ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಲಸಿಕೆಗೆ ಆಗ್ರಹ!!

ತುಮಕೂರು :  

      ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಂಪೂರ್ಣ ಉಚಿತವಾಗಿ ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಬೇಕು, ಜಿಲ್ಲೆಯ ಯುವ ಜನತೆಗೆ 1 ಮತ್ತು 2 ನೇ ಡೋಸ್ ಲಸಿಕೆ, ಕೋವಿಡ್ ಅಲೆಯಿಂದ ಮಕ್ಕಳ ರಕ್ಷಣೆ, ಆಕ್ಸಿಜನ್, ರೆಮಿಡಿಸಿವರ್, ಆಂಬ್ಯೂಲೆನ್ಸ್, ಕೋವಿಡ್ ಹಾಗೂ ಫಂಗಸ್ ಔಷಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಮೂಲಕ ಕೋವಿಡ್ ಮುಕ್ತ ಮೊದಲ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತೆರಳಿ ಡಾ.ನಾಗೇಂದ್ರಪ್ಪ ಅವರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೊರೊನಾ ಆರ್ಭಟ ತೀವ್ರವಾಗಿದೆ. ಇದರಿಂದ ಸಾಮಾನ್ಯ ಜನರ ಜೀವನ ದುಸ್ಥಿತಿಯಲ್ಲಿದ್ದು, ಕೋವಿಡ್ ಲಾಕ್‍ಡೌನ್ ನಿಂದ ಬಡ ಮತ್ತು ಮಧ್ಯಮ ವರ್ಗದವರು ದುಡಿಮೆಯಿಲ್ಲದೇ ಜೀವನ ನಡೆಸುವುದಕ್ಕೂ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ ಈ ಮಹಾಮಾರಿ ಕೋವಿಡ್ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ತಮ್ಮ ಜೀವಮಾನವಿಡಿ ದುಡಿದರು ಸಹ ಖಾಸಗಿ ಆಸ್ಪತ್ರೆಗಳಲ್ಲಿ ಇದರ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಪಡೆಯಲು ಕೂಡಲೇ ಅಗತ್ಯ ಕ್ರಮ ಕೈಗೊಂಡು ಬಡವರ ಜೀವ ಹಾಗೂ ಜೀವನ ಎರಡನ್ನೂ ಉಳಿಸುವುದು ಅಗತ್ಯವಾಗಿದೆ ಎಂದರು.

      ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಪ್ರತಿ ವಾರ್ಡ್, ಮಟ್ಟದಲ್ಲಿ 3-4 ಆರೈಕೆ ಕೇಂದ್ರ, ಫೀವರ್ ಕ್ಲಿನಿಕ್, ಹೆಲ್ಪ್ ಡೆಸ್ಕ್‍ಗಳನ್ನು ಪ್ರಾರಂಭಿಸಬೇಕು, ವೈದ್ಯಕೀಯೇತರ ಬೋಧನಾ ಸಿಬ್ಬಂದಿ ಮತ್ತು ‘ರಾಷ್ಟ್ರೀಯ ಹೆಲ್ತ್ ಮಿಷನ್’ನ ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣಾ ವ್ಯವಸ್ಥೆಗೆ ನಿಯೋಜಿಸಬೇಕು, ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇವರ ಸೇವೆಯನ್ನು ಅಗತ್ಯವಾಗಿ ಬಳಸಿಕೊಳ್ಳಬೇಕು. ಫಂಗಸ್ ನಂತಹ ಹೊಸ ಕಾಯಿಲೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.

      ಗ್ರಾಮಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಯ ಆರೋಗ್ಯ ಸಮೀಕ್ಷೆ ನಡೆಸಿ, ನಿಖರ ಮಾಹಿತಿ ಸಂಗ್ರಹಿಸಬೇಕು, ಕೋವಿಡ್ ನಿಯಂತ್ರಣಕ್ಕಾಗಿ ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‍ಗಳೊಂದಿಗೆ ಜಂಟಿ ಕಾರ್ಯ ಚಟುವಟಿಕೆ ನಡೆಸುವುದು ಸೂಕ್ತವಾಗಿದೆ. ಎಸ್‍ಡಿಆರ್‍ಎಫ್ ಮತ್ತು 14ನೇ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಯಾಗಬೇಕು. ಕೋವಿಡ್ ಕಟ್ಟಿಹಾಕಲು ತಾಲ್ಲೂಕು ಆರೋಗ್ಯಾಧಿಕಾರಿ, ತಹಸೀಲ್ದಾರ್, ಗ್ರಾಮಲೆಕ್ಕಿಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡಂತೆ ಗ್ರಾಮೀಣ ಟಾಸ್ಕ್‍ಫೋರ್ಸ್ ರಚನೆ ಮಾಡಬೇಕೆಂದು ಸಲಹೆ ನೀಡಿದರು.

      ಮಧುಮೇಹ, ರಕ್ತದೊತ್ತಡ ಇರುವ ಕೋವಿಡ್ ಸೋಂಕಿತರಿಗೆ ಆದ್ಯತೆ ನೀಡಬೇಕು, ಇತರೆ ಸಾಮಾನ್ಯ ಕಾಯಿಲೆಗಳ ರೋಗಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದ್ದು, ಅವರ ಆರೈಕೆಗಾಗಿ ಪ್ರತ್ಯೇಕ ಚಿಕಿತ್ಸಾ ಕೇಂದ್ರ ಪ್ರಾರಂಭಿಸಬೇಕು, ಇತ್ತೀಚಿನ ವರದಿಯಂತೆ ಮಕ್ಕಳಿಗೂ ಸಹ ಈ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು ಮುಂಜಾಗೃತ ಕ್ರಮವಾಗಿ ಮಕ್ಕಳಲ್ಲಿ ಹಾಗೂ ಪೆÇೀಷಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ತೆರೆದು ವೈದ್ಯಕೀಯ ತಜ್ಞರು, ಔಷಧಿಗಳು ಮತ್ತು ಸೌಕರ್ಯಗಳನ್ನು ಈಗಿನಿಂದಲೇ ಯುದ್ಧೋಪಾದಿಯಲ್ಲಿ ತಯಾರಾಗಬೇಕು ಎಂದು ಮುರಳೀಧರ ಹಾಲಪ್ಪ ಅವರು ಡಿಎಚ್‍ಒ ಡಾ.ನಾಗೇಂದ್ರಪ್ಪ ಅವರಿಗೆ ಸಲಹೆ ನೀಡಿದರು.

      ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆ ನಡೆಸುವುದನ್ನು ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಗ್ರಾಮಾಂತರ ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಎಚ್‍ಒ ಡಾ.ನಾಗೇಂದ್ರಪ್ಪ ಮಾತನಾಡಿ, 1250 ಆಕ್ಸಿಜನ್ ಬೆಡ್‍ಗಳು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಅದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲದೆ 650 ಬೆಡ್‍ಗಳನ್ನು ಸರ್ಕಾರಿ ಕೋಟಾದಡಿ ವಶಪಡಿಸಿಕೊಂಡಿದ್ದೇವೆ. ಈ ಬೆಡ್‍ಗಳನ್ನು ಯಾರು ಬೇಕಾದರೂ ಉಪಯೋಗಿಸಿಕೊಳ್ಳಬಹುದು, ಶೇ.50 ರಷ್ಟು ಬೆಡ್‍ಗಳನ್ನು ನಾವು ಯಾವುದೇ ದಾಕ್ಷಿಣ್ಯವಿಲ್ಲದೇ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.

      ಮೆಡಿಕಲ್ ಕಾಲೇಜಿನಲ್ಲಿ ಇರುವ ಆಕ್ಸಿಜನ್ ಬೆಡ್‍ಗಳಲ್ಲಿ ಶೇ.75 ರಷ್ಟು ನಾವು ತೆಗೆದುಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲೂ ಶೇ.50 ರಷ್ಟು ತೆಗೆದುಕೊಂಡಿದ್ದೇವೆ ಎಂದ ಅವರು, ಕೋವಿಡ್ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಕಾಳಸಂತೆಯಲ್ಲಿ ಮಾರಾಟವಾಗಿಲ್ಲ, ಅಂತಹುದೇನಾದರೂ ಮಾಹಿತಿ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

      ಜಿಲ್ಲೆಗೆ ನೀಡಲಾಗಿದ್ದ 87 ವೆಂಟಿಲೇಟರ್ಸ್‍ಗಳಲ್ಲಿ 74 ವೆಂಟಿಲೇಟರ್ಸ್‍ಗಳನ್ನು ಬಳಕೆ ಮಾಡಿಕೊಂಡು ಸಾವಿರಾರು ಜನರನ್ನು ಉಳಿಸಿದ್ದೇವೆ. ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲೂ ವಾರ್ ರೂಂ ಸ್ಥಾಪನೆ ಮಾಡಿದ್ದೇವೆ. ಕೋವಿಡ್ ಪರೀಕ್ಷಾ ಫಲಿತಾಂಶ 36 ಗಂಟೆಯಿಂದ 24 ಗಂಟೆಯೊಳಗೆ ಸಿಗಲಿದ್ದು, ಇದರಿಂದ ಸೋಂಕಿತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಪಂ ಸದಸ್ಯ ಕೆಂಚಮಾರಯ್ಯ, ಜಯರಾಮ್, ಮುಖಂಡರಾದ ರೇವಣಸಿದ್ಧಯ್ಯ, ಹೆಚ್.ಸಿ.ಹನುಮಂತಯ್ಯ, ಚಂದ್ರಶೇಖರ್‍ಗೌಡ, ಟಿ.ಎಸ್. ತರುಣೇಶ್, ನಿರಂಜನ್, ಮಂಜುನಾಥ್, ನಟರಾಜು, ಗೀತಾ, ಸಂಜೀವ್‍ಕುಮಾರ್, ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link