ತುಮಕೂರು :
ಮನುಷ್ಯನಿಗೆ ಬರಬಹುದಾದ ಎಲ್ಲಾ ರೀತಿಯ ಕ್ರಿಮಿ ರಹಿತ ಹಾಗೂ ಕ್ರಿಮಿಕೀಟಗಳ ಮೂಲಕ ಹರಡಬಹುದಾದ ರೋಗ ರುಜಿನಗಳನ್ನು ಯೋಗದ ಮೂಲಕ ನಿಗ್ರಹಿಸಲು ಸಾಧ್ಯವಿದೆ. ಪ್ರಾಚೀನ ಆಯುರ್ವೇದ ಪದ್ದತಿ ಮೂಲಕ ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಾಧ್ಯವಿದೆ. ನಿರಂತರ ಯೋಗ ಪ್ರಕ್ರಿಯೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿಡಲು ಸಾಧ್ಯ ಎಂಬುದು ಯೋಗ, ಆಯುರ್ವೇದ ತಜ್ಞರ ಅಭಿಪ್ರಾಯ.
ಪ್ರಜಾಪ್ರಗತಿ ಮತ್ತು ಪ್ರಗತಿ ವಾಹಿನಿಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚರ್ಚೆ ಮತ್ತು ಸಂವಾದದಲ್ಲಿ ಭಾಗವಹಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ ಸಂಯೋಜನಾ ಪ್ರಮುಖ್ ಪ್ರೊ.ಕೆ.ಚಂದ್ರಣ್ಣ, ವಿಶ್ವ ಆಯುರ್ವೇದ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಪಂಚಕರ್ಮ ತಜ್ಞ ಡಾ.ಪ್ರಕಾಶ್ ಪಾಲ್ತೆ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಜೀವಮೂರ್ತಿ ಅವರು ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಯೋಗಾಭ್ಯಾಸ ಪ್ರಾಚೀನ ಕಾಲದಲ್ಲಿ ಋಷಿಮುನಿಗಳಿಗೆ ಮಾತ್ರ ಎಂಬಂತಾಗಿತ್ತು. ಕ್ರಮೇಣ ಇದರ ಮಹತ್ವ ಭಾರತಕ್ಕೆ ಮಾತ್ರವಲ್ಲದೆ ವಿಶ್ವ ವ್ಯಾಪಿಯಾಗಿದೆ. ವಿಶ್ವದ ಶೇ.30ರಷ್ಟು ಜನ ಇಂದು ಯೋಗದಲ್ಲಿನ ಮಹತ್ವ ಕಂಡುಕೊಂಡಿದ್ದಾರೆ. ಅವರೆಲ್ಲಾ ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಯೋಗದಿಂದ ರೋಗಗಳನ್ನು ತಡೆಯಬಹುದು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬಹುದು ಎಂಬುದು ವಿಶ್ವದ ಅನೇಕರಿಗೆ ಮನವರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು ಜೂನ್ 21ರಂದು ಯೋಗ ದಿನಾಚರಣೆ ಆಚರಿಸುತ್ತಿವೆ ಎಂದರು.
ನಮ್ಮ ಪೂರ್ವಿಕರು ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಆಗ ಆಸ್ಪತ್ರೆಗಳು ಹೆಚ್ಚು ಇರಲಿಲ್ಲ. ಅವರೆಲ್ಲಾ ನಿಸರ್ಗದೊಂದಿಗೆ ಬದುಕುತ್ತಿದ್ದರು. ನಿಸರ್ಗದಲ್ಲಿ ಸಿಗುವ ಪದಾರ್ಥಗಳನ್ನೆ ತಿನ್ನುತ್ತಿದ್ದರು. ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ವಿಭಿನ್ನವಾಗಿದೆ. ನಮ್ಮ ಆಹಾರ ಶೈಲಿ ಬದಲಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಸ ಹೊಸ ಖಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಇಷ್ಟಾದರೂ ಕೆಲವು ಖಾಯಿಲೆಗಳಿಗೆ ಔಷಧಿ ಕಂಡು ಹಿಡಿಯಲಾಗಿಲ್ಲ. ಕೊರೋನಾ ರೋಗವು ಸಹ ಇದರಲ್ಲಿ ಒಂದಾಗಿದೆ.
ಕೊರೋನಾ ರೋಗಕ್ಕೆ ಔಷಧಿ ಇಲ್ಲ. ಆದರೂ ರೋಗ ಬಂದವರು ಗುಣಮುಖರಾಗಿದ್ದಾರೆ. ಬಹಳಷ್ಟು ಜನ ಹೀಗೆ ಗುಣಮುಖರಾಗಿ ಹೊರ ಬರಲು ಅವರಲ್ಲಿರುವ ರೋಗ ನಿರೋಧಕ ಶಕ್ತಿ ಹಾಗೂ ಬಳಸಿದ ಆಯುರ್ವೇದ ಔಷಧಿಗಳೇ ಕಾರಣ. ಸಾಕಷ್ಟು ಮಂದಿ ಕೊರೋನಾ ಅವಧಿಯಲ್ಲಿ ಮರಣ ಹೊಂದಿದರು. ಇವರಲ್ಲಿ ಇತರೆ ರೋಗಗಳು ಹಾಗೂ ಭೀತಿಯಿಂದ ಸತ್ತವರೆ ಹೆಚ್ಚು. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಸೋಂಕು ಬರುವ ಸಾಧ್ಯತೆಗಳಿದ್ದು, ಇದಕ್ಕೆ ತಕ್ಕಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಹೆದರದೆ ಬದುಕನ್ನು ಸಾಗಿಸಬೇಕಿದೆ.
ಮೂರನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ತಜ್ಞರು ಈಗಾಗಲೇ ವರದಿ ಕೊಟ್ಟಿದ್ದಾರೆ. ಆದ ಕಾರಣ ಮಕ್ಕಳ ಬಗ್ಗೆ ನಾವು ಕಾಳಜಿ ವಹಿಸಬೇಕು. ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಬೇಡಿ ಎಂದು ಕೆಲವರು ಹೇಳುವುದುಂಟು. ಇದು ತಪ್ಪು ಕಲ್ಪನೆ. 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಯೋಗಾಭ್ಯಾಸ ಕಲಿಸಿರಿ. ಇದರ ಜೊತೆಗೆ ಆಯುರ್ವೇದ ಔಷಧಿಗಳನ್ನು ನೀಡುತ್ತಾ ಹೋದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಲ್ಲಿ ಇಮ್ಯೂನಿಟಿ ಇರುವ ಕಾರಣ ಬಹುಬೇಗನೆ ರೋಗ ಹರಡುವುದಿಲ್ಲ. ಆದರೂ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ತಜ್ಞರು.
ಯೋಗದಲ್ಲಿ ಹಲವು ರೀತಿಯ ವಿಧಗಳಿವೆ. ಭಂಗಿಗಳಿವೆ. ಕೊರೋನಾ ಕಾಲಕ್ಕೆ ಪ್ರಾಣಾಯಾಮ ಮತ್ತಿತ್ತರ ವಿಧಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಶ್ವಾಸಕೋಶಕ್ಕೆ ಹಾನಿಯಾಗದಂತೆ ಮತ್ತು ಉಸಿರಾಟವನ್ನು ಸದೃಢವಾಗಿ ಇರಿಸಲು ಪ್ರಾಣಾಯಾಮ ತುಂಬಾ ಮುಖ್ಯವಾಗುತ್ತದೆ.
ಶಿರಶಾಸನ, ಕಪಾಲಬಾತಿ ಸೇರಿದಂತೆ ಇತರೆ ಕೆಲವು ಯೋಗಾಸನಗಳನ್ನು ಗರ್ಭಿಣಿಯರು, ಹೃದ್ರೋಗ ಇರುವವರು, ಬಿಪಿ ಇರುವವರು ಮಾಡಬಾರದು. ಅವರಿಗೆ ದೇಹ ಅನುಮತಿ ನೀಡುವುದಿಲ್ಲ. ಈಗಾಗಲೇ ಶರೀರದಲ್ಲಿ ತೊಂದರೆ ಇರುವ ಕಾರಣ ಮತ್ತಷ್ಟು ತೊಂದರೆ ಕೊಡಲು ಹೋಗಬಾರದು. ಆದರೆ ಅಂತಹವರು ಯಾವ ಯೋಗ ಮಾಡಿದರೆ ಅನುಕೂಲ ಎಂಬುದು ಇರುತ್ತದೆ. ತಜ್ಞರನ್ನು ಕೇಳಿ ತಿಳಿದುಕೊಂಡು ಮಾತ್ರ ಯೋಗಾಸನ ಮಾಡಬೇಕು.
ಟಿ.ವಿ.ನೋಡಿಕೊಂಡು, ಯಾರೋ ಹೇಳಿದ್ದನ್ನು ಕೇಳಿಕೊಂಡು ಯೋಗಾಭ್ಯಾಸ ಮಾಡಬಾರದು. ಇದು ಕೆಲವೊಮ್ಮೆ ಸೈಡ್ ಎಫೆಕ್ಟ್ ಗೆ ಕಾರಣವಾಗಬಹುದು. ಆದ ಕಾರಣ ಸಮರ್ಪಕ ಮಾಹಿತಿ ಪಡೆದ ನಂತರವೇ ಯೋಗ ಪ್ರಕ್ರಿಯೆ ಮುಂದುವರೆಸಬೇಕು. ಕೆಲವು ದಿನ ಅಭ್ಯಾಸ ಮಾಡಿ ಮತ್ತೆ ಬಿಡಬಾರದು, ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಬೇಕು. ಆಗ ಮಾತ್ರ ಯೋಗಕ್ಕೆ ಅರ್ಥ ಬರುತ್ತದೆ ಮನಸ್ಸು ಮತ್ತು ದೇಹ ಯೋಗವಾಗಿಯೆ ಇರುತ್ತದೆ.
ಯೋಗಕ್ಕೂ ಆಹಾರಕ್ಕೂ ಪರಸ್ಪರ ಪೂರಕ ಸಂಬಂಧವಿದೆ. ಸಮತೋಲನ ಆಹಾರವನ್ನು ಸೇವಿಸಬೇಕು.. ಅದನ್ನು ಸಾತ್ವಿಕ ಆಹಾರ ಎಂದು ಕರೆಯಲಾಗುತ್ತದೆ. ನಮ್ಮ ದೇಹಕ್ಕೆ ಯಾವುದು ಒಗ್ಗುತ್ತದೆ ಎಂಬುದನ್ನು ತಿಳಿದು ನಾವು ಆಹಾರ ಸೇವಿಸಬೇಕೆ ಹೊರತು, ಯಾರೋ ಹೇಳಿದರು ಎಂದು ಸೇರದ್ದನ್ನೇಲ್ಲಾ ತಿನ್ನಬಾರದು. ಆಗ ಮಾತ್ರ ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಆಹಾರ ಕ್ರಮ ಹಾಗೂ ಯೋಗದಿಂದ ರೋಗ ರುಜಿನಗಳನ್ನು ದೂರ ಇಡಬಹುದು ಎಂಬುದು ಈಗ ಸಾರ್ವತ್ರಿಕವಾಗುತ್ತಿದೆ.
ಯೋಗ ದಿನಾಚರಣೆಗಾಗಿಯೆ ಲೋಗೋ ರಚನೆಯಾಗಿದೆ. ಏಕತೆ, ಪ್ರಕೃತಿ, ಭೂಮಿ, ನೀರು ಮತ್ತು ಅಗ್ನಿ ಒಳಗೊಂಡಿರುವ ಚಿತ್ರ ಇದು. ಇದರಲ್ಲಿ ವಿಶೇಷ ಅರ್ಥ ಇದೆ. ಈ ಬಾರಿಯ ವಿಶ್ವ ಯೋಗ ದಿನಾಚರಣೆಗೆ ಯೋಗದೊಂದಿಗೆ ಇರಿ, ಮನೆಯಲ್ಲಿಯೇ ಇರಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಕೊರೊನಾ ಇನ್ನೂ ನಿಗ್ರಹಕ್ಕೆ ಬರದ ಕಾರಣ ಮನೆಯಲ್ಲಿಯೇ ಯೋಗ ಮಾಡಲು ಈ ಘೋಷಣೆ ಹೊರಡಿಸಲಾಗಿದೆ ಎಂದು ವ್ಯಾಖ್ಯಾನಿಸಿದರು.
ಬೆಳಗುಂಬ ಬಳಿ ಇರುವ ರೆಡ್ಕ್ರಾಸ್ ಕೋವಿಡ್ ಕೇರ್ ಸೆಂಟರ್ನಲ್ಲಿ ಇರುವ ರೋಗಿಗಳಿಗೆ ಇತ್ತೀಚೆಗೆ ಮಾಜಿ ಶಾಸಕ ಸುರೇಶ್ ಗೌಡ ಅವರು ಉಪಾಹಾರ ಮತ್ತು ಕಿಟ್ ವಿತರಿಸಿದರು. ಚಿಕ್ಕರಂಗಯ್ಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ