‘ಅನಗತ್ಯ ಔಷಧಗಳನ್ನು ಮಕ್ಕಳ ಮೇಲೆ ಪ್ರಯೋಗಿಸಬೇಡಿ’ – ಸಚಿವೆ ಶಶಿಕಲಾ ಜೊಲ್ಲೆ

 ತುಮಕೂರು : 

     ಕೊರೊನಾ 3ನೇ ಅಲೆ ಮಕ್ಕಳಿಗೆ ವ್ಯಾಪಿಸುವ ಆತಂಕವಿದ್ದು, ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ. ಮೊದಲೆರೆಡು ಅಲೆಯಲ್ಲಿ ಸೋಂಕಿತರಿಗೆ ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ದೇಹಕ್ಕೆ ತುಂಬಿದ ಪರಿಣಾಮ ಬ್ಲಾಕ್, ವೈಟ್ ಫಂಗಸ್‍ನಂತಹ ರೋಗಗಳಿಗೆ ಕಾರಣವಾಗಿದೆ. ಮಕ್ಕಳ ವಿಷಯದಲ್ಲಾದರೂ ಎಚ್ಚರವಹಿಸಿ ಘಟನೆ, ವಸ್ತುಸ್ಥಿತಿ ಆಧರಿಸಿ ಚಿಕಿತ್ಸೆ ನೀಡಿ ಎಂದು ಶಾಸಕರು, ಸಂಸದರು ಸಲಹೆ ನೀಡಿದರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಕೋವಿಡ್ 3ನೇ ಅಲೆ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಈ ಸಂಬಂಧ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದ್ದು, ಕಳೆದೆರೆಡು ಅಲೆಯಲ್ಲಿ ದೊಡ್ಡ ಅನಾಹುತಗಳೇ ಸೃಷ್ಟಿಯಾಗಿದೆ. ಇದು 3ನೇ ಅಲೆ ಸಂದರ್ಭದಲ್ಲಿ ಮಕ್ಕಳ ವಿಷಯದಲ್ಲಿ ಮರುಕಳಿಸಬಾರದು ಎಂದರು.

   ಇಲಾಖೆಯವರ ಜವಾಬ್ದಾರಿ ಹೆಚ್ಚಿದೆ:

      ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿ 3ನೇ ಅಲೆ ಯಾವಾಗ ಬೇಕಾದರೂ ಬರಬಹುದು. ಮಕ್ಕಳಲ್ಲಿ ಅಪಾಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.ಜಿಲ್ಲೆಯಲ್ಲಿ ಡಿಸಿ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು 2ನೇ ಅಲೆ ನಿಯಂತ್ರಣದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. 3ನೇ ಅಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಜವಾಬ್ದಾರಿ ಹೆಚ್ಚಿದ್ದು, ಅಗತ್ಯ ಸಿದ್ಧತೆಯನ್ನು ಈಗಿನಿಂದಲೇ ನಡೆಸಬೇಕಿದೆ. ಬರೀ ಹಾಸಿಗೆ ಬೆಡ್ ಚಿಕಿತ್ಸೆ ಒದಗಿಸುವುದಷ್ಟೇ ಅಲ್ಲ. ಮುಂಜಾಗ್ರತೆ ವಹಿಸುವಂತೆ ಗ್ರಾಮೀಣ ಜನರಲ್ಲಿ ಈಗಿನಿಂದಲೇ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಮಕ್ಕಳ ತಜ್ಞರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಜಿಲ್ಲಾವಾರು ಅಲ್ಲ ಜನಸಂಖ್ಯೆವಾರು ಸರಕಾರದ ಸೌಲಭ್ಯ ದೊರೆಯಬೇಕುಎಂದರು.

ಅನಗತ್ಯ ಭಯ ಹುಟ್ಟಿಸಬೇಡಿ:

      ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಕೋವಿಡ್ ಜಾಗೃತಿ ಹೆಸರಲ್ಲಿ ಮಕ್ಕಳ ಪೋಷಕರಲ್ಲಿ ಅನಗತ್ಯ ಭಯ ಹುಟ್ಟಿಸಬಾರದು. ಕೆಲವು ಆಸ್ಪತ್ರೆ, ಕಂಪನಿಗಳು ಶಾಮೀಲಾಗಿ ಅಲೆಗೂ ಮೊದಲೇ ಮಕ್ಕಳಿಗೆ ಲಸಿಕೆ ಹಾಕಿಸುವ ಪ್ಯಾಕೇಜ್‍ಗಳನ್ನು ಘೋಷಿಸುತ್ತಿವೆ. ಇದನ್ನು ತಡೆಯಬೇಕು. ಪಾಲಕರನ್ನು ಕಳೆದುಕೊಂಡ ಮಕ್ಕಳ ವಿಷಯದಲ್ಲಿ ತಪ್ಪುಲೆಕ್ಕ ನೀಡಲಾಗುತ್ತಿದೆ ಎಂದು ದೂರಿದರು.
ತುರುವೇಕೆರೆ ಶಾಸಕ ಮಸಾಲೆ ಜಯರಾಂ ಹಾಗೂ ಸಿರಾ ಶಾಸಕ ಸಿಎಂ.ರಾಜೇಶ್‍ಗೌಡ ಮಾತನಾಡಿ ಇಲಾಖಾಧಿಕಾರಿಗಳು ತಾಲೂಕಿಗೆ ಭೇಟಿ ಕೊಡುತ್ತಿಲ್ಲ. ಮಕ್ಕಳಲ್ಲಿ ಸೋಂಕು ತಡೆಗೆ ಯಾವ ರೀತಿ ಸಿದ್ಧತೆ ಚಿಕಿತ್ಸಾ ಕ್ರಮದ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಶಾಸಕರ ಆತಂಕ, ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು ಕೋವಿಡ್ 3ನೇ ಅಲೆ ಸಿದ್ಧತೆ ಸೇರಿದಂತೆ ಇಲಾಖಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ಒದಗಿಸಿ ಅವರ ನೆರವಿನೊಂದಿಗೆ ಯೋಜನೆ ಕಾರ್ಯಗತಗೊಳಿಸಿ. ಸೋಂಕಿತ ಮಕ್ಕಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಿ ಚಿಕಿತ್ಸೆ ಕೊಟ್ಟು ಗುಣಮುಖರಾಗಿಸುವ ವ್ಯವಸ್ಥೆ ಆರೋಗ್ಯ, ಆರ್‍ಡಿಪಿಆರ್ ಇಲಾಖೆ ಸಮನ್ವಯದಿಂದ ಸಮರ್ಪಕವಾಗಿ ಜರುಗಬೇಕು. ಯಾವುದೇ ಅವ್ಯವಸ್ಥೆ, ಅಪಸ್ವರಗಳು ಎದುರಾಗದಂತೆ ಇಲಾಖಾ ಅಧಿಕಾರಿಗಳು ಸಮೋರೋಪಾದಿಯಲ್ಲಿ 3ನೇ ಅಲೆ ಎದುರಿಸಲು ಸಜ್ಜಾಗಬೇಕು. ಮಕ್ಕಳ ಸಹಾಯವಾಣಿ ಮೂಲಕ ಕೋವಿಡ್ ಚಿಕಿತ್ಸೆ ಹಾಗೂ ಸರಕಾರ ಮಕ್ಕಳಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯ ಆಗಬೇಕೆಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್ ಅವರು ಮೊದಲೆರೆಡು ಅಲೆಯಲ್ಲಿ 10,041 ಕ್ಕಳು ಸೋಂಕಿಗೊಳಗಾಗಿದ್ದು, 3ನೇ ಅಲೆ ಎದುರಾಗಬಹುದೆಂದು ಜಿಲ್ಲೆಯಲ್ಲಿ 547 ಬೆಡ್, 116 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. 8136 ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುವ ಕಾರ್ಯ ಯೋಜನೆ, ಕರಪತ್ರ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 ಸಾಂತ್ವಾನ ಕೇಂದ್ರ ಮುಂದುವರಿಸಲು ಮನವಿ:

      ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನೊಂದ ಮಹಿಳೆಯರ ಪರವಾಗಿ ಸ್ಪಂದಿಸುತ್ತಿರುವ ಸಾಂತ್ವಾನ ಕೇಂದ್ರಗಳನ್ನು ಮುಂದುವರಿಸುವಂತೆ ವರದಕ್ಷಿಣೆ ವಿರೋಧಿ ವೇದಿಕೆಯ ಬಾ.ಹ.ರಮಾಕುಮಾರಿ,ಪಾರ್ವತಮ್ಮ ರಾಜ್‍ಕುಮಾರ್ ಮತ್ತಿತರರು ಮನವಿ ಸಲ್ಲಿಸಿದರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಕೆ.ಎನ್.ಅನುರಾಧ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್‍ಕುಮಾರ್ ಶಹಾಪುರವಾದ್, ಸಿಇಒ ಡಾ.ಕೆ.ವಿದ್ಯಾಕುಮಾರಿ, ಡಿಎಚ್‍ಓ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ಜನ್ ಡಾ.ಸುರೇಶ್‍ಬಾಬು, ಡಾ.ರಜನಿ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸೇರಿದಂತೆ ಸಿಡಿಪಿಓಗಳು ಹಾಜರಿದ್ದರು.

ಮಕ್ಕಳೊಡನೆ ತಾಯಿಗೂ ಕೇರ್ ಸೆಂಟರ್‍ನಲ್ಲಿರಲು ವ್ಯವಸ್ಥೆ : ಸಚಿವೆ 

      ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಶಿಕಲಾಜೊಲ್ಲೆ ಅವರು ಜಿಲ್ಲೆಯಲ್ಲಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡರೆ ಅಂತಹ ಮಕ್ಕಳನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸುವ ಜೊತೆಗೆ ಅವರ ತಾಯಂದಿರಿಗೂ ಜೊತೆಯಲ್ಲಿರುವ ವ್ಯವಸ್ಥೆ ಮಾಡಲಾಗುತ್ತದೆ.ಇದಕ್ಕಾಗಿ 6 ಸಂಸ್ಥೆಗಳನ್ನು ಗುರುತಿಸಿದ್ದು, 547 ಬೆಡ್‍ಗಳ ಸಹ ವ್ಯವಸ್ಥೆಯಾಗಿದೆ. ಕೋವಿಡ್ ಸೇರಿದಂತೆ ಇಲಾಖಾ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಟಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಪೌಷ್ಠಿಕ ಮಕ್ಕಳಿಗೆ ಸ್ಪಿರುಲಿನ ಚಿಕ್ಕಿ ಸಹ ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ವಿತರಿಸುತ್ತಿದ್ದು, ಕೋವಿಡ್ ಮೊದಲೆರೆಡು ಅಲೆಯಲ್ಲೂ ಸಚಿವರು, ಶಾಸಕರು, ಅಧಿಕಾರಿಗಳು ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರೊಬ್ಬರು ಮೃತರಾಗಿದ್ದು, ಅವರಿಗೆ ಪರಿಹಾರ ನೀಡಲಾಗಿದೆ. ಕೋವಿಡ್‍ಒಬ್ಬರು ಪೋಷಕರನ್ನು ಕಳೆದುಕೊಂಡ 56 ಮಕ್ಕಳು ಜಿಲ್ಲೆಯಲ್ಲಿ ಕಂಡುಬಂದಿದ್ದು, ಅವರಿಗೆ ಪ್ರತಿ ತಿಂಗಳು 3,500 ಮಾಸಾಶನ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. 3ನೇ ಅಲೆ ಎದುರಿಸಲು ಇಲಾಖೆ ಸರ್ವ ಸನ್ನದ್ದವಾಗಿದ್ದು, ಇತರೆ ಇಲಾಖೆಗಳು, ಖಾಸಗಿ ಮಕ್ಕಳ ತಜ್ಞರ ಸಹಕಾರವೂ ಅಗತ್ಯ ಎಂದರು. ಸಭೆಯಲ್ಲಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಷಕಾಂಶಯುಕ್ತ ಸ್ಪಿರುಲಿನಾ ಚಿಕ್ಕಿ ಹಾಗೂ ಸ್ಪಿರುಲಿನಾ ಕಾಳುಗಳನ್ನು ಸಾಂಕೇತಿಕವಾಗಿ ವಿತರಿಸಿ ಜಾಗೃತಿ ಕರಪತ್ರ ಬಿಡುಗಡೆಗೊಳಿಸಲಾಯಿತು.

      “ಕೋವಿಡ್ 3ನೇ ಅಲೆ ಬರುವುದಕ್ಕೂ ಮುನ್ನಾ ಮಕ್ಕಳ ತಜ್ಞರು ಹಾಗೂ ಮಕ್ಕಳ ಶಸ್ತ್ರಚಿಕಿತ್ಸಕರ ಕೊರತೆ ಜಿಲ್ಲೆಯಲ್ಲಿದ್ದು ಅದನ್ನು ನೀಗಿಸುವ ಅವಶ್ಯಕತೆ ಇದೆ. ಕಳೆದ ಎರಡು ಅಲೆಯಲ್ಲಿ ಸೋಂಕಿಗೊಳಗಾಗಿ ಗುಣಮುಖರಾದ ಮಕ್ಕಳಲ್ಲಿ ಬ್ಲಾಕ್ ಫಂಗಸ್‍ಕಾಣಿಸಿಕೊಂಡಿವೆಯೇ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯಾಗಬೇಕು.”

-ಕೆ.ಎ.ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap