ಮಕ್ಕಳಿಗೆ ಕೊರೊನಾ : ಸುರಕ್ಷತಾ ಕ್ರಮಗಳ ಪಾಲನೆಯೇ ಪರಿಹಾರ

 ತುಮಕೂರು :

      ಕೋವಿಡ್ 3ನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದು ಆತಂಕಪಡದೇ ಮನೆಯಲ್ಲಿನ ಹಿರಿಯರು, ಮಕ್ಕಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡಿ ರೋಗ ನಿರೋಧಕಶಕ್ತಿ ಹೆಚ್ಚಿಸಬೇಕು.., ಇದು ಪ್ರಜಾಪ್ರಗತಿ- ಪ್ರಗತಿ ವಾಹಿನಿಯಿಂದ ಏರ್ಪಡಿಸಿದ್ದ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ರಕ್ಷಣೆ ಕುರಿತ ವಿಶೇಷ ಪೋನ್ ಇನ್ ಸಂವಾದದಲ್ಲಿ ಮಕ್ಕಳ ಸಂರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರ ಒಮ್ಮತಾಭಿಪ್ರಾಯ.

ಆತಂಕ ಬೇಡ, 3ನೇ ಅಲೆ ಎದುರಿಸಲು ಜಿಲ್ಲೆ ಸಜ್ಜಾಗಿದೆ: ನಟರಾಜ್

      ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್ ಅವರು 18 ವರ್ಷದೊಳಗಿನ ಮಕ್ಕಳಿಗೆ ಇನ್ನೂ ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಪ್ರಾಯೋಗಿಕ ಹಂತದಲ್ಲಿರುವುದರಿಂದ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದೊಂದೇ ಬಹುಮುಖ್ಯ ಕ್ರಮವೆನಿಸಿದೆ. ಕೋವಿಡ್ ಎರಡು ಅಲೆಗಳಲ್ಲಿ ಜಿಲ್ಲೆಯ 10,004 ಮಕ್ಕಳು ಸೋಂಕಿಗೆ ಗುರಿಯಾಗಿದ್ದು, 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಜ್ಞ ವೈದ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

      8136 ಅಪೌಷ್ಠಿಕ ಮಕ್ಕಳ ಚೇತರಿಕೆಗೆ ಕ್ರಮ:

      ಅಪೌಷ್ಠಿಕತೆಯಿರುವ 8136 ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕಾಂಶ ಹೆಚ್ಚಿಸುವ ಸ್ಪಿರುಲಿನ ಚಿಕ್ಕಿ, 2 ವರ್ಷದೊಳಗಿನ ಮಕ್ಕಳಿಗೆ ಬೇಳೆಕಾಳುಗಳ ಪೌಡರ್ ಹಾಗೂ ಮುದ್ದೇನಹಳ್ಳಿ ಸತ್ಯಸಾಯಿ ಸಂಸ್ಥೆ ಪೂರೈಸುವ ಸಾಯಿಶ್ಯೂರ್ ಪೌಷ್ಟಿಕಾಂಶದ ಆಹಾರದ ಪ್ಯಾಕೇಟ್ ಅನ್ನು ವಿತರಿಸಲು ತಯಾರಿ ನಡೆಸಲಾಗಿದೆ. ಅಪೌಷ್ಠಿಕ ಮಕ್ಕಳಷ್ಟೇ ಅಲ್ಲ 18 ವರ್ಷದೊಳಗಿನ 4,82,651 ಮಕ್ಕಳ ಆರೋಗ್ಯ, ಆಹಾರದ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. ಜಿಲ್ಲಾ, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಕೋವಿಡ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್, ಮಕ್ಕಳ ಸ್ನೇಹಿ ಕೋವಿಡ್ ಕೇರ್ ಸೆಂಟರ್, ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಕೇರ್ ಸೆಂಟರ್ ಅನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಅಪೌಷ್ಠಿಕ ಮಕ್ಕಳು ತಾಯಂದಿರು ಹಾಗೂ 6 ವರ್ಷದೊಳಗಿನ ತಂದೆ ತಾಯಿ ಇಬ್ಬರಿಗೂ ಆದ್ಯತಾ ಗುಂಪುಗಳಾಗಿ ಪರಿಗಣಿಸಿ ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಹಾಕಲು ರಾಜ್ಯದಲ್ಲಿ ಮಾದರಿ ತೀರ್ಮಾನ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಾರ್ಡಿಗೆ ಇಬ್ಬರು ಪೌಷ್ಠಿಕ ಮಿತ್ರರ ನಿಯೋಜನೆ:

      ಮಕ್ಕಳ ಸುತ್ತಾ ಕೋವಿಡ್ ರಕ್ಷಣಾ ಕೋಟೆ ನಿರ್ಮಿಸಲು ನಮ್ಮ ಇಲಾಖೆ ಆರೋಗ್ಯ ಇಲಾಖೆ, ಮಕ್ಕಳ ರಕ್ಷಣಾ ಘಟಕ ಜಿಲ್ಲಾಡಳಿತ ಸರ್ವ ಸಿದ್ದತೆಗಳನ್ನು ನಡೆಸಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರೊಂದಿಗೆ ಪ್ರತೀ ಗ್ರಾಮದಲ್ಲಿ ವಾರ್ಡಿಗೆ ಇಬ್ಬರನ್ನು ಪೌಷ್ಠಿಕ ಮಿತ್ರರೆಂದು ಗುರುತಿಸಿ ಅವರ ಮೂಲಕ ಸೋಂಕು ಕಂಡುಬಂದ ಮಕ್ಕಳ ಕುಟುಂಬಕ್ಕೆ ಸಹಕಾರ ಅಗತ್ಯ ಮಾಹಿತಿ ಸೇವೆ ಒದಗಿಸಲು ಹೊಸ ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಮನೆ ಅಂಗಳದಲ್ಲಿ ಅಂಗನವಾಡಿ ಪರಿಕಲ್ಪನೆಯಡಿ ಯೂಟ್ಯೂಬ್ ಲಿಂಕ್‍ಗಳನ್ನು ಪೋಷಕರಿಗೆ ಕಳುಹಿಸಿ ಶಾಲಾಪೂರ್ವ ಕಲಿಕೆ, ಬಣ್ಣ ಹಚ್ಚುವುದು, ಕಲಾಕೃತಿಗಳ ತಯಾರಿ, ಮನೆ ಆಟಗಳ ಚಟುವಟಿಕೆಗಳನ್ನು ಕಲಿಸುವ ಪ್ರಯತ್ನ ಮಾಡಲಾಗಿದೆ.

      ಅಂಗನವಾಡಿ ಕಾರ್ಯಕರ್ತೆಯರ ಮೂಲಕ 3136 ವಲಸಿಗ ಕಾರ್ಮಿಕರು ಕಟ್ಡಡ ಕಾರ್ಮಿಕರ ಮಕ್ಕಳು, 6 ವರ್ಷದೊಳಗಿನ ಮಕ್ಕಳು ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಮನೆ ಮನೆಗೆ ಪೂರೈಸಲಾಗುತ್ತಿದೆ.ಇದಕ್ಕೆ ಎನ್‍ಜಿಓಗಳು ಸಾಥ್ ನೀಡಿವೆ. ಕಳೆದ ಎರಡು ಕೋವಿಡ್ ಅಲೆಯನ್ನು ನಿಯಂತ್ರಿಸುವಲ್ಲಿ ಆಶಾ,ಅಂಗನವಾಡಿ,ಆರೋಗ್ಯ ಕಾರ್ಯಕರ್ತರ ಪಾತ್ರ ಮಹತ್ತರವಾಗಿದ್ದು, ಪ್ರತೀ ಮನೆ ಮನೆಗೂ ತೆರಳಿ ಸೋಂಕಿತರ ಮಾಹಿತಿ ಕಲೆಹಾಕಿ, ಪ್ರಾಣ ಪಣಕ್ಕಿಟ್ಟು ಸೀಲ್‍ಡೌನ್ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಕೊರೊನಾ ವಾರಿಯರ್ಸ್ ಆಗಿ ಸೇವೆ ಮುಂದುವರಿಸಿದ್ದು, ಸರಕಾರ ಆಶಾ ಕಾರ್ಯಕರ್ತೆಯರಿಗೆ 2000 ಪ್ರೋತ್ಸಾಹಧನ, ಒಂದು ವೇಳೆ ಮೃತಪಟ್ಟರೆ 30 ಲಕ್ಷ ಪರಿಹಾರ ನೀಡುವ ವ್ಯವಸ್ಥೆಯನ್ನು ಮಾಡಿದೆ ಎಂದರು.

ವಾಂತಿ ಭೇದಿ ಕೂಡ ಕೊರೊನಾ ಲಕ್ಷಣವೆಂದರೆ ಪೋಷಕರು ನಂಬುವುದಿಲ್ಲ: ಡಾ.ರಜನಿ

      ಜಿಲ್ಲಾಸ್ಪತ್ರೆ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಮಕ್ಕಳ ತಜ್ಞೆ ಡಾ.ರಜನಿ ಅವರು ಮಾತನಾಡಿ ನೆಗಡಿ, ಕೆಮ್ಮ ಮೈಕೈ ನೋವು ಜ್ವರ ಮಾತ್ರ ಕೊರೊನಾ ಲಕ್ಷಣವಲ್ಲ. ಅಲೆಯಿಂದ ಅಲೆಗೆ ಕೊರೊನಾ ಲಕ್ಷಣಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ. 6 ವರ್ಷದೊಳಗಿನ ಮಕ್ಕಳಿಗೆ ಜ್ವರವೇ ಬರೋಲ್ಲ. ವಾಂತಿಭೇದಿ, ಮೈ ಚರ್ಮದ ಮೇಲೆ ದದ್ದು, ಹಸಿವು ಕಡಿಮೆಯಾಗುವುದು ಕೋವಿಡ್ ಲಕ್ಷಣವಾಗಿದೆ.ಇದನ್ನು ಪೋಷಕರು ಹೇಳಿದರೆ ನಂಬುವುದಿಲ್ಲ ಬಾಲಗ್ರಹ ಆಗಿದೆ, ಈ ಹಣ್ಣು ತಿಂದು ಹೀಗಾಯ್ತು ಎಂದು ತೋಚಿದ ಕಾರಣ ಹೇಳ್ತಾರೆ. ಆದರೆ ತುಮಕೂರು ಜಿಲ್ಲಾಸ್ಪತ್ರೆ 3 ವರ್ಷದ ಮಗುವಿಗೆ ವಾಂತಿ-ಭೇದಿ ಕಾಣಿಸಿಕೊಂಡು ಟೆಸ್ಟ್ ಮಾಡಿದಾಗ ಪಾಸಿಟಿವ್ ಇರುವುದು ಕಂಡುಬಂದಿದೆ. ಆ ಮಗುವಿನ ಸಂಪರ್ಕಕ್ಕೆ ಬಂದ ಇಡೀ ಕುಟುಂಬಸ್ಥರಿಗೆ ಸೋಂಕು ಆವರಿಸಿತ್ತು. ಹಾಗಾಗಿ ಮಕ್ಕಳಿಗೆ ಯಾವುದೇ ತರಹದ ರೋಗ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ಸರಿಯಾದ ತಪಾಸಣೆ ಮಾಡಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಹೇಳಿದರು.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಎದುರಾದರೆ ಹತ್ತು ವರ್ಷದೊಳಗಿನ ಸೋಂಕಿತ ಮಕ್ಕಳೊಡನೆ ತಾಯಂದಿರು ಇರುವ ವ್ಯವಸ್ಥೆಯನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಮಾಡಿಕೊಳ್ಳಲಾಗಿದೆ. ರಾಜಧಾನಿ ಬಿಟ್ಟರೆ ಅತೀ ಹೆಚ್ಚು ಅಂದರೆ 63 ಸಂಖ್ಯೆಯ ಮಕ್ಕಳ ತಜ್ಞ ವೈದ್ಯರು ತುಮಕೂರು ಜಿಲ್ಲೆಯಲ್ಲಿದ್ದು, ಡಿಎನ್‍ಬಿ, ಪಿಜಿ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಮಕ್ಕಳ ತಂದೆ –ತಾಯಿ ಇಬ್ಬರಿಗೂ ಕೋವಿಡ್ ವ್ಯಾಕ್ಸಿನ್ ಹಾಕಿಸುವ ಮೂಲಕ ಪೋಷಕರಿಂದ ಮಕ್ಕಳಿಗೆ ಸೋಂಕು ಹರಡದಂತೆ ತಡೆಯುವ ಕ್ರಮವನ್ನು ರಾಜ್ಯದಲ್ಲೇಮೊದಲೆಂಬಂತೆ ರಿವರ್ಸ್ ಪ್ರೊಟೆಕ್ಷನ್ ಹೆಸರಲ್ಲಿ ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು, ತಿಪಟೂರಲ್ಲಿ ಪ್ರಯೋಗಾರ್ಥ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಜೊತೆಗೆ ಸೋಂಕಿತ ಮಕ್ಕಳಲ್ಲಿ ಶೇ.90ರಷ್ಟು ಮಂದಿಗೆ ಆರಂಭಿಕ ಲಕ್ಷಣಗಳು ಮಾತ್ರ ಇರುತ್ತದೆ. ಮನೆ, ಕೇರ್‍ಸೆಂಟರ್‍ಗಳಲ್ಲೇ ಗುಣಪಡಿಸಿಕೊಳ್ಳಬಹುದು. ಶೇ 5 ರಿಂದ 6ರಷ್ಟು ಮಂದಿ ಮಕ್ಕಳಿಗೆ ಮಾತ್ರ ಐಸಿಯು, ಆಕ್ಸಿಜನ್ ಬೆಡ್‍ಗಳಚಿಕಿತ್ಸೆ ಅವಶ್ಯಕತೆ ಇರುತ್ತದೆ. ಎಲ್ಲಾ ಮಾದರಿಯ 600ಬೆಡ್‍ಗಳು ಜಿಲ್ಲೆಯಲ್ಲಿ ಲಭ್ಯವಿದ್ದು, ಮಕ್ಕಳ ಪೋಷಕರು ಆತಂಕ ಪಡಬೇಕಿಲ್ಲ.ಸೋಂಕು ಬಂದರೂ ಬೇಗ ಗುಣಮುಖರಾಗುತ್ತಾರೆ ಎಂದು ನುಡಿದರು.

ಮಕ್ಕಳಿಗೆ ಸೋಂಕು ಹರಡದಂತೆ ತಡೆಯಲು ಪೋಷಕರ ಜವಾಬ್ದಾರಿ

  1.       ಮನೆಯಲ್ಲಿನ ಹಿರಿಯರು, ಪೋಷಕರು ವ್ಯಾಕ್ಸಿನ್ ಪಡೆದುಕೊಳ್ಳುವುದು.
  2. ಹೊರಗಿನಿಂದ ಬಂದವರು ಶೂ ಚಪ್ಪಲಿಯೊಂದಿಗೆ ಮನೆಯೊಳಗೆ ಪ್ರವೇಶಿಸಬಾರದು.
  3. ಕೆಲಸದಿಂದ ಬಂದವರು ಶುಚಿಯಾಗಿ ಬಟ್ಟೆ ಬದಲಾಯಿಸದೆ ಮಕ್ಕಳನ್ನು ತಬ್ಬಿಕೊಳ್ಳಬೇಡಿ.
  4. ಹೊರಗಿನ ಆಹಾರ ಪದಾರ್ಥಗಳಾದ ಜಂಕ್‍ಪುಡ್, ಕೋಲ್ಡ್ ಪದಾರ್ಥ ಕೊಡಬೇಡಿ.
  5. 5ವರ್ಷ ಮೇಲ್ಪಟ್ಟ ಮಕ್ಕಳು ಸರಿಯಾಗಿ ಮಾಸ್ಕ್ ಧರಿಸುವ ಅಭ್ಯಾಸ ರೂಡಿಸಿ.
  6. ಮಕ್ಕಳು ಆಟೋಟ,ಕಲಿಕಾ ಚಟುವಟಿಕೆಯಲ್ಲಿ ತೊಡಗಲಿ. ಆದರೆ ಅಂತರ ಕಾಪಾಡಬೇಕು.
  7. ಹೊರಗಿನಿಂದ ಮಕ್ಕಳು ಮನೆಗೆ ಮರಳಿದ ಕೂಡಲೇ ಅವರ ಕೈ ತೊಳೆಸಬೇಕು, ಮಕ್ಕಳು ಬಳಸುವ ಆಟಿಕೆ ವಸ್ತುಗಳನ್ನು ಸೋಪ್ ನೀರಿಂದ ತೊಳೆದು ಬಿಸಿಲಲ್ಲಿ ಒಣಗಿಸಿ.

      ಮೊಳಕೆ ಕಾಳು, ಬೇಯಿಸಿರುವ ಮೊಟ್ಟೆ, ತರಕಾರಿ, ಬೆಲ್ಲ, ಮಿಠಾಯಿ, ಹೆಸರು ಉಂಟೆ, ಪೊಂಗಲ್, ಕಿಚಡಿ, ಪರಂಗಿಹಣ್ಣು, ಹಲಸಿನಹಣ್ಣು, ಬೇಯಿಸಿದ ಸೊಪ್ಪು ಹೀಗೆ ವಿವಿಧ ಪೋಷಕಾಂಶ ಕೊಡುವ ಆಹಾರ, ತರಕಾರಿಗಳನ್ನು ಮಕ್ಕಳಿಗೆ ಕೊಡಿ.
ಕೋವಿಡ್ ಎರಡನೇ ಅಲೆ ತಗ್ಗಿತೆಂದು ಎಲ್ಲೆಂದರಲ್ಲಿ ಸುತ್ತಾಡಲು ಹೋಗಿ ಕೊರೊನಾವನ್ನು ತಾವೂ ತಂದುಕೊಂಡು ಮಕ್ಕಳಿಗೆ ಹರಡಬೇಡಿ.
(ಸಲಹೆ: ಡಾ.ರಜನಿ, ಮಕ್ಕಳ ತಜ್ಞ ವೈದ್ಯರು.)

ಫೋನ್ ಇನ್‍ನಲ್ಲಿ ಕೇಳಿಬಂದ ಪ್ರಶ್ನೆಗಳು

      ತುಮಕೂರು ನಗರ ವಾಸಿ ಅರುಣ್‍ಕುಮಾರ್ ಅವರು 5 ವರ್ಷದೊಳಗಿನ ಮಕ್ಕಳನ್ನು ಹೊರಗಡೆ ಟ್ರಕ್ಕಿಂಗ್ ಕರೆದೊಯ್ಯಬಹುದೇ ಎಂದು ಕೇಳಿದರೆ, ಉಪ್ಪಾರಹಳ್ಳಿ ವಾಸಿ ಸೌಭಾಗ್ಯ ವೀರಣ್ಣ ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಧಾನ, ನೀರಜ ಎಂಬ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಶಾಲಾ-ಕಾಲೇಜಿಗೆ ಹೋಗುವಾಗ ಸುರಕ್ಷತಾ ಕ್ರಮಗಳ ಪಾಲನೆಯ ಕುರಿತು, ಸವಿತಾ ಸೋಮಶೇಖರ್ ಅವರ ಹೃದಯ ತೊಂದರೆಯಿಂದ ಭಾದಿಸುತ್ತಿರುವ ಮಕ್ಕಳ ರಕ್ಷಣೆ ಕುರಿತು ಹೀಗೆ ಜಿಲ್ಲೆಯ ವಿವಿಧೆಡೆಯಿಂದ ಹಲವು ಮಕ್ಕಳ ಪೋಷಕರು ಪ್ಯಾನೆಲ್‍ನಲ್ಲಿ ಭಾಗವಹಿಸಿದ್ದ ಮಕ್ಕಳ ಕ್ಷೇತ್ರದ ತಜ್ಞರಿಗೆ ಪ್ರಶ್ನೆಗಳನ್ನು ಕೇಳಿದರು.

      ಎಲ್ಲರ ಪ್ರಶ್ನೆಗಳಿಗೂ ಆಲಿಸಿದ ಪ್ಯಾನೆಲಿಸ್ಟ್‍ಗಳು ಕೋವಿಡ್ ಭೀತಿ ಸೃಷ್ಟಿಸಿ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕದಂತೆ, ಹೊರಗೆ ಕರೆದುಕೊಂಡು ಹೋದಾಗ ಸುರಕ್ಷತಾ ಕ್ರಮ ಪಾಲಿಸುವ ಕುರಿತು, ಶಾಲಾ,ಕಾಲೇಜು ತೆರೆದ ಮೇಲೂ ಗುಂಪಾಗಿ ಒಟ್ಟಿಗೆ ಇರದೆ ಅಂತರ ಕಾಪಾಡುವ ಬಗ್ಗೆ ಮನದಟ್ಟು ಮಾಡಿದರು. ಹೃದ್ರೋಗ , ಬ್ಲಡ್‍ಕ್ಯಾನ್ಸರ್ ಮತ್ತಿತರ ತೀವ್ರ ತೊಂದರೆ ಇರುವ ಮಕ್ಕಳಿಗೆ ಸಕಾರಣ ಒದಗಿಸಿದಲ್ಲಿ ಅನುಬಂಧ -3 ಪ್ರಪತ್ರದಡಿ 18 ವರ್ಷದೊಳಗಿನವರಿದ್ದರೂ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಾಲ ಮಂದಿರದಲ್ಲಿರುವ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ: ವಾಸಂತಿ ಉಪ್ಪಾರ್

      ಜಿಲ್ಲೆಯಲ್ಲಿ ಕಳೆದ ಎರಡು ಅಲೆಯಲ್ಲಿ 10,004 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ ಬಾಲ ಮಂದಿರದಲ್ಲಿರುವ ಮಕ್ಕಳಿಗೆ ತಗುಲಿದ ಸಂಖ್ಯೆ ಕಡಿಮೆ ಇತ್ತು. ಮಕ್ಕಳ ರಕ್ಷಣಾ ಘಟಕಗಳಲ್ಲಿ ದಾಖಲಾಗಿರುವ ಮಕ್ಕಳ ಆರೈಕೆ ಬಗ್ಗೆ ಹೆಚ್ಚು ನಿಗಾ ವಹಿಸಿದ್ದು, ಹೊರಗಿನಿಂದ ರಕ್ಷಿಸಿ ಕರೆತಂದ ಇಬ್ಬರು ಮಕ್ಕಳಿಂದ ಮಂದಿರದಲ್ಲಿದ್ದ ಇಬ್ಬರು ಮಕ್ಕಳಿಗೆ ಸೋಂಕು ವ್ಯಾಪಿಸಿತು ಬಿಟ್ಟರೆ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. 18 ವರ್ಷದೊಳಗಿನ ಮಕ್ಕಳ ಪೋಷಕರಿಗೆ ವ್ಯಾಕ್ಸಿನ್ ಕೊಡಲು ಜಿಲ್ಲಾಡಳಿತ ತೀರ್ಮಾನಿಸಿರುವಂತೆ, ಬಾಲ ಮಂದಿರಗಳಲ್ಲಿ ಮಕ್ಕಳ ಆರೈಕೆ ಮಾಡುತ್ತಿರುವ ಸಿಬ್ಬಂದಿ ಹಾಗೂ ಮಕ್ಕಳ ರಕ್ಷಣಾ ಘಟಕ, ಕಲ್ಯಾಣ ಸಮಿತಿ, ತನಿಖಾ ಸಮಿತಿ, ಚೈಲ್ಡ್ ಲೈನ್ ಸದಸ್ಯರಿಗೂ ವ್ಯಾಕ್ಸಿನ್ ಹಾಕಿಸಿ ಅವರಿಂದ ಸಾಂಸ್ಥಿಕ ಆಶ್ರಯ ಪಡೆದಿರುವ ಮಕ್ಕಳಿಗೂ ಸೋಂಕು ವಿಸ್ತರಿಸಬಾರದೆಂದು ಕ್ರಮ ವಹಿಸಲಾಗಿದೆ.

      ಹಿಂದೆ ಉಪನ್ಯಾಸ, ವಿವಿಧ ಅರಿವು ಕಾರ್ಯಕ್ರಮಗಳನ್ನು ಬಾಲಮಂದಿರಗಳಲ್ಲಿ ಏರ್ಪಡಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈಗ ಅದಕ್ಕೂ ಬ್ರೇಕ್ ಹಾಕಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅನಾವಶ್ಯಕವಾಗಿ ಯಾರನ್ನೂ ಒಳಗೆ ಬಿಡುತ್ತಿಲ್ಲ. ಇನ್ನೂ ಬಾಲಮಂದಿರದ ಆಶ್ರಯದಲ್ಲಿರುವ ಮಕ್ಕಳಿಗೆ ಆನ್‍ಲೈನ್ ತರಗತಿಗಳ ಜೊತೆಗೆ ಅವರುಲವಲವಿಕೆಯಿಂದರಲ್ಲೂ ವಿವಿಧ ನೃತ್ಯ, ಆಟಗಳನ್ನು ಆಡಿಸಲಾಗುತ್ತದೆ. ದೇಹ ಮತ್ತು ಮನಸ್ಸು ಎರಡನ್ನೂ ಕ್ರಿಯಾಶೀಲವಾಗಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇನ್ನೂ ಫೋಸ್ಕೋ ಪ್ರಕರಣದಲ್ಲಿ ರಕ್ಷಿಸಲ್ಪಟ್ಟ ಮಕ್ಕಳಿಗೆ ಆಶ್ರಯ ಕಲ್ಪಿಸುವಾಗ ಅವರಿಗೆ ಕೋವಿಡ್ ಟೆಸ್ಟ್ ಮಾಡಿ, ಫಲಿತಾಂಶ ಪಾಸಿಟಿವ್ ಆಗಲಿ, ನೆಗೆಟಿವ್ ಆಗಲಿ ಕ್ವಾರಂಟೈನ್‍ನಲ್ಲಿ 14 ದಿವಸಗಳ ಕಾಲ ಬಿಟ್ಟು ನಂತರ ಇತರ ಮಕ್ಕಳೊಂದಿಗೆ ಬೆರೆಯಲು ಬಿಡಲಾಗುತ್ತಿದೆ ಎಂದರು.

      ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡವರಿಗೆ ಬಾಲಸೇವಾ ಯೋಜನೆ: ಕೊರೊನಾದಿಂದ ತಂದೆ-ತಾಯಿ, ಇಲ್ಲವೇ ಒಬ್ಬರು ಮೃತಪಟ್ಟಿದ್ದರೆ ಅಂತಹ ಮಕ್ಕಳಿಗೆ ಬಾಲ ಸೇವಾ ಯೋಜನೆ ಜಾರಿಗೆ ತಂದಿದ್ದು, ಇದರಡಿ ಮಾಸಿಕ 3.500 ರೂ.ಸಹಾಯಧನ, ಆ ಮಕ್ಕಳಿ ಹತ್ತನೇ ತರಗತಿ ಪೂರೈಸಿದ್ದರೆ ಲ್ಯಾಪಟಾಪ್/ ಟ್ಯಾಬ್ ಹಾಗೂ 21 ವರ್ಷ ತುಂಬಿದ ಹೆಣ್ಣುಮಕ್ಕಳ ಮದುವೆ, ಉನ್ನತ ಶಿಕ್ಷಣ ಇಲ್ಲವೇ ಸ್ವ ಉದ್ಯೋಗಕ್ಕೆ 1 ಲಕ್ಷ ಸಹಾಯಧನ ನೀಡಲಾಗುತ್ತದೆ. ಕುಟುಂಬ ಸದಸ್ಯರು ಯಾರು ಪೋಷಕರಿಬ್ಬರನ್ನು ಕಳೆದುಕೊಂಡ ಮಕ್ಕಳನ್ನು ಇರಿಸಿಕೊಳ್ಳಲು ಮುಂದೆ ಬರದಿದ್ದರೆ ಅವರನ್ನು ಮಕ್ಕಳ ಪಾಲನಾ ಸಂಸ್ಥೆಗೆ ದಾಖಲಿಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿಪೋಷಕರಿಬ್ಬರನ್ನು ಕಳೆದುಕೊಂಡ ಇಬ್ಬರು ಮಕ್ಕಳಿದ್ದು, 56 ಮಕ್ಕಳು ಏಕ ಪೋಷಕರನ್ನು ಕಳೆದುಕೊಂಡಿದ್ದಾರೆ. ಏಕ ಪೋಷಕರನ್ನು ಕಳೆದುಕೊಂಡವರಿಗೆ ಬಾಲ ಹಿತೈಷಿ ಯೋಜನೆ ಮೂಲಕ ಅವರಲ್ಲಿ ಮಾನಸಿಕ, ನೈತಿಕ, ಸಾಮಾಜಿಕ ನೆರವು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

      ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ತಜ್ಞರ ಮಾರ್ಗದರ್ಶನದೊಂದಿಗೆ ಮಕ್ಕಳಿಗೆ ಕಾಡುತ್ತದೆ ಎನ್ನಲಾದ 3 ಅಲೆಯನ್ನುಎದುರಿಸಲು ಸರ್ವರೀತಿಯಲ್ಲಿ ಸಜ್ಜಾಗಿದ್ದು, ಪೋಷಕರು ತೀವ್ರ ಆತಂಕಪಡುವುದು ಬೇಡ.ಸುರಕ್ಷತಾ ಕ್ರಮಗಳನ್ನು ಕಡ್ಡಾಯ ಅನುಸರಿಸಿ.ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆಯಾಗದಂತೆ ನೋಡಿಕೊಳ್ಳಿ. ಆಡಳಿತ ಅಗತ್ಯ ಸಹಕಾರ, ಮಾರ್ಗದರ್ಶನ ನೀಡಲು ಸದಾ ತಯಾರಿದೆ.

-ನಟರಾಜ್ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

      ಅತಿಯಾದರೆ ಅಮೃತವೂ ವಿಷವಾಗುತ್ತದೆ. ಮಕ್ಕಳಿಗೆ ಸ್ಟೀಮ್ ಅಬೆ, ಮೆಣಸುಜೀರಿಗೆ, ಧನಿಯಪುಡಿ ಕಷಾಯಗಳನ್ನು ಹೆಚ್ಚಾಗಿ ಕೊಡುವುದನ್ನು ಮಾಡಬೇಡಿ. ಅಶ್ವಗಂಧ, ತುಳಸಿ, ಅಮೃತಬಳಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ನಿಜ. ಆದರೆ ಅದು ಸೀಮಿತ ಪ್ರಮಾಣದಲ್ಲಿರಬೇಕು. ಮನೆ ಮದ್ದುಗಳಿಂದಲೇ ಕೊರೊನಾ ಹುಷಾರಾಗುವ ಆಗಿದ್ದರೆ ಕೋವಿಡ್ ವ್ಯಾಕ್ಸಿನ್ ಬೇಕಿರಲಿಲ್ಲ. ಹಾಗಾಗಿ ಮಕ್ಕಳು ಸೋಂಕಿತರಾದರೆ ಭಯ ಪಡದೆ ವಾಟ್ಸಾಪ್ ಫೇಸ್‍ಬುಕ್‍ಗಳ ಪ್ರಯೋಗ ಮಾಡದೆ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.

-ಡಾ.ರಜನಿ ಮಕ್ಕಳ ತಜ್ಞ ವೈದ್ಯರು.

      ಯಾವುದೇ ಅನಾಥ ಮಕ್ಕಳನ್ನು ಕಾನೂನಿನ ಪ್ರಕಾರವೇ ನೋಂದಾವಣಿ ಮಾಡಿ ದತ್ತು ಪಡೆಯಬೇಕಿದೆ. ಕೋವಿಡ್‍ನಿಂದ ಪಾಲಕರು ಕಳೆದುಕೊಂಡಿದ್ದಾರೆಂದ ಕರುಣೆಯಿಂದ ತಮ್ಮ ಮನೆಗೆ ಕರೆದೊಯ್ಯುವಂತಿಲ್ಲ. ತಂದೆ-ತಾಯಿ ಇಬ್ಬರು ಇಲ್ಲದಿದ್ದ ಪಕ್ಷದಲ್ಲಿ ಮಕ್ಕಳನ್ನು ಸಾಕುವ ಹೊಣೆಗಾರಿಕೆಯನ್ನು ಅವರ ಹತ್ತಿರದ ಬಂಧುಗಳಿಗೆ ನೀಡಲಾಗುತ್ತದೆ. ಮಾಸಿಕ ಸಹಾಯಧನವನ್ನು ಅವರಿಗೆ ಒದಗಿಸಲಾಗುತ್ತದೆ. ಕೋವಿಡ್‍ನಿಂದ ತಂದೆ ಅಥವಾ ತಾಯಿ ಕಳೆದುಕೊಂಡು ನೊಂದ ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಮಾಡಲು ಮಾರ್ಗದರ್ಶಕರನ್ನು ಆಯ್ಕೆ ಮಾಡುತ್ತಿದ್ದು ಆಸಕ್ತರು http:/icpskarnataka. gov.in ನಲ್ಲಿ ನೋಂದಾಯಿಸಿ.

-ವಾಸಂತಿ ಉಪ್ಪಾರ್, ಮಕ್ಕಳರಕ್ಷಣಾಧಿಕಾರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap