ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ 24ರಂದು ತುಮಕೂರಿಗೆ

 ತುಮಕೂರು : 

      ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‍ದೀಪ್‍ಸಿಂಗ್ ಸುರ್ಜೇವಾಲಾ ಅವರು ಜು.24ರಂದು ತುಮಕೂರಿಗೆ ಆಗಮಿಸುತ್ತಿದ್ದು,್ಲ 5 ಜಿಲ್ಲೆಗಳ ವಿಭಾಗ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆ ನಡೆಸುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದರು.

      ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯದ ಐದು ವಿಭಾಗವಾರು ಮುಖಂಡರ ಸಭೆಗಳನ್ನು ಆಯೋಜಿಸಿದ್ದು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ,ಚಿಕ್ಕಬಳ್ಳಾಪುರ ವ್ಯಾಪ್ತಿಯ ಜಿಲ್ಲಾವಾರು ಮುಖಂಡರ ಸಭೆ 24ರಂದು ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ತುಮಕೂರಿನ ಅರ್ಬನ್ ರೆಸಾರ್ಟ್‍ನಲ್ಲಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಕಾರ್ಯಾಧ್ಯಕ್ಷರುಗಳು ಸೇರಿ ಐದು ಜಿಲ್ಲೆಯ ಹಾಲಿ-ಮಾಜಿ ಸಂಸದರು, ಶಾಸಕರು, ಮುಖಂಡರುಗಳು ಪಾಲ್ಗೊಳ್ಳುವರು.ಇದೇ ರೀತಿ ಹುಬ್ಬಳ್ಳಿ, ಮೈಸೂರು, ಮಂಗಳೂರು ವಿಭಾಗಗಳಲ್ಲಿ ಸಭೆ ನಡೆಯಲಿದೆ ಎಂದರು.

  ರಾಜಭವನ ಚಲೋ:

      ಕೋವಿಡ್ 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ವಿಪಕ್ಷಗಳು ಕ್ರಮಕ್ಕೆ ಆಗ್ರಹಿಸಿದ್ದರೂ ರಾಜ್ಯ ಬಿಜೆಪಿ ಸರಕಾರ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿದೆ.ಇದ್ಯಾವದರ ಪರಿವೇ ಇಲ್ಲದೆ ಸಿಎಂ ಬದಲಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿ ಸಚಿವರು ಶಾಸಕರು ಮಗ್ನರಾಗಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯ ಸರಕಾರದ ವೈಫಲ್ಯ ಖಂಡಿಸಿ, ಟೆಲಿಪೋನ್ ಟ್ಯಾಪಿಂಗ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಂದು ರಾಜಭವನ ಚಲೋ ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಫೋನ್ ಕದ್ದಾಲಿಕೆ, ಕೇಂದ್ರ ಸರಕಾರ ಬಾಯ್ಬಿಡಲಿ:

      ಭಯೋತ್ಪಾದನೆ, ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಕೃತ್ಯವನ್ನು ದಮನ ಮಾಡಲು ಅಂತಹವರ ಫೋನ್ ಟ್ಯಾಪಿಂಗ್‍ಗೆ ಸರಕಾರ ಅನುಮತಿಸುತ್ತದೆ. ಆದರೆ ಇದನ್ನು ಎದುರಾಳಿ ರಾಜಕೀಯ ನಾಯಕರು, ವಿಪಕ್ಷಗಳ ಸರಕಾರಗಳನ್ನು ಉರುಳಿಸುವ ಅಸ್ತ್ರವನ್ನಾಗಿ ಆಡಳಿತಾರೂಢ ಬಿಜೆಪಿ ಸರಕಾರ ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಫೋನ್ ಟ್ಯಾಪಿಂಗ್‍ಗೆ ರಾಜ್ಯ ಅನುಮತಿ ಕೊಡಬೇಕು ಇಲ್ಲವೇ ಕೇಂದ್ರ ಸರಕಾರ ಕೊಡಬೇಕು. ಮೈತ್ರಿ ಸರಕಾರದಲ್ಲಿ ನಮ್ಮ ಫೋನ್ ಟ್ಯಾಪಿಂಗ್ ಆದಾಗ ರಾಜ್ಯ ಸರಕಾರದ ಪಾತ್ರವಿಲ್ಲ. ಹೀಗಾಗಿ ಕೇಂದ್ರ ಸರಕಾರವೇ ಅನುಮತಿಸಿರುವ ಅನುಮಾನವಿದೆ. ತಮ್ಮದೇನು ಪಾತ್ರವಿಲ್ಲ ಎನ್ನುವುದಾದರೆ ಕೇಂದ್ರ ಸರಕಾರ ಬಾಯ್ಬಿಡಲಿ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸವಾಲೆಸಿದರು.

      ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಪಕ್ಷ ಸಂಘಟನೆ, ಮುಂಬರುವ ಜಿಪಂ-ತಾಪಂ ಚುನಾವಣೆ ದಿಸೆಯಲ್ಲಿ ಈ ವಿಭಾಗವಾರು ಸಂಘಟನಾ ಸಭೆ ಹೆಚ್ಚು ಮಹತ್ವ ಪಡೆದಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಡಾ.ಎಚ್.ಡಿ.ರಂಗನಾಥ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕರಾದ ಎಸ್.ಷಫಿ ಅಹಮದ್, ಡಾ.ರಫೀಕ್ ಅಹಮದ್, ಆರ್.ನಾರಾಯಣ್, ಮುಖಂಡರಾದ ಮುರಳೀಧರಹಾಲಪ್ಪ, ಆರ್.ರಾಜೇಂದ್ರ, ಇಕ್ಬಾಲ್ ಅಹಮದ್, ಹೊನಗಿರಿಗೌಡ, ಜಿಪಂ ಸದಸ್ಯ ವೆಂಕಟೇಶ್, ಶಶಿಹುಲಿಕುಂಟೆಮಠ್, ರಾಯಸಂದ್ರ ರವಿಕುಮಾರ್ ಸೇರಿ ಹಲವರಿದ್ದರು.

ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ :ಕೆಎನ್‍ಆರ್ 

      ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಮಾತನಾಡಿ ರಾಜ್ಯ ಸರಕಾರ ಎಲ್ಲಾ ಹಂತದಲ್ಲೂ ವಿಫಲವಾಗಿದ್ದು, ಜನರ ಸಂಕಷ್ಟಗಳಿಗೆ ಸ್ಪ ದನೆ ಇಲ್ಲವಾಗಿದೆ. ಅನ್ನಭಾಗ್ಯ ಅಕ್ಕಿಯನ್ನು ಕಡಿತಗೊಳಿಸಿ ಕೊರೊನಾ ಸಮಯದಲ್ಲಿ ದುಡಿಮೆಯೂ ಇಲ್ಲದೇ ಭಿಕ್ಷೆ ಬೇಡುವ ಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಇಂತಹ ಅದಕ್ಷ ಸರಕಾರವನ್ನು ತೊಲಗಿಸಲು ಕಾಂಗ್ರೆಸ್ ಸಂಘಟನಾತ್ಮಕವಾಗಿ ಗಟ್ಟಿಯಾಗಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಭಾಗವಾರು ಸಭೆ ನಡೆಯುತ್ತಿದೆ ಎಂದರು.

      ಫೆಗಾಸಿಸ್ ಸಂಸ್ಥೆಯ ಸ್ಪೈವೇರ್‍ಸಾಫ್ಟ್‍ವೇರ್ ಬಳಸಿ ಭಾರತದಲ್ಲಿ ರಾಜಕೀಯ ನಾಯಕರ ಫೋನ್ ಕದ್ದಾಲಿಕೆ ಮಾಡಿರುವ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ದೇಶಕ್ಕೆ ಅವಮಾನಕರ ಸಂಗತಿಯಾಗಿದೆ. ರಾಜ್ಯದ ಮೈತ್ರಿ ಸರಕಾರ ಉರುಳಿಸುವಲ್ಲಿ ಇದೇ ಅಸ್ತ್ರ ಬಳಸಲಾಗಿದ್ದು, ವ್ಯಕ್ತಿಯ ಖಾಸಗಿತನದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು

-ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ.

      ಅಯೋಗ್ಯ, ದಪ್ಪ ಚರ್ಮದ ಸರಕಾರ ರಾಜ್ಯದಲ್ಲಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವ ಸಿಎಂ ಬದಲಾಗಬೇಕೆಂದು ಆಡಳಿತಾರೂಢ ಸಚಿವರು ಶಾಸಕರೇ ಹೇಳುತ್ತಿದ್ದಾರೆ. ಮಠಾಧೀಶರ ಸಿಎಂ ಪರ ನಿಂತಿರಬಹುದು. ಆದರೆ ಜನಸಾಮಾನ್ಯರು, ಅವರ ಪಕ್ಷದವರೇ ನಿಂತಿಲ್ಲ. ಸಿಎಂ ಬದಲಾವಣೆ ಅವರ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link