ತುಮಕೂರು :
ಚಿಕ್ಕಂದಿನಲ್ಲಿ ಅಮ್ಮ-ಅಪ್ಪನ ಅಕ್ಕರೆಯ ಆರೈಕೆಯಲ್ಲಿ ಬೆಳೆಯಬೇಕಾದ ಅದೆಷ್ಟೊ ಕಂದಮ್ಮಗಳು ಕೊರೋನಾ ಮರಣ ಮೃದಂಗದಿಂದ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಕೋವಿಡ್‍ನಿಂದಾಗಿ ಸದ್ಯ ಶಾಲೆ-ಕಾಲೇಜುಗಳಿಗೆ ಹೋಗದೆ ಸದಾ ಕಾಲ ಮನೆಯಲ್ಲೆ ಇರುವ ಏಕತಾನತೆಯ ಅನಿವಾರ್ಯತೆಗೆ ಸಿಲುಕಿರುವ ಜೊತೆಗೆ, ಕೊರೋನಾದಿಂದಾಗಿ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡ ಎಳೆಯರ ಮನೆ-ಮನಗಳಲ್ಲೀಗ ಸೂತಕದ ಛಾಯೆ ಆವರಿಸಿದ್ದು, ದುಃಖ ಮಡುಗಟ್ಟುವುದರ ಜೊತೆಗೆ ಅವರ ಪಾಲಕರಲ್ಲೀಗ ಮಕ್ಕಳ ಭವಿಷ್ಯದ ಕುರಿತ ಆತಂಕ ಮನೆ ಮಾಡಿದೆ. ಸೋಂಕು ಮೂರನೆ ಅಲೆಯತ್ತ ಮುನ್ನುಗ್ಗುವ ಮೊದಲೆ ಸಾಕಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ, ಮಾನಸಿಕ ಖಿನ್ನತೆ ಹಾಗೂ ಇತರೆ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಮಕ್ಕಳ ನೆರವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಧಾವಿಸಿದೆ.
ಜಿಲ್ಲೆಯಲ್ಲಿ 18 ವರ್ಷ ಒಳಗಿನ 56 ಮಕ್ಕಳ ಪೋಷಕರು (ತಂದೆ ಅಥವಾ ತಾಯಿ) ಕೊರೋನಾ ಕಾರಣದಿಂದ ಮೃತಪಟ್ಟಿದ್ದಾರೆ. 54 ಮಕ್ಕಳು ತಂದೆಯನ್ನು ಹಾಗೂ 2 ಮಕ್ಕಳು ತಾಯಿಯನ್ನು ಕಳೆದು ಕೊಂಡು ಕಣ್ಣೀರಿಡುತ್ತಿದ್ದಾರೆ. ಕೊರೋನಾದಿಂದ ಪೋಷಕರನ್ನು ಕಳೆದುಕೊಂಡಿರುವ 56 ಮಕ್ಕಳಲ್ಲಿ 34 ಮಕ್ಕಳು 10 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಕಂದಮ್ಮಗಳು ಎಂಬುದು ದುಃಖಕರ ಸಂಗತಿ. ಈ ಪೈಕಿ 17 ಹೆಣ್ಣು ಮತ್ತು 17 ಗಂಡು ಮಕ್ಕಳಿದ್ದಾರೆ. ಉಳಿದಂತೆ, 10 ಗಂಡು ಮತ್ತು 12 ಹೆಣ್ಣು ಮಕ್ಕಳು (ಒಟ್ಟು 22 ಮಂದಿ) 10-18 ವರ್ಷ ವಯಸ್ಸಿನವರಾಗಿದ್ದು, ಪೋಷಕರನ್ನು ಕಳೆದು ಕೊಂಡಿದ್ದಾರೆ.
ದಿಕ್ಕೆಟ್ಟ ತಾಯಂದಿರು:
ಪೋಷಕರನ್ನು ಕಳೆದುಕೊಂಡ 56 ಮಕ್ಕಳ ಪೈಕಿ 54 ಮಕ್ಕಳು ತಂದೆಯನ್ನು ಕಳೆದುಕೊಂಡವರು. ಈ ಕುಟುಂಬಗಳು ತಂದೆಯ ದುಡಿಮೆಯನ್ನೇ ನೆಚ್ಚಿಕೊಂಡಿದ್ದವು. ಈಗ ಕೊರೋನಾದಿಂದಾಗಿ ದುಡಿಮೆಯ ಅಪ್ಪ ತೀರಿಕೊಂಡಿರುವುದರಿಂದ ಮಕ್ಕಳ ಭವಿಷ್ಯಕ್ಕೆ ಕಾರ್ಮೋಡ ಕವಿದಂತಾಗಿದೆ. ತಮ್ಮ ಮಕ್ಕಳಿಗೆ ಬದುಕು ಕಟ್ಟಿ ಕೊಡುವುದು ಹೇಗೆ ಎಂಬ ಚಿಂತೆ ತಾಯಂದಿರದ್ದಾಗಿದೆ. ಇನ್ನುಳಿದಂತೆ ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳ (ಅಕ್ಕ-ತಮ್ಮ) ತಂದೆ ವಿಶೇಷ ಚೇತನರು ಎಂಬುದು ಮತ್ತೊಂದು ನೋವಿನ ಸಂಗತಿ.
ಅನಾಥ ಮಕ್ಕಳಿಗೆ ನೆರವು: ತಂದೆ-ತಾಯಿ ಇಬ್ಬರೂ ಇಲ್ಲದ ಅನಾಥ ಮಕ್ಕಳ ನೆರವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಂತಿದೆ. ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆ ಮತ್ತು ಬಾಲ ಹಿತೈಷಿ ಯೋಜನೆ ಮೂಲಕ ಅನಾಥ ಮಕ್ಕಳ ಭವಿಷ್ಯ ಕಟ್ಟಿಕೊಡಲು ಸರ್ಕಾರ ಮುಂದಾಗಿದೆ.
ಬಾಲ ಸೇವಾ ಯೋಜನೆ:
ಮುಖ್ಯಮಂತ್ರಿ ಬಾಲಸೇವಾ ಯೋಜನೆಯಲ್ಲಿ ಕೊರೋನಾದಿಂದ ಪೋಷಕರನ್ನು ಕಳೆದುಕೊಂಡು ಹತ್ತಿರದ ಸಂಬಂಧಿಕರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು 3,500 ರೂ. ಸಹಾಯ ಧನ ನೀಡಲಾಗುತ್ತದೆ. ಒಂದು ವೇಳೆ ಸಂಬಂಧಿಕರು ಯಾರೂ ಇಲ್ಲದಿದ್ದಲ್ಲಿ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗೆ ಮಕ್ಕಳನ್ನು ದಾಖಲಿಸಲಾಗುವುದು. 10 ನೆ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ, ಲ್ಯಾಪ್‍ಟಾಪ್, ಟ್ಯಾಬ್ ನೀಡಲಾಗುವುದು. 21 ವರ್ಷ ತುಂಬಿದ ಹೆಣ್ಣು ಮಕ್ಕಳ ಮದುವೆ, ಉನ್ನತ ಶಿಕ್ಷಣ ಅಥವಾ ಸ್ವ ಉದ್ಯೋಗಕ್ಕೆ 1 ಲಕ್ಷ ರೂ. ಸಹಾಯ ಧನ ನೀಡಲಾಗುವುದು.
ಬಾಲ ಹಿತೈಷಿ ಯೋಜನೆ:
ಕೊರೋನಾ ಕಾರಣದಿಂದ ಸಂತ್ರಸ್ತರಾಗಿರುವ ಮಕ್ಕಳಿಗೆ (ಏಕ ಪೋಷಕ-ಅನಾಥ) ನೈತಿಕ, ಭಾವನಾತ್ಮಕ ಮತ್ತು ಸಾಮಾಜಿಕ ನೆರವು ಒದಗಿಸಿ, ಅವರನ್ನು ಮಾನಸಿಕ ಆಘಾತದಿಂದ ಹೊರತರಲು ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನಿಯೋಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆಸಕ್ತ ಮಾರ್ಗದರ್ಶಕರು ಮಕ್ಕಳ ನಿರ್ದೇಶನಾಲಯದ ವೆಬ್‍ಸೈಟ್: hಣಣಠಿs://iಛಿಠಿ-sಞಚಿಡಿಟಿಚಿಣಚಿಞಚಿs.gov.iಟಿ ನಲ್ಲಿ ನೋಂದಾಯಿಸಬಹುದು ಎಂದು ಇಲಾಖೆ ತಿಳಿಸಿದೆ. ಮಾರ್ಗದರ್ಶಕರ ಜವಾಬ್ದಾರಿ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯ ಮೊದಲಾದ ರೂಪು ರೇಷೆಗಳು ಇನ್ನಷ್ಟೆ ಪ್ರಕಟವಾಗಬೇಕಿದೆ.
ಕಾಡುತ್ತಿರುವ ಮಾನಸಿಕ ಖಿನ್ನತೆ:
ಕೊರೋನಾದಿಂದ ಶಾಲಾ-ಕಾಲೇಜುಗಳಿಗೆ ಹೋಗಲಾಗದೆ ವರ್ಷ ಪೂರ್ತಿ ಸದಾ ಕಾಲ ಮನೆಯಲ್ಲೆ ಇರುವುದು ಹಾಗೂ ಸೋಂಕಿನಿಂದ ತಾಯಿ/ತಂದೆ ಕಳೆದು ಕೊಂಡಿರುವುದು ಹಲವು ಮಕ್ಕಳಲ್ಲಿ ಏಕತಾನತೆ, ಮಾನಸಿಕ ಖಿನ್ನತೆ, ಆತಂಕ ಮೊದಲಾದ ಆಂತರಿಕ ಸಮಸ್ಯೆಗಳನ್ನು ಉಂಟುಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಒಂದು ವರ್ಷದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಅಪೌಷ್ಟಿಕತೆ, ವೈದ್ಯಕೀಯ ನೆರವು, ವಿದ್ಯಾಭ್ಯಾಸಕ್ಕೆ ನೆರವು, ಮಾನಸಿಕ ಕಿರುಕುಳ, ದೈಹಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಸಮಸ್ಯೆ, ಆಶ್ರಯ, ಬಾಲಕಾರ್ಮಿಕ ಸಮಸ್ಯೆ ಹಾಗೂ ಆಪ್ತ ಸಮಾಲೋಚನೆ ಕೋರಿ 534 ಪ್ರಕರಣಗಳು ದಾಖಲಾಗಿವೆ.
ಮೂರನೇ ಅಲೆ, ಎಳೆಯರ ಅಪೌಷ್ಟಿಕತೆ ನಿವಾರಿಸಲು ಕ್ರಮ: ಜಿಲ್ಲೆಯಾದ್ಯಂತ 8672 ಅಪೌಷ್ಟಿಕತೆವುಳ್ಳ ಹಾಗೂ ವಿವಿಧ ಗಂಭಿರ ಕಾಯಿಲೆಗಳಿಂದ ಬಳಲುತ್ತಿರುವ 2200 ಮಕ್ಕಳನ್ನು ಗುರುತಿಸಲಾಗಿದ್ದು, ಜಿಲ್ಲಾಡಳಿತವು ಈ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಲು, ಡೈರಿಯಿಂದ ನಿತ್ಯ 200 ಎಂ.ಎಲ್. ಹಾಲು ಹಾಗೂ ಇನ್ನಿತರ ದಾನಿಗಳ ನೆರವಿನಿಂದ ಪೌಷ್ಟಿಕ ಆಹಾರ ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಗುರುತಿಸಲಾಗಿರುವ ಈ ಮಕ್ಕಳನ್ನು ಉತ್ತಮ ಆರೋಗ್ಯ ಸ್ಥಿತಿಗೆ ಮರಳಿಸುವುದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ.
ಅಂಗನವಾಡಿಯಿಂದ ಸ್ಪಿರುಲಿನಾ ಚಿಕ್ಕಿ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಪೌಷ್ಟಿಕಯುಕ್ತ ಆಹಾರ ಪದಾರ್ಥ ವಿತರಿಸಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ಜರುಗಿಸಲಾಗುವುದು. ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಅಂಗನವಾಡಿಯಲ್ಲಿ 1,45,811 ಶಾಲೆಯಲ್ಲಿ 2.44 ಲಕ್ಷ ಸೇರಿ ಒಟ್ಟು 3.81 ಲಕ್ಷ ಮಕ್ಕಳಿದ್ದಾರೆ. ಈ ಪೈಕಿ 8,672 ಅಪೌಷ್ಟಿಕ, 127 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಸೂಕ್ತ ರೀತಿಯಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಏಕ ಪೋಷಕ ಮಕ್ಕಳಿಗೂ ನೆರವು ಸಿಗಲಿ: ಸರ್ಕಾರವು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಮಾತ್ರ ಸದ್ಯ ಬಾಲ ಸೇವಾ ಯೋಜನೆ ನೆರವು ಪ್ರಕಟಿಸಿದೆ. ಆದರೆ ತಂದೆ ಅಥವಾ ತಾಯಿ ಒಬ್ಬರನ್ನು ಕಳೆದುಕೊಂಡ ಏಕ ಪೋಷಕ ಮಕ್ಕಳಿಗೆ ಈ ನೆರವು ಸಿಗುವುದಿಲ್ಲ. ತುಮಕೂರು ಜಿಲ್ಲೆಯನ್ನೆ ಉದಾಹರಣೆಯಾಗಿ ತೆಗೆದುಕೊಂಡರೆ 54 ಮಕ್ಕಳು ತಂದೆಯನ್ನು ಕಳೆದು ಕೊಂಡಿದ್ದು, ಕುಟುಂಬದ ದುಡಿಯುವ ಕೈಯೆ ಇಲ್ಲದಂತಾಗಿದೆ. ಬಹುತೇಕ ತಾಯಂದಿರಿಗೆ ತಮ್ಮ ಮಕ್ಕಳ ಹಸಿವು ನೀಗಿಸುವುದೆ ದೊಡ್ಡ ಸವಾಲಾಗಿರುವಾಗ ಬಟ್ಟೆ, ವಿದ್ಯಾಭ್ಯಾಸ ನೀಡಿ ಬದುಕು ರೂಪಿಸುವುದಾದರೂ ಹೇಗೆ? ಹೀಗಾಗಿ ಒಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೂ ಸರ್ಕಾರ ನೆರವಾಗಬೇಕು ಎಂಬುದು ಸಂತ್ರಸ್ತ ಕುಟುಂಬಗಳ ಒತ್ತಾಯವಾಗಿದೆ.
ಪ್ರಮುಖಾಂಶಗಳು:
*ಕೊರೋನಾದಿಂದ ತಂದೆ/ತಾಯಿ ಕಳೆದುಕೊಂಡ ಮಕ್ಕಳು 56
*ತಂದೆ ಕಳೆದುಕೊಂಡ ಮಕ್ಕಳು 54
*ತಾಯಿ ಕಳೆದುಕೊಂಡ ಮಕ್ಕಳು 02
*10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಪೋಷಕ ಗಂಡು ಮಕ್ಕಳು 17
*10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಪೋಷಕ ಹೆಣ್ಣು ಮಕ್ಕಳು 17
*10 ವರ್ಷಕ್ಕಿಂತ ಮೇಲ್ಪಟ್ಟ ಏಕ ಪೋಷಕ ಗಂಡು ಮಕ್ಕಳು 10
*10 ವರ್ಷಕ್ಕಿಂತ ಮೇಲ್ಪಟ್ಟ ಏಕ ಪೋಷಕ ಹೆಣ್ಣು ಮಕ್ಕಳು 12
ತಾಲ್ಲೂಕು ಮಕ್ಕಳ ಸಂಖ್ಯೆ
ತುಮಕೂರು 19
ಶಿರಾ 04
ಪಾವಗಡ 08
ಕೊರಟಗೆರೆ 03
ಚಿ.ನಾ.ಹಳ್ಳಿ 08
ತಿಪಟೂರು 02
ಗುಬ್ಬಿ 03
ಮಧುಗಿರಿ 09
ಒಟ್ಟು 56
ಗ್ರಂಥಾಲಯ ಮೇಲ್ವಿಚಾರಕರಾಗಿದ್ದ 43 ವರ್ಷದ ನನ್ನ ಪತಿ ಕೊರೋನಾಗೆ ಬಲಿಯಾಗಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಗಂಡನನ್ನು ಕಳೆದುಕೊಂಡು ದಿಕ್ಕೆ ತೋಚದಂತಾಗಿದೆ. 15 ವರ್ಷದ ಮಗ, ವಯಸ್ಸಾದ ಅತ್ತೆ-ಮಾವಂದಿರ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. ಸರ್ಕಾರ ಕೊಡುವ ಸೌಲಭ್ಯಕ್ಕೆ ಅರ್ಜಿ ಹಾಕಲು ಸಹ ನಮ್ಮಲ್ಲಿ ಕನಿಷ್ಠ ಹಣ ಇಲ್ಲದಾಗಿದೆ. ಸರ್ಕಾರ ಕೊಡುವ ಯಾವ ಪರಿಹಾರವನ್ನೂ ನಾನು ಅಪೇಕ್ಷಿಸುವುದಿಲ್ಲ, ಅನುಕಂಪ ಆಧಾರಿತವಾಗಿ ಪತಿಯ ಕೆಲಸವನ್ನು ಸರ್ಕಾರ ನನಗೆ ಕೊಟ್ಟರೆ ಜೀವನಕ್ಕೆ ಒಂದು ದಾರಿಯಾಗುತ್ತದೆ.
-ಮಮತ ಸಿ.ಆರ್, ದಸೂಡಿ
(ಹುಳಿಯಾರು ಪ.ಪಂ.ಯ ಗ್ರಂಥಾಲಯ ಮೇಲ್ವಿಚಾರಕರಾಗಿದ್ದ ಗಿರೀಶ್ ಅವರ ಪತ್ನಿ)
ಅನಾಥರಾಗಿರುವ ಮಕ್ಕಳ ವಿವರಗಳನ್ನು ಇಲಾಖೆಯ ಪೋರ್ಟಲ್‍ನಲ್ಲಿ ದಾಖಲಿಸಲಾಗುತ್ತಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆ ಮೂಲಕ ಕೆಲವೊಂದು ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಲ್ಲ. ಏಕ ಪೋಷಕ ಮಕ್ಕಳ ನೆರವಿನ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು.
-ವಾಸಂತಿ ಉಪ್ಪಾರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ತುಮಕೂರು.
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ