮಂಜೂರಾಗಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಹೆಚ್ಚಿಸಿ ಬೇಗ ಕಾಮಗಾರಿಗೆ ಚಾಲನೆ ಕೊಡಿಸಿಬೇಕು.
*ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆ ಆಗಿದ್ದು ಟೆಂಡರ್ ಪ್ರಕ್ರಿಯೆ ಬೆಗ ಅಂತಿಮಗೊಳಿಸಿಕೊಡಿ. *ಜಿಲ್ಲೆಯಲ್ಲಿ 3-4 ಕಡೆ ಸಿಟಿ ಸ್ಕ್ಯಾನ್ ಕೇಂದ್ರ ಸ್ಥಾಪನೆಯಾಗಬೇಕು.
*ಹುಳಿಯಾರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು.

ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮನವಿ ಆಲಿಸಿದ ಮುಖ್ಯಮಂತ್ರಿಗಳು ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಸತತ ಪ್ರಯತ್ನ ನಡೆಸಿದ್ದರ ಫಲವಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವುದು ಸಮಾಧಾನ ತಂದಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಸೋಂಕಿನ ಪ್ರಮಾಣ ಹಂತ ಹಂತವಾಗಿ ಇಳಿಕೆಯಾಗಿ ಪ್ರಸ್ತುತ ಶೇ.25ಕ್ಕೆ ಇಳಿದಿದೆ. ಪೂರ್ಣ ಪ್ರಮಾಣದಲ್ಲಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಂಘಟಿತ, ಸಾಮೂಹಿಕ ಪ್ರಯತ್ನದಿಂದ ಇದನ್ನು ಸಾಧಿಸಬೇಕು. ಸರಕಾರದಿಂದ ಅಗತ್ಯ ಸಹಕಾರ ನೀಡಲು ಬದ್ಧ.

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ.

ಸರ್ಕಾರ ಮೊದಲ ಆದ್ಯತೆಯನ್ನು ಆರೋಗ್ಯಕ್ಕೆ ನೀಡಿದೆ. ಆಸ್ಪತ್ರೆಗಳ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕಡೆ ಆಕ್ಸಿಜನ್ ಜನರೇಟ್ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸವಲತ್ತು ಒದಗಿಸಲು ಸರ್ಕಾರ ಬದ್ಧವಾಗಿದೆ.

-ಡಾ.ಸಿ.ಎನ್. ಅಶ್ವತ್ಥ್‍ನಾರಾಯಣ ಉಪಮುಖ್ಯಮಂತ್ರಿ. ರಾಜ್ಯ ಆರೋಗ್ಯ ಕಾರ್ಯಪಡೆ ಮುಖ್ಯಸ್ಥರು.

ವಿಶೇಷ ಪ್ಯಾಕೇಜ್ ಹಣ ಬಿಡುಗಡೆ ಅನುಮಾನಬೇಡ :

      ಸರ್ಕಾರದಿಂದ ಘೋಷಿಸಲಾಗಿರುವ ವಿಶೇಷ ಪ್ಯಾಕೇಜನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಆರಂಭವಾಗಿದೆ. ಹಣವನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ಕಾರಣಕ್ಕೂ ಘೋಷಿಸಲಾಗಿರುವ ಹಣವನ್ನು ಕೊಡುತ್ತೇವೆ. ಮೂರನೇ ಅಲೆ ನಿಯಂತ್ರಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಲಭ್ಯತೆ ಆಧಾರದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುವುದು. ತುಮಕೂರು ಜಿಲ್ಲೆಗೂ ಹೆಚ್ಚು ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link