ತುಮಕೂರು :
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕಫ್ರ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚನೆ ನೀಡಿದ್ದಾರೆ.
ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವಾರಾಂತ್ಯದ ಕರ್ಫೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆ, ಪಾಲಿಕೆ, ನಿಗಮಗಳು ಸೇರಿದಂತೆ ತುರ್ತು/ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆ/ಕಚೇರಿಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.
ಕೋವಿಡ್ ಗೆ ಸಂಬಂಧಿಸಿದ ಅಗತ್ಯ ಸೇವೆ ಮತ್ತು ನ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು. ಆದರೂ ಸಂಬಂಧಿಸಿದ ಕೈಗಾರಿಕೆ/ಸಂಸ್ಥೆಗಳು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.
ಅಧಿಕೃತ ಗುರುತಿನ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ ಓಡಾಟಕ್ಕೂ ಅನುಮತಿ ನೀಡಲಾಗುವುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು / ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ಕನಿಷ್ಠ ಪುರಾವೆಗಳನ್ನು ಹೊಂದಿರುವ ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು. ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್, ಪ್ರಾಣಿಗಳ ಮೇವು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
ರಸ್ತೆ ಬದಿ ಮಾರಾಟಗಾರರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿ, ಸ್ವತಂತ್ರ ಮದ್ಯದಂಗಡಿ ಮತ್ತು ಮಳಿಗೆಗಳನ್ನು ತೆರೆದು ಮಾರಾಟ ಮಾಡಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ.
ಮನೆಯ ಹೊರಗಿನ ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಎಲ್ಲಾ ವಸ್ತುಗಳ ಮನೆ ವಿತರಣೆ(home Delivery)ಯನ್ನು 24×7 ಪ್ರೋತ್ಸಾಹಿಸಲಾಗುತ್ತದೆ.
ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಿಂದ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಮತ್ತು ಮನೆಗೆ ತಲುಪಿಸಲು ಮಾತ್ರ ಅನುಮತಿಸಲಾಗುತ್ತದೆ. ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ಟರ್ಮಿನಲ್ / ನಿಲ್ದಾಣಗಳಿಗೆ ಹೋಗಲು/ಬರಲು ಸಾರಿಗೆ/ಖಾಸಗಿ ವಾಹನ/ ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ / ಟಿಕೆಟ್ ಅನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು.
ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ರಾಜ್ಯ ಸರ್ಕಾರ ಹೊರಡಿಸಿದ ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಮನೆಯಲ್ಲಿಯೇ 40 ಜನರವರೆಗಿನ ನಿಕಟ ಕುಟುಂಬ ಸಂಬಂಧಿಗಳು ಮಾತ್ರ ಒಳಗೊಂಡಂತೆ ನೆರವೇರಿಸಬೇಕು. ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಮಾತ್ರ ನೆರವೇರಿಸಲು ಅನುಮತಿಸಲಾಗುವುದು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ