ತುಮಕೂರು :
ಲಾಕ್‍ಡೌನ್ ನಿಯಮಪಾಲಿಸದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿರುವ ವಾಹನ ಸವಾರರಿಗೆ ಬುದ್ದಿಹೇಳಲು ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಭಾವಾಭಿನಯದ ಜಾಗೃತಿ ಗೀತೆ ಬಿಡುಗಡೆಗೊಳಿಸಿದ್ದು, ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ ಜಾಲತಾಣಗಳಲ್ಲಿ ಅರ್ಧಲಕ್ಷಕ್ಕೂ ಮೀರಿ ಜನರ ವೀಕ್ಷಣೆಯೊಂದಿಗೆ ಹಿಟ್ ಆಗುತ್ತಿದೆ.
ಓಹ್ ಓಹೋರೆ ಕೊರೊನಾ, ಓ ಜನಗಳೇ ಬುದ್ದಿ ಬಾರದೇ ,., ಗೀತೆಯನ್ನು ಹಾಡಿ ಜನಜಾಗೃತಿ ಮೂಡಿಸಿದ್ದ ಬೆಳ್ಳಾವಿ ಠಾಣೆ ಹೆಡ್‍ಕಾನ್ಸ್‍ಟೇಬಲ್ ರಮೇಶ್ ಅವರ ಕಂಠಸಿರಿಯಲ್ಲಿ ಮತ್ತೊಂದು ಲಾಕ್‍ಡೌನ್ ಜಾಗೃತಿ ಗೀತೆಯನ್ನು ಎಸ್ಪಿ ಡಾ.ಕೆ.ವಂಸಿಕೃಷ್ಣ ಅವರು ಹಾಡಿಸಿದ್ದು, ಶರಣ್ ಅಭಿನಯದ ಅಧ್ಯಕ್ಷ ಚಿತ್ರದ ಫೋನ್ ಇಲ್ಲ, ಮೆಸೇಜ್ ಇಲ್ಲ…, ಹಾಡಿನ ಮಾದರಿಯಲ್ಲಿ ‘’ಮನೆಯಿಂದ ಆಚೆಬಂದ್ರೆ ಜೋಕೆ, ಹಿಂಗ್ಯಾಕೆ, ನೀವು ಕೆಲ್ಸ ಇಲ್ದೇ ಬೀದಿ ಸುತ್ತೋದು ಯಾಕೆ, ನಿನ್ನೆ ತನಕ ನಾವು ಸುಮ್ನೇಇದ್ವಿ..,’’ ಎಂದುವ ಮನಮಟ್ಟುವ ಸಾಲುಗಳ ಮೂಲಕ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಪ್ರಧಾನಿಯವರು ವಿಡಿಯೋ ಸಂವಾದದಲ್ಲಿ ಗೀತೆ, ನಾಟಕ, ರಂಗಕಲೆಗಳ ಮೂಲಕ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿ ಎಂದು ನೀಡಿದ್ದ ಕರೆ ಮೇರೆಗೆ ಜಿಲ್ಲಾ ಪೊಲೀಸ್ ಇಲಾಖೆ ದೃಶ್ಯ, ಶ್ರವ್ಯ ಮಾಧ್ಯಮಗಳನ್ನು ಬಳಸಿಕೊಂಡು ತನ್ನ ಇಲಾಖೆಯಲ್ಲಿನ ಕಲಾವಿದರನ್ನು ಬಳಸಿಕೊಂಡು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಕವಿ ನಂದಿಕೋಲ್ ರಮೇಶ್ ಅವರ ಸಾಹಿತ್ಯದಲ್ಲಿ, ಸೋನು ಜಾಫರ್ ಅವರು ಸಂಗೀತ ಮರು ಸಂಯೋಜನೆಗೊಳಿಸಿದ್ದಾರೆ.
ಎಸ್ಪಿ, ಉನ್ನತ ಪೊಲೀಸ್ ಅಧಿಕಾರಿಗಳ ಪ್ರೋತ್ಸಾಹದ ಮೇರೆಗೆ 3 ಜಾಗೃತಿ ಗೀತೆಯನ್ನು ಕೋವಿಡ್ ಸಂದರ್ಭದಲ್ಲಿ ಹಾಡಿದ್ದು, ನಾನು ಹಾಡಿದ ಓ ಜನಗಳೇ ಬುದ್ದಿ ಬಾರದೇ ಗೀತೆ ಹತ್ತುಸಾವಿರ ಶೇರ್ ಆಗಿದ್ದು, 12 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಜನರು ಪೊಲೀಸರ ಸಂಯಮ ಮೀರುವಂತೆ ವರ್ತಿಸುತ್ತಿರುವುದನ್ನು ಕಂಡು ಜನಜಾಗೃತಿಗಾಗಿ ಈ ಗೀತೆ ಹಾಡಲಾಗಿದೆ. ಫೇಸ್ಬುಕ್/ ಯೂಟ್ಯೂಬ್‍ನಲ್ಲಿ ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಎಂದು ನಮೂದಿಸಿದರೆ ಹಾಡಿನ ವಿಡಿಯೋ ನೋಡಬಹುದು.
– ರಮೇಶ್, ಜಾಗೃತಿ ಗೀತೆ ಹಾಡಿರುವ ಪೊಲೀಸ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ