ತುಮಕೂರು : ಕೊರೊನಾ ಸೋಂಕು ಕ್ಷೀಣಿಸಿದರೂ ತಪ್ಪದ ಅಪಾಯ!!!

ತುಮಕೂರು : 

      ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಹಂತದಲ್ಲಿ ಮೂರು ಸಾವಿರದವರೆಗೂ ದಾಟಿದ್ದ ಕೋವಿಡ್ ಪ್ರಕರಣ ಈಗ 500ರ ಒಳಗೆ ಬಂದು ನಿಂತಿದೆ. ಸೋಂಕು ಪ್ರಕರಣಗಳು ಕಡಿಮೆಯಾದರೂ ಮರಣ ಪ್ರಮಾಣದ ಸಂಖ್ಯೆ ನಿಂತಿಲ್ಲ. ಕನಿಷ್ಠ 3 ಪ್ರಕರಣಗಳಾದರೂ ನಿತ್ಯ ವರದಿಯಾಗುತ್ತಲೆ ಇದ್ದು, ಗುರುವಾರದಂದು ಒಂದು ಸಾವಿನ ಪ್ರಕರಣ ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖವಾಗುತ್ತಿರುವ ತುಸು ಸಮಾಧಾನ ತಂದರೂ ಮಾರನೆಯ ದಿನ ಮತ್ತೆ ಮೂರು ಸಾವಿನ ಪ್ರಕರಣಗಳು ವರದಿಯಾಗಿವೆ.

      ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗಿರಬಹುದು. ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಪಾಸಿಟಿವ್ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದರೂ ಇನ್ನು ಕೆಲವು ದಿನಗಳ ಕಾಲ ತೀವ್ರ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ತಾಲ್ಲೂಕುವಾರು ಅಂಕಿ ಅಂಶಗಳು ತೋರಿಸುತ್ತಿವೆ. ಪ್ರತಿ ತಾಲ್ಲೂಕಿನಲ್ಲಿಯೂ ನಿತ್ಯ ಸೋಂಕು ಪ್ರಕರಣಗಳು ವರದಿಯಾಗುತ್ತಲೆ ಇವೆ. ಯಾವ ತಾಲ್ಲೂಕಿನಲ್ಲಿಯೂ ಝೀರೋ ಮಟ್ಟಕ್ಕೆ ಬಂದು ನಿಂತಿಲ್ಲ. ಈಗಷ್ಟೇ ಕೆಲವು ತಾಲ್ಲೂಕುಗಳಲ್ಲಿ 10 ರಿಂದ ಒಳಗೆ ಬರುತ್ತಿದ್ದು, ಸರಾಸರಿ 7 ರಿಂದ 10 ಪ್ರಕರಣಗಳು ಕೆಲವು ತಾಲ್ಲೂಕುಗಳಲ್ಲಿ ವರದಿಯಾಗುತ್ತಿವೆ.

     ಜೂನ್ 19 ರ ವರದಿಯಂತೆ ಜಿಲ್ಲೆಯಲ್ಲಿ ಒಟ್ಟು 182 ಸೋಂಕು ಪ್ರಕರಣಗಳು ಕಂಡು ಬಂದಿದ್ದರೆ ಒಬ್ಬರು ಮರಣ ಹೊಂದಿದ್ದಾರೆ. ಸೋಂಕಿನಲ್ಲಿ ತುಮಕೂರು ಪ್ರಥಮ ಸ್ಥಾನದಲ್ಲಿದ್ದು, ನಗರ ಹಾಗೂ ಗ್ರಾಮಾಂತರ ಎರಡೂ ಸೇರಿ 49 ಪ್ರಕರಣಗಳು ಶನಿವಾರ ವರದಿಯಾಗಿವೆ. ಶುಕ್ರವಾರ 24, ಗುರುವಾರ 78, ಬುಧವಾರ 63 ಪ್ರಕರಣ, ಮಂಗಳವಾರ 78 ಪ್ರಕರಣಗಳಿದ್ದರೆ, ಸೋಮವಾರ ಕೇವಲ 17 ಪ್ರಕರಣಗಳು ವರದಿಯಾಗಿವೆ. ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಸರಾಸರಿ 50 ರಿಂದ 75ರವರೆಗೂ ಸೊಂಕು ಪ್ರಕರಣಗಳು ನಿತ್ಯ ಕಂಡುಬರುತ್ತಿವೆ. ತಿಪಟೂರು, ಚಿನಾಹಳ್ಳಿ, ಗುಬ್ಬಿ, ಶಿರಾ ಹಾಗೂ ತುರುವೇಕೆರೆಯಲ್ಲಿಯೂ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಈ ತಾಲ್ಲೂಕುಗಳಲ್ಲಿ ನಿತ್ಯ 20ಕ್ಕೂ ಹೆಚ್ಚು ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಆಧರಿಸಿ ಜಿಲ್ಲಾಡಳಿತ ಹೇಳುವ ಪ್ರಕಾರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೆ ದಿನೆ ಇಳಿಮುಖವಾಗುತ್ತಿದ್ದು, ಶೇ.62 ರಷ್ಟು ಗ್ರಾಮಗಳು ಸೋಂಕು ಮುಕ್ತ ಗ್ರಾಮಗಳಾಗಿವೆ ಎಂಬ ವರದಿ ಇದೆ.
ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ರೆಡ್‍ಝೋನ್ ಮತ್ತು ಹಾಟ್‍ಸ್ಪಾಟ್ ಸಂಖ್ಯೆಗಳಲ್ಲಿಯೂ ಇಳಿಮುಖವಾಗಿದೆ. ಜೂನ್ 1 ರಿಂದ 128 ಕೊರೊನಾ ಹಾಟ್‍ಸ್ಪಾಟ್‍ಗಳು, 30 ರೆಡ್‍ಝೋನ್‍ಗಳಿದ್ದವು. ಈಗ 56 ಹಾಟ್‍ಸ್ಪಾಟ್ ಮತ್ತು 8 ರೆಡ್‍ಝೋನ್‍ಗಳು ಮಾತ್ರ ಇವೆ. ಇನ್ನು ಕೆಲವೇ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಇಳಿಮುಖವಾಗಲಿದೆ.

ಮುಕ್ತವಾದರೂ ಮೈಮರೆಯುವ ಹಾಗಿಲ್ಲ :

      ಜೂನ್ 14 ರಿಂದ ಲಾಕ್‍ಡೌನ್ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಕೆಲವು ಕ್ಷೇತ್ರಗಳನ್ನು ಮುಕ್ತವಾಗಿಸಲಾಗಿದೆ. ಬಟ್ಟೆ ಅಂಗಡಿಗಳು, ಜ್ಯುಯೆಲರಿ, ರೆಸ್ಟೋರೆಂಟ್ ಇತ್ಯಾದಿ ಜನಸಂದಣಿ ಇರುವ ಕ್ಷೇತ್ರಗಳಿಗೆ ಅವಕಾಶವಿಲ್ಲ. ಆದರೆ ಅವಕಾಶ ಕಲ್ಪಿಸಲಾಗಿರುವ ಪ್ರದೇಶಗಳಲ್ಲಿ ಜನ ಮೈಮರೆತು ನುಗ್ಗುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳುವ ಎಚ್ಚರಿಕೆಯನ್ನು ಮರೆಯುತ್ತಿದ್ದಾರೆ. ಬಹುತೇಕ ಮಂದಿ ಈಗಾಗಲೇ ಅನ್‍ಲಾಕ್ ಆಗಿದೆ, ಲಾಕ್‍ಡೌನ್ ಸಂಪೂರ್ಣ ಮುಗಿದು ಹೋಗಿದೆ, ಕೊರೊನಾ ಇಲ್ಲ ಎಂಬಂತಹ ಮನಸ್ಥಿತಿಯಲ್ಲಿದ್ದಾರೆ. ಜೂನ್ 21ರವರೆಗೂ ಕೆಲವು ನಿರ್ಬಂಧಗಳು ಮುಂದುವರೆದಿದ್ದು, ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಅನ್‍ಲಾಕ್ ಮಾಡುವ ತೀರ್ಮಾನ ಸರ್ಕಾರದ ಮುಂದಿದೆ. ಆದರೆ ಕೋವಿಡ್ ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಲೆ ಇರುವುದರಿಂದ ಮೈಮರೆಯುವ ಹಾಗಿಲ್ಲ.

 ಸಾವುಗಳು ನಿಂತಿಲ್ಲ :

      ಸೋಂಕು ಪ್ರಕರಣ ಕಡಿಮೆಯಾದರೂ ಸಾವುಗಳ ಸಂಖ್ಯೆ ನಿಂತಿಲ್ಲ. ಪ್ರತಿದಿನ ಸಾವಿನ ಪ್ರಕರಣಗಳು ವರದಿಯಾಗುತ್ತಲೆ ಇವೆ. ಲೆಕ್ಕಕ್ಕೆ ಸಿಗದ ಸಾವಿನ ಪ್ರಕರಣಗಳನ್ನೂ ಗಮನಿಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಬಹುದು. ಈ ವಾರದ ಅಂಕಿಅಂಶಗಳನ್ನೇ ಗಮನಿಸಿದರೆ 20 ಸಾವುಗಳು ಸಂಭವಿಸಿವೆ. ಶನಿವಾರ 2, ಶುಕ್ರವಾರ 3, ಗುರುವಾರ 1, ಬುಧವಾರ 5, ಮಂಗಳವಾರ 3, ಸೋಮವಾರ 3, ಭಾನುವಾರ 3, ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಬಹುದು. ಸೋಂಕು ಪ್ರಮಾಣ ಇಳಿಕೆಯಾಗುವುದರ ಜೊತೆಗೆ ಸಾವಿನ ಪ್ರಮಾಣವೂ ಕಡಿಮೆಯಾಗಬೇಕು. ಬಿಡುಗಡೆ ಹೊಂದುವವರ ಸಂಖ್ಯೆಯೂ ಹೆಚ್ಚಳವಾಗಬೇಕು. ಆದರೆ ಸೋಂಕು ಪ್ರಕರಣದಂತೆಯೇ ನಿತ್ಯವೂ ಸಾವುಗಳು ವರದಿಯಾಗುತ್ತಲೇ ಇವೆ.

56 ಹಾಟ್‍ಸ್ಪಾಟ್‍ಗಳು :

      ಜೂನ್ ಆರಂಭದಲ್ಲಿ ಜಿಲ್ಲೆಯಲ್ಲಿ ಒಟ್ಟು 128 ಕೊರೊನಾ ಹಾಟ್‍ಸ್ಪಾಟ್‍ಗಳಿದ್ದವು. ಹಾಗೆಯೇ 30 ರೆಡ್‍ಝೋನ್‍ಗಳಿದ್ದವು. ಇತ್ತೀಚೆಗೆ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 56 ಹಾಟ್‍ಸ್ಪಾಟ್‍ಗಳು, 6 ರೆಡ್‍ಝೋನ್‍ಗಳು ಇವೆ. ಈ ಸಂಖ್ಯೆ ಕಡಿಮೆಯಾಗುವತನಕ ಜನರು ಎಚ್ಚರಿಕೆ ವಹಿಸಬೇಕು. ಅಧಿಕಾರಿಗಳೂ ಸಹ ಇಂತಹ ವಲಯಗಳ ಬಗ್ಗೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಒಟ್ಟು 5916 ಸಕ್ರಿಯ ಪ್ರಕರಣಗಳಿವೆ. ಇಷ್ಟೂ ಮಂದಿ ಗುಣಮುಖರಾಗಬೇಕು. ಸೋಂಕು ಪ್ರಕರಣಗಳಿಗಿಂತ ಹೆಚ್ಚು ಮಂದಿ ಗುಣಮುಖರಾದರೆ, ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಾ ಬಂದರೆ ಒಂದಷ್ಟು ಸಮಾಧಾನಕರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap