ತುಮಕೂರು :
ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಬಾಕಿ ಉಳಿದಿರುವ ಅಂದಾಜು 6000 ಅರ್ಜಿಗಳನ್ನು ಇನ್ನು ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸಲು ವಿಶೇಷ ಗಮನಹರಿಸಲಾಗಿದೆ ಎಂದು ಗಣಿಖಾತೆ ಸಚಿವ ಮುರುಗೇಶ್‍ನಿರಾಣಿ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ತರಲಾಗಿದೆ. ಐದು ವರ್ಷದ ಅವಧಿಗೆ (2021 ರಿಂದ 2026) ಅನುಗುಣವಾಗುವಂತೆ ನೂತನ ಗಣಿಗಾರಿಕೆ ನೀತಿ, ಏಕ ಗವಾಕ್ಷಿ ಪದ್ಧತಿ, ಬಾಕಿಯಿರುವ ಅರ್ಜಿಗಳ ಇತ್ಯರ್ಥ ಮತ್ತು ಬಂಡವಾಳ ಹೂಡಿಕೆದಾರರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಗಣಿಗಾರಿಕೆ ನಿಯಮಗಳ ಸರಳೀಕರಣ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಭಾಗವಾರು ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳನ್ನು ಒಳಗೊಂಡು ಸರ್ಕಾರವೇ ಗಣಿ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಇತ್ಯರ್ಥ ಮಾಡುವ ವಿನೂತನ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೋನಾ ಮುಗಿದ ಬಳಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಅಲ್ಪಾವಧಿ, ದೀರ್ಘಾವಧಿ ತರಬೇತಿ:
ಅವೈಜ್ಞಾನಿಕ ಮೈನಿಂಗ್‍ಗೆ ಕಡಿವಾಣ ಹಾಕಿ ಖನಿಜ ಸಂಪತ್ತಿನ ಅನುಪಯುಕ್ತತೆಯನ್ನು ತಡೆಯುವ ಉದ್ದೇಶದಿಂದ ಮೈನಿಂಗ್‍ದಾರರು ಮತ್ತು ಮಾಲೀಕರಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಒಂದೂವರೆ ವರ್ಷದೊಳಗೆ ತರಬೇತಿ ನೀಡುವ ಕಾರ್ಯ ಆರಂಭಿಸಲಾಗುವುದು. ಕಲ್ಲು, ಮರಳು, ಉಕ್ಕು, ಚಿನ್ನ ಸೇರಿದಂತೆ ಎಲ್ಲಾ ರೀತಿಯ ಗಣಿಗಾರಿಕೆ ನಡೆಸುವ ಸಂಬಂಧ ಸ್ಕೂಲ್ ಆಫ್ ಮೈನಿಂಗ್‍ನಲ್ಲಿ ತರಬೇತಿ ನೀಡಲಾಗುವುದು ಎಂದರು.
ಜಿಲೆಟಿನ್ ಕಡ್ಡಿಗಳ ಸಂಗ್ರಹ ಮತ್ತು ರವಾನೆಗೆ ಸಂಬಂಧಿಸಿದಂತೆ ಕ್ರಷರ್ ಮಾಲೀಕರಿಗೆ ಮತ್ತು ಸರಬರಾಜುದಾರರಿಗೆ ರಾಜ್ಯಾದ್ಯಂತ ತರಬೇತಿ ನೀಡಲಾಗಿದೆ. ಅದೇರೀತಿ ತುಮಕೂರು ಜಿಲ್ಲೆಯ ಕಲ್ಲುಗಣಿ ಗುತ್ತಿಗೆದಾರರಿಗೆ ಸ್ಪೋಟಕ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಗಿರುತ್ತದೆ. ಸ್ಕೂಲ್ ಆಫ್ ಮೈನಿಂಗ್‍ನಲ್ಲಿಯೂ ಈ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮರಳು ಬೇಡಿಕೆ ಹೆಚ್ಚುತ್ತಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡುವ ಸಲುವಾಗಿ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯಡಿ ಮೂರು ಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರಾಜ್ಯದಲ್ಲಿ ನದಿ ಪಾತ್ರದ ಪ್ರದೇಶಗಳಲ್ಲಿ 380 ಮರಳು ಘಟಕಗಳನ್ನು ಗುರುತಿಸಲಾಗಿದೆ. ಮರಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ಎ.ಬಿ.ಸಿ ಗ್ರೇಡಿಂಗ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ ಎಂದರು.
ಕ್ರಿಯಾಯೋಜನೆ ಚರ್ಚೆ, ರಾಯಲ್ಟಿ ಇಳಿಸಲು ಮನವಿ
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಸಮಸ್ಯೆ ಮತ್ತು ಜಿಲ್ಲಾ ಮಿನರಲ್ ಹಾಗೂ ಕೆಎಂಇಆರ್‍ಸಿಯ ಅನುದಾನವನ್ನು ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಕೆ ಹಾಗೂ ಅನುದಾನ ಆಧಾರದ ಮೇಲೆ ಕ್ರಿಯಾಯೋಜನೆ ತಯಾರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಜಿಲ್ಲೆಯ ಗಣಿ ನಿಧಿಯ ಸುಮಾರು 32 ಕೋಟಿ ಅನುದಾನದ ಪೈಕಿ 14.56 ಕೋಟಿ ಅನುದಾನ ವಿನಿಯೋಗವಾಗಿದೆ ಎಂದರು.
ಗೋಷ್ಠಿಗೂ ಮುನ್ನ ಜಿಲ್ಲೆಯ ಕ್ರಷರ್ಸ್ ಅಂಡ್ ಕ್ವಾರಿ ಮಾಲೀಕರ ಸಂಘದವರು ಎನ್.ಎಸ್.ಜಯಕುಮಾರ್ ಅವರ ನೇತೃತ್ವದಲ್ಲಿ ಅಧಿಕವಾಗಿ ಹಾಕಲಾಗುತ್ತಿರುವ ರಾಯಧನವನ್ನು ಇಳಿಕೆ ಮಾಡಬೇಕು. ನೂತನ ಗಣಿ ನೀತಿ ಸಲಹಾ ಸಮಿತಿಯಲ್ಲಿ ಕ್ವಾರಿ ಕ್ರಷರ್ ಮಾಲೀಕರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕೆಂದರು. ಸಚಿವ ಜೆ.ಸಿಎಂ ಸಹ ಧನಿಗೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ