ತುಮಕೂರು :
ನಗರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆಂದು ಶುಕ್ರವಾರ ಆಗಮಿಸಿದ್ದ ನಗರಾಭಿವೃದ್ಧಿ ಸಚಿವರು ಅವೈಜ್ಞಾನಿಕವಾಗಿ ನಡೆಯುತ್ತಿರುವ ರಸ್ತೆ, ಒಳಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಕಟ್ಟಡ ಕಾಮಗಾರಿಗಳನ್ನಷ್ಟೇ ವೀಕ್ಷಿಸಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು ತೆರಳಿದ್ದು ಸಚಿವರ ಭೇಟಿ ಪ್ರದಕ್ಷಿಣೆ ಶಾಸ್ತ್ರವೆಂಬಂತಾಯಿತು ಎಂಬ ಚರ್ಚೆಗೆ ಗ್ರಾಸವಾಯಿತು.
ಪಾಲಿಕೆ, ಸ್ಮಾರ್ಟ್‍ಸಿಟಿ, ನಗರ ನೀರು ಸರಬರಾಜು ಒಳಚರಂಡಿ ಮಂಡಳಿ, ಬೆಸ್ಕಾಂಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳಿಗಾಗಿ ನಗರದ ತುಂಬೆಲ್ಲ ರಸ್ತೆಗಳನ್ನು ಅಗೆದಿದ್ದು, ಕೆಲವೆಡೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಸಚಿವರು ಗಮನಿಸಿ ಕ್ರಮವಹಿಸುವರೆಂದು ಭಾವಿಸಿದ್ದ ಜನರ ನಿರೀಕ್ಷೆ ಹುಸಿಯಾಯಿತು.
ಮೊದಲಿಗೆ ಎಂಜಿ.ಸ್ಟೇಡಿಯಂ ಕಾಮಗಾರಿ ವೀಕ್ಷಿಸಿದ ಸಚಿವರು, ನಂತರ ಬಿ.ಎಚ್.ರಸ್ತೆ ಮಾರ್ಗವಾಗಿ ರಾಧಾಕೃಷ್ಣನ್ ರಸ್ತೆ, ಮಹಾವೀರ ರಸ್ತೆ, ಅಶೋಕರಸ್ತೆ ಮೂಲಕ ಆಗಮಿಸಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕೆಎಸ್‍ಆರ್‍ಟಿಸಿ ಎಂಜಿನಿಯರ್‍ಗಳು, ಗುತ್ತಿಗೆದಾರ ಪ್ರತಿನಿಧಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮುಂದಿನ ವರ್ಷದ ಅಕ್ಟೋಬರ್ ವೆಳೆಗೆ ಕಾಮಗಾರಿ ಮುಗಿಯುತ್ತದೆಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದರು. ಕೆಎಸ್‍ಆರ್‍ಟಿಸಿಯಿಂದ ಸೂಕ್ತ ಸ್ಪಂದನೆಯಿಲ್ಲ. ನಕಾಶೆ ಬದಲಾಯಿಸಲೇ 6 ತಿಂಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಎಂಪ್ರೆಸ್ ಕಾಲೇಜುಆಡಿಟೋರಿಯಂ, ಡಿಜಿಟಲ್ ಗ್ರಂಥಾಲಯ ಕಟ್ಡಡ ಕಾಮಗಾರಿ ಪರಿಶೀಲಿಸಿ ಕೋವಿಡ್ ಲಸಿಕಾ ಕೇಂದ್ರಕ್ಕೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ನಂತರ ಪ್ರವಾಸಿ ಮಂದಿರದಲ್ಲಿ ಪಾಲಿಕೆ ಜನಪ್ರತಿನಿಧಿಗಳು, ಮುಖಂಡರೊಂದಿಗೂ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಸಚಿವರದ್ದು ಕಾಟಾಚಾರದ ಭೇಟಿ : ವಿಪಕ್ಷನಾಯಕ
ನಗರಾಭಿವೃದ್ಧಿ ಸಚಿವ ಬಸವರಾಜು ಅವರ ಭೇಟಿ ಹಿಂದಿನ ಭೇಟಿಗಿಂತಲೂ ಹೆಚ್ಚು ಕಾಟಾಚಾರದ ಭೇಟಿಯೆನಿಸಿತು. ನಗರದಲ್ಲಿ ಸಾವಿರ ಕೋಟಿಗೂ ಅಧಿಕ ವೆಚ್ಚದ ಸ್ಮಾರ್ಟ್‍ಸಿಟಿ, ಯುಜಿಡಿ, 24 ತಾಸು ನೀರು ಸರಬರಾಜು ಯೋಜನೆ, ರಸ್ತೆ ಅಭಿವೃದ್ಧಿ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಅನೇಕ ಲೋಪಗಳು ಮೇಲ್ನೋಟಕ್ಕೆ ರಾಚುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಸಚಿವರು ಪಾಲಿಕೆ ಜನಪ್ರತಿನಿಧಿಗಳು, ನಾಗರಿಕರ ಸಮಸ್ಯೆ ಆಲಿಸದೆ ಕೇವಲ ಅಧಿಕಾರಿಗಳು ಮಾತುಕೇಳಿ ಅವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡು ಮರಳಿದ್ದು ನಿಜಕ್ಕೂ ದುರದೃಷ್ಟಕರ. ಸಚಿವರೆದರು ಆಗುತ್ತಿರುವ ಅಧ್ವಾನ ಹೇಳಿಕೊಂಡರೂ ಅವರಿಂದ ಸೂಕ್ತ ಪ್ರತಿಸ್ಪಂದನೆ ದೊರೆಯಲಿಲ್ಲ ಎಂದು ಮಹಾನಗರಪಾಲಿಕೆ ವಿಪಕ್ಷ ನಾಯಕ ಕುಮಾರ್ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ