ತುಮಕೂರು : ವಿವಾದದ ಸುಳಿಯಲ್ಲಿ ಜಿಪಂ-ತಾಪಂ ಮೀಸಲು!

 ತುಮಕೂರು : 

      ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‍ವಿಂಗಡಣೆಯಲ್ಲಿ ಹೊಸ ಮೀಸಲು ನಿಗದಿ ಮಾಡಿ, ಚುನಾವಣೆ ಆಯೋಗ ಹೊರಡಿಸಿರುವ ಕರಡು ಅಧಿಸೂಚನೆಗೆ ಜಿಲ್ಲೆಯಲ್ಲಿ ಪಕ್ಷಾತೀತ ವಿರೋಧ ಕೇಳಿ ಬಂದಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಮೀಸಲು ನಿಗದಿ ಸಂಬಂಧ ಆಯೋಗದ ಮೇಲೆ ಪ್ರಭಾವ ಬೀರಿರುವ ಆರೋಪ ಕೇಳಿ ಬಂದಿದೆ.

      ಈ ಹಿನ್ನೆಲೆಯಲ್ಲಿ ಸ್ಪರ್ಧೆಗೆ ತಾಲೀಮು ನಡೆಸಿದ್ದ ಆಕಾಂಕ್ಷಿಗಳಿಂದ, ರಾಜಕೀಯ ಪಕ್ಷಗಳಿಂದ ಆಯೋಗಕ್ಕೆ ಹಲವು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆಕ್ಷೇಪಣೆ ಸಲ್ಲಿಸಲು ಜೂ.8 (ಇಂದು) ಕಡೆಯ ದಿನವಾಗಿದೆ. ವಿಪಕ್ಷ ನಾಯಕರ ಬಿಜೆಪಿ ಷಡ್ಯಂತ್ರದ ಆರೋಪದ ಜೊತೆಗೆ ಆಡಳಿತಾರೂಢ ಬಿಜೆಪಿ ನಾಯಕರುಗಳೂ ಸಹ ಮೀಸಲು ನಿಗದಿ ಸಂಬಂಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮಹಿಳೆಯರಿಗೆ ನಿಗದಿಯಾದ ಮೀಸಲು ಅವಕಾಶಗಳ ಕ್ಷೇತಗಳ ಮೇಲೆ ಕಣ್ಣಿಟ್ಟಿದ್ದ ಪುರುಷ ಆಕಾಂಕ್ಷಿಗಳ ಕಣ್ಣನ್ನು ಕೆಂಪಾಗಿಸಿದೆ.

     ಸಮಸ್ಯೆ ಏನಾಗಿದೆ? :

      ಪ್ರತಿ 5 ವರ್ಷಕ್ಕೊಮ್ಮೆ ಎದುರಾಗುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಅಧಿಕಾರಾವಧಿ ಮುಕ್ತಾಯ ಗೊಂಡಿದ್ದು ಆಡಳಿತಾಧಿಕಾರಿ ನಿಯುಕ್ತಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಹೊಸ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಮೀಸಲು ನಿಗದಿಗೊಳಿಸಿ, ಚುನಾವಣಾ ಆಯೋಗ ಕರಡು ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಮೀಸಲು ನಿಗದಿ ಅವೈಜ್ಞಾನಿಕವಾಗಿದೆ ಎಂಬ ಆಕ್ಷೇಪ ಹೆಚ್ಚಾಗಿದೆ.

ಮೀಸಲು ಬದಲಾವಣೆ ನಿಯಮ ಪಾಲನೆಯಿಲ್ಲ:

      ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಯಮದ ಪ್ರಕಾರ ಪ್ರತಿ ಬಾರಿ ಚುನಾವಣೆ ನಡೆದಾಗಲು ಹಿಂದಿನ ಮೀಸಲು ಕ್ಷೇತ್ರಗಳು ಬದಲಾಗಬೇಕು. ಹಿಂದೆ ಇದ್ದ ಕೆಟೆಗರಿಗೆ ಮತ್ತೆ ಮೀಸಲು ನಿಗದಿ ಮಾಡುವಂತಿಲ್ಲ. ಆದರೆ ಈ ಬಾರಿ ಹಲವೆಡೆ ಆ ರೀತಿ ಪುನರಾವರ್ತನೆಯಾಗಿದ್ದು, ಗುಬ್ಬಿ ತಾಪಂ ಮೂಕನಾಯಕನಹಳ್ಳಿ ಪಟ್ಟಣ ಕ್ಷೇತ್ರದಲ್ಲಿ ಹಿಂದೆ ಇದ್ದ ಎಸ್‍ಸಿ ಮಹಿಳೆಯನ್ನು ಈ ಬಾರಿಯೂ ಮೀಸಲಿರಿಸಿದ್ದು, ಅಡಗೂರು ಕ್ಷೇತ್ರದಲ್ಲೂ ಸಹ ಇದೇ ರೀತಿ ಎಸ್ಸಿ ಮಹಿಳೆಗೆ ಪುನಃ ಮೀಸಲು ನಿಗದಿ ಮಾಡಲಾಗಿದೆ. ತುಮಕೂರು ತಾಲ್ಲೂಕಿನ ಹೊನ್ನುಡಿಕೆಯಲ್ಲಿ ಕಳೆದ ಬಾರಿ ಮೀಸಲಿರಿಸಿದ್ದ ಸಾಮಾನ್ಯ ಮಹಿಳೆ ಸ್ಥಾನವನ್ನು ಈ ಬಾರಿಯೂ ಸಾಮಾನ್ಯ ಮಹಿಳೆಗೆ ನೀಡಲಾಗಿದ್ದು, ತಾಲ್ಲೂಕಿನ 9 ಜಿಪಂ ಕ್ಷೇತ್ರಗಳಲ್ಲಿ 6 ಮಹಿಳೆಯರಿಗೆ ಮೀಸಲಿಟ್ಟಿರುವುದು ಪುರುಷ ಆಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಎಡೆ ಮಾಡಿದೆ.

ಸಾಮಾಜಿಕ ನ್ಯಾಯವಿಲ್ಲ: 

      ಕೊರಟಗೆರೆ ತಾಪಂನಲ್ಲಿ ಸಾಮಾನ್ಯ ಸ್ಥಾನ ಹೆಚ್ಚು:

       ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಪಂಚಾಯ್ತಿಯಲ್ಲಿ ಸಾಮಾನ್ಯ ವರ್ಗಕ್ಕೆ ಅತಿ ಹೆಚ್ಚು ಸ್ಥಾನ ಮೀಸಲಿರಿಸಲಾಗಿದ್ದು, ಸಾಮಾಜಿಕ ನ್ಯಾಯಪಾಲನೆಯಾಗಿಲ್ಲ ಎಂದು ಸ್ವತಃ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ಅವರೆ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ದೂರಿದ್ದಾರೆ.

ಹೊಸದಾಗಿ ಸೃಷ್ಟಿಯಾದ ತಮ್ಮಡಿಹಳ್ಳಿ ಕ್ಷೇತ್ರ ಸೇರಿದಂತೆ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗುವಂತೆ ಮೀಸಲುಗಳನ್ನು ನಿಗದಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಿಸಲಾಗುತ್ತಿದ್ದು, ರಾಜಕೀಯ ಹಗೆತನ ಸಾಧಿಸಲು ಮೀಸಲುಗಳು ಬದಲು ಮಾಡಲಾಗಿದೆ ಎಂದು ದೂರಲಾಗಿದೆ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‍ಗೌಡರು ಮಾತ್ರ ಮೀಸಲು ನಿಗದಿ ಮಾಡುವುದು ಸರಕಾರವಾಗಲಿ, ಪಕ್ಷವಾಗಲಿ ಅಲ್ಲ. ಅದು ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗ. ಆಯೋಗ ನಿಯಮಾನುಸಾರವೆ ಮೀಸಲು ನಿಗದಿ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಂಡವಾಳಶಾಹಿಗಳಿಗೆ ಅನುಕೂಲ:

      ಪ್ರತಿ ತಾಲೂಕಿನಲ್ಲೂ ಜಿಪಂ, ತಾಪಂ ಮೀಸಲು ನಿಗದಿ ಸಂಬಂಧ ಆಕ್ಷೇಪಣೆಗಳು ಹೆಚ್ಚಾಗ ತೊಡಗಿದ್ದು, ಕ್ಷೇತ್ರ ಪುನರ್‍ವಿಂಗಡಣೆ ಹೆಸರಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ಯತ್ನವಾಗಿದೆ. ನನ್ನ 37 ವರ್ಷದ ರಾಜಕೀಯ ಜೀವನದಲ್ಲೇ ಇಂತಹ ಷಡ್ಯಂತ್ರಗಳನ್ನು ಕಾಣಲಿಲ್ಲ. ವಿಕೇಂದ್ರೀಕರಣದ ಆಶಯ ಮೂಲೆಗುಂಪಾಗಿದ್ದು, ಮೀಸಲು ನಿಗದಿಯಲ್ಲಿ ಕೈವಾಡ ಹೆಚ್ಚಿದೆ. ಹೋರಾಟದಿಂದ ಮೇಲೆ ಬಂದವರು, ತುಳಿತಕ್ಕೊಳಗಾದ ನಾಯಕರ ಅವಕಾಶವನ್ನು ಕಸಿಯುವ ಪ್ರಯತ್ನ ಎಂದು ಜಿಪಂ ಮಾಜಿ ಅಧ್ಯಕ್ಷ, ಹಿರಿಯ ಸದಸ್ಯ ವೈ.ಎಚ್. ಹುಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಕಳೆದ ಅವಧಿಯಲ್ಲೂ ಜಿಪಂ ಅಧ್ಯಕ್ಷ –ಉಪಾಧ್ಯಕ್ಷ ಮೀಸಲು ಎಸ್ಸಿ ಸಾಮಾನ್ಯ, ಬಿಸಿಎಂ ಸಾಮಾನ್ಯಕ್ಕೆ ನಿಗದಿಯಾದರೂ ಹಿರಿಯ ನಾಯಕರ ಸ್ವ ಹಿತಾಸಕ್ತಿಯಿಂದ ಪುರುಷರಿಗೆ ಬದಲಾಗಿ ಮಹಿಳೆಯರಿಗೆ 5 ವರ್ಷಗಳ ಸುದೀರ್ಘ ಅವಧಿಗೆ ಅವಕಾಶ ಮಾಡಿಕೊಟ್ಟು, ಆಡಳಿತ ದಿಕ್ಕು ತಪಿತ್ತು. ಅಧಿಕಾರಿಗಳು ಮಾತು ಕೇಳದಂತಾಗಿ ನರೇಗಾದಂತಹ ಮಹತ್ವದ ಯೋಜನೆಗಳು ಹಳ್ಳಹಿಡಿದಿವೆ ಎಂದು ಹುಚ್ಚಯ್ಯ ಪ್ರತಿಕ್ರಿಯಿಸಿದರು.

ಆಕ್ಷೇಪಣೆ ಅವಧಿ 30 ದಿನಕ್ಕೆ ವಿಸ್ತರಿಸಬೇಕು : ಟಿಬಿಜೆ

      ಜಿಪಂ, ತಾಪಂ ಕ್ಷೇತ್ರ ಪುನರ್‍ವಿಂಗಡಣೆ ಮಾಡಿ ಮೀಸಲು ನಿಗದಿ ಅಧಿಸೂಚನೆಯನ್ನು ದಿಢೀರನೆ ಪ್ರಕಟಿಸಿ ಕೇವಲ 8 ದಿನಗಳ ಕಾಲ ಆಕ್ಷೇಪಣೆಗೆ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಕ್ಷೇತ್ರ ಪುನರ್‍ವಿಂಗಡಣೆಯಾಗಿ ಹಲವು ಕ್ಷೇತ್ರಗಳ ಸ್ವರೂಪದಲ್ಲಿ ಬದಲಾವಣೆ ಆಗಿದ್ದು, ಅದನ್ನೇ ಆಕಾಂಕ್ಷಿಗಳು ಅರಿತಿಲ್ಲ. ಇನ್ನೂ ಮಹಿಳೆಯರಿಗೆ ಶೇ.50 ಮೀಸಲಿರಿರುವುದರಿಂದ ಮಹಿಳೆಯರು ಸ್ಪರ್ಧೆಯ ಬಗ್ಗೆಯೇ ಇನ್ನೂ ಗೊಂದಲದಲ್ಲಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶ ಬೇಕಾಗುತ್ತದೆ. ಹಾಗಾಗಿ ಆಕ್ಷೇಪಣೆ ಅವಧಿಯನ್ನು 30 ದಿನಕ್ಕೆ ವಿಸ್ತರಿಸಿ, ತಳಮಟ್ಟದಿಂದಲೇ ಸಮರ್ಥ ನಾಯಕತ್ವ ಸೃಷ್ಟಿಗೆ ಅವಕಾಶವಾಗಬೇಕು. ತಾಲ್ಲೂಕುವಾರು ಮೀಸಲಿನಲ್ಲಿ ಸಮಾನತೆ ಬರಬೇಕು. ಸದ್ಯದ ಮೀಸಲು ಪಟ್ಟಿ ನೋಡಿದರೆ ಮೇಲ್ನೋಟಕ್ಕೆ ಅವೈಜ್ಞಾನಿಕವಾದ ಹಲವು ಲೋಪಗಳು ಕಂಡುಬರುತ್ತಿವೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆಯೋಗ ಮೀಸಲು ಪಟ್ಟಿ ಬಿಡುಗಡೆ ಮಾಡಿದಂತೆ ಕಾಣುತ್ತದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದ್ದಾರೆ.

 

      ಮೀಸಲು ನಿಗದಿಯಲ್ಲಿ ನೂರಲ್ಲ ನೂರೈವತ್ತು ಪರ್ಸೆಂಟ್ ಬಿಜೆಪಿ ನಾಯಕರ ಕೈವಾಡವಿದೆ. ಗುಬ್ಬಿ ತಾಲ್ಲೂಕು ಪಂಚಾಯ್ತಿಯ ಎರಡು ಕ್ಷೇತ್ರಗಳಲ್ಲಿ ನಿಯಮ ಉಲ್ಲಂಘಿಸಿ ಹಳೆಯ ಮೀಸಲನ್ನೆ ಮುಂದುವರಿಸುತ್ತಾರೆ ಎಂದರೆ ಏನರ್ಥ? ತಾವು ಗೆದ್ದು ಬರಲಾಗದ ಕಡೆ ಮೀಸಲು ಅಸ್ತ್ರದಿಂದ ವಿರೋಧಿ ಪಕ್ಷದವರನ್ನು ಮಣಿಸುವ ಕುತಂತ್ರ ಮಾಡಲಾಗಿದೆ.

-ಎಸ್.ಆರ್.ಶ್ರೀನಿವಾಸ್, ಗುಬ್ಬಿ ಶಾಸಕರು.

      ನಾಲ್ಕು ಅವಧಿಯಿಂದ ಜಿಪಂ ಸದಸ್ಯಳಾಗಿ, ಅಧ್ಯಕ್ಷೆಯಾಗಿ ಪಂಚಾಯತ್‍ರಾಜ್ ವ್ಯವಸ್ಥೆ ನೋಡುತ್ತಾ ಬಂದಿದ್ದೇನೆ. ಪ್ರತಿ ಬಾರಿಯೂ ಚುನಾವಣೆ ಬಂದಾಗ ಆಡಳಿತಾರೂಢ ಪಕ್ಷಗಳಿಂದ ಮೀಸಲು ನಿಗದಿಯಲ್ಲಿ ಹಸ್ತಕ್ಷೇಪಗಳು ನಡೆಯುತ್ತಲೆ ಇದೆ. ಆಕ್ಷೇಪಣೆಗಳನ್ನು ಸಲ್ಲಿಸಿದರೂ ಚುನಾವಣಾ ಆಯೋಗದವರು ಅದನ್ನು ಪರಿಗಣಿಸುತ್ತಾರೆಂಬ ವಿಶ್ವಾಸವಿಲ್ಲ. ಈ ಬಾರಿ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

-ಶಾಂತಲಾ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷರು.

                                                                                                                                    ಅವಕಾಶ ಕೈ ತಪ್ಪಿದವರು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ನಮ್ಮ ಪಕ್ಷದವರೂ ಬೇಸರಗೊಂಡಿದ್ದಾರೆ. ಆದರೆ ಆಕ್ಷೇಪಣೆ ಸಲ್ಲಿಸಲು ಇಂದು ಸಹ (ಜು.8ಓ) ಕಾಲಾವಕಾಶ ಇದೆ. ಮೀಸಲು ತಪ್ಪೆನಿಸಿದವರು ಆಕ್ಷೇಪಣೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದು. ಚುನಾವಣಾ ಆಯೋಗ ನಿಯಮಾನುಸಾರವೇ ಕ್ರಮವಹಿಸಿದೆ.

-ಬಿ.ಸುರೇಶ್‍ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap