ತುಮಕೂರು : ಸಾರಿಗೆ ಬಸ್‍ಗಳಿಲ್ಲದೆ ಪ್ರಯಾಣಕ್ಕೆ ತೊಂದರೆ

 ತುಮಕೂರು: 

      ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ಗೌರಿಬಿದನೂರಿಗೆ ತಲುಪಲು ಸರಿಯಾದ ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಈ ಮಾರ್ಗವಾಗಿ ಸಾಕಷ್ಟು ಬಸ್ ಓಡಿಸುತ್ತಿದ್ದು, ಕೊರೊನಾ ನಿಮಿತ್ತ ಈ ಬಸ್‍ಗಳನ್ನು ನಿಲುಗಡೆ ಮಾಡಲಾಗಿತ್ತು. ಇದೀಗ ಕೊರೊನಾ ಹತೋಟಿಯಲ್ಲಿದ್ದು, ಎಲ್ಲಾ ಸಾರಿಗೆ ಬಸ್‍ಗಳನ್ನೂ ಓಡಿಸಲು ಸರ್ಕಾರ ಆದೇಶ ನೀಡಿದೆ.

      ಆದರೆ, ಗೌರಿಬಿದನೂರು ಡಿಪೋದಿಂದ ಬರುವ ಬಸ್‍ಗಳು ಸರಿಯಾಗಿ ಆಪರೇಟರ್ ಆಗದೆ ಈ ಭಾಗದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬುದು ಪ್ರಯಾಣಿಕರ ದೂರು.

     ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ಮಧುಗಿರಿ, ಪಾವಗಡಕ್ಕೆ ಸಾಕಷ್ಟು ಸಾರಿಗೆ ಬಸ್‍ಗಳನ್ನು ಓಡಿಸುತ್ತಿದ್ದಾರೆ. ಆದರೆ ಗೌರಿಬಿದನೂರು ಕಡೆಗೆ ಮಾತ್ರ ನಾಮಕಾವಸ್ಥೆಗೆಂಬಂತೆ ಒಂದೆರಡು ಬಸ್‍ಗಳು ಓಡಾಡುತ್ತಿವೆ. ಇದರಿಂದ ಪ್ರಯಾಣಿಕರು ಆಟೋಗಳಿಗೆ ದುಪ್ಪಟ್ಟು ಹಣ ಕೊಟ್ಟು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

     ತುಮಕೂರಿನಿಂದ ಗೌರಿಬಿದನೂರು ಕಡೆಗೆ ಸಾಕಷ್ಟು ಖಾಸಗಿ ಬಸ್‍ಗಳು ಸಹ ಓಡಾಡುತ್ತಿದ್ದವು. ಆದರೆ ಗೌರಿಬಿದನೂರು ಡಿಪೋದವರು ನಾಮಕಾವಸ್ಥೆಗೆಂಬಂತೆ ಒಂದೆರಡು ಬಸ್‍ಗಳನ್ನು ಬಿಟ್ಟಿದ್ದರಿಂದ ಖಾಸಗಿ ಬಸ್‍ನವರು ತಮ್ಮ ಬಸ್‍ಗಳನ್ನು ಈ ಮಾರ್ಗವಾಗಿ ಓಡಿಸುವುದನ್ನು ನಿಲ್ಲಿಸಿದ್ದಾರೆ. ದಯವಿಟ್ಟು ಸಂಬಂಧಪಟ್ಟ ಸಾರಿಗೆ ಇಲಾಖಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ತುಮಕೂರಿನಿಂದ ಕೊರಟಗೆರೆ, ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ ಮಾರ್ಗವಾಗಿ ಗೌರಿಬಿದನೂರಿಗೆ ಸಾರಿಗೆ ಬಸ್ ಓಡಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ