ತಿಪಟೂರು :
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಧರ್ಮದ ನಾಯಕನಂತೆ ರಾಜ್ಯಭಾರ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಾನು ನಾಯಕನಾಗಬೇಕೆನ್ನುವ ತುಚ್ಛ ಆಸೆಯಿಂದ ಬಿಎಸ್‍ವೈ ವಿರುದ್ಧ ಬಂಡಾಯ ಎದ್ದಿದ್ದಾರೆ. ಹೈಕಮಾಂಡ್ ಈ ಬಂಡಾಯವನ್ನು ಹತ್ತಿಕ್ಕಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಅಖಿಲ ಕರ್ನಾಟಕ ಶ್ರೀ ವೀರಶೈವ ಲಿಂಗಾಯತ ಮಠಾಧಿಪತಿಗಳ ವೇದಿಕೆ ಅಧ್ಯಕ್ಷರಾದ ಶ್ರೀ ಷಡಕ್ಷರ ಸ್ವಾಮಿಜಿ ಅವರು ಆಗ್ರಹಿಸಿದರು.
ನಗರದ ಷಡಕ್ಷರ ಮಠದಲ್ಲಿ ಅಖಿಲ ಕರ್ನಾಟಕ ಶ್ರೀ ವೀರಶೈವ ಲಿಂಗಾಯತ ಮಠಾಧಿಪತಿಗಳ ವೇದಿಕೆ (ರಿ) ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ತಮ್ಮ ಹುದ್ದೆಗೆ ಯಾವುದೇ ಚ್ಯುತಿಬಾರದಂತೆ ಸಮರ್ಪಕವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅನವಶ್ಯಕವಾಗಿ ಅವರ ಘನತೆ ಗೌರವಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದಲ್ಲದೆ ಅವರಿಗೆ ಮಾನಸಿಕವಾಗಿ ನೋವುಂಟು ಮಾಡುವಂತೆ ನಡೆದುಕೊಳ್ಳುತ್ತಿರುವುದು ಅಕ್ಷಮ್ಯ.
ವೀರಶೈವ ಲಿಂಗಾಯತ ಸಮಾಜವು ಯಡಿಯೂರಪ್ಪನವರ ಬೆನ್ನಿಗಿದೆ. ಅವರನ್ನು ಕೆಳಗಿಳಿಸುವ ಹುನ್ನಾರವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅವರ ಕೈಲಿ ಅಧಿಕಾರ ನಡೆಸಲು ಸಾಧ್ಯವಿಲ್ಲ ಇನ್ನುತ್ತಾರೆ. ಇದಕ್ಕೆ ತದ್ವಿರುದ್ಧ ಎಂಬಂತೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರು 15 ವರ್ಷಗಳ ಕಾಲ ಗಾಲಿ ಕುರ್ಚಿಯಲ್ಲಿ ಅಧಿಕಾರ ನಡೆಸಿರುವುದು ನಮ್ಮ ಮುಂದೆ ಉದಾಹರಣೆ ಇದೆ.
ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿದ್ದು ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವಂತಹ ಸಾಮಥ್ರ್ಯವನ್ನು ಹೊಂದಿದ್ದಾರೆ. ಹಾಗಾಗಿ ವಿರೋಧಿಗಳು ಅನಾವಶ್ಯಕ ಗೊಂದಲ ಸೃಷ್ಟಿಮಾಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದು ಸೂಕ್ತವಲ್ಲ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಹೆಚ್ಚಿನ ಸಂಖ್ಯೆಯ ಶಾಸಕರು ಗೆಲ್ಲಲು ಯಡಿಯೂರಪ್ಪ ಅವರ ಪಾತ್ರ ಪ್ರಮುಖವಾಗಿದ್ದು, ಸರ್ಕಾರ ರಚಿಸುವಲ್ಲಿ ಅನೇಕ ವ್ಯಕ್ತಿಗಳ ತ್ಯಾಗ ಮತ್ತು ಹೋರಾಟದ ಫಲ ಕಾರಣವಾಗಿರುತ್ತದೆ. ಹೀಗಿರುವಾಗ ಅನಾವಶ್ಯಕವಾಗಿ ಯಡಿಯೂರಪ್ಪನವರಿಗೆ ತೊಂದರೆ ನೀಡುತ್ತಿರುವುದನ್ನು ಅಖಿಲ ಕರ್ನಾಟಕ ಶ್ರೀ ವೀರಶೈವ ಮಠಾಧಿಪತಿಗಳ ವೇದಿಕೆ ಖಂಡಿಸುವುದಲ್ಲದೆ, ಯಡಿಯೂರಪ್ಪನವರು ಪೂರ್ಣಾವಧಿ ಅಧಿಕಾರ ಪೂರೈಸಲಿ ಎಂದು ಆಶೀರ್ವದಿಸುತ್ತದೆ ಎಂದರು.
ಶ್ರೀ ವನಕಲ್ಲು ಮಲ್ಲಿಕಾರ್ಜುನ ಸಂಸ್ಥಾನ ಮಠದ ಡಾ.ಶ್ರೀರಮಾನಂದ ಸ್ವಾಮೀಜಿ ಮಾತನಾಡಿ ಕರ್ನಾಟಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಯಡಿಯೂರಪ್ಪ 2 ಕಣ್ಣುಗಳಿದ್ದಂತೆ. ಇವರ ದೇಹಗಳಿಗೆ ವಯಸ್ಸಾಗಿರಬಹುದು ಆದರೆ ಅವರ ಚೇತನಕ್ಕೆ ವಯಸ್ಸಾಗಿಲ್ಲ, ಈಗಲು ಸಹ ಇಬ್ಬರೂ ನಾಯಕರು ಯುವಕರನ್ನು ನಾಚಿಸುವಂತೆ ತಮ್ಮದೇ ಆದ ಶೈಲಿಯಲ್ಲಿ ಅಧಿಕಾರವನ್ನು ಮಾಡುತ್ತಾರೆಂದು ತಿಳಿಸಿದರು.
ಬೀರೂರು ರಂಭಾಪುರಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ನಾಯಕನಾಗುವುದು ಸುಲಭದÀ ಮಾತಲ್ಲ, ಅದಕ್ಕೆ ತನ್ನದೇ ಆದ ತ್ಯಾಗ, ಬಲಿದಾನ, ಸಂಯಮ, ತಾಳ್ಮೆ ಮುಖ್ಯ. ಅದನ್ನು ಸಾಧಿಸಬೇಕೆ ಹೊರತು ತಕ್ಷಣ ದೊರೆಯುವುದಲ್ಲ. ಯಡಿಯೂರಪ್ಪ ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತೆ ಸೈಕಲ್ ತುಳಿದು ಪಕ್ಷವನ್ನು ಕಟ್ಟಿ ದೊಡ್ಡ ವೃಕ್ಷವನ್ನಾಗಿ ಮಾಡಿ ಈ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಆದರೆ ಕೆಲವರು ನಾನು ಬೇಗ ನಾಯಕನಾಗಬೇಕು, ಶೀಘ್ರವಾಗಿ ಫಲಸಿಗುವಂತಾಗಬೇಕೆಂದು ಆ ಮಹಾವೃಕ್ಷಕ್ಕೆ ಕಲ್ಲು ಎಸೆಯುತ್ತಿದ್ದಾರೆ ಆದರೆ ಅವರು ಎಸೆದ ಕಲ್ಲೇ ಅವರ ಮೇಲೆ ಬಂಡೆಯಾಗಿ ಅಪ್ಪಳಿಸಿಲಿದೆ ಎಂದು ಭಿನ್ನಮತೀಯರಿಗೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತರಿಗೆ ದಿನಸಿಕಿಟ್ ವಿತರಿಸಿ, ಆರೋಗ್ಯಕ್ಕೆ ಗಮನನೀಡಿ ಎಂದು ಆಶೀರ್ವದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಗಮ ಮಠದ ಸಿದ್ದಲಿಂಗಸ್ವಾಮಿ, ಬೂದಾಳ್‍ಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮೀಜಿ, ಕೋಲಿ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಂಬದೇವರಹಳ್ಳಿ ಶ್ರೀ ಉಜ್ಜನೀಶ್ವರ ಮಠದ ಶ್ರೀ ಉಜ್ಜನೀಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಇತರೆ ಸ್ವಾಮೀಜಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ