ತುಮಕೂರು :
ಕುರುಬರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕೆಂಬ ಹೋರಾಟ ಯಾರ ವಿರುದ್ಧದ ಹೋರಾಟವಲ್ಲ, ಕಟ್ಟಕಡೆಯ ಕುರುಬರ ಏಳಿಗೆಗಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಹೋರಾಟ ಪ್ರಾರಂಭವಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ನಗರದ ಶಿರಾ ಗೇಟ್‍ನ ಕಾಳಿದಾಸ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕುರುಬರ ಎಸ್ಟಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.
ಹಲವಾರು ವರ್ಷಗಳ ಕನಸು ಈಗ ನನಸಾಗುವ ಕಾಲ ಈಗ ಕೂಡಿಬಂದಿದೆ. ಕುರುಬರನ್ನು ಎಸ್ಟಿಗೆ ಸೇರಿಸಿದರೆ ಕುರುಬ ಮತ್ತು ಹಾಲುಮತ ಪದ ಹಾಗೇ ಇರುತ್ತವೆ, ಈ ಬಗ್ಗೆ ಯಾವುದೇ ಕೀಳರಿಮೆ ಬೇಡ ಎಂದು ಹೇಳಿದ ಸ್ವಾಮೀಜಿ, ಎಸ್ಟಿಗೆ ಸೇರುವುದರಿಂದ ನಮ್ಮ ಸಮಾಜ ಒಡೆದುಹೋಗುತ್ತದೆ ಎನ್ನುವ ತಪ್ಪು ಕಲ್ಪನೆ ಇದೆ, ಈ ಕುರಿತು ಸಮಾಜದ ಜನರಿಗೆ ಮುಖಂಡರು ತಿಳುವಳಿಕೆ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂಬ ವಿವಿಧ ಸಭೆ, ಸಮಾವೇಶಗಳಲ್ಲಿ ನಿರೀಕ್ಷೆಗಿಂತಾ ಮೀರಿ ಹೆಚ್ಚಿನ ಜನ ಭಾಗವಹಿಸಿ, ಹೋರಾಟಕ್ಕೆ ಉತ್ಸಾಹ ತೋರಿದ್ದಾರೆ. ಜನವರಿ 15ರಿಂದ ಕಾಗಿನೆಲೆ ಪೀಠದಿಂದ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳಿ, ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಸೇರುವ ಬೃಹತ್ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂಕ್ರಮಣದಲ್ಲಿ ಸೂರ್ಯ ಪಥ ಬದಲಾಯಿಸುವಂತೆ ಎಲ್ಲರೂ ಬೆಂಬಲ, ಸಹಹಕಾರ ನೀಡಿದಲ್ಲಿ ಕುರುಬ ಸಮುದಾಯದ ದಿಕ್ಕು ಬದಲಾಗುವುದು ಎಂದು ಹೇಳಿದರು.
ಮಾತೃ ಋಣ, ಪಿತೃ ಋಣ ತೀರಿಸಿದಂತೆ ಸಮಾಜದ ಋಣ ತೀರಿಸಲು ಈ ಹೋರಾಟಕ್ಕೆ ನಾವು ಇಳಿದಿದ್ದೇವೆ. ವ್ಯಕ್ತಿ ಪ್ರತಿಷ್ಠೆ ಬಿಟ್ಟು ಸಮಾಜದ ಪ್ರತಿಷ್ಠೆಗಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕರೆ ನೀಡಿದರು.
ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಬ್ರಿಟೀಷರ ಕಾಲದಲ್ಲೇ ಕುರುಬ ಸಮಾಜವು ಎಸ್ಟಿಗೆ ಸೇರಿತ್ತು, ಆಗಿನ ಗೆಜೆಟ್‍ನಲ್ಲೂ ಪ್ರಕಟಗೊಂಡಿತ್ತು. ಹೀಗಿದ್ದರೂ ನಮ್ಮನ್ನು ನಿರ್ಲಕ್ಷ ಮಾಡಿದವರಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರ ಸಕಾರಕ್ಕೆ ಶಿಫಾರಸ್ಸು ಮಾಡಿದ್ದರು. ನಂತರ ರಾಮಕೃಷ್ಣ ಸಿಎಂ ಆಗಿದ್ದಾಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ಟು ನಂತರ ವಾಪಸ್ ಪಡೆದರು. ಗೊತ್ತುಗುರಿ, ರೂಪುರೇಷೆ, ಹೋರಾಟಕ್ಕೆ ನಾಯಕರಿಲ್ಲದೆ ಇಷ್ಟು ವರ್ಷ ಎಸ್ಟಿಯಿಂದ ವಂಚಿತರಾಗಿದ್ದೇವೆ, ಈಗ ಕನಕ ಗುರುಪೀಠ ಹಾಗೂ ಪ್ರದೇಶ ಕುರುಬರ ಸಂಘ ಈ ಬಗ್ಗೆ ಜಾಗೃತಿ ಮೂಡಿಸಿದೆ ಎಂದರು.
ಹಿಂದೆ ಕೊಟ್ಟಿದ್ದನ್ನು ಮರಳಿ ಪಡೆಯುವುದು ಈ ಹೋರಾಟದ ಗುರಿಯಾಗಿದೆ. ನಮ್ಮ ಹಕ್ಕುಗಳನ್ನು ಕೇಳಲು ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಿದೆ. ಪ್ರಬಲ ಜಾತಿಗಳು 2ಎ ವರ್ಗಕ್ಕೆ ಸೇರಿದರೆ ನಮಗೆ ಅಲ್ಲಿ ಉಳಿಗಾಲವಿಲ್ಲದಂತಾಗುತ್ತದೆ. ನಮ್ಮ ಹಕ್ಕು ಪಡೆಯಲು ಸುವರ್ಣಾವಕಾಶ ಈಗ ಕೂಡಿ ಬಂದಿದೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್ ಒಡೆಯರ್, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ವಿಧಾನ ಪರಿಷತ್‍ನ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಸಿ.ಶಿವಮೂರ್ತಿ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಪುಟ್ಟರಾಜು, ಮೈಲಾರಪ್ಪ, ಭಾಗ್ಯಮ್ಮ, ಡಾ.ಪರಶುರಾಮ್, ಸುನಿತಾ ನಟರಾಜ್, ರಘುರಾಮ್, ಮಹಾನಗರ ಪಾಲಿಕೆ ಸದಸ್ಯರಾದ ನಳಿನಾ ಇಂದ್ರಕುಮಾರ್, ಹೆಚ್.ಮಲ್ಲಿಕಾರ್ಜುನಯ್ಯ, ಲಕ್ಚ್ಮೀನರಸಿಂಹರಾಜು ಮತ್ತಿತರರು ಭಾಗವಹಿಸಿದ್ದರು.