ತುಮಕೂರು :

ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಎಲ್ಲಾ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಲಸಿಕೆ ಪಡೆದು ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ, ಸುಭಾಷ್ ಎಂ. ಆಲದಕಟ್ಟಿ ಮನವಿ ಮಾಡಿದರು.
ನಗರದ ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ತೆರಳಿ ಕಾರ್ಮಿಕರಲ್ಲಿ ಅರಿವು ಮೂಡಿಸಿದ ಅವರು ಶ್ರಮ ಜೀವಿಗಳಾದ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ಈಗಾಗಲೇ ಕೋವಿಡ್ 2ನೇ ಅಲೆಯ ಲಾಕ್ಡೌನ್ ಅವಧಿಯಲ್ಲಿ ಕಟ್ಟಡ ಕಾರ್ಮಿಕರುಗಳಿಗೆ ತಮ್ಮ ಕಾಮಗಾರಿ ಸ್ಥಳಗಳಲ್ಲಿ ಕೆಲಸ ಮಾಡಲು ಅನುವು ಮಾಡಿರುವ ಹಿನ್ನೇಲೆಯಲ್ಲಿ ಈಗಾಗಲೇ ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುತ್ತಾರೆ. ಅದರಂತೆ ಸರ್ಕಾರದ ಮಾರ್ಗಸೂಚಿ ಅನ್ವಯಗಳಂತೆ ಜಿಲ್ಲಾಡಳಿತವು ಈಗಾಗಲೇ ಕಟ್ಟಡ ಕಾರ್ಮಿಕರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿರುತ್ತದೆ ಎಂದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ನಿರೀಕ್ಷಕರುಗಳು ಜಿಲ್ಲೆಯ ವಿವಿಧೆಡೆ ಕಟ್ಟಡ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ, ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸುತ್ತಿದ್ದು ಹಲವು ಕಾರ್ಮಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಯಾರು ಗೊಂದಲಕ್ಕೆ ಕಿವಿಗೊಡದೆ ಲಸಿಕೆ ಹಾಕಿಸಿಕೊಂಡು ತಮ್ಮನ್ನು ಹಾಗೂ ಕುಟುಂಬದವರನ್ನು ಮತ್ತು ನೆರೆ ಹೊರೆಯವರಿಗೆ ಸೊಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಸಹಾಯವಾಣಿಗೆ ಕರೆಮಾಡಿ:
ಕಾಮಗಾರಿ/ಯೋಜನೆಗಳ ಗುತ್ತಿಗೆದಾರರು/ಮಾಲೀಕರುಗಳಿಗೆ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಕಾರ್ಮಿಕರುಗಳಿಗೆ ಮೂಲ ಭೂತ ಸೌಕರ್ಯಗಳಾದ ಊಟ ವಸತಿ, ನೀರು, ಮಾಸ್ಕ್, ಸ್ಯಾನಿಟೈಸರ್, ಸೋಪು, ಔಷದೋಪಚಾರಗಳೊಂದಿಗೆ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ, ಕಾರ್ಮಿಕರುಗಳ ಸಂಬಳವನ್ನು ಕಡಿತಗೊಳಿಸದಂತೆ ಮತ್ತು ಕಾರ್ಮಿಕರುಗಳನ್ನು ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಕಾರ್ಮಿಕರಿಗೆ ಲಸಿಕೆ ಒದಗಿಸಬೇಕು, ಕಾರ್ಮಿಕರಿಗೆ ತಮ್ಮ ಕಾರ್ಯಸ್ಥಳದಲ್ಲಿ ಯಾವುದೇ ರೀತಿಯ ತೊಂದರೆಯಾದಲ್ಲಿ ಸಹಾಯವಾಣಿ ಸಂಖ್ಯೆ: 155214 ಅಥವಾ ಸ್ಥಳೀಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯು ಕೋವಿಡ್ ಸೊಂಕು ನಿವಾರಣೆ ಬಗ್ಗೆ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಜಿಲ್ಲೆಯ ವಿವಿಧ ಪ್ರಮುಖ ಸಂಘ ಸಂಸ್ಥೆಗಳಾದ ಸಿ.ಐ.ಟಿ.ಯು ಮತ್ತು ಎ.ಐ.ಟಿ.ಯು.ಸಿ ಹಾಗೂ ಇತರೆ ಅಸಂಘಟಿತ ವಲಯದ ಮುಖಂಡರುಗಳಿಗೆ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರುಗಳಿಗೆ ಕೋವಿಡ್ ಸೊಂಕು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ವಯ ಲಸಿಕೆ ಪಡೆಯುವಂತೆ, ಮಾಸ್ಕ್ ಧರಿಸುವಿಕೆ, ಆಗಿಂದಾಗ್ಗೆ ಕೈಗಳನ್ನು ಶುಚಿತ್ವಗೊಳಿಸಿಕೊಳ್ಳುವಂತೆ, ಕೆಲಸದಲ್ಲಿ ಅಂತರ ಕಾಪಾಡಿಕೊಳ್ಳುವಂತೆ ಮತ್ತು ಕೆಮ್ಮು, ನೆಗಡಿ, ಜ್ವರ ಕಂಡುಬಂದಲ್ಲಿ ತಕ್ಷಣವೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಲು ಅರಿವು ಮೂಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಎಲ್ಲಾ ಸಂಘ ಸಂಸ್ಥೆಗಳು ಕಾರ್ಮಿಕರುಗಳಿಗೆ ಅರಿವು ಮೂಡಿಸುತ್ತಿರುವ ಕೆಲಸ ಸಂತೋಷಕರವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








