ನರೇಗಾ ಅಕ್ರಮಗಳಿಗೆ ಕಡಿವಾಣ ಹಾಕಿ – ಜಿ.ಎಸ್.ಬಸವರಾಜು

ತುಮಕೂರು :

      ಮಧುಗಿರಿ ತಾಲೂಕು ಮಿಡಿಗೇಶಿಯಲ್ಲಿ ನರೇಗಾ ಯೋಜನೆ ಕಾಮಗಾರಿಗಳನ್ನು ಯಂತ್ರೋಪಕರಣಗಳನ್ನು ಬಳಸಿ ರಾತ್ರಿ ವೇಳೆ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಸ್ಥಳೀಯ ಪ್ರಜಾಪ್ರಗತಿ ಪತ್ರಿಕೆಯಲ್ಲಿ ವರದಿಯಾಗಿದ್ದು, ಇಂತಹ ಲೋಪಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜ್ ತಾಕೀತು ಮಾಡಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ದಿಶಾ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ, ಅನುದಾನದ ಸದ್ಬಳಕೆಯಾಗಬೇಕು. ಸಾರ್ವಜನಿಕ ಉಪಯೋಗದ ರಸ್ತೆ, ಚೆಕ್‍ಡ್ಯಾಂ ನಿರ್ಮಾಣ, ಕೃಷಿ ಜಮೀನಿನಲ್ಲಿ ಸೌಲಭ್ಯಗಳ ನಿರ್ಮಾಣಕ್ಕೆ ಒತ್ತುಕೊಡಬೇಕು.
ಕಾಮಗಾರಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ ಆದ್ಯತೆ, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಕಾಲಮಿತಿಯಲ್ಲೇ ಕೂಲಿ ಪಾವತಿ ಸೇರಿದಂತೆ ಜಾಬ್ ಕಾರ್ಡ್‍ಗಳ ದುರುಪಯೋಗಕ್ಕೆ ಕಡಿವಾಣ ಹಾಕಬೇಕು ಎಂದು ಸಿಇಒಗೆ ಸೂಚಿಸಿದರು.

      ಪ್ರತಿಕ್ರಿಯಿಸಿದ ಸಿಇಒ ವಿದ್ಯಾಕುಮಾರಿ ಅವರು ನರೇಗಾ ಯೋಜನೆ ದುರ್ಬಳಕೆಗೆ ಸಂಬಂಧಿಸಿದಂತೆ ಎರಡು ಪ್ರಕರಣದಲ್ಲಿ ಒಂದರಲ್ಲಿ ಎಫ್‍ಐಆರ್ ದಾಖಲಿಸಿದ್ದು, ಜಿಪಂ ಯೋಜನಾಶಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮಿಡಿಗೇಶಿ ಗ್ರಾಪಂ ವ್ಯಾಪ್ತಿಯ ಕಾಮಗಾರಿ ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೇಂದ್ರದ ಯೋಜನೆ ಪ್ರಚುರಗೊಳಿಸಿ:

      ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಮತ್ತು ಶಾಲಾ ಕಟ್ಟಡ, ಶಾಲಾ ಶೌಚಾಲಯಗಳನ್ನು ನಿರ್ಮಿಸಬೇಕು. ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸಬೇಕು. ಜೊತೆಗೆ ಕೆರೆ-ಕಟ್ಟೆಗಳ ಅಭಿವೃದ್ಧಿಗೂ ಆದ್ಯತೆ ನೀಡಿ ಅಂತರ್ಜಲ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ರೈತರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಪ್ರಚುರಗೊಳಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.ಬಚ್ಚಲುಗುಂಡಿ ನಿರ್ಮಾಣದಿಂದ ನೀರು ಇಂಗಿ ಅಂತರ್ಜಲ ವೃದ್ಧಿಯಾಗಿದೆಯೇ? ಈ ಬಗ್ಗೆ ಪರಿಶೀಲನೆ ನಡೆಸಿರುವಿರಾ ಎಂದು ತರಾಟಗೆ ತೆಗೆದುಕೊಂಡರು .

      ಗುಡಿಸಲು ರಹಿತ ಬರೀ ಘೋಷಣೆಯಾಗಬಾರದು:

      ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಎಲ್ಲಾ ವೇತನ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಯಾವುದೇ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಬಾರದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಾಲಮಿತಿಯೊಳಗೆ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸಂಸದ ಜಿ.ಎಸ್.ಬಿ ಹಾಗೂ ನಾರಾಯಣಸ್ವಾಮಿ ಸೂಚಿಸಿದರು.
ಸಮನ್ವಯತೆಯಿಂದ ಗಿಡ ನೆಡಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಪ್ರಸ್ತುತ ಮಳೆಗಾಲ ಪ್ರಾರಂಭಗೊಂಡಿರುವುದರಿಂದ ನರೇಗಾ ಯೋಜನೆಯಡಿ ಅರಣ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಶಾಲೆಗಳಲ್ಲಿ ಗಿಡಗಳನ್ನು ನೆಡಬೇಕು ಎಂದು ನಿರ್ದೇಶಿಸಿದರು.

     ಜಿಪಂ ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2021ನೇ ಸಾಲಿಗೆ ಒಟ್ಟು 6200000 ಮಾನವ ದಿನಗಳ ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಈ ಪೈಕಿ ಜೂನ್ 19ರವರೆಗೆ 1158647 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ದಿಶಾ ಪೋರ್ಟಲ್ ಲೋಕಾರ್ಪಣೆ: 

      ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ತುಮಕೂರು ದಿಶಾ ಸಮಿತಿ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜಿಲ್ಲೆಯ ಸಂಪೂರ್ಣ ಡಾಟಾ ಮಾಹಿತಿ ಲಭ್ಯವಾಗಬೇಕು. ಕೆರೆಗಳ ನಾಲಾ ಒತ್ತುವರಿ ತೆರವಾಗಬೇಕು. ಸ್ಮಾರ್ಟ್‍ಸಿಟಿ ಲೋಪಗಳನ್ನು ಸರಿಪಡಿಸಬೇಕು ಎಂದರು.

      ಸಭೆಗೂ ಆರಂಭಕ್ಕೂ ಸಿಇಒ ವಿದ್ಯಾಕುಮಾರಿ ಅವರು ‘ದಿಶಾ’ ಜಾಲತಾಣ ಲೋಕಾರ್ಪಣೆಗೊಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಉಪವಿಭಾಗಾಧಿಕಾರಿ ಅಜಯ್, ಆಯುಕ್ತೆ ರೇಣುಕಾ ದಿಶಾಸಮಿತಿ ಸದಸ್ಯರಾದ ಲೋಕೇಶ್ವರಿ ಪ್ರಭು, ಪ್ರೇಮಾಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರಕಾರಿ ಶಾಲೆಗಳಲ್ಲಿ, ದಲಿತರು, ಹಿಂದುಳಿದವರು ಓದುತ್ತಿದ್ದಾರೆಂದು ತಾತ್ಸಾರವೇ?

      ಸರಕಾರಿ ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ ಎರಡು ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೃಪ್ತಿದಾಯಕವಾಗಿಲ್ಲ. ಶಾಲಾ ಆವರಣ, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯವೂ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದ ವೈ.ಎ.ನಾರಾಯಣಸ್ವಾಮಿ ಸರಕಾರಿ ಶಾಲೆಗಳಲ್ಲಿ ದಲಿತರು, ಹಿಂದುಳಿದವರು ಓದುತ್ತಿದ್ದಾರೆಂದು ತಾತ್ಸಾರವೇ ಎಂದು ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಪುರಸ್ಕøತ ಯೋಜನೆಗಳ ಪ್ರಚಾರಫಲಕಗಳನ್ನೇ ಹಾಕುತ್ತಿಲ್ಲ. ಎರಡು ವರ್ಷ ಆಗಲಿ ಎಂದು ಸುಮ್ಮನಿದ್ದೆ. ಇನ್ನು ಮುಂದೆ ಬಿಡುವುದಿಲ್ಲ ಎಂದು ಸಾಮಾಜಿಕ , ಪ್ರಾದೇಶಿಕ ಅರಣ್ಯ ಹಾಗೂ ಶಿಕ್ಷಣ ಇಲಾಖೆ ಹಾಗೂ ನರೇಗಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆರ್ಥಿಕ ವೆಚ್ಚ-ಭೌತಿಕ ಪ್ರಗತಿಗೂ ತಾಳೆಯಾಗಬೇಕು: ಡಿಸಿ

      ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸಂಸದರ ನಿರ್ದೇಶನದಂತೆ ನರೇಗಾ ಯೋಜನೆಯಡಿ ಅನುಷ್ಟಾನಕ್ಕಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮುಂದಿನ ಸಭೆ ವೇಳೆಗೆ ಈಗ ಸೂಚಿಸಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಆರ್ಥಿಕ ವೆಚ್ಚಕ್ಕೂ ಭೌತಿಕ ಪ್ರಗತಿಗೂ ತಾಳೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link