ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿ ಮನೆಗೆ ಸಚಿವೆ ಭೇಟಿ

 ಮಧುಗಿರಿ :

      ಇತ್ತೀಚೆಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿಯ ಮನೆಗೆ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

      ಅವರು ಕೊಡಿಗೇನಹಳ್ಳಿ ಹೋಬಳಿಯ ಮೈದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗೆ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆಯಾಗುವುದಕ್ಕೆ ನಮ್ಮ ಇಲಾಖಾ ಅಧಿಕಾರಿಗಳು ಮತ್ತು ಪೊಲೀಸರು ಕ್ರಮ ವಹಿಸುತ್ತಾರೆ. ಎಲ್ಲ ಜನತೆಯಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ಹೆಣ್ಣು ಮಕ್ಕಳಿಗೆ ಮಾತ್ರ ಅಲ್ಲೋಗಬೇಡ, ಇಲ್ಲೋಗಬೇಡ ಅನ್ನೋದನ್ನ ಮಾತ್ರ ನಾವು ಹೇಳುತ್ತೇವೆ. ಆದರೆ ಇದು ನಮ್ಮ ಮನೆಯಲ್ಲಿರುವಂತಹ ಎಲ್ಲಾ ಗಂಡು ಮಕ್ಕಳಿಗೂ ಕೂಡ ಹೇಳುವ ಪರಿಸ್ಥಿತಿ ತಾಯಂದಿರಿಂದ ಆಗಬೇಕು. ಮನೆಯಲ್ಲಿ ಹೇಗೆ ಎಲ್ಲರೂ ಅಣ್ಣ-ತಮ್ಮ ಮತ್ತು ಅಕ್ಕ-ತಂಗಿಯರ ಜೊತೆ ಇರುತ್ತಾರೋ ಅದೇ ರೀತಿ ಸಮಾಜದಲ್ಲಿನ ಹೆಣ್ಣು ಮಕ್ಕಳೂ ಕೂಡ ನಮ್ಮ ಸಹೋದರಿಯರು ಎಂಬ ಅರಿವು ಗಂಡು ಮಕ್ಕಳಲ್ಲಿ ಬರಬೇಕಾಗಿದೆ.

      ರಾಜ್ಯದಲ್ಲಿ ಈಗಾಗಲೇ ರಾಜ್ಯದಲ್ಲಿ 69 ಸಾವಿರಕ್ಕೂ ಹೆಚ್ಚೂ ಅಂಗನವಾಡಿಗಳಿವೆ. ಈಗ ಹೆಚ್ಚುವರಿಯಾಗಿ 1 ಸಾವಿರ ಕಟ್ಟಡಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲೆಯಲ್ಲಿ 22 ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ನಿವೇಶನಗಳ ಕೊರತೆಯಿಂದ ತಡವಾಗುತ್ತಿದೆ. ನಿವೇಶನಗಳನ್ನು ಒದಗಿಸಿ ಕೊಡುವಂತೆ ಆಯಾ ಕ್ಷೇತ್ರದ ಶಾಸಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದರು.

      ಇದೇ ಸಂದರ್ಭದಲ್ಲಿ ಮಧುಗಿರಿಯ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಎನ್‍ಎಸ್‍ಯೂಐ ತಾಲ್ಲೂಕು ಘಟಕದ ಪದಾಧಿಕಾರಿಗಳು ಭೇಟಿ ಮಾಡಿ ಮೈದನಹಳ್ಳಿಯ ಘಟನೆಯನ್ನು ಖಂಡಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ್ ಮತ್ತು ತಂಡದವರು ಮನವಿ ಪತ್ರವನ್ನು ಸಲ್ಲಿಸಿದರು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸಿಡಿಪಿಓ ಅನಿತಾ, ಶಿರಾ ಸಿಡಿಪಿಓ ಕೆಂಪಹನುಮಯ್ಯ, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ತಾಲ್ಲೂಕು ಪಂಚಾಯತಿ ಇಓ ದೊಡ್ಡಸಿದ್ದಪ್ಪ, ಪಿಡಿಓ ವೆಂಕಟಾಚಲಪತಿ, ಪಿ.ಎಸ್.ಐ. ಕೆ.ಎನ್.ಪಾಲಾಕ್ಷಪ್ರಭು, ಬಿಜೆಪಿ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ವಿಸ್ತಾರಕ ಲಕ್ಷ್ಮೀಪತಿ, ಎಸ್ಸಿ-ಎಸ್ಟಿ ಮೋರ್ಚಾ ಅಧ್ಯಕ್ಷ ಹೊಸಹಳ್ಳಿಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಕಾರ್ಯದರ್ಶಿ ಕಲ್ಪನಾಗೋವಿಂದರಾಜು ಹಾಗೂ ಗ್ರಾಮಸ್ಥರು ಇದ್ದರು.

       ಸಚಿವೆ ಶಶಿಕಲಾ ಜೊಲ್ಲೆ ಮತ್ತು ಅಧಿಕಾರಿಗಳ ತಂಡ ಮೈದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಬಾಲಕಿ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆ ನಡೆದು ವಾರ ಕಳೆದರೂ ಕನಿಷ್ಠ ಸೌಜನ್ಯಕ್ಕಾದರೂ ಕ್ಞೇತ್ರದ ಶಾಸಕ ಎಂ.ವಿ. ವೀರಭದ್ರಯ್ಯ ಭೇಟಿ ನೀಡಿ, ಸಾಂತ್ವನ ಹೇಳದೆ ನಿರ್ಲಕ್ಷ್ಯ ತೋರಿರುವುದು ಬೇಸರ ತಂದಿದೆ.

-ಎಂ.ಪಿ.ಕಾಂತರಾಜು, ಮಾಜಿ ಅಧ್ಯಕ್ಷ, (ಸಿಂಗನಹಳ್ಳಿ ಗ್ರಾಮ ಪಂಚಾಯಿತಿ), ಮೈದನಹಳ್ಳಿ

Recent Articles

spot_img

Related Stories

Share via
Copy link
Powered by Social Snap