ತುಮಕೂರು :
ಮೊದಲ ಅಲೆಗಿಂತಲೂ ಎರಡನೆ ಕೊರೊನಾ ಅಲೆ ಜನಜೀವನವನ್ನು ಹೆಚ್ಚು ಬಾಧಿಸಿತು. ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಕೋವಿಡ್ ವೈರಾಣು ಅಲೆಗೆ ಸಿಲುಕಿ ಜನ ತತ್ತರಿಸಿದರು. ಸಾವು ನೋವುಗಳ ಸಂಖ್ಯೆ ಹೆಚ್ಚಿದಂತೆಲ್ಲ ಜನ ಭಯಭೀತರಾದರು. ಪ್ರವಾಹದಂತೆ ಕೊಚ್ಚಿ ಬಂದ ಈ ಅಲೆಯನ್ನು ತಡೆಯಲು ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಆದರೂ ಪ್ರಯತ್ನ ಮುಂದುವರೆಯಿತು.
ಸಾವು ನೋವಿನ ಸಂಖ್ಯೆ ಕಡಿಮೆ ಮಾಡಿ ಕೊರೊನಾ ನಿಗ್ರಹಿಸಲು ಮುಖ್ಯವಾಗಿ ಬೇಕಾದದ್ದು ವೈದ್ಯಕೀಯ ವ್ಯವಸ್ಥೆ. ರೋಗಿಗಳ ಸಂಖ್ಯೆ ಹೆಚ್ಚಿತು, ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಂಖ್ಯೆ ಇಲ್ಲವಾಯಿತು. ಉಸಿರಾಟದ ತೊಂದರೆಯಿಂದಾಗಿ ಸಾಯುತ್ತಿರುವ ರೋಗಿಗಳನ್ನು ಉಳಿಸಿಕೊಳ್ಳಲು ಪರ್ಯಾಯ ವ್ಯವಸ್ಥೆಗಳು ಅನಿವಾರ್ಯವಾದವು. ಕೃತಕ ಉಸಿರಾಟದ ಮೂಲಕ ಜೀವ ಬದುಕಿಸುವ ಜೀವರಕ್ಷಕ ಔಷಧ ಮತ್ತು ಉಪಕರಣಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಯಿತು.
ಪಲ್ಸ್ ಆ್ಯಕ್ಸಿಮೀಟರ್, ಆಮ್ಲಜನಕ ಸಾಂದ್ರಕ (ಆ್ಯಕ್ಸಿಜನ್ ಕಾನ್ಯಂಟ್ರೇಟರ್), ಆ್ಯಕ್ಸಿಜನ್ ವೆಂಟಿಲೇಟರ್‍ಗಳ ಬಳಕೆ ಹೆಚ್ಚಾಗತೊಡಗಿತು. ಕೊರೊನಾ ವೈರಸ್ ಹರಡುವ ಮುನ್ನ ಈ ಶಬ್ಬಗಳನ್ನು ಕೇಳಿಯೆ ಇರಲಿಲ್ಲ. ಈಗ ವೈದ್ಯಕೀಯ ವಲಯದಲ್ಲಿ ಈ ಉಪಕರಣಗಳ ಬಗ್ಗೆಯೇ ಹೆಚ್ಚು ಮಾತು ಮತ್ತು ಚರ್ಚೆ ನಡೆಯುತ್ತಿದೆ. ರೋಗಲಕ್ಷಣ ಮಿತಿಮೀರಿ ಕೊನೆ ಹಂತಕ್ಕೆ ಬಂದಾಗ ರೋಗಿಯನ್ನು ಬದುಕಿಸುವ ಆ್ಯಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ಇತ್ಯಾದಿ ಜೀವರಕ್ಷಕಗಳು ಮುನ್ನೆಲೆಗೆ ಬಂದಿವೆ.
ರೋಗಿಯ ಆಮ್ಲಜನಕ ಮಟ್ಟ ಅಳೆಯುವ ಸಾಧನವಾಗಿ ಪಲ್ಸ್ ಆ್ಯಕ್ಸಿಮೀಟರ್ ಬಳಕೆಯಾಗುತ್ತದೆ. ಕೊರೊನಾ ಬರುವುದಕ್ಕೂ ಮೊದಲು ಈ ಉಪಕರಣ 500 ರಿಂದ 600 ರೂ.ಗಳಿಗೆ ಸಿಗುತ್ತಿತ್ತು. ಕ್ರಮೇಣ 2000 ರೂ.ಗಳಿಗೆ ಏರಿಕೆಯಾಯಿತು. 5000 ರೂ.ಗಳವರೆಗೂ ಪಲ್ಸ್ ಆ್ಯಕ್ಸಿಮೀಟರ್ ಮಾರಾಟವಾಗಿರುವ ಉದಾಹರಣೆಗಳಿವೆ.
ಮನುಷ್ಯನ ಆಮ್ಲಜನಕ ಪ್ರಮಾಣ ಕುಸಿತವಾದರೆ ಆ್ಯಕ್ಸಿಜನ್ ಸಿಲಿಂಡರ್‍ಗಳನ್ನು ಬಳಕೆ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅವುಗಳಿಗೂ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಸಾಂದ್ರಕಗಳಿಗೆ ಹೆಚ್ಚು ಬೇಡಿಕೆ ಉಂಟಾಯಿತು. ಒಬ್ಬ ಮನುಷ್ಯನ ಆಮ್ಲಜನಕದ ಪ್ರಮಾಣ ಸ್ಥಿರತೆ 95 ರವರೆಗೆ ಇರಬೇಕು. 90ರ ಒಳಗೆ ಬಂದರೆ ಅಪಾಯದ ಮುನ್ಸೂಚನೆ. ಈ ಕಾರಣಕ್ಕಾಗಿಯೇ ಆಮ್ಲಜನಕ ಪೂರೈಸಲು ಆ್ಯಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಬಳಸಲಾಗುತ್ತದೆ. ಹಿಂದೆ 40 ಸಾವಿರ ರೂ.ಗಳಿದ್ದ ಈ ಸಾಂದ್ರಕಗಳ ಬೆಲೆ 90 ಸಾವಿರ ರೂ.ಗಳವರೆಗೂ ಹೋಗಿದೆ.
ಇನ್ನು ಕೊನೆಯ ಹಂತವಾಗಿ ರೋಗಿ ನಿತ್ರಾಣ ಸ್ಥಿತಿಗೆ ಬಂದಾಗ ವೆಂಟಿಲೇಟರ್‍ಗಳನ್ನು ಬಳಸಲಾಗುತ್ತದೆ. ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಮೊದಲು ಜಿಲ್ಲಾಸ್ಪತ್ರೆ ಹಾಗೂ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಈ ವೆಂಟಿಲೇಟರ್‍ಗಳನ್ನು ಕಾಣಬಹುದಾಗಿತ್ತು. ಅದೂ ಸಹ ಸೀಮಿತ ಸಂಖ್ಯೆಯಲ್ಲಿ. ಕೊರೊನಾ ಸಂದರ್ಭದಲ್ಲಿ ವೆಂಟಿಲೇಟರ್‍ಗಳಿಗೆ ಹೆಚ್ಚು ಬೇಡಿಕೆ ಬಂದಿತು.
ಬೇಡಿಕೆಗೆ ತಕ್ಕಂತೆ ಮೇಲ್ಕಂಡ ಉಪಕರಣಗಳನ್ನು ಪೂರೈಸುವ ಜವಾಬ್ದಾರಿ ಸರ್ಕಾರದ್ದು. ಕೇಂದ್ರ ಸರ್ಕಾರವು ಪಿ.ಎಂ.ಕೇರ್ಸ್ ನಿಧಿ ಅಡಿಯಲ್ಲಿ ಸಾಕಷ್ಟು ವೆಂಟಿಲೇಟರ್‍ಗಳನ್ನು ಪೂರೈಕೆ ಮಾಡಿತು. ಹಲವು ಸಂಘ ಸಂಸ್ಥೆಗಳು, ದಾನಿಗಳು ಸರ್ಕಾರದ ಜೊತೆಗೆ ಕೈ ಜೋಡಿಸಿದವು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ಉಪಕರಣಗಳು ಹರಿದು ಬಂದವು. ಅಮೆರಿಕಾ, ಸ್ವಿಡ್ಜರ್‍ಲ್ಯಾಂಡ್, ಪೊಲ್ಯಾಂಡ್, ನೆದರ್‍ಲ್ಯಾಂಡ್, ಇಸ್ರೇಲ್, ವಿಶ್ವಸಂಸ್ಥೆ ಸೇರಿದಂತೆ ಭಾರತ ವಿರೋಧಿಸುವ ರಾಷ್ಟ್ರಗಳು ಸಹ ಕೊರೊನಾ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದವು. ನೂರಾರು ಕೋಟಿ ರೂ.ಗಳ ವೆಚ್ಚದ ಉಪಕರಣಗಳು ಭಾರತಕ್ಕೆ ರವಾನೆಯಾದವು.
ವೆಂಟಿಲೇಟರ್‍ಗಳಲ್ಲಿಯೂ ಸಹ ಹಲವು ಬಗೆಯ ಯಂತ್ರಗಳಿವೆ. ತುರ್ತು ನಿಗಾ ಘಟಕದಲ್ಲಿ ಬಳಕೆ ಮಾಡುವ ಈ ಯಂತ್ರಗಳ ಬೆಲೆ 4 ಲಕ್ಷ ರೂ.ಗಳಿಂದ ಹಿಡಿದು 15 ಲಕ್ಷ ರೂ.ಗಳವರೆಗೂ ಇದೆ. ಕೊರೊನಾ ರೋಗಿಗಳಿಗಾಗಿ ಬಳಕೆ ಮಾಡುವ ಯಂತ್ರಗಳು ಸರಿಸುಮಾರು 7 ಲಕ್ಷ ರೂ.ಗಳಿಂದ 16 ಲಕ್ಷ ರೂ.ಗಳವರೆಗೂ ದರ ನಿಗದಿ ಇದೆ ಎಂಬ ಮಾಹಿತಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಕೇಳಿಬರುತ್ತಿವೆ.
ಇದರ ಪರಿಣಾಮವಾಗಿಯೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಈಗ ಉಪಕರಣಗಳಿಗೆ ಕೊರತೆ ಇಲ್ಲ. ಕರ್ನಾಟಕವೂ ಸೇರಿದಂತೆ ಬಹಳಷ್ಟು ರಾಜ್ಯಗಳಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳು ನೀಡಿರುವ ಕೊಡುಗೆ ಅಪಾರ. ವಿಶ್ವಮಟ್ಟದಿಂದ ಹಿಡಿದು ಆಯಾ ರಾಜ್ಯಗಳಿಂದಲೇ ನೀಡಿಕೆಯಾಗಿರುವ ಜೀವರಕ್ಷಕ ಉಪಕರಣಗಳು ಭರ್ಜರಿಯಾಗಿ ಬಂದಿವೆ.
ಬಳಕೆಯದ್ದೇ ದೊಡ್ಡ ಸಮಸ್ಯೆ :
ಕೊರೊನಾ ರೋಗ ನಿಯಂತ್ರಣಕ್ಕಾಗಿ ಉಪಕರಣಗಳೇನೋ ಸರಬರಾಜಾಗಿವೆ. ಜಿಲ್ಲಾಸ್ಪತ್ರೆಯಿಂದ ಹಿಡಿದು ತಾಲ್ಲೂಕು ಆಸ್ಪತ್ರೆಗಳವರೆಗೆ ವೆಂಟಿಲೇಟರ್‍ಗಳನ್ನು ಒದಗಿಸಲಾಗಿದೆ. ಕೊರೊನಾ ಬರುವುದಕ್ಕೂ ಮೊದಲು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‍ಗಳ ಸಂಖ್ಯೆ 20ಕ್ಕೆ ಸೀಮಿತವಾಗಿತ್ತು. ಈಗ ಅದು 30ರ ಸಂಖ್ಯೆ ದಾಟಿದೆ. ಆದರೆ ಬಳಕೆ ಮಾಡುತ್ತಿರುವುದು ಕೇವಲ 25 ಮಾತ್ರ. 10ಕ್ಕೂ ಹೆಚ್ಚು ವೆಂಟಿಲೇಟರ್‍ಗಳು ಜಿಲ್ಲಾಸ್ಪತ್ರೆಯ ಕೊಠಡಿಯಲ್ಲಿ ಧೂಳು ಹಿಡಿಯುತ್ತಿವೆ ಎಂಬ ಮಾಹಿತಿಗಳಿವೆ.
ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಈಗ ಕನಿಷ್ಠ ಮೂರರಿಂದ 5 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಮತ್ತಷ್ಟು ವೆಂಟಿಲೇಟರ್‍ಗಳು ಸರಬರಾಜಾಗಿವೆ. ಆದರೆ ಸಮರ್ಪಕ ಬಳಕೆಯಾಗುತ್ತಿಲ್ಲ. ಇರುವ ವೆಂಟಿಲೇಟರ್‍ಗಳೇ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಬೇಡಿಕೆಗೆ ತಕ್ಕಂತೆ ಉಪಕರಣಗಳು ಒದಗುತ್ತಿವೆಯಾದರೂ ಅವುಗಳ ಬಳಕೆ ಇಲ್ಲ ಎಂದ ಮೇಲೆ ಪೂರೈಕೆ ಮಾಡಿಯಾದರೂ ಪ್ರಯೋಜನವೇನು ಎಂಬ ಪ್ರಶ್ನೆಗಳು ದೊಡ್ಡದಾಗಿ ಕಾಡುತ್ತಿವೆ. ಬಹುತೇಕ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳೇ ಇರುವುದಿಲ್ಲ. ವೆಂಟಿಲೇಟರ್‍ಗಳು ಬೇಕಾಗುವುದಿಲ್ಲ. ಕೊರೊನಾ ರೋಗ ಬಾರದೆ ಹೋಗಿದ್ದರೆ ತಾಲ್ಲೂಕು ಆಸ್ಪತ್ರೆಗಳ ಪರಿಸ್ಥಿತಿ ಇದೇ ರೀತಿ ಮುಂದುವರೆಯುತ್ತಿತ್ತು. ಆದರೆ ಅಗತ್ಯ ಮತ್ತು ಅನಿವಾರ್ಯತೆ ಎಂಬಂತೆ ತಾಲ್ಲೂಕು ಆಸ್ಪತ್ರೆಗಳಿಗೂ ಉಪಕರಣಗಳು ರವಾನೆಯಾಗುತ್ತಿವೆ. ಬಳಕೆಯಾಗುತ್ತಿದೆಯೆ ಎಂಬ ಮಾಹಿತಿ ಮಾತ್ರ ಸಮರ್ಪಕವಾಗಿ ಸಿಗುತ್ತಿಲ್ಲ.
ಜೀವರಕ್ಷಕ ಯಂತ್ರಗಳನ್ನು ಹಲವು ಕಂಪನಿಗಳು ಉತ್ಪಾದಿಸುತ್ತಿವೆ. ಅವುಗಳ ಗುಣಮಟ್ಟ ಮತ್ತು ವಿನ್ಯಾಸವೂ ಬೇರೆ ಬೇರೆ ರೀತಿ ಇರುತ್ತದೆ. ಹೀಗೆ ಉತ್ಪಾದನೆಯಾದ ಉಪಕರಣಗಳನ್ನು ಬಳಸುವ ಬಗೆ ಹೇಗೆ ಎಂಬುದನ್ನು ಉತ್ಪಾದಕ ಕಂಪನಿಗಳು ನೀಡಬೇಕು. ಅದಕ್ಕಾಗಿಯೇ ಒಂದು ಮಾಹಿತಿ ನೀಡುವ ಬ್ರೌಚರ್ ಸಿದ್ಧಪಡಿಸಬೇಕು. ಮಾಹಿತಿ ಅರ್ಥವಾಗದಿದ್ದರೆ ಅದಕ್ಕಾಗಿಯೇ ಇರುವ ಪರಿಣಿತರನ್ನು ನೇಮಿಸಬೇಕು. ಅವರಿಂದ ಮಾಹಿತಿ ನೀಡುವಂತಾಗಬೇಕು. ಯಂತ್ರಗಳು ಕೆಲಸ ಮಾಡದಿದ್ದರೆ ದೋಷ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ದುರಸ್ತಿ ಮಾಡುವ ವ್ಯವಸ್ಥೆಗಳು ಇರಬೇಕು.
ಇಲ್ಲಿ ಇದಾವುದನ್ನೂ ಕಾಣಲಾಗುತ್ತಿಲ್ಲ. ತಕ್ಷಣದ ಅಗತ್ಯಕ್ಕೆ ಒಂದಷ್ಟು ಯಂತ್ರಗಳನ್ನು ಉತ್ಪಾದಿಸಿ ಕೊಟ್ಟರಾಯಿತು ಎಂಬುದಷ್ಟೆ ಕಂಪನಿಗಳ ಗುರಿಯಾಗಿದೆ. ಸರ್ಕಾರಕ್ಕೂ ಸಹ ತಕ್ಷಣದ ಅವಶ್ಯಕತೆ ನೀಗಿದರೆ ಸಾಕು. ಆದರೆ ಕೋಟ್ಯಂತರ ರೂ. ಬೆಲೆ ಬಾಳುವ ಈ ಉಪಕರಣಗಳ ಭವಿಷ್ಯದ ಬಗ್ಗೆ ಚಿಂತನೆಯನ್ನೇ ನಡೆಸಿದಂತೆ ಕಾಣುತ್ತಿಲ್ಲ. ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಸಹಜವಾಗಿ ಈ ಯಂತ್ರಗಳ ಬಳಕೆಯೂ ಕ್ಷೀಣಿಸುತ್ತಿದೆ. ಮೂರನೇ ಅಲೆ ಸಾಧ್ಯತೆಗಳು ಬರುವ ವೇಳೆಗೆ ಈ ಉಪಕರಣಗಳ ಸ್ಥಿತಿ ಏನಾಗಬಹುದು? ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬ ಯಾವ ಮಾಹಿತಿಯೂ ಇದ್ದಂತೆ ಕಾಣುತ್ತಿಲ್ಲ. ಹಾಗಾದರೆ ಕೋಟಿಗಟ್ಟಲೆ ಬೆಲೆ ಬಾಳುವ ಈ ಯಂತ್ರಗಳು ಮತ್ತೆ ಧೂಳು ಹಿಡಿಯಬೇಕೆ? ಕೊಠಡಿಯ ಮೂಲೆ ಸೇರಬೇಕೆ? ಇಷ್ಟು ದೊಡ್ಡ ಮೊತ್ತದ ಉಪಕರಣಗಳು ಹಾಳಾಗಿ ಹೋದರೆ ಅದಕ್ಕೆ ಜವಾಬ್ದಾರಿ ಯಾರು?
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯರಿಗೆ ಈ ಉಪಕರಣಗಳ ಸಮರ್ಪಕ ಮಾಹಿತಿ ಇಲ್ಲ. ಇರಬೇಕೆಂದೇನೂ ಇಲ್ಲ. ತಮ್ಮ ಕಾರ್ಯ ನಿರ್ವಹಿಸಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ವೈದ್ಯರು ಒತ್ತಡದಲ್ಲಿ ಇದ್ದಾರೆ. ಹೀಗಿರುವಾಗ ಯಂತ್ರಗಳ ನಿರ್ವಹಣೆಗಾಗಿಯೆ ಪರಿಣಿತರು, ಸಿಬ್ಬಂದಿ ಬೇಕಲ್ಲವೆ? ಕೋಟ್ಯಂತರ ರೂ. ನಿಗದಿ ಮಾಡಿ ಸರ್ಕಾರಕ್ಕೆ ಪೂರೈಸಿರುವ ಕಂಪನಿಗಳು ಯಂತ್ರಗಳನ್ನು ಪೂರೈಸಿ ಕುಳಿತುಬಿಟ್ಟರೆ ಸಾಕೆ? ಏಕೆಂದರೆ, ಈಗಾಗಲೇ ಪಿ.ಎಂ.ಕೇರ್ಸ್ ಅಡಿಯಲ್ಲಿ ಪೂರೈಕೆಯಾಗಿರುವ ವೆಂಟಿಲೇಟರ್‍ಗಳು ಕಳಪೆಯಾಗಿವೆ ಎಂಬ ಆರೋಪಗಳಿದ್ದು, ಈ ವಿಷಯ ನ್ಯಾಯಾಲಯದ ಮಟ್ಟಕ್ಕೂ ಹೋಗಿದೆ.
ಮರು ಬಳಕೆಯಿಲ್ಲದೆ ಬಿಸಾಡುವ ಅಪಾಯ :
ಇಡೀ ದೇಶವೇ ಆರ್ಥಿಕ ಸಂಕಷ್ಟದಲ್ಲಿರುವಾಗ ಸಹಸ್ರಾರು ಕೋಟಿ ರೂ.ಗಳನ್ನು ಸುರಿದು ತಂದು ಹಾಕಲಾಗಿರುವ ಈ ಬೆಲೆ ಬಾಳುವ ಯಂತ್ರಗಳು ಮರು ಬಳಕೆಯಿಲ್ಲದೆ ಹಾಳಾಗುವ ಅಪಾಯವೇ ಹೆಚ್ಚಾಗಿದೆ. ವೈದ್ಯರಿಗೂ ಈ ಉಪಕರಣಗಳ ಸಮಗ್ರ ಮಾಹಿತಿ ಇಲ್ಲ. ತಂತ್ರಜ್ಞಾನ ಬಳಕೆಯ ಪರಿಣಿತರು ಇಲ್ಲ. ಇದನ್ನೆಲ್ಲ ಗಮನಿಸಿದರೆ ಈ ಉಪಕರಣಗಳು ಮರುಬಳಕೆಯಾಗದೆ ಬಿಸಾಡುವ ಹಂತಕ್ಕೆ ಬರುವುದೆ ಹೆಚ್ಚು. ಇದರಿಂದ ರಾಜಧನಕ್ಕೂ ಹೊರೆ.
ರಿಪೇರಿಗೆ ಅವಕಾಶವಿಲ್ಲದೆ ಹೊಸ ಉಪಕರಣಗಳನ್ನು ಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಹಗರಣಕ್ಕೂ ಕಾರಣವಾಗುತ್ತಿದೆ. ಇದು ಸಹ ಆ ಸಾಲಿಗೆ ಸೇರಿಹೋಗಬಹುದು.
ಗಂಭೀರ ಸಲಹೆ ಮುಂದಿಟ್ಟ ರೆಡ್‍ಕ್ರಾಸ್ :
ಇತ್ತೀಚೆಗೆ ರಾಷ್ಟ್ರ ಮಟ್ಟದ ರೆಡ್‍ಕ್ರಾಸ್ ಮುಖ್ಯಸ್ಥರ ಸಭೆ ನಡೆಯಿತು. 30 ರಾಜ್ಯಗಳು ನಡೆಸಿದ ಈ ವರ್ಚುಯಲ್ ಸಭೆಯಲ್ಲಿ ರಾಷ್ಟ್ರ ರೆಡ್‍ಕ್ರಾಸ್ ಪ್ರಧಾನ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ರೆಡ್‍ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣ ಅವರು ಒಂದು ಸಲಹೆ ನೀಡಿದರು. ಪ್ರತಿ ಜಿಲ್ಲೆಗೂ ಸಾಕಷ್ಟು ಜೀವರಕ್ಷಕ ಉಪಕರಣಗಳನ್ನು ಕೊಟ್ಟಾಗಿದೆ. ಆದರೆ ಅವುಗಳ ಬಳಕೆಯಲ್ಲಿಯೇ ಲೋಪ ಇರುವುದು ಕಾಣುತ್ತಿದೆ. ಯಂತ್ರದಲ್ಲಿ ದೋಷ ಕಾಣಿಸಿಕೊಂಡಾಗ ಅದನ್ನು ಸರಿಪಡಿಸುವ ಪರಿಣಿತರ ಕೊರತೆ ಇದೆ. ಇದನ್ನು ನೀಗಿಸಲು ಪ್ರತಿ ಜಿಲ್ಲೆಗೆ ಮೂವರು ತಾಂತ್ರಿಕ ಪರಿಣಿತರನ್ನು ನೀಡುವ ಅವಶ್ಯಕತೆ ಇದೆ. ಇಲ್ಲದೆ ಹೋದರೆ ಕೋಟ್ಯಂತರ ರೂ. ಬೆಲೆ ಬಾಳುವ ಯಂತ್ರಗಳು ಹಾಳಾಗಿ ಹೋಗುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿಯೆ ಮೂರು ದಿನಗಳ ಹಿಂದೆ ರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆಯು ವೈದ್ಯರಿಗೆ ಮತ್ತು ಸ್ವಯಂ ಸೇವಕರಿಗಾಗಿ ಒಂದು ಕಾರ್ಯಾಗಾರ ನಡೆಸಿತು.
ಬಹುತೇಕ ಉಪಕರಣಗಳು ಚೈನಾದಿಂದ ಅಮದು ಆಗುತ್ತಿವೆ. ಅಲ್ಲಿ ತಾಂತ್ರಿಕ ಪರಿಣಿತರೂ ಇದ್ದಾರೆ. ಸಮಸ್ಯೆಗಳನ್ನು ಅವರೆ ಬಗೆಹರಿಸಿಕೊಳ್ಳುತ್ತಾರೆ. ಅಲ್ಲಿ ಆಗುತ್ತಿರುವ ಸಾಧನೆ ಇಲ್ಲಿ ಏಕಿಲ್ಲ? ಕೊರೊನಾ ನಿಯಂತ್ರಣಕ್ಕಾಗಿಯೇ ನಿರಂತರ ಸಭೆಗಳು ನಡೆಯುತ್ತವೆ. ಅದಕ್ಕಾಗಿಯೇ ತಂಡಗಳು ರಚನೆಯಾಗಿವೆ. ಸಲಹಾ ಸಮಿತಿಗಳಿವೆ. ಇಷ್ಟಾದರೂ ಯಂತ್ರಗಳ ನಿರ್ವಹಣೆ ಮತ್ತು ಬಳಕೆ ಬಗ್ಗೆ ಗಂಭೀರ ಚರ್ಚೆಯಾಗದಿರುವುದು ಈ ದೇಶದ ವೈಫಲ್ಯಗಳಿಗೆ ಒಂದು ಸಣ್ಣ ಉದಾಹರಣೆಯಷ್ಟೆ. ಸ್ವಾವಲಂಬನೆ ಎಂಬುದು ಕೇವಲ ಬಾಯಿ ಮಾತಿನಲ್ಲಿ ಬಂದರೆ ಸಾಕೆ?
ಆ್ಯಕ್ಸಿಜನ್ ಬ್ಯಾಂಕ್ ಎಂಬುದು ಇತ್ತೀಚೆಗೆ ಕೇಳಿಬರುತ್ತಿರುವ ಮಾತು. ಕೊರೊನಾ ಬರುವುದಕ್ಕೂ ಮೊದಲು ಇಂತಹ ಬ್ಯಾಂಕ್‍ಗಳ ಅವಶ್ಯಕತೆಯೂ ಇರಲಿಲ್ಲ, ಬಳಕೆಯೂ ಹೆಚ್ಚಾಗಿ ಇರಲಿಲ್ಲ. ಕೊರೊನಾ ಮೊದಲ ಅಲೆ ಬಂದು ಹೋದಾಗ ಸರ್ಕಾರಗಳು ಆ್ಯಕ್ಸಿಜನ್ ಬ್ಯಾಂಕ್ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಎರಡನೇ ಅಲೆ ಬರುವ ತನಕ, ಆನಂತರವೂ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮವಾಗಿ ಸಾಕಷ್ಟು ಜೀವಹಾನಿಯಾಯಿತು. ಆಮ್ಲಜನಕದ ವ್ಯವಸ್ಥೆ ಸರಿಯಾಗಿದ್ದರೆ ಸಾವಿರಾರು ಮಂದಿಯನ್ನು ಉಳಿಸಿಕೊಳ್ಳಬಹುದಿತ್ತು.
ಕೇಂದ್ರ ಸರ್ಕಾರ ಆತ್ಮನಿರ್ಭರದ ಬಗ್ಗೆ ಹೇಳುತ್ತದೆ. ಸ್ವದೇಶಿ ಗುಣಗಾನ ಮಾಡುತ್ತದೆ. ಆದರೆ ಈ ಎಲ್ಲ ಹೇಳಿಕೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ನಮ್ಮಲ್ಲಿ ಇಷ್ಟು ಕೌಶಲ್ಯ, ಸಂಪನ್ಮೂಲ ಇದ್ದರೂ ಬಳಕೆಯಾಗುತ್ತಿಲ್ಲ. ನಮಗಿಂತ ಹಿಂದಿರುವ ದೇಶಗಳಿಂದಲೇ ಇಂದಿಗೂ ಕೆಲವು ಉಪಕರಣಗಳು, ಯಂತ್ರಗಳು ಆಮದು ಆಗುತ್ತಿವೆ. ಬಹಳಷ್ಟು ಉಪಕರಣಗಳಿಗೆ ಚೀನಾವನ್ನೇ ಅವಲಂಬಿಸಿದ್ದೇವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮ್ಮಲ್ಲಿಯೇ ತಯಾರಾಗಬಹುದಾದ, ವಿನ್ಯಾಸಗೊಳಿಸಬಹುದಾದ ಆವಿಷ್ಕಾರಗಳು ಏಕೆ ನಡೆಯುತ್ತಿಲ್ಲ? ಹಾಗಾದರೆ ಭಾಷಣ ಮತ್ತು ಉಪನ್ಯಾಸಕ್ಕಷ್ಟೇ ನಮ್ಮ ಸಾಧನೆ ಸೀಮಿತವಾಗುತ್ತಿದೆಯೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
