ತುಮಕೂರು :
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆಯೊಂದಿಗೆ ರಾಜ್ಯದ ಶಕ್ತಿಸೌಧ ವಿಧಾನಸೌಧದಲ್ಲಿ ಆಡಳಿತ –ವಿಪಕ್ಷ ಸ್ಥಾನಗಳೆಲ್ಲ ಮೂಲ ಜನತಾ ಪರಿವಾರದವರ ಹಿಡಿತದಲ್ಲಿ ಸಿಕ್ಕಂತಾಗಿದೆ.
ಆಡಳಿತರೂಢ ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಜನತಾದಳದ ನೇತಾರರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮಗ ಮಾತ್ರವಲ್ಲ. ಜನತಾದಳ ಅಧ್ವರ್ಯುಗಳಾಗಿದ್ದ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡರು, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಅವರ ಆಪ್ತವಲದಯಲ್ಲಿ ಗುರುತಿಸಿಕೊಂಡವರು. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾಯದರ್ಶಿಯಾಗಿಯೂ ನೇಮಕಗೊಂಡಿದ್ದರು. ಜನತಾದಳದಿಂದಲೇ 1997 ಹಾಗೂ 2003ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಸೇರಿ ಶಿಗ್ಗಾವಿ ಕ್ಷೇತ್ರದಿಂದ 2008ರಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದು, ಬಿಜೆಪಿ ಸರಕಾರದಲ್ಲೂ ಜಲಸಂಪನ್ಮೂಲ, ಗೃಹ ಕಾನೂನು ಸಂಸದೀಯ ವ್ಯವಹಾರಗಳ ಖಾತೆಯಂತಹ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಿ ಇದೀಗ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.
ವಿಪಕ್ಷ ನಾಯಕರು ಜೆಡಿಎಸ್‍ನಿಂದ ಬಂದವರೇ :
ಆಡಳಿತ ಪಕ್ಷದ ಸಭಾ ನಾಯಕರಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇರ ಎದುರಾಳಿಯಾಗಿ ವಿಪಕ್ಷ ನಾಯಕರ ಸ್ಥಾನವನ್ನು ಕಾಂಗ್ರೆಸ್ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರು ಅಲಂಕರಿಸಿದ್ದು, ಹಿಂದೆ ಇಬ್ಬರು ಜನತಾದಳದಲ್ಲಿ ಒಟ್ಟಿಗೆ ಕೆಲಸಮಾಡಿದವರು. ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಜನತಾದಳ ತೊರೆದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ವಿಪಕ್ಷ ನಾಯಕರಾಗಿ 2013ರಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಿದರು. ಇದೀಗ ಸಿದ್ದರಾಮಯ್ಯ ಅವರಂತೆಯೇ ಮೂರುವರೆ ವರ್ಷದ ಅಂತರದಲ್ಲಿ ಜನತಾ ಪರಿವಾರದ ಹಿನ್ನೆಲೆಯಿಂದ ಬಂದ ಬಸವರಾಜ ಬೊಮ್ಮಾಯಿ ಸಿಎಂ ಗಾದಿಗೇರಿದ್ದಾರೆ. ಹಿಂದೆ ಒಂದೇ ಪಕ್ಷದಲ್ಲಿ ಮಿತ್ರರಂತಿದ್ದ ಉಭಯ ನಾಯಕರು ಈಗ ಆಡಳಿತ-ವಿಪಕ್ಷ ನಾಯಕರಾಗಿ ಸದನದಲ್ಲಿ ಜಂಗೀಕುಸ್ತಿ ನಡೆಸಲಿದ್ದಾರೆ.
ಪರಿಷತ್ ಸಭಾಪತಿಯೂ ಜೆಡಿಎಸ್‍ನವರೇ: ಇನ್ನೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ.ಕುಮಾರಸ್ವಾಮಿ ಅವರಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಆಡಳಿತ ಪಕ್ಷದ ನಾಯಕ ಬಸವರಾಜ ಬೊಮ್ಮಾಯಿ ಅವರು ಹಿಂದೆ ಜನತಾದಳದಲ್ಲಿದ್ದಾಗ ದೇವೆಗೌಡರು, ಎಚ್ಡಿಕೆಗೆ ನಿಕಟವರ್ತಿಗಳೇ ಆಗಿದ್ದರು. ಇದರೊಂದಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಲಂಕರಿಸಿದ್ದು, ವಿಧಾನಸೌಧದ ಆಯಕಟ್ಟಿನ ಸ್ಥಾನಗಳಲ್ಲಿ ಜನತಾಪರಿವಾರದ ಹಿನ್ನೆಲೆಯವರೇ ಇರುವುದು, ರಾಜ್ಯ ರಾಜಕೀಯದಲ್ಲಿ ಜನತಾದಳದ ಗರಡಿಯಲ್ಲಿ ಪಳಗಿದ ನಾಯಕರೇ ಪ್ರಮುಖವಾಗಿ ಮುನ್ನೆಲೆಗೆ ಬರುತ್ತಿರುವುದು ಕಂಡುಬಂದಿದೆ.
ವಿರೋಧಿಸುತ್ತಿದ್ದ ವಂಶವಾಹಿ ರಾಜಕಾರಣಕ್ಕೆ ಬಿಜೆಪಿ ಮಣೆ :
ಕಾಂಗ್ರೆಸ್ ಪಕ್ಷದ ವಂಶವಾಹಿ ರಾಜಕಾರಣವನ್ನು ಆರಂಭದಲ್ಲಿ ಪ್ರಬಲವಾಗಿ ವಿರೋಧಿಸಿಕೊಂಡೇ ಬಂದ ಬಿಜೆಪಿಯ ತತ್ವ ಸಿದ್ದಾಂತಗಳು ರಾಜಕೀಯ ಪರಿಸ್ಥಿತಿಗಳನುಸಾರ ಸಡಿಲವಾಗುತ್ತಿದ್ದು, ಸದ್ಯದ ಕರ್ನಾಟಕ ಮುಖ್ಯಮಂತ್ರಿ ನೇಮಕವೇ ಜ್ವಲಂತ ಉದಾಹರಣೆಯೆನಿಸಿದೆ. ನಮ್ಮದ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು ಎಂದು ವೇದಿಕೆಗಳಲ್ಲಿ ಈಗಲೂ ಪ್ರತಿಪಾದಿಸುವ ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರು ಕರ್ನಾಟಕದ ನೂತನ ಸಿಎಂ ಆಯ್ಕೆ ವಿಷಯದಲ್ಲಿ ಮಾತ್ರ ಗಪ್‍ಚಿಪ್ ಆಗಿದ್ದಾರೆ. ಮುಖ್ಯಮಂತ್ರಿಯಾಗಿದ್ದವರ ಪುತ್ರನೇ ಮತ್ತೆ ಮುಖ್ಯಮಂತ್ರಿಯಾಗಲು ಬಿಜೆಪಿ ಹೈಕಮಾಂಡ್ ಆಸ್ಪದ ಕಲ್ಪಿಸಿದ್ದು, ಹೊರಗಿನಿಂದ ಬಂದವರಿಗೂ ಉನ್ನತ ಸ್ಥಾನ ಕಲ್ಪಿಸುತ್ತಿರುವುದು ಮೂಲ ಬಿಜೆಪಿ ಮುಖಂಡರಲ್ಲಿ ಅಚ್ಚರಿ, ಅಸಮಾಧಾನಕ್ಕೆ ಎಡೆಮಾಡಿರುವುದಂತೂ ಸುಳ್ಳಲ್ಲ.
ಕಾಂಗ್ರೆಸ್-ಬಿಜೆಪಿಯಲ್ಲಿ ಜನತಾ ಪರಿವಾರದ ಥಿಂಕರ್ಸ್ !
ನಾಯಕರ ಸೃಷ್ಟಿಯ ಕಾರ್ಖಾನೆ ಎಂದೇ ಬಿಂಬಿತವಾಗಿದ್ದ ಜನತಾದಳದ ಹಲವು ನಾಯಕರು, 2004ರಿಂದೀಚೆಗೆ ಕಾಂಗ್ರೆಸ್-ಬಿಜೆಪಿ ಸೇರಿ ಪಕ, ಹಾಗೂ ಸರಕಾರದಲ್ಲಿ ಆಯಕಟ್ಟಿನ ಹುದ್ದೆಯಲ್ಲಿರುವ ಜೊತೆಗೆ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಜನತಾದಳದ ಹಿರಿಯ ನಾಯಕರಾಗಿದ್ದ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ರಮೇಶ್‍ಕುಮಾರ್, ವಿ.ಎಸ್.ಉಗ್ರಪ್ಪ, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಸಿ.ಎಂ. ಇಬ್ರಾಹಿಂ ಮತ್ತಿತರರು ಕಾಂಗ್ರೆಸ್‍ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಲ್ಪಟ್ಟಿದ್ದು, ಈ ಪೈಕಿ ಸಿದ್ದರಾಮಯ್ಯ ಅವರು ಸಿಎಂ ಆಗಿ ವಿಪಕ್ಷ ನಾಯಕರಾಗಿ ಕೈ ಪಾಳಯದ ಅಗ್ರಮಾನ್ಯ ನಾಯಕರೆನಿಸಿದ್ದಾರೆ. ಆರ್.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾದರೆ, ವಿ.ಎಸ್.ಉಗ್ರಪ್ಪ ವಿಪಕ್ಷ ನಾಯಕರಾಗಿ, ರಮೇಶ್‍ಕುಮಾರ್ ಸಚಿವರಾಗಿ, ಸ್ಪೀಕರ್ ಆಗಿ ರಾಜ್ಯದ ಗಮನಸೆಳೆದಿದ್ದಾರೆ. ಅಂತೆಯೇ ಬಿಜೆಪಿಯಲ್ಲಿ ಜನತಾದಳ ಮೂಲದ ಬಸವರಾಜಬೊಮ್ಮಾಯಿ ಹಾಲಿ ಮುಖ್ಯಮಂತ್ರಿಯಾಗಿದ್ದರೆ, ಸಂಸದರಾದ ವಿ. ಶ್ರೀನಿವಾಸಪ್ರಸಾದ್, ರಮೇಶ್ ಜಿಗಜಿಣಗಿ ಕೇಂದ್ರದ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಅವರುಗಳು ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿ ಸದನದಲ್ಲಿ ಸರಕಾರದ ಪರ ಸಮರ್ಥ ವಾದ ಮಂಡಿಸುವ ಮೂಲಕ ಗಮನಸೆಳೆದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಹಾರಿದ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಕಮಲ ಪಾಳಯಕ್ಕೆ ಕುಟುಕೋ ಹಕ್ಕಿಯಾಗಿ ಪರಿಣಮಿಸಿದ್ದಾರೆ. ಕೇಂದ್ರದಲ್ಲಿ ಜನತಾ ಪಕ್ಷದಿಂದ ಬಂದ ಸುಬ್ರಹ್ಮಣ್ಯನ್ ಸ್ವಾಮಿ ಸಹ ಬಿಜೆಪಿಗೆ ಸವಾಲಿನ ಸ್ವಾಮಿಎನಿಸಿದ್ದಾರೆ.
ಜನತ ಪರಿವಾರದಲ್ಲಿ ಸಂಘರ್ಷ, ಸಿದ್ಧಾಂತದ ಮೇಲೆ ನಾಯಕತ್ವ ರೂಪುಗೊಳ್ಳುತ್ತಿತ್ತು :
ರಾಜ್ಯದಲ್ಲಿ ಮುಖ್ಯಮಂತ್ರಿಗಳು ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಜನತಾ ಪರಿವಾರದಿಂದ ಬಂದವರಾದರೂ ತಾತ್ವಿಕವಾಗಿ ದಕ್ಷಿಣ ದ್ರುವ , ಉತ್ತರ ದ್ರುವ. ಜನತಾ ಪರಿವಾರದಲ್ಲಿ ನಾಯಕರು ನಾಯಕತ್ವ ರೂಢಿಸಿಕೊಳ್ಳಲು ಸಂಘರ್ಷ ನಡೆಸಬೇಕಿತ್ತು. ಸಂಘರ್ಷ ಮತ್ತು ಸಿದ್ಧಾಂತದ ಹಿನ್ನೆಲೆಯಲ್ಲಿ ನಾಯಕತ್ವ ಹೊರಹೊಮ್ಮುತ್ತಿತ್ತು. ಜೆಪಿ ಆಂದೋಲನದ ಮೂಲಕವೇ ನಾನಾಗಲೀ, ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರು ಬಂದವರು. ಪ್ರಸ್ತುತ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ವಿಚಾರ, ಸಿದ್ಧಾಂತದಲ್ಲಿ ನಂಬಿಕೆಯುಳ್ಳುವರಾಗಿದ್ದು, ತಮ್ಮ ಮೂಲದ ಜನಪರ, ಸಂವಿಧಾನ ರೀತ್ಯಾ ಆಡಳಿತ ನಡೆಸುವರೋ, ಇದಕ್ಕೆ ಅವರ ಪಕ್ಷ, ಸಂಪುಟ ಸಹದ್ಯೋಗಿಗಳು ಎಷ್ಟರ ಮಟ್ಟಿಗೆ ಸಹಕಾರ ನೀಡುವರೋ ಕಾದುನೋಡಬೇಕಿದೆ ಎಂದು ವಿಧಾನಪರಿಷತ್ ಮಾಜಿ ವಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರಕಾರ ಬರಲು ಎಚ್ಡಿಕೆ ಕೊಡುಗೆ
ಇನ್ನೂ 20:20 ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 20 ತಿಂಗಳ ಬಳಿಕ ಸಿಎಂ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸತಾಯಿಸಿದ ಪರಿಣಾಮ ವಚನ ಭ್ರಷ್ಟತೆ ಅಪಖ್ಯಾತಿಗೊಳಗಾಗಿಆ ಆಕ್ರೋಶ ಮುಂದೆ 2009ರಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಲು, ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿ ವಿಸ್ತರಿಸಲು ಜೆಡಿಎಸ್ ನಾಯಕರೆ ಕೊಡುಗೆ ನೀಡಿದಂತಾಯಿತು.
ಟಿ.ಎನ್.ಮಧುಕರ್/ ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ