ತುಮಕೂರು : ಬುಗುಡನಹಳ್ಳಿ ಕೆರೆಗೆ ಕಲುಷಿತ ನೀರು ; ಪರೀಕ್ಷೆಗೆ ರವಾನೆ

 ತುಮಕೂರು : 

ತುಮಕೂರು ನಗರಕ್ಕೆ ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಸದಸ್ಯರು, ಅಧಿಕಾರಿಗಳ ನಿಯೋಗ ಭೇಟಿ ನೀಡಿ ನೀರಿನ ಗುಣಮಟ್ಟದ ಪರಿವೀಕ್ಷಣೆ ನಡೆಸಿದರು.

      ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ನಾಲೆಯು ಜಿಲ್ಲೆಯ ತಿಪಟೂರಿನ ಮೂಲಕ ಹಾದು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ನೀರಿನಲ್ಲಿ ಕೊಳಚೆ ಮಿಶ್ರಿತ ಕಲುಷಿತ ನೀರು ಸೇರಿ ಹರಿಯುತ್ತಿದೆ ಎಂಬ ಹಿನ್ನಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಬುಗುಡನಹಳ್ಳಿ ಶುದ್ಧೀಕರಣ ಘಟಕ ಮತ್ತು ಹೇಮಾವತಿ ನೀರು ಹರಿಯುವ ಕಾಲುವೆ ಬಳಿ ಭೇಟಿ ನೀಡಿ ವೀಕ್ಷಿಸಿ, ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು.

     ಸೋಮವಾರ ತಿಪಟೂರು ನಾಲೆಯಿಂದ ಕಲುಚಿತ ನೀರು ಹೇಮಾವತಿ ನಾಲೆಯಲ್ಲಿ ಮಿಶ್ರಣಗೊಂಡು ಹರಿಯುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಜಆದರೆ ತುಮಕೂರಿನ ಜನತೆ ಗಾಬರಿಗೊಂಡು ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳನ್ನು ಕರೆದೊಯ್ದು ಪರಿಶೀಲನೆ ನಡೆಸಿದರು.

      ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಪ್ರವೇಶಿಸುವ ಮುನ್ನ ನೀರಿನ ಮಾದರಿಯನ್ನು ಸಂಗ್ರಹಿಸಿ, ಕೆರೆ ಒಳಗೆ ನೀರಿನ ಮಾದರಿ ಸಂಗ್ರಹ, ಜಾಕ್ವೆಲ್ ಬಳಿ ನೀರಿನ ಮಾದರಿ ಸಂಗ್ರಹ, ವಾಟರ್ ಟ್ರೀಟ್‍ಮೆಂಟ್ ಆದ ಮೇಲೆ ನೀರಿನ ಮಾದರಿ ಸಂಗ್ರಹ, ನಗರದಲ್ಲಿರುವ ನಾಲ್ಕೈದು ಗ್ರೌಂಡ್ ಲೆವೆಲ್ ಸ್ಟೋರೇಜ್ ರಿಜರ್ವಾಯರ್‍ಗಳಲ್ಲೂ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದು ಸ್ಥಳದಲ್ಲಿದ್ದ ನಿವೃತ್ತ ಕನ್ಸಲ್ಟೆಂಟ್ ಅಧಿಕಾರಿ ಪ್ರೊ.ಸದಾಶಿವಯ್ಯ ಹಾಗೂ ಮಾಲಿನ್ಯ ಮಂಡಳಿ ಅಧಿಕಾರಿಗಳು, ಇಂಜಿನಿಯರುಗಳಿಗೆ ಶಾಸಕರು ಸೂಚಿಸಿದರು.

ತಿಪಟೂರು : ಹೇಮಾವತಿ ನಾಲೆಗೆ ಯುಜಿಡಿ ಕೊಳಚೆ ನೀರು!!

ವರ್ಷದಲ್ಲಿ ಮೂರು ಭಾರಿ ಹರಿಯುತ್ತಿದೆ ಹೇಮೆ: 

      ಪ್ರಸಕ್ತ ವರ್ಷದಲ್ಲಿ ಹೇಮಾವತಿ ನೀರಿನ ತೊಂದರೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಮ್ಮ ಅದೃಷ್ಟವೋ ಏನೋ ಕಳೆದ ಮೂರು ವರ್ಷಗಳಿಂದಲೂ ಬುಗುಡನಹಳ್ಳಿ ಕೆರೆಗೆ ವರ್ಷದಲ್ಲಿ ಮೂರು ಮೂರು ಭಾರಿ ನೀರು ಹರಿಯುತ್ತಿದೆ. ಈ ವರ್ಷವೂ ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಂಸದರಾದ ಜಿ.ಎಸ್. ಬಸವರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಹೇಮಾವತಿಯ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮತ್ತಿತರೆ ಅಧಿಕಾರಿಗಳ ಸಹಕಾರದಿಂದ ತುಮಕೂರಿನ ಜನತೆಗೆ ಕೊರೋನ ಜೊತೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ ಎಂದರು.
ಬುಗುಡನಹಳ್ಳಿ ಕೆರೆ ಜೂನ್ ಮೊದಲ ವಾರದಲ್ಲಿ ಸುಮಾರು ಮುಕ್ಕಾಲು ಕೆರೆ ತುಂಬಿದೆ. ಜೂನ್‍ನಲ್ಲಿ ಇಷ್ಟು ನೀರು ತುಂಬಿರುವುದು ನಾವು ಎಂದೂ ನೋಡಿರಲಿಲ್ಲಎಂದರು.

     ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್ ಅಹಮದ್, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ, ಮಹಾನಗರಪಾಲಿಕೆ ಪ್ರಭಾರ ಆಯುಕ್ತೆ ಶುಭ, ಇಂನಿಯರ್‍ಗಳಾದ ಮಹೇಶ್, ವಿನಯ್, ಪ್ರಕಾಶ್, ಪರಿಸರ ಮಾಲಿನ್ಯ ಇಲಾಖೆಯ ಅಶೋಕ್, ಹೇಮಾವತಿ ಇಂಜನಿಯರ್ ರವಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

      ತುಮಕೂರಿನ ಮಾದರಿಯನ್ನು ಪರೀಕ್ಷಿಸಲು ಐದಾರು ದಿನಗಳು ಬೇಕಾಗುತ್ತದೆ. ಇನ್ನೂ ಕೆಲವು ಪರೀಕ್ಷೆ ವರದಿ ತಕ್ಷಣ ಸಿಗುತ್ತದೆ. ಆದುದರಿಂದ ಇನ್ನೆರಡು ಮೂರು ದಿನಗಳಲ್ಲಿ ನೀರಿನ ವರದಿ ಅಧಿಕಾರಿಗಳು ನೀಡಲಿದ್ದು, ತುಮಕೂರು ನಗರದ ಜನತೆ ಗಾಬರಿಯಾಗಬೇಡಿ, ಶುದ್ಧೀಕರಿಸಿದ ನೀರನ್ನು ಮಾತ್ರವೇ ನಗರದ ಜನತೆಗೆ ಕುಡಿಯಲು ಪೂರೈಸಲಾಗುವುದು.

-ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕರು.

ಕಲುಷಿತ ನೀರು ಹರಿದಿಲ್ಲ, ಪರೀಕ್ಷೆಗೆ ಸೂಚನೆ: ಡಿಸಿ 

      ತಿಪಟೂರಿನಲ್ಲಿ ಕೊಳಚೆ (ಯುಜಿಡಿ) ನೀರು ಹೇಮಾವತಿ ನಾಲೆ ಹಾಗೂ ಕೆರೆಗೆ ಸೇರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಿಪಟೂರು ನಗರಸಭೆ ಆಯುಕ್ತರಿಂದ ವರದಿ ತರಿಸಲಾಗಿದೆ. ಹರಿದಿರುವುದು ಕಲುಷಿತ ನೀರಿಲ್ಲ, ಮಳೆ ಹೆಚ್ಚಾಗಿ ಬಿದ್ದ ಕಾರಣ ರಸ್ತೆಯಲ್ಲಿ ಬಿದ್ದ ಮಳೆ ನೀರು ನಾಲೆಗೆ ಸೇರಿದೆ ಎಂಬುದಾಗಿ ಅಧಿಕಾರಿಗಳು, ಎಂಜಿನಿಯರ್ಸ್‍ಗಳು ವರದಿ ನೀಡಿದ್ದಾರೆ. ಆದಾಗ್ಯೂ ತಿಪಟೂರು ಹಾಗೂ ತುಮಕೂರು ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಹರಿದ ನೀರಿನ ಗುಣಮಟ್ಟದ ಪರೀಕ್ಷೆಗೆ ಸೂಚಿಸಿದ್ದು, ಮಳೆ ನೀರು ನಾಲೆಗೆ ಹರಿಯದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತುಮಕೂರಿನ ಜನತೆ ಆತಂಕಕ್ಕೊಳಗಾಗುವುದು ಬೇಡ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

      ನಗರದ ಮನೆಗಳಿಗೆ ತಲುಪುತ್ತಿರುವ ಹೇಮಾವತಿ ನೀರಿನ ಬಣ್ಣ ಕೆಂಪು ಮಿಶ್ರಿತವಾಗಿರುವುದು ಗೊರೊರು ಡ್ಯಾಂ ನಿಂದ ಹರಿಬಿಟ್ಟಿರುವ ಹೊಸ ಮಣ್ಣು ಮಿಶ್ರಿತ ನೀರಿನ ಪರಿಣಾಮವೇ ಹೊರತು ಬೇರೆಯಲ್ಲ. ಜೊತೆಗೆ ಸಂಗ್ರಹಗಾರದಲ್ಲಿ ಫಿಲ್ಟರಿಂಗ್ ಹಾಗೂ ಆಲಂ ಕ್ಯೂರಿಂಗ್‍ನಲ್ಲಿ ಸಮಸ್ಯೆಯಾಗಿದ್ದರೆ ಕ್ರಮವಹಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿರುವುದಾಗಿ ಡಿಸಿ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap