‘ಎಲ್ ಅಂಡ್ ಟಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ’ – ಸಚಿವ ಬೈರತಿ ಬಸವರಾಜು

 ತುಮಕೂರು :

      ನಿಗದಿತ ಗಡವಿನೊಳಗೆ ಯುಜಿಡಿ ಹಾಗೂ 24*7 ಕುಡಿಯುವ ನೀರು ಸಂಪರ್ಕ ಜಾಲ ಕಾಮಗಾರಿ ಪೂರ್ಣಗೊಳಿಸದಿರುವ ಎಲ್ ಅಂಡ್ ಟಿ ಕಂಪನಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಸಂಬಂಧಪಟ್ಟ ಗುತ್ತಿಗೆದಾರ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

      ನಗರದಲ್ಲಿ ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆ ಮಾಡಿದ ಸಚಿವರು, ಬಳಿಕ ಪಾಲಿಕೆ ಸಭಾಂಗಣದಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದರು.

      ಈ ವೇಳೆ 24*7 ನೀರು ಸರಬರಾಜು ಕಾಮಗಾರಿ ಪೈಪ್‍ಲೈನ್ ಅಳವಡಿಕೆ ಹಾಗೂ ಯುಜಿಡಿ ಎರಡನೇ ಹಂತದ ಕಾಮಗಾರಿಗಳು ಸಮರ್ಪಕವಾಗಿ ಆಗುತ್ತಿಲ್ಲ. ಅಗೆದ ಜಾಗವನ್ನು ಸರಿಯಾಗಿ ರೀಸ್ಟೋರ್ ಮಾಡುತ್ತಿಲ್ಲ ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ, ಸಂಸದ ಜಿ.ಎಸ್.ಬಸವರಾಜ್, ಸಚಿವರ ಗಮನಕ್ಕೆ ತಂದು ಗುತ್ತಿಗೆದಾರ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದರು. ಇದೇ ವೇಳೆ ಯುಜಿಡಿ ಇನ್ನೂ ಎರಡು ವರ್ಷವಾದರೂ ಮುಗಿಯುದು ಅನುಮಾನ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಹ ದನಿಗೂಡಿಸಿದರು.

      ಜನಪ್ರತಿನಿಧಿಗಳ ಆರೋಪಕ್ಕೆ ಕೆಂಡಾಮಂಡಲರಾದ ಸಚಿವರು ಸದರಿ ಗುತ್ತಿಗೆದಾರ ಎಲ್ ಅಂಡ್ ಟಿ ಕಂಪನಿ ಅಧಿಕಾರಿಗಳನ್ನು ಸಭಾಂಗಣದ ಮುಂಭಾಗಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಇವರ ವಿರುದ್ಧಕ್ರಿಮಿನಲ್ ಕೇಸ್ ಬುಕ್ ಮಾಡಿ. ಇನ್ನೆರೆಡು ತಿಂಗಳಲ್ಲಿ ಮತ್ತೆ ಯುಜಿಡಿ, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಲು ಬರುತ್ತೇನೆ. ಕಾಮಗಾರಿ ಸಮರ್ಪಕವಾಗಿರದಿದ್ದರೆ ಸ್ಥಳದಲ್ಲೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯುಜಿಡಿ ಜಾಗದ ಸಮಸ್ಯೆಯನ್ನು ಇತ್ಯರ್ಥಪಡಿಸಿಕಾಮಗಾರಿ ವೇಗ ಪಡೆಯಲು ಕ್ರಮವಹಿಸಿ ಎಂದು ಆಯುಕ್ತರಿಗೆ ಸೂಚಿಸಿದರು.

     ಇದೇ ವೇಳೆ ಪಾಲಿಕೆ, ಸ್ಮಾರ್ಟ್ ಸಿಟಿ ಕಾಮಗಾರಿ, ಟೂಡಾ ವತಿಯಿಂದ ಕಾಮಗಾರಿಗಳ ಮಾಹಿತಿ ಪಡೆದ ಸಚಿವರು ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡದೆ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು.ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತುಕೊಡಬೇಕು.3ನೇ ಅಲೆ ತಡೆಗೂ ಕ್ರಮ ವಹಿಸುವ ಜೊತೆಗೆ ರಾಜಗಾಲುವೆ, ಉದ್ಯಾನವನ ಒತ್ತುವರಿ ತೆರವುಗೊಳಿಸಬೇಕು. ಹಸರೀಕರಣಕ್ಕೆ ಹೆಚ್ಚಿನ ಒತ್ತುಕೊಡಿ ಎಂದು ತಾಕೀತು ನೀಡಿದರು.
ತೆರಿಗೆ ಸಂಗ್ರಹದಲ್ಲಿ ಸಾಧನೆ: ಪಾಲಿಕೆ ಆಯುಕ್ತೆರೇಣುಕಾ ಅವರು ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ಸಾಲಿನಲ್ಲಿ ಶೇ.100ರಷ್ಟು ಸಾಧನೆ ಮಾಡಿದ್ದು, ನೀರಿನ ಶುಲ್ಕ , ಜಾಹೀರಾತು ತೆರಿಗೆ, ಉದ್ದಿಮೆ ಪರವಾನಗಿ, ಬಾಡಿಗೆ ವಸೂಲಾತಿ, ಘನತ್ಯಾಜ್ಯ ನಿರ್ವಹಣೆ, ಅಮೃತ್‍ಸಿಟಿ, ಎಲ್‍ಇಡಿ ದೀಪ ಅಳವಡಿಕೆ, ಸ್ವಚ್ಛ ಭಾರತ್ ಪ್ರಗತಿ ಕುರಿತು ಮಾಹಿತಿ ನೀಡಿದರು.

     ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ಅನುದಾನ ಪೂರ್ಣವಾಗಿ ಸರಕಾರದಿಂದ ಬರುತ್ತಿಲ್ಲ.ಎಸ್‍ಟಿಪಿ-ಟಿಎಸ್‍ಪಿ ಕಾಮಗಾರಿಗಳು ಇದರಲ್ಲಿ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು.
ನಿಗದಿತ ಗಡುವಿನಲ್ಲಿ ಕಾಮಗಾರಿ ಮುಗಿಸಿ: ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಪ್ರಸಕ್ತ 275.22 ಕೋಟಿ 97 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 643.85 ಕೀಟಿ ಮೊತ್ತದ 55 ಯೀಓಜನೆ ಪ್ರಗತಿಯಲ್ಲಿದೆ.3.53 ಕೋಟಿ ರೂ.ಗಳಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು. ಕೆಎಸ್‍ಆರ್‍ಟಿಸಿ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಮಾರಿಯಮ್ಮ ನಗರ, ಗ್ರಂಥಾಲಯ, ಪಾಲಿಕೆ ಹೊಸ ಕಚೇರಿ,ಎಂಪ್ರೆಸ್ ಕಾಲೇಜು ಸಭಾಂಗಣದ ಉದ್ಘಾಟನೆಗೆ 2 ತಿಂಗಳಲ್ಲಿ ಸಜ್ಜಾಗಿರಬೇಕು. ಹಗಲು-ರಾತ್ರಿ ಕೆಲಸ ನಡೆಯಬೇಕು ಎಂದು ಸೂಚಿಸಿದರು. ದೇಶದ 100 ಸ್ಮಾರ್ಟ್‍ಸಿಟಿ ನಗರಗಳಲ್ಲಿ ತುಮಕೂರು ಕಾಮಗಾರಿಯಲ್ಲಿ 9ನೇಸ್ಥಾನ, ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವುದು ಸ್ವಾಗತಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

      ಮುತ್ಸಂದ್ರದಲ್ಲಿ ವಸತಿ ಬಡಾವಣೆ ನಿರ್ಮಾಣ: ಟೂಡಾ ಆಯುಕ್ತ ಯೋಗಾನಂದ್ ಅವರು ಮುತ್ಸಂದ್ರ ವಸತಿ ಬಡಾವಣೆ ನಿರ್ಮಾಣಕ್ಕೆ 40 ಎಕರೆಗೆ ರೈತರ ಅನುಮತಿ ದೊರೆತಿದೆ ಎಂದರು. ಸಂಸದರು 250 ಎಕರೆಗೂ ರೈತರು ಅನುಮತಿ ನೀಡಲಿದ್ದು, ಅಧಿಕಾರಿಗಳು ರೈತರಿಗೆ ಅನುಕೂಲಕಲ್ಪಿಸಿಕೊಟ್ಟು ಜಮೀನು ಪಡೆಯಬೇಕೆಂದರು. ಶಾಸಕರು ಬಾವಿಕಟ್ಟೆ ಕಲ್ಯಾಣ ಮಂಟಪ ಹಿಂಭಾಗದ ಜಮೀನುಗಳನ್ನು ನಿವೇಶನಗಳಾಗಿ ಅಭಿವೃದ್ಧಿ ಪಡಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ, ಉಪಮೇಯರ್ ನಾಝಿಮಾ ಬಿ., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಣ್ಣ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

 
ಅಮಾನಿಕೆರೆ ನೀರು ಕಲುಷಿತ; ಪ್ರಸ್ತಾಪವಾದ ಪ್ರಜಾಪ್ರಗತಿ ವರದಿ

      ಅಮಾನಿಕೆರೆಗೆ ಕಲುಷಿತ ನೀರು ಹರಿಯದಂತೆ ಕ್ರಮವಹಿಸಬೇಕೆಂದು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಪಾಲಿಕೆ ಹಾಗೂ ಟೂಡಾ ಅಧಿಕಾರಿಗಳಿಗೆ ಸಚಿವ ಬೈರತಿ ಬಸವರಾಜು ಸೂಚನೆ ನೀಡಿದರು. ಅಮಾನಿಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಜಾಪ್ರಗತಿ ವರದಿಯನ್ನು ಆಧರಿಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಜ್ಯೋತಿಗಣೇಶ್, ಅಮಾನಿಕೆರೆ ನೀರಿನಲ್ಲಿ 34ರಷ್ಟು ಬ್ಯಾಕ್ಟಿರಿಯವಿರುವುದು ಪತ್ತೆಯಾಗಿದ್ದು, ನಿವಾರಣೆಗೆ ಕ್ರಮವಾಗಬೇಕು.ಅಗತ್ಯ ಅನುದಾನ ಒದಗಿಸಬೇಕೆಂದರು. ಅಮಾನಿಕೆರೆ ಹಿಂಭಾಗದಲ್ಲಿನ ಕೆರೆ ಜಾಗ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕೆಂದು ಸಚಿವರು ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap