ಕೈ ನಾಯಕರ ವಿಭಾಗೀಯ ಪ್ರಥಮ ಸಭೆಗೆ ಸಾಕ್ಷಿಯಾಗಲಿರುವ ಕಲ್ಪತರು ನಾಡು

  ತುಮಕೂರು : 

 

      ರಾಜ್ಯದಲ್ಲಿ ಒಂದೆಡೆ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಪ್ರಹಸನ ಮುಂದುವರಿದಿದ್ದರೆ, ರಾಜಕೀಯ ಸ್ಥಿತ್ಯಂತರ, ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕಾಂಗ್ರೆಸ್ ಪುನಃಶ್ಚೇತನಕ್ಕೆ ತಾಲೀಮು ಶುರುವಾಗಿದೆ.

      ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ನೇತೃತ್ವದಲ್ಲಿ ಕೆಪಿಸಿಸಿ ನಾಯಕರ ಸಮ್ಮುಖದಲ್ಲಿ ವಿಭಾಗೀಯ ಕಾಂಗ್ರೆಸ್ ಮುಖಂಡರ ಸಭೆಗೆ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿಗೆ ಬದಲಾಗಿ ತುಮಕೂರಿನಿಂದಲೇ ಇಂದು ಚಾಲನೆ ದೊರೆಯುತ್ತಿದ್ದು, ಮಧ್ಯ ಕರ್ನಾಟಕ ಹಳೇ ಮೈಸೂರು ಪ್ರಾಂತ್ಯದ ಐದು ಜಿಲ್ಲೆಗಳ ಕಾಂಗ್ರೆಸ್ ನಾಯಕರೊಂದಿಗೆ ರಾಜ್ಯ ಉಸ್ತುವಾರಿ ಪ್ರತ್ಯೇಕ ಸಮಾಲೋಚನೆ ನಡೆಸಿ ಅಹವಾಲು ಆಲಿಸಲಿದ್ದಾರೆ.

ನಗರದ ಅರ್ಬನ್ ರೆಸಾರ್ಟ್‍ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆವರೆಗೆ ಸಭೆ ನಡೆಯಲಿದ್ದು, ಹಳೇ ಮೈಸೂರು, ಮಧ್ಯಕರ್ನಾಟಕ ಪ್ರಾಂತ್ಯದ ತುಮಕೂರು ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಉಸ್ತುವಾರಿಗಳ ಮುಂದೆ ನೇರವಾಗಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ.ಪ್ರತೀ ಜಿಲ್ಲೆಯ ಮುಖಂಡರೊಂದಿಗೆ ಒಂದು ತಾಸು ಪ್ರತ್ಯೇಕ ಸಭೆ ನಡೆಸಲಿರುವ ಎಐಸಿಸಿ ಕಾರ್ಯದರ್ಶಿಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಆಯಾ ಜಿಲ್ಲಾ ಡಿಸಿಸಿಗೆ ನೂತನ ಜಿಲ್ಲಾಧ್ಯಕ್ಷರ ಆಯ್ಕೆ, ಕೆಪಿಸಿಸಿಗೆ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

      ಕಾಂಗ್ರೆಸ್ ಪಕ್ಷದ ಭದ್ರ ನೆಲೆಯಿರುವ ಈ ಐದು ಜಿಲ್ಲೆಗಳಲ್ಲಿ ಕುಂದಿರುವ ಪಕ್ಷದ ಶಕ್ತಿಯನ್ನು ಮತ್ತೆ ತುಂಬುವ ನಿಟ್ಟಿನಲ್ಲಿ ವಿಭಾಗೀಯ ಮಟ್ಟದ ಈ ಸಭೆ ಹೆಚ್ಚು ಮಹತ್ವ ಪಡೆದಿದ್ದು, ಸುರ್ಜೇವಾಲ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪಮೊಯ್ಲಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಸಲೀಂ ಅಹ್ಮದ್ ಸೇರಿ ಐವರು ಕಾರ್ಯಾಧ್ಯಕ್ಷರುಗಳು, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ವಿ.ಮುನಿಯಪ್ಪ, ರಮೇಶ್‍ಕುಮಾರ್, ಎನ್.ಎಚ್.ಶಿವಶಂಕರರೆಡ್ಡಿ, ಟಿ.ಬಿ.ಜಯಚಂದ್ರ, ವೆಂಕಟರಮಣಪ್ಪ, ಎಚ್.ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ, ಶಾಸಕರಾದ ಡಾ.ರಂಗನಾಥ್, ಎಸ್.ಎನ್.ಸುಬ್ಬಾರೆಡ್ಡಿ, ರೂಪಾಶಶಿಧರ್, ಕೆ.ವೈ.ನಂಜೇಗೌಡ, ಟಿ.ರಘುಮೂರ್ತಿ, ಎಸ್.ರಾಮಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಾಕ್ಷರಿ, ಎಸ್.ಷಫಿ ಅಹಮದ್, ಡಾ.ರಫೀಕ್ ಅಹಮದ್, ಆರ್.ನಾರಾಯಣ್, ಸುಧಾಕರ್, ಲಕ್ಕಪ್ಪ, ಬಿ.ಜಿ.ಗೋವಿಂದಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸೇರಿ ಐದು ಜಿಲ್ಲೆ ಪ್ರಮುಖರು, ವಿಧಾನಸಭೆ ಸ್ಪರ್ಧಿಗಳು ಪಾಲ್ಗೊಳ್ಳುವರು.

ಭಿನ್ನಮತ, ಸಂಘಟನೆ ಕೊರತೆಯಿಂದ ಹೊರತಾಗಿರದ 5 ಜಿಲ್ಲೆ :

      5 ಜಿಲ್ಲೆಗಳಲ್ಲಿ ಕಾಂಗ್ರೆಸ್ ಭಿನ್ನಮತಗಳ ಶಮನಕ್ಕೂ ಈ ವಿಭಾಗೀಯಸಭೆ ವೇದಿಕೆಯಾಗಲಿದೆ ಎಂದು ಕೈ ಮುಖಂಡರು ಹೇಳುತ್ತಿದ್ದು, ಪ್ರಸಕ್ತ ನಡೆಯುತ್ತಿರುವ ರಾಜಕೀಯ ಸ್ಥಿತ್ಯಂತರಗಳ ಲಾಭವನ್ನು ಕೈ ಪಾಳಯ ಮುಂದೆ ಪಡೆಯಬೇಕಾದರೆ ಈಗಿನಿಂದಲೇ ಭಿನ್ನಮತ ಶಮನ ಗೊಳಿಸುವುದು ಕಾಂಗ್ರೆಸ್‍ಗೆ ಅಗತ್ಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಮುಖವಾಗಿ ಲೋಕಸಭೆ ಟಿಕೆಟ್ ಕೈ ತಪ್ಪಿದ ಮಾಜಿ ಸಂಸದ ಮುದ್ದಹನುಮೇಗೌಡರು ಕೈ ನಾಯಕರೊಂದಿಗೆ ಬೆರೆಯದೆ ಕಳೆದ ಕೆಲವು ತಿಂಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ತಿಪಟೂರಲ್ಲೂ ಕಾಂಗ್ರೆಸ್ ಭಿನ್ನ ಗುಂಪುಗಳು ಹುಟ್ಟಿಕೊಂಡಿವೆ.

     ಚಿ.ನಾ.ಹಳ್ಳಿ, ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರದಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತುಕೊಡುವ ಅಗತ್ಯವಿದ್ದು, ಚಿಕ್ಕಬಳ್ಳಾಪುರದಲ್ಲೂ ಕಾಂಗ್ರೆಸ್ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ. ಚಿಂತಾಮಣಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆ ಇದೆ. ಕೋಲಾರದಲ್ಲಿ ರಮೇಶ್‍ಕುಮಾರ್ ವರ್ಸಸ್ ಕೆ.ಎಚ್.ಮುನಿಯಪ್ಪ ಅವರ ಮುನಿಸನ್ನು ಶಮನಗೊಳಿಸಬೇಕಿದೆ. ಬಿಜೆಪಿ ಪ್ರಬಲವಾಗಿ ವಿಸ್ತರಿಸುತ್ತಿರುವ ಚಿತ್ರದುರ್ಗ, ದಾವಣಗೆರೆಯಲ್ಲೂ ಕಾಂಗ್ರೆಸ್ ಮತ್ತೆ ಪುಟಿದೇಳು ಈ ವಿಭಾಗೀಯ ಸಭೆ ಕಾರ್ಯತಂತ್ರ ಎಣೆಯಲಿದೆ ಎಂಬ ಚರ್ಚೆಗಳು ಕೈ ಪಾಳಯದಲ್ಲಿ ಸಾಗಿದೆ.

      ಎಐಸಿಸಿ ಪ್ರಧಾನಕಾರ್ಯದರ್ಶಿಗಳ ನೇತೃತ್ವದಲ್ಲಿ ತುಮಕೂರಲ್ಲಿ ನಡೆಯುತ್ತಿರುವ ಕಾಂಗ್ರೆಸ್ ವಿಭಾಗೀಯ ಐದು ಜಿಲ್ಲೆಗಳ ಮುಖಂಡರ ಸಭೆ ಹಳೇ ಮೈಸೂರು, ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸಹಕಾರಿಯಾಗಲಿದೆ.

-ಕೆ.ಎನ್.ರಾಜಣ್ಣ, ಮಾಜಿ ಶಾಸಕರು.

ಕಾಂಗ್ರೆಸ್ ವಿಭಾಗೀಯ ಸಭೆ ವೇಳಾಪಟ್ಟಿ:

  • ಬೆಳಿಗ್ಗೆ 9.30ಕ್ಕೆ ಮುಖಂಡರ ಆಗಮನ
  • 9.45 ರಿಂದ 10.30 ಐದು ಜಿಲ್ಲೆ 120 ಮುಖಂಡರ ಸಭೆ
  • 10.45 ರಿಂದ ಜಿಲ್ಲಾವಾರು ಪ್ರತ್ಯೇಕ ಸಭೆ.(ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಕೋಲಾರ ಹಾಗೂ ಕೊನೆಯದಾಗಿ
  • ತುಮಕೂರು ಪ್ರತೀ ಜಿಲ್ಲೆಗೆ 45 ನಿಮಿಷ)
  • ಮಧ್ಯಾಹ್ನ 1ಕ್ಕೆ ಪ್ರತ್ರಿಕಾಗೋಷ್ಠಿ.
  • ಮಧ್ಯಾಹ್ನ 3ರ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ಸಾಧ್ಯತೆ
     

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap