ತುಮಕೂರು :
ಜಿಲ್ಲೆಯಲ್ಲಿ ಸೋಮವಾರದಿಂದ ಅರ್ಧದಿನ ಅನ್‍ಲಾಕ್ ನಡುವೆಯೇ ಸೀಜ್ ಮಾಡಲಾಗಿದ್ದ ವಾಹನಗಳಿಗೂ ಬಿಡುಗಡೆ ಭಾಗ್ಯ ದೊರೆತಿದೆ.
ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರವು ಕಳೆದ ಏಪ್ರಿಲ್ 28 ರಿಂದ ಲಾಕ್‍ಡೌನ್ ಘೋಷಿಸಿತ್ತು. ಈ ವೇಳೆಯಲ್ಲಿ ಸರ್ಕಾರ ರಿಯಾಯಿತಿ ನೀಡಿದ್ದ ವಾಹನಗಳನ್ನು ಹೊರತು ಪಡಿಸಿ ಮಿಕ್ಕ ಯಾವುದೇ ರೀತಿಯ ವಾಹನಗಳು ಸಕಾರಣವಿಲ್ಲದೆ ಅನಗತ್ಯವಾಗಿ ರಸ್ತೆಗಿಳಿದರೆ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿತ್ತು. ಈ ರೀತಿ ಲಾಕ್‍ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ಸುಮಾರು 5200 ಕ್ಕೂ ಅಧಿಕ ವಿವಿಧ ಪ್ರಕಾರದ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಇದರಿಂದ ನಗರ ಸೇರಿದಂತೆ ಜಿಲ್ಲೆಯ ಪೊಲೀಸ್ ಠಾಣೆಯ ಆವರಣಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದವು. ಸರ್ಕಾರವು ಜೂನ್ 14 ರಿಂದ ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿದ್ದು, ಸೀಜ್ ಆಗಿದ್ದ ವಾಹನಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲು ಕೆಲ ನಿಬಂಧನೆ ವಿಧಿಸಿ ಸೋಮವಾರದಿಂದ ಜಿಲ್ಲಾಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ವಾಹನಗಳನ್ನು ಬಿಡಿಸಲು ಠಾಣೆ ಮುಂದೆ ಜನ ಜಮಾವಣೆ :
ವಾಹನಗಳನ್ನು ಮರಳಿಕೊಡುವ ವಿಷಯವನ್ನು ಅರಿತ ಸಾರ್ವಜನಿಕರು ವಾಹನಗಳನ್ನು ಸೀಜ್ ಮಾಡಿ ನಿಲ್ಲಿಸಲಾಗಿದ್ದ ನಗರದ ಬಾರ್‍ಲೈನ್ ರೋಡ್‍ನಲ್ಲಿರುವ ಚಿಲುಮೆ ಪೊಲೀಸ್ ಸಮುದಾಯ ಭವನ, ಪಕ್ಕದ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣ, ಜಯನಗರ, ಎನ್‍ಇಪಿಎಸ್ ಹಾಗೂ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಆವರಣಗಳಲ್ಲಿ ಹಾಗೂ ಜಿಲ್ಲೆಯ ತಾಲ್ಲೂಕುಗಳ ವಿವಿಧ ಪೊಲೀಸ್ ಠಾಣೆಗಳ ಮುಂದೆ ತಮ್ಮ ವಾಹನಗಳನ್ನು ಮರಳಿ ಪಡೆಯಲು ಬೆಳಗ್ಗೆ 10 ಗಂಟೆಗೂ ಮೊದಲೆ ಉತ್ಸುಕತೆಯಿಂದ ಹಾಜರಾಗಿ ಪೊಲೀಸರು ನೀಡುತ್ತಿದ್ದ ಟೋಕನ್ ಪಡೆಯಲು ಮುಂದಾದರು.
ಮಾಲೀಕರಿಗೆ ನಿರಾಸೆ:
ಸೀಜ್ ಮಾಡಿದ್ದ ವಾಹನಗಳನ್ನು ಮರಳಿಸಲು ಹೈಕೋರ್ಟ್ ಕೆಲವು ನಿಯಮ ಮಾಡಿದ್ದರಿಂದ ವಾಹನಗಳನ್ನು ಮರಳಿ ಪಡೆಯಲು ಬಂದಿದ್ದವರ ಉತ್ಸಾಹಕ್ಕೆ ತಣ್ಣಿರೆರಚಿದಂತಾಗಿತ್ತು. ಅಲ್ಲದೆ ಪೊಲೀಸ್ ಠಾಣೆಗಳಲ್ಲಿ ಸೀಜ್ ಆಗಿದ್ದ ವಾಹನಗಳಲ್ಲಿ ಪ್ರತಿದಿನ ಕೇವಲ 50 ವಾಹನಗಳನ್ನು ಮಾತ್ರ ಮರಳಿಸಲು ಟೋಕನ್ ವಿತರಿಸಲಾಗುತ್ತಿತ್ತು ಹಾಗಾಗಿ ಟೋಕನ್ ಸಿಗದ ಹೆಚ್ಚುವರಿ ವಾಹನಗಳ ಮಾಲೀಕರು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಸ್ಟಾಂಪ್ ಪೇಪರ್, ಜೆರಾಕ್ಸ್‍ಗೆ ನೂಕು ನುಗ್ಗಲು:
ಸೀಸ್ ಮಾಡಿದ್ದ ವಾಹನಗಳನ್ನು ಮಾಲೀಕರಿಗೆ ಮರಳಿ ನೀಡಲು ಪೊಲೀಸ್ ಇಲಾಖೆಯವರು 20 ರೂ ಸ್ಟಾಂಪ್ ಪೇಪರ್ ಮತ್ತು ವಾಹನಗಳ ದಾಖಲೆಗಳನ್ನು ಕೇಳಿದ್ದರಿಂದ ನಗರ ಹಾಗೂ ಜಿಲ್ಲೆಯಾದ್ಯಂತ ಸ್ಟಾಂಪ್ ಪೇಪರ್ ವಿತರಿಸುವ ಪತ್ತಿನ ಸಹಕಾರ ಸಂಘಗಳು ಮತ್ತು ದಾಖಲೆಗಳ ನಕಲು ಪ್ರತಿಗಾಗಿ ಜೆರಾಕ್ಸ್, ಡಿಟಿಪಿ, ಸೈಬರ್ ಸೆಂಟರ್‍ಗಳ ಮುಂದೆ ಜನ ಸಂದಣಿ ದಟ್ಟವಾಗಿಯೆ ಕಂಡು ಬಂತು.
ವಾಹನ ಮರಳಿ ಪಡೆಯುವ ವಿಧಾನ:
ರಾಜ್ಯ ಹೈಕೋರ್ಟ್ ಆದೇಶ ಸಂಖ್ಯೆ: I.ಂ ಓo: 11/2021 Iಓ W.P ಓಔ:6435/2021 ಪ್ರಕಾರ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಜಪ್ತಿಯಾಗಿದ್ದ ವಾಹನಗಳನ್ನು ಮರಳಿ ಪಡೆಯಲು ವಾಹನಗಳ ಮಾಲೀಕರುಗಳು ತಮ್ಮ ಆಧಾರ್‍ಕಾರ್ಡ್, 1 ಪಾಸ್‍ಪೊರ್ಟ್ ಸೈಜ್ ಫೋಟೋ, ವಾಹನದ ಎಲ್ಲಾ ದಾಖಲಾತಿಗಳು ಮತ್ತು 20 ರೂಪಾಯಿಯ ಸ್ಟ್ಯಾಂಪ್ ಪೇಪರ್‍ನೊಂದಿಗೆ ಒಬ್ಬರು ಸಾಕ್ಷಿದಾರರೊಂದಿಗೆ ಠಾಣೆಗೆ ಹಾಜರಾಗಿ ದ್ವಿ ಚಕ್ರ ಮತ್ತು ಮೂರು ಚಕ್ರದ ವಾಹನಕ್ಕೆ 500 ರೂ, ನಾಲ್ಕು ಚಕ್ರದ ವಾಹನಕ್ಕೆ 1000 ರೂ, ಇತರೆ ದೊಡ್ಡ ವಾಹನಗಳಿಗೆ 2000 ರೂ ಗಳನ್ನು ಡೆಪಾಸೀಟ್ ಮಾಡಿ ವಾಹನಗಳನ್ನು ಬಿಡಿಸಿಕೊಳ್ಳಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ