ತುಮಕೂರು :
ಬಿತ್ತನೆ ಬೀಜ, ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರÀರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಅಂತಹವರ ಲೈಸೆನ್ಸ್ ರದ್ದುಗೊಳಿಸಿ, ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮುಂಗಾರು ಕೃಷಿ ಸಿದ್ಧತೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆಯಿರುವುದರಿಂದ ನಿಗದಿಗಿಂತ ಶೇ. 10ರಷ್ಟು ಹೆಚ್ಚುವರಿ ಬಿತ್ತನೆ ಬೀಜ, ಗೊಬ್ಬರದ ದಾಸ್ತಾನು ಮಾಡಿಕೊಳ್ಳಬೇಕು. ಬಿತ್ತನೆ ಬೀಜಗಳನ್ನು ವಿತರಿಸುವಾಗ ಗುಣಮಟ್ಟ ಖಾತ್ರಿಪಡಿಸಿಕೊಂಡೇ ರೈತರಿಗೆ ಪೂರೈಸಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು. ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಬೇಕು. ಎಲ್ಲಿಯೂ ರೈತರಿಗೆ ಬೀಜದ ಸಮಸ್ಯೆ ಎದುರಾಗಬಾರದು. ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಬೇಕು. ಬಿತ್ತನೆ ಬೀಜದ ಗ್ರೇಡಿಂಗ್ ನೂತನವಾಗಿರಬೇಕು. ಜೊಳ್ಳು ಬೀಜ ನೀಡಬಾರದು. ರೈತರಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂದು ಸೂಚಿಸಿದರು.
ಗ್ರಾಪಂ ಮಟ್ಟದಲ್ಲಿ ಬಹುಬೆಳೆ ಯೋಜನೆ ಜಾರಿಗೊಳಿಸಿ:
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬಹುಬೆಳೆ ಬೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರಿಗೆ ಉಚಿತವಾಗಿ ದ್ವಿದಳ ಧಾನ್ಯಗಳ 8 ಸಾವಿರ ಕಿಟ್ ನೀಡಿದ್ದು, ಏಕ ಬೆಳೆ ಬೆಳೆಯುವ ರೈತರಿಗೆ ವಿತರಿಸಿ ಸಮಗ್ರ ಕೃಷಿ ಅಳವಡಿಕೆಗೆ ಪ್ರೇರೇಪಿಸಬೇಕು. ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರತೀ ಗ್ರಾಪಂ ಮಟ್ಟದಲ್ಲಿ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಎಣ್ಣೆ ಕಾಳುಗಳ ಕೃಷಿ ಹೆಚ್ಚಳವಾಗಲಿ:
ಜಿಲ್ಲೆಯಲ್ಲಿ ಶೇಂಗಾ ಹೊರತುಪಡಿಸಿ ಸೂರ್ಯಕಾಂತಿ, ಉಚ್ಚೆಳ್ಳು, ಎಳ್ಳು ಮೊದಲಾದ ಎಣ್ಣೆಕಾಳುಗಳ ಬೆಳೆಗಳ ಪ್ರಗತಿ ಕ್ಷೀಣಿಸಿದೆ ಎಂಬ ಸಚಿವ ಮಾಧುಸ್ವಾಮಿ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು ತೈಲ(ಎಣ್ಣೆಕಾಳುಗಳ)/ಬೆಳೆ ಬೆಳೆಯುವುದಕ್ಕೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ತುಮಕೂರು ಜಿಲ್ಲೆಯಿಂದಲೇ ಪ್ರಾಯೋಗಿಕವಾಗಿ ಆರಂಭವಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿ ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಮುಖ್ಯವಾಗಿದೆ ಎಂದರು.
ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಕೃಷಿ ವಹಿವಾಟಿಗೆ ಅವಕಾಶ :
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ, ಕೃಷಿಗೆ ಸಂಬಂಧಿಸಿದ ಖರೀದಿ ಇನ್ನಿತರ ಚಟುವಟಿಕೆಗಳನ್ನು ಬೆಳಿಗ್ಗೆ 6 ರಿಂದ ಸಂಜೆ 6ರವೆಗೆ ದಿನವಿಡೀ ನಡೆಸಲು ಅವಕಾಶ ಕಲ್ಪಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವೆ. ರೈತರು ಮುಕ್ತವಾಗಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ನಡೆಸಿ ಮುಂಗಾರಿನಲ್ಲಿ ತೊಡಗಬಹುದು ಎಂದು ಶಾಸಕ ಮಸಾಲೆ ಜಯರಾಂ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಜಿಲ್ಲೆಯಲ್ಲಿ ಮುಂಗಾರು ಕೃಷಿ ಸಿದ್ಧತೆ, ರಸಗೊಬ್ಬರ ಬಿತ್ತನೆ ಬೀಜ ದಾಸ್ತಾನಿನ ಮಾಹಿತಿ ನೀಡಿದರು.
ಸಿ.ಎಂ. ಉದಾಸಿ ನಿಧನಕ್ಕೆ ಸಂತಾಪ:
ಸಭೆಗೂ ಮುನ್ನ ನಿಧನರಾದ ಮಾಜಿ ಸಚಿವ ಸಿ.ಎಂ.ಉದಾಸಿ ಅವರಿಗೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಂ.ವಿ.ವೀರಭದ್ರಯ್ಯ, ಭಾರತ ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಣ್ಣಹಟ್ಟಿ ಪಾಪಣ್ಣ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಎಸ್ಪಿ ಡಾ.ಕೆ. ವಂಶಿಕೃಷ್ಣ ತಾಲೂಕು ಕೃಷಿ ಅಧಿಕಾರಿಗಳು ಹಾಜರಿದ್ದರು.
ಕಳಪೆ ಶೇಂಗಾ ಬೀಜ; ಅಧಿಕಾರಿಗಳ ಶಾಮೀಲು – ಸಚಿವರಿಂದಲೇ ಆರೋಪ
ಕಳಪೆ ಶೇಂಗಾ ಬಿತ್ತನೆ ಬೀಜ ಪೂರೈಕೆ ಸಂಬಂಧ ಕರ್ನಾಟಕ ಆಯಿಲ್ ಫೆಡರೇಷನ್ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪಾವಗಡದಲ್ಲಿ ಶಾಸಕರು ಶೇಂಗಾ ಬೀಜವನ್ನು ಗಾಳಿಗೆ ತೂರಿ ಜೊಳ್ಳೆಂದು ಸಾಬೀತುಪಡಿಸಿದ್ದಾರೆ. ಯಾವ ರೀತಿ ಗ್ರೇಡಿಂಗ್ ಮಾಡಿ ವಿತರಿಸುತ್ತಿದ್ದೀರಿ. ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬರುತ್ತಿದೆ. ಈ ಬಗ್ಗೆ ಕೃಷಿ ಸಚಿವರು ಗಮನಹರಿಸಬೇಕು ಎಂದರು.
ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಅವರು ಧನಿಗೂಡಿಸಿ ಒಂದು ವೇಳೆ ಅಂತಹ ಬಿತ್ತನೆ ಬೀಜ ವಿತರಿಸಿದ್ದರೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಯಾರಿಗೂ ವಿತರಿಸಿಲ್ಲ. ಟೊಳ್ಳು ಬೀಜವನ್ನು ವಾಪಸ್ ಕಳುಹಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಪ್ರತಿಕ್ರಿಯಿಸಿದರು. ಬಳಿಕ ಕೃಷಿ ಸಚಿವರು ಕಳಪೆ ಬೀಜ ಪೂರೈಸಿ ವಿಶ್ವಾಸರ್ಹತೆ ಕಳೆದುಕೊಳ್ಳಬೇಡಿ ಆಯಿಲ್ ಫೆಡರೇಶನ್ ಅಧಿಕಾರಿಗೆ ಸೂಚಿಸಿದರು.
“ಚೀನಾದಿಂದ ಕಳಪೆ ಬಿತ್ತನೆ ಬೀಜ ಬಂದಿರುವ ಯಾವ ಪ್ರಕರಣಗಳು ವರದಿಯಾಗಿಲ್ಲ. ಆದರೂ ರೈತರು ನಷ್ಟ ಅನುಭವಿಸಬಾರದೆಂದು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಬಹುಮಿಶ್ರಿತ ಬೆಳೆ ಯೋಜನೆ, ಎಣ್ಣೆಕಾಳುಗಳು ಬೆಳೆ ಹೆಚ್ಚಳ ಜಿಲ್ಲೆಯಲ್ಲಿ ಯಶಸ್ವಿಯಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಗೆ ಒದಗಿಸುವ ಕಾರ್ಯ ಮಾಡಲಾಗುತ್ತಿದ್ದು, ಸಿರಿಧಾನ್ಯ ಬೆಳೆಗೂ ಹತ್ತು ಸಾವಿರ ಸಹಾಯಧನದೊಂದಿಗೆ ಉತ್ತೇಜಿಸಲಾಗುತ್ತಿದೆ.”
-ಬಿ.ಎಸ್.ಪಾಟೀಲ್ ಕೃಷಿ ಸಚಿವರು.
ರಸಗೊಬ್ಬರಕ್ಕೆ ರಾಜ್ಯವೂ ಸಹಾಯಧನ ಕೊಡಲಿ: ತಿಪ್ಪೇಸ್ವಾಮಿ
ರಸಗೊಬ್ಬರದ ದರ ದುಬಾರಿಯಾಗಿದ್ದು, 50 ಕೆಜಿ ಗೊಬ್ಬರದ ಪ್ಯಾಕೆಟ್‍ಗೆ 2400 ದರವಿದೆ. ಕೇಂದ್ರ 1200 ರೂ. ಸಹಾಯಧನ ನೀಡುತ್ತಿದ್ದು, ರೈತರು 1200 ಕೊಟ್ಟು ಖರೀದಿಸುವುದು ಕಷ್ಟವಾಗಿದೆ. ಕೇಂದ್ರದ ಸಹಾಯಧನ ಮಾದರಿಯಲ್ಲೇ ರಾಜ್ಯವೂ ಸಹಾಯಧನ ಕೊಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಎಂಎಲ್ಸಿ ಕೆ.ಎ.ತಿಪ್ಪೇಸ್ವಾಮಿ ಸಲಹೆ ನೀಡಿದರು. ಸಚಿವರು ಪ್ರತಿಕ್ರಿಯಿಸಿ 500 ರೂ.ಗಳಿದ್ದ ಸಹಾಯಧನವನ್ನು ಕೇಂದ್ರ 700ಕ್ಕೆ ಹೆಚ್ಚು ಮಾಡಿದೆ. ದೀಪಾವಳಿವರೆಗೆ ಉಚಿತ ಪಡಿತರ, ಉಚಿತ ವ್ಯಾಕ್ಸಿನ್ ಎಲ್ಲವನ್ನೂ ಕೊಡುತ್ತಿದ್ದೇವೆ. ಇನ್ನೇನು ಕೊಡಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಡಿಎಪಿ, ಹೆಸರುಕಾಳು ಬಿತ್ತನೆ ಬೀಜಕ್ಕೆ ಜಿಲ್ಲೆಯಲ್ಲಿ ಅಭಾವವಿದೆ. ಯಾವುದೇ ಕಾರಣಕ್ಕೂ ರೈತರನ್ನೂ ಅಲೆದಾಡಿಸದೆ ಗೊಬ್ಬರ, ಬಿತ್ತನೆ ಬೀಜ ಪೂರೈಸಬೇಕು ಎಂದು ಸಲಹೆನೀಡಿದರು. ಶಾಸಕ ವೀರಭದ್ರಯ್ಯ ಸಹ ಧನಿಗೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ