ಲಸಿಕೆ : ಅಲೆಮಾರಿ ಸಮುದಾಯ-ಕುಗ್ರಾಮಗಳನ್ನು ನಿರ್ಲಕ್ಷಿಸಿದರೆ ಅಪಾಯ!!

  ತುಮಕೂರು :

       ಕೋವಿಡ್ ಜಾಗೃತಿ ಮತ್ತು ಲಸಿಕಾ ಅಭಿಯಾನಗಳಿಗೆ ನಗರ, ಪಟ್ಟಣ, ಹೋಬಳಿ ಮತ್ತು ಗ್ರಾಮಗಳನ್ನು ಕೇಂದ್ರೀಕರಿಸಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ಮಹಾಮಾರಿ ಮನೆಯೊಳಗೆ ಹೊಕ್ಕಿರುವ ಆಘಾತಕಾರಿ ವಿಷಯದ ನಡುವೆಯೇ ಇಂತಹ ಹಳ್ಳಿ ಹಾಗೂ ಪಟ್ಟಣದ ಹೊರವಲಯಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಗಳ ಬಗ್ಗೆಯೂ ಗಮನ ಹರಿಸಬೇಕಾದ ಅಗತ್ಯ ಇದೆ.

      ಹೊರವಲಯಗಳಲ್ಲಿ ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುವ ಇಂತಹ ಅಲೆಮಾರಿಗಳನ್ನು ಸಮುದಾಯಗಳು ಹಾಗೂ ನಿರ್ಲಕ್ಷಿತ ಕುಗ್ರಾಮಗಳನ್ನು ಗುರುತಿಸದೆ ಹೋದರೆ ಮುಂದಿನ ದಿನಗಳಲ್ಲಿ ಇದೇ ಜನರಿಂದ ಸೋಂಕು ಅಥವಾ ಇತರೆ ರೋಗಗಳು ಹರಡುವ ಅಪಾಯವೂ ಇದೆ. ಏಕೆಂದರೆ ಇಂತಹ ಸಮುದಾಯಗಳಿಗೆ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ಮೂಲ ಸೌಕರ್ಯಗಳ ಗಂಧ ಗಾಳಿಯೂ ಇವರಿಗೆ ಗೊತ್ತಿಲ್ಲ. ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ಸೌಕರ್ಯವುಳ್ಳ ಜನತೆಯ ಆರೋಗ್ಯ ರಕ್ಷಣೆಯಂತೆಯೇ ಸೌಕರ್ಯ ರಹಿತ ಜನಸಮುದಾಯದ ಕಾಳಜಿಯೂ ಮುಖ್ಯ.

      ವಾಸಿಸಲು ತಮ್ಮದೇ ಆದ ಮನೆಗಳಿಲ್ಲ. ಸಿಕ್ಕಿದ ಜಾಗಗಳೇ ಇವರ ನಿವೇಶನಗಳು. ಗುಡಾರಗಳನ್ನು ಹಾಕಿಕೊಂಡು ಅದರೊಳಗೆ ಬದುಕು ಸಾಗಿಸುವ ಈ ಅಲೆಮಾರಿ ಜನಾಂಗ (ಹಕ್ಕಿಪಿಕ್ಕಿ, ಸಿಳ್ಳೇಕ್ಯಾತ, ಹಂದಿ ಜೋಗರು, ಸುಡುಗಾಡು ಸಿದ್ದರು ಇತ್ಯಾದಿ) ನಾಗರಿಕ ಸಮಾಜದಿಂದ ಬಹು ದೂರವೆ ಉಳಿದಿದ್ದಾರೆ. ಜಿಲ್ಲೆಯ ಹಲವೆಡೆ ಇವರ ವಾಸಸ್ಥಾನದ ದೃಶ್ಯಗಳು ಕಂಡುಬರುತ್ತವೆ. ನಗರ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಗುರುತಿಸಿ ಉಪಾಹಾರ, ದಿನಸಿ ನೀಡುವ ಕೆಲಸ ಮಾಡುತ್ತಿವೆ. ಆದರೆ ಜನ ಸಮೂಹದಿಂದ ದೂರವೇ ಉಳಿದಿರುವ ಕಡೆ ಇಂತಹವರನ್ನು ಗಮನಿಸುವವರೆ ಇಲ್ಲ, ಅಲೆಮಾರಿಗಳನ್ನಂತೂ ಈಗ ಯಾರೂ ಊರೊಳಗೆ ಸೇರಿಸುತ್ತಿಲ್ಲ, ಕೆಲವರ ಬದುಕು ಮೂರಾಬಟ್ಟೆಯಾಗಿದೆ.

      ಸರ್ಕಾರಿ ಅಧಿಕಾರಿಗಳು ಮತ್ತು ಒಟ್ಟಾರೆ ವ್ಯವಸ್ಥೆ ನಗರ ಕೇಂದ್ರಿತವಾದಂತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಗಳ ಮೇಲೆ ಜವಾಬ್ದಾರಿ ಹೊರಿಸಲಾಗಿದೆ. ಆದರೆ ಈ ಕಾರ್ಯಪಡೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದು ಪ್ರಶ್ನಾರ್ಹ. ಕಾರ್ಯಪಡೆ ರಚಿಸಿ ಸರ್ಕಾರ ಕೈ ತೊಳೆದುಕೊಂಡು ಬಿಟ್ಟಿತೇ..?

      ಅಲೆಮಾರಿಗಳು ಬದುಕುವ ರೀತಿಯಲ್ಲಿಯೇ ಇಂದಿಗೂ ಸಹ ಕೆಲವು ಅತ್ಯಂತ ಹಿಂದುಳಿದ ಹಳ್ಳಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹೋಬಳಿ ಮಟ್ಟದಿಂದ ಹಾಗೂ ಸೌಕರ್ಯವುಳ್ಳ ಗ್ರಾಮಗಳಿಂದ ದೂರವೆ ಉಳಿದಿವೆ. ಇಂತಹ ಕಡೆಗಳಿಗೆ ಯಾರೂ ಹೋಗುತ್ತಿಲ್ಲ. ಅಲ್ಲಿನ ಜನರಿಗೆ ಸೌಲಭ್ಯಗಳೂ ಸಿಗುತ್ತಿಲ್ಲ. ಒಬ್ಬರಿಗೆ ಪಾಸಿಟೀವ್ ದೃಢಪಟ್ಟರೂ ಇಡೀ ಸಮುದಾಯಕ್ಕೆ ವೈರಾಣು ಹರಡುವ ಅಪಾಯವಿದೆ. ಪ್ರತಿ ತಾಲ್ಲೂಕುಗಳಲ್ಲಿಯೂ ಇಂತಹ ಸಮುದಾಯ ಆಧಾರಿತ ಕೇಂದ್ರಗಳನ್ನು ಗುರುತಿಸಿ ಅಲ್ಲಲ್ಲಿ ಅರಿವು ಮೂಡಿಸುವ ಜೊತೆಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸುವ ಪ್ರಯತ್ನಗಳು ಆಗಬೇಕು. ಇದಕ್ಕಾಗಿಯೇ ತಾಲ್ಲೂಕು ಮಟ್ಟದಲ್ಲಿ ತಂಡ ರಚನೆಯಾಗಿ ಸಮುದಾಯದ ಮುಖಂಡರನ್ನೊಳಗೊಂಡ ವ್ಯವಸ್ಥೆರೂಪುಗೊಳ್ಳಬೇಕು.

       ಮೂಲ ಸೌಕರ್ಯಗಳಿಂದ ದೂರವೇ ಉಳಿದಿರುವ ತಾಂಡಾಗಳು, ಹಟ್ಟಿಗಳು, ಅಲೆಮಾರಿ ಜನಾಂಗದ ವಸತಿ ತಾಣಗಳು, ಕೂಲಿ ಕಾರ್ಮಿಕರು- ವಲಸೆ ಕಾರ್ಮಿಕರ ತಾಣಗಳನ್ನು ಗುರುತಿಸಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ. ಆನಂತರ ಈ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಸರ್ಕಾರಿ ಅಧಿಕಾರಿಗಳೂ ಅತ್ತ ಸುಳಿಯುವುದಿಲ್ಲ, ಆ ಉಸಾಬರಿಯನ್ನೇ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಆ ಸಮುದಾಯದವರಿಗೆ ಧ್ವನಿ ಇಲ್ಲ.

       ಊರಿಂದ ಊರಿಗೆ ಅಲೆಯುವ ಅಲೆಮಾರಿ ಸಮುದಾಯ ಜಿಲ್ಲೆಯಲ್ಲಿ ಬಹಳಷ್ಟಿದೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಇಂತಹ ಜನತೆ ಈಗ ತಮ್ಮ ಕಸುಬನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಇರುವಲ್ಲಿಯೇ ಇದ್ದಾರೆ. ಈ ಜನರಿಗೆ ಕೋವಿಡ್ ಎದುರಾದರೆ ಆ ಸುತ್ತಮುತ್ತ ಇರುವ ಎಲ್ಲರಿಗೂ ಹರಡುವ ಅಪಾಯವಿದೆ. ಇಂತಹ ಸಮುದಾಯದ ಜನರನ್ನು ಗುರುತಿಸಿ ಅಲ್ಲಿ ಕೋವಿಡ್ ಜಾಗೃತಿಯ ಜೊತೆಗೆ ಲಸಿಕೆ ಹಾಕಿಸಬೇಕು. ಇದಕ್ಕಾಗಿ ಸಂಚಾರಿ ಲಸಿಕಾ ವಾಹನಗಳ ಅಗತ್ಯತೆ ಇದ್ದು, ಸ್ಥಳಕ್ಕೆ ಹೋಗಿ ಮನವೊಲಿಸುವ ಕಾರ್ಯ ತುರ್ತಾಗಿ ಆಗಬೇಕು.

ಇವರೆಲ್ಲ ಯಾವ ಪಿಎಚ್‍ಸಿಗೆ ಹೋಗುತ್ತಾರೆ..?

      ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಹಿಡಿದು ಪಾವಗಡದ ತಿರುಮಣಿಯ ತನಕವೂ ತಿರುಗಿದ್ದೇನೆ. ಹಲವು ಹತ್ತು ಬುಡಕಟ್ಟು, ಅಲೆಮಾರಿ ಸಮುದಾಯಗಳನ್ನು ಭೇಟಿ ಮಾಡಿದ್ದೇನೆ. ಮಹಾರಾಷ್ಟ್ರದ ರಾಯಗಡದಿಂದ ಇಲ್ಲಿಗೆ ಬಂದು ಇದ್ದಿಲು ಸುಡುವ ಹಾಗೂ ಇತರೆ ಕಾಯಕಗಳಲ್ಲಿ ತೊಡಗಿಕೊಂಡಿರುವವರು ಇಲ್ಲಿದ್ದಾರೆ. ಇವರಿಗೆ ನಮ್ಮ ಭಾಷೆ ಅರಿವಿಲ್ಲ. ಇರಲು ಮನೆ ಇಲ್ಲ. ಹೋಗುವ ಕಡೆಗಳಲ್ಲಿಯೇ ಗುಡಾರ ಹಾಕಿಕೊಂಡು ವಾಸಿಸುತ್ತಾರೆ. ಇವರ ಬಳಿ ಆಧಾರ್ ಕಾರ್ಡ್ ಇಲ್ಲ. ಯಾವುದೋ ಭಾಗದಲ್ಲಿ ಇರುವ ಇಂತಹ ಸಮುದಾಯದವರು ಯಾವ ಪಿಎಚ್‍ಸಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಾರೆ. ಇಂತಹವರಿಗಾಗಿ ಸಂಚಾರಿ ಲಸಿಕಾ ಕೇಂದ್ರಗಳ ವ್ಯವಸ್ಥೆ ಆಗಬೇಕು. ಇವರ್ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಅರಿವು ಮೂಡಿಸುವವರೂ ಇಲ್ಲ. ಇನ್‍ಫೋಸಿಸ್ ಫೌಂಡೇಷನ್ ಸಹಯೋಗದಲ್ಲಿ ಈ ಸಮುದಾಯದವರಿಗೆ ದಿನಸಿ ನೀಡುತ್ತಾ ಬರಲಾಗಿದೆ. ಒಮ್ಮೆ ಮಾತ್ರ ನೀಡಿ ಸುಮ್ಮನಾಗುತ್ತಿಲ್ಲ, ಅಗತ್ಯಬಿದ್ದಾಗ ಮತ್ತೆ ಮತ್ತೆ ಹೋಗುತ್ತಿದ್ದೇನೆ. ಇಂತಹವರಿಗೆ ನಾವು ಧ್ವನಿಯಾಗಬೇಕು. ರೋಗ ಬಾರದ ರೀತಿಯಲ್ಲಿ ಇವರಲ್ಲಿ ಜಾಗೃತಿ ಮೂಡಿಸಬೇಕು.

-ಸ್ವಾಮಿ ಜಪಾನಂದಜಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಪಾವಗಡ.

ದಿನದ ದುಡಿಮೆಯೂ ಕೈ ತಪ್ಪಿ ಹೋಗಿದೆ  :

      ಅಲೆಮಾರಿಗಳಲ್ಲಿ ಕೆಲವರು ಕೈ ಕಸುಬನ್ನೇ ಅವಲಂಬಿಸಿದ್ದಾರೆ. ಸೂಜಿ, ದಬ್ಬಳ, ಅಲಂಕಾರಿಕೆ ವಸ್ತುಗಳನ್ನು ಮಾರಾಟ ಮಾಡಿ ಬದುಕುವ ಜನರೂ ಇದ್ದಾರೆ. ಇತರೆ ಕೂಲಿ ಕೆಲಸಗಳನ್ನು ಮಾಡಿ ಜೀವನ ನಿರ್ವಹಣೆ ಮಾಡುವವರೂ ಇದ್ದಾರೆ. ಇವರಿಗೆಲ್ಲ ಈಗ ಲಾಕ್‍ಡೌನ್ ಸಂಕಷ್ಟ ಬಂದೊದಗಿದೆ. ಊರಿನ ಅಥವಾ ಗ್ರಾಮಗಳ ಹೊರಗೆ ಗುಡಾರಗಳನ್ನು ಹಾಕಿಕೊಂಡು ಬದುಕುವ ಈ ಸಮುದಾಯ ಸರ್ಕಾರಿ ವ್ಯವಸ್ಥೆಯೊಳಗೆ ಬರುತ್ತಿಲ್ಲ. ಏಕೆಂದರೆ ಹಲವರ ಬಳಿ ಆಧಾರ್ ಕಾರ್ಡ್ ಇಲ್ಲ. ಅಲೆಮಾರಿಗಳಾಗಿಯೇ ಬದುಕುವ, ದುಡಿಯುವ ಈ ಜನರಿಗೆ ಕೋವಿಡ್ ಜಾಗೃತಿಯ ಜೊತೆಗೆ ಲಸಿಕೆಯ ಮಹತ್ವ ತಿಳಿಸಬೇಕಿದೆ. ಅಲ್ಲಲ್ಲಿ ಸಾಮಾಜಿಕ ಸಂಘಟನೆಗಳು, ಪಾವಗಡದ ರಾಮಕೃಷ್ಣ ವಿವೇಕಾನಂದ ಆಶ್ರಮದಂತಹ ಸಂಸ್ಥೆಗಳು ಅಲೆಮಾರಿಗಳು ಇರುವಲ್ಲಿಗೆ ತೆರಳಿ ಉಪಾಹಾರ ನೀಡಿ ಬರುತ್ತಿವೆ. ಇದು ಅತ್ಯಂತ ಶ್ಲಾಘನಾರ್ಹ.

-ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link