‘ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮ’ – ಸಚಿವೆ ಶಶಿಕಲಾ ಜೊಲ್ಲೆ

 ತುಮಕೂರು : 

      ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗಿನ ಪ್ರಕರಣಗಳು ಕಂಡು ಬಂದಾಗ ಇಲಾಖೆಗೆ ಮಾಹಿತಿ ನೀಡುವ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದರಲ್ಲದೆ, ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿಸಿ ಸಬಲರನ್ನಾಗಿಸಲು ಬೇಟಿ ಬಚಾವ್-ಬೇಟಿ ಪಡಾವ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಸುಮಾರು 2ಲಕ್ಷ ಫಲಾನುಭವಿಗಳಿಗೆ ಬಾಂಡ್‍ಗಳನ್ನು ವಿತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದರು.

      ಗುರುವಾರ ನಗರದ ಜಿಲ್ಲಾ ಬಾಲಭವನ ಆವರಣದಲ್ಲಿ 2.33 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ನೂತನ ಕಛೇರಿ ಹಾಗೂ 25 ಅಂಗನವಾಡಿ ಕಟ್ಟಡಗಳನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 65911 ಅಂಗನವಾಡಿ ಕೇಂದ್ರಗಳಿದ್ದು, 1,28,000ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅಂಗನವಾಡಿ ಕೊರತೆ ಇರುವ ಕಡೆ ನೂತನವಾಗಿ ನಿರ್ಮಿಸಲು 2000 ನೂತನ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

      ತುಮಕೂರು ನಗರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ 5 ಕೋಟಿ ರೂ.ಗಳನ್ನು ಒದಗಿಸಿರುವ ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲೆಯಲ್ಲಿ ಸುಮಾರು 13 ಅಂಗನವಾಡಿ ಕಟ್ಟಡಗಳನ್ನು ನೀಡಿರುವ ಸಚಿವ ಮಾಧುಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳಿಲ್ಲದಿರುವ ಕಡೆ ನೂತನವಾಗಿ ನಿರ್ಮಿಸಲು ನಿವೇಶನವನ್ನು ಒದಗಿಸಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರಲ್ಲಿ ಮನವಿ ಮಾಡಿದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜನರಿಗೆ ಹತ್ತಿರವಾದ ಇಲಾಖೆಯಾಗಿದ್ದು, ಸರ್ಕಾರದ ಯೋಜನೆಗಳನ್ನು ತಳ ಮಟ್ಟದವರೆಗೂ ತಲುಪಿಸುವಲ್ಲಿ ಶ್ರಮಿಸುತ್ತಿದೆ. ಕೋವಿಡ್-19ನಂತಹ ಸಂದರ್ಭದಲ್ಲಿ ಕೊರೋನಾ ಸೈನಿಕರಾಗಿ ಮನೆ-ಮನೆ ಸಮೀಕ್ಷೆ ಕೈಗೊಂಡು ರೋಗವನ್ನು ಹತೋಟಿಗೆ ತರುವಲ್ಲಿ ಶ್ರಮಿಸಿದ ಎಲ್ಲಾ ಅಂಗವನಾಡಿ ಕಾರ್ಯಕರ್ತೆಯರು/ಸಹಾಯಕರ ಸೇವೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

      ದೇಶಕ್ಕೆ ಆರೋಗ್ಯವಂತ ಮಕ್ಕಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಪೋಷಣ್ ಅಭಿಯಾನ, ಮಾತೃವಂದನಾ, ಪೋಷಣ್ ಪಕ್ವಾಡ್‍ನಂತಹ ಮಹತ್ತರ ಯೋಜನೆಗಳಡಿ ಗರ್ಭಿಣಿ/ ಬಾಣಂತಿ ತಾಯಂದಿರ ಹಾಗೂ 0-6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಿ ಅಪೌಷ್ಟಿಕತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೌಷ್ಟಿಕ ಆಹಾರ ಸೇವನೆ ಕುರಿತು ತಾಯಂದಿರಿಗಷ್ಟೆ ಅಲ್ಲದೆ ಕುಟುಂಬ ಸದಸ್ಯರಿಗೂ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

      ಮಹತ್ತರ ಯೋಜನೆಗಳೊಂದಿಗೆ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ವಸತಿ ಸೌಕರ್ಯ ಕಲ್ಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ತರಬೇತಿ ನೀಡಲು ಮಹಿಳಾ ಸ್ವಾಧಾರ ಕೇಂದ್ರ ಹಾಗೂ ಕುಟುಂಬ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಉಚಿತವಾಗಿ ಸಮಾಲೋಚನೆ ನೀಡಿ ಪ್ರಕರಣ ಇತ್ಯರ್ಥಪಡಿಸಲು ಸಾಂತ್ವನ ಕೇಂದ್ರಗಳು ಇಲಾಖೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದರಲ್ಲದೆ, ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸ್ತ್ರೀಶಕ್ತಿ ಸಂಘಗಳಿಗೆ ಬ್ಯಾಂಕಿನ ನೆರವಿನೊಂದಿಗೆ ಸಾಲ/ಸಹಾಯಧನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸ್ವ-ಸಹಾಯ ಸಂಘ/ ಸ್ತ್ರೀಶಕ್ತಿ ಸಂಘಗಳಿಂದ ಹಲವಾರು ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘಗಳ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮಹಿಳೆಯರು ಇಲಾಖೆಯ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

      ಸರ್ಕಾರವು ಮಹಿಳೆ ಮತ್ತು ಮಕ್ಕಳ ಕಲ್ಯಾಣದೊಂದಿಗೆ ವಿಕಲಚೇತನರಿಗೂ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ಇಲಾಖೆ ಮೂಲಕ ವಿಕಲಚೇತನರಿಗಾಗಿ ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ 1600 ದ್ವಿಚಕ್ರವಾಹನ, ಅಂಧ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 450 ಟಾಕಿಂಗ್ ಲ್ಯಾಪ್‍ಟಾಪ್ ಒದಗಿಸಲಾಗಿದೆ. ಅಲ್ಲದೆ 900 ಅಂಗನವಾಡಿ ಕೇಂದ್ರಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

      ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾಯಂದಿರ ಹಾಗೂ ಅವರ ಮಕ್ಕಳ ಸೇವೆ ಮಾಡುವ ಪುಣ್ಯದ ಕೆಲಸ ಮಾಡುತ್ತಿದೆ. ತಳಮಟ್ಟದಲ್ಲಿರುವ ಅಮಾಯಕರು, ನಿರ್ಗತಿಕರು, ಹಸುಗೂಸುಗಳಿಗೆ ನೆರವಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದುದು ಎಂದು ತಿಳಿಸಿದರು.

      ಮಕ್ಕಳ ಶುಶ್ರೂಷೆ ಗರ್ಭದಿಂದಲೇ ಆಗಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರ ಮಹತ್ತರ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ದೇಶಕ್ಕೆ ಉತ್ತಮ ಯುವ ಶಕ್ತಿಯನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ ಎಂದರು.

      ತೃಪ್ತಿ ಎಂಬುದು ಯಾವ ಹುದ್ದೆಯಿಂದಲೂ ಬರುವುದಿಲ್ಲ. ನಾವು ಮಾಡುವ ಸೇವೆಯಿಂದ ತೃಪ್ತಿ ಕಾಣಬೇಕು. ಮೇಲಾಧಿಕಾರಿಗಳ ಕಾಟಕ್ಕೆ ಮಾಡುವ ಕೆಲಸದಲ್ಲಿ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ನಮ್ಮ ತೃಪ್ತಿ ಕಾಣಲು ಸಾಧ್ಯ. ಯಾವುದೇ ಕಾರಣಕ್ಕೂ ನಮ್ಮಲ್ಲಿ ಉದಾಸೀನ ಆವರಿಸಿಕೊಳ್ಳಲು ಬಿಡಬಾರದು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಸೇವೆ ಬಗ್ಗೆ ಕಿವಿಮಾತು ಹೇಳಿದರು.

      ಕೋವಿಡ್-19ನಂತಹ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ ಬಗ್ಗೆ ಕಾರ್ಯಕರ್ತರನ್ನು ಶ್ಲಾಘಿಸಿದ ಅವರು ಅಂಗವನಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿರುವ ತಾಯಂದಿರು ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವುದರೊಂದಿಗೆ ಮಕ್ಕಳಿಗೆ ಪೋಷಕರ ಪ್ರೀತಿ ದೊರೆಯುತ್ತಿದೆಯೆ? ಎಂಬ ಬಗ್ಗೆಯೂ ನಿಗಾ ಇಡಬೇಕು. ಪೋಷಕರ ಪ್ರೀತಿಯಿಂದ ಬೆಳೆದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುವುದಲ್ಲದೆ ಆರೋಗ್ಯವಂತರಾಗಿಯೂ ಬೆಳೆಯುತ್ತಾರೆ. ಇಲ್ಲದಿದ್ದರೆ ಬೌದ್ಧಿಕ ವಿಕಾಸದಲ್ಲಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಜನರಲ್ಲಿ ಹೆಚ್ಚಿನ ಗೌರವವಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಇವರನ್ನು ಬಳಸಿಕೊಳ್ಳುತ್ತಿರುವುದು ಅಪಖ್ಯಾತಿಗೆ ಕಾರಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರಲ್ಲದೆ, ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 10ರಷ್ಟು ಇನ್ನೂ ಅನಕ್ಷರಸ್ಥರಿರುವುದು ನಾಚಿಕೆ ತರಿಸುತ್ತಿದೆ. ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ತುಮಕೂರಿನಲ್ಲಿ ಇಂದಿಗೂ 2ಲಕ್ಷ ಜನ ಅನಕ್ಷರಸ್ಥರಿದ್ದಾರೆ. ಮುಂದಿನ ಐದಾರು ವರ್ಷಗಳಲ್ಲಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಬೇಕು ಎಂದು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರದಲ್ಲಿರುವ ಶಾಲೆಗಳ ಆವರಣದಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವ ಚಿಂತನೆ ಹೊಂದಲಾಗಿದೆ. ಇದರಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರಲ್ಲದೆ, ನಗರದಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರಗಳು ಇಲ್ಲದಿರುವುದು ಕಂಡು ಬಂದಿದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಇಲಾಖೆಯ ವಿವಿಧ ಸವಲತ್ತುಗಳ ವಿತರಣೆ ಹಾಗೂ ವಿವಿಧ ಯೋಜನೆಗಳ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.

      ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚೌಡಪ್ಪ ಹಾಗೂ ನವ್ಯಬಾಬು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಬಾಲಭವನ ಸದಸ್ಯರಾದ ಬಸವಯ್ಯ, ಜಯಣ್ಣ, ಮಹೇಶ್ ಕರ್ಜಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಅಂಗನವಾಡಿ ಕಾರ್ಯಕರ್ತೆಯರು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

      ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸ್ತ್ರೀಶಕ್ತಿ ಸಂಘಗಳಿಗೆ ಬ್ಯಾಂಕಿನ ನೆರವಿನೊಂದಿಗೆ ಸಾಲ, ಸಹಾಯಧನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸ್ವ-ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳಿಂದ ಹಲವಾರು ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘಗಳ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ.

-ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ.

      ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಜನರಲ್ಲಿ ಹೆಚ್ಚಿನ ಗೌರವವಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಇವರನ್ನು ಬಳಸಿಕೊಳ್ಳುತ್ತಿರುವುದು ಅಪಖ್ಯಾತಿಗೆ ಕಾರಣವಾಗಿದೆ. ಚುನಾವಣೆ ಕಾರ್ಯದಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ ಹಾಕಿದರೆ ನಾವು ಸಹಿಸುವುದಿಲ್ಲ.

-ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap