ತುಮಕೂರು:
ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ನಿತ್ಯ ಆರು ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಹೆಚ್ಚು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವಂತೆಯೂ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಭಾವನೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಬಾರದು. ಈ ಹಿಂದಿಗಿಂತಲೂ ಹೆಚ್ಚಾಗಿ ಕೋವಿಡ್ ಪರೀಕ್ಷೆ ಮಾಡಬೇಕು. ಇದರಿಂದ ಕೋವಿಡ್ ಅನ್ನು ನಿರೀಕ್ಷೆಗೂ ಮೀರಿ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಗುರುತಿಸಿರುವ ಕೆಂಪುವಲಯ ಮತ್ತು ಹಾಟ್ ಸ್ಪಾಟ್ ಪ್ರದೇಶಗಳಲ್ಲಿನ ಸೋಂಕಿತರ ಕುಟುಂಬಸ್ಥರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಅವರಿಗೆ ನಿರ್ದೇಶಿಸಿದರು.
ಶಿರಾ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕಗಳ ಅವಶ್ಯಕತೆಯಿದೆ ಎಂದು ಶಾಸಕ ರಾಜೇಶ್ ಗೌಡ ಕೇಳಿದಾಗ, ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಗೆ ದಾನಿಗಳು ಅನೇಕ ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಶಿರಾ ಆಸ್ಪತ್ರೆಗೆ ಅವಶ್ಯಕತೆ ಇರುವ ಆಮ್ಲಜನಕ ಸಿಲಿಂಡರ್‍ಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
