ತುಮಕೂರು : ಆಹಾರ ತಯಾರಿಕೆಯಲ್ಲಿ ಗುಣಮಟ್ಟ, ಸುರಕ್ಷತಾ ಕ್ರಮ ಪಾಲನೆ ಕಡ್ಡಾಯ!

ತುಮಕೂರು  :

      ಜಿಲ್ಲೆಯಲ್ಲಿನ ಎಲ್ಲಾ ಆಹಾರ ತಯಾರಕರು/ಸಂಸ್ಕರಣೆ ಮಾಡುವವರು/ ಮಾರಾಟ ಮಾಡುವವರು ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಈಟ್ ರೈಟ್ಸ್ ಚಾಲೆಂಜ್ ಅನುಷ್ಠಾನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬೀದಿ ಬದಿ, ಹೋಟೆಲ್ ಸೇರಿದಂತೆ ಎಲ್ಲಾ ಆಹಾರ ತಯಾರಕರು ಆಹಾರವನ್ನು ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಗೆ ಒಳಪಡಿಸಿದ ಆಹಾರ ಗುಣಮಟ್ಟದ ಆಹಾರವಾಗಿದೆಯೆಂಬುದನ್ನು ದೃಢೀಕರಿಸಿ ಬಳಿಕ ಆಹಾರ ಮಾರಾಟಕ್ಕೆ ಅನುಮತಿ ನೀಡಬೇಕು ಹಾಗೂ ಆಹಾರ ತಯಾರಿಕೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕು. ಗುಣಮಟ್ಟದ ಆಹಾರ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ಸದಾ ನಿಗಾವಹಿಸಬೇಕು ಎಂದು ನಿರ್ದೇಶಿಸಿದರು.

      ಬೀದಿ ಬದಿ ಹೋಟೆಲ್ ಗಳಿಂದ ಎಲ್ಲಾ ತರಹದ ಹೋಟೆಲ್ ಗಳಿಗೆ ಪರವಾನಗಿ ಕಡ್ಡಾಯವಾಗಿದ್ದು, ಪರವಾನಗಿ ಇಲ್ಲದೇ ಹೋಟೆಲ್ ನಡೆಸುವವರು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೋಗ್ಯಕರ, ಸುರಕ್ಷತಾ ಆಹಾರದ ಬಗ್ಗೆ ಆಹಾರ ತಯಾರಕರಿಗೆ ಅರಿವು ಮತ್ತು ತರಬೇತಿಯನ್ನು ನೀಡಬೇಕು. ಜೊತೆಗೆ ಸುರಕ್ಷತಾ ಕ್ರಮದೊಂದಿಗೆ ಆಹಾರ ಮಾರಾಟ ಹಾಗೂ ತಯಾರಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು. ಗ್ರಾಮೀಣ ಪ್ರದೇಶಗಳ ಸಣ್ಣ ಪುಟ್ಟ ಹೋಟೆಲ್‍ಗಳಿಗೂ ಪರವಾನಗಿ ಪಡೆಯುವುದು ಸೇರಿದಂತೆ ಇತರೆ ಆಹಾರ ತಯಾರಿಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಲು ಸೂಕ್ತ ಕ್ರಮವಹಿಸಿ ಎಂದು ನಿರ್ದೇಶಿಸಿದರು.
ಜಿಲ್ಲೆಯ ಪ್ರತಿ ಅಂಗನವಾಡಿಯಲ್ಲೂ ಆಹಾರ ಸುರಕ್ಷತೆಯ ಬಗ್ಗೆ ಕಾರ್ಯಕರ್ತರು ಹಾಗೂ ಮಕ್ಕಳಿಗೆ ಅರಿವು ಮೂಡಿಸಲು ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.

      ಬೇಕರಿ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಅಹಾರ ತಪಾಸಣೆಗೆ ಒಳಪಡಿಸಬೇಕು. ಹಾಗೆಯೆ ಬಂದೀಖಾನೆ ಗಳ ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ಮತ್ತು ನಿರಂತರವಾಗಿ ದಾಸೋಹ ಮಾಡುವ ದೇವಸ್ಥಾನಗಳಲ್ಲಿಯೂ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕ್ರಮ ವಹಿಸಬೇಕಾಗಿದೆ ಎಂದು ನಿರ್ದೇಶಿಸಿದರು.

      ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಪ್ರಭಾ, ಈಗಾಗಲೇ ಜಿಲ್ಲೆಯ ದೇವಸ್ಥಾನ ಮತ್ತು ಮಠಗಳಲ್ಲಿ ಆಹಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್, ಡಿಎಚ್ ಓ ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಆರೋಗ್ಯ ಇಲಾಖೆಯ ಚಂದ್ರಪ್ಪ, ಎಪ್.ಎಸ್‍ಎಸ್.ಐ. ನ ನಾರಯಣಪ್ಪ, ಕಾಂತರಾಜು ಸೇರಿದಂತೆ ಇತರೆ ಇಲಾಖಾಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap