ತುಮಕೂರು : ಬೊಮ್ಮಾಯಿ ಸರಕಾರದಲ್ಲಿ ಜಿಲ್ಲೆಗೆ ಡಬಲ್ ಧಮಾಕಾ..!

 ತುಮಕೂರು :

      ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲಿ ಮಂತ್ರಿಯಾಗಿ ಬುಧವಾರ ಮಧ್ಯಾಹ್ನ ಜಿಲ್ಲೆಯ ಇಬ್ಬರು ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಜಿಲ್ಲೆಗೆ ಡಬಲ್ ಧಮಾಕಾ ಎಂಬಂತಾಗಿದೆ.

      ಬಿಎಸ್‍ವೈ ಅವರ ಸರಕಾರದಲ್ಲಿ ಮಂತ್ರಿಯಾಗಿ ಸರಕಾರವನ್ನು ಸಮರ್ಥವಾಗಿ ಪ್ರತಿಪಾದಿಸಿಕೊಳ್ಳುತ್ತಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಪ್ರಸ್ತುತ ಬೊಮ್ಮಾಯಿ ಸರಕಾರದಲ್ಲೂ 2ನೇ ಬಾರಿಗೆ ಮಂತ್ರಿಗಿರಿ ಒಲಿದು ಬಂದಿದ್ದು, ಬೊಮ್ಮಾಯಿ ಸಂಪುಟಕ್ಕೆ ಹೊಸ ಮುಖವಾಗಿ ಪಕ್ಷನಿಷ್ಟ, ಸರಳತೆಯ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರು ಸೇರ್ಪಡೆಗೊಂಡಿರುವುದು ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಈ ಇಬ್ಬರು ಶಾಸಕರು ಯಾವುದೇ ದೆಹಲಿ ಪ್ರವಾಸ, ವರಿಷ್ಠರ ಭೇಟಿಯ ಲಾಭಿ ಮಾಡದೆ ತಮ್ಮ ಕ್ಷೇತ್ರದಲ್ಲೇ ಉಳಿದು ಅರ್ಹತೆಯ ಆಧಾರದಲ್ಲೇ ಮಂತ್ರಿಗಿರಿ ಒಲಿದು ಬರುವಂತೆ ಮಾಡಿದ್ದು, ಗಮನಾರ್ಹವೆನಿಸಿದೆ.

     ಕರೆ ಬರುವವರೆಗೆ ಜೆ.ಸಿ.ಪುರದಲ್ಲೇ ಇದ್ದರು:

      ಬಿಎಸ್‍ವೈ ಸರಕಾರದ ಸಚಿವರಾಗಿದ್ದ ಅನೇಕ ಹಿರಿಯರಿಗೆ ಕೋಕ್ ನೀಡಲಾಗುತ್ತದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟದಿಂದ ಹೊರಗುಳಿಯುತ್ತಾರೆ ಎಂಬ ಚರ್ಚೆಗಳು ಇತ್ತೀಚೆಗೆ ಶುರುವಾಗಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕ್ಷೇತ್ರದಲ್ಲಿ ಉಳಿದು ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನ ಹರಿಸಿದ್ದ ಮಾಧುಸ್ವಾಮಿ ಅವರು ಮನೆಗೆ ಬಂದ ಅಭಿಮಾನಿ, ಕಾರ್ಯಕರ್ತರಿಗೂ ಯಾರು ಆತಂಕಪಡುವ ಅಗತ್ಯವಿಲ್ಲ. ಅವರಾಗೇ ಕೊಟ್ಟರೆ ಮಂತ್ರಿಸ್ಥಾನ ನಿಭಾಯಿಸುತ್ತೇನೆ. ಇಲ್ಲವಾದರೆ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಹೇಳುತ್ತಿದ್ದರು. ಬುಧವಾರ ಬೆಳಿಗ್ಗೆಯವರೆಗೂ ಸ್ವಕ್ಷೇತ್ರ ಚಿ.ನಾ.ಹಳ್ಳಿ ಜೆ.ಸಿ.ಪುರ ನಿವಾಸದಲ್ಲೇ ಉಳಿದಿದ್ದ ಮಾಧುಸ್ವಾಮಿ ಅವರು ಸಂಪುಟ ಸೇರುವವರ ಪಟ್ಟಿ ಅಧಿಕೃತಪಟ್ಟಿ ಘೋಷಣೆಯಾಗಿ ಸಿಎಂ ಕರೆ ಮಾಡಿದ ಬಳಿಕವಷ್ಟೇ ಕ್ಷೇತ್ರದಿಂದ ರಾಜಭವನಕ್ಕೆ ಪ್ರಮಾಣವಚನ ಸ್ವೀಕರಿಸಲು ಹೊರಟರು. ಜೆಸಿಎಂ ಕಾರ್ಯವೈಖರಿ ಬಗೆಗೆ ಬಿಜೆಪಿ ನಾಯಕರೊಳಗೆ ಒಳಗೊಳಗೆ ಇರುವ ಅಪಸ್ವರದ ನಡುವೆಯೂ ಅವರ ಕಾನೂನು ತಜ್ಞತೆ, ನೇರ ನಡೆ, ವಿಪಕ್ಷಗಳಿಗೆ ಠಕ್ಕರ್ ಕೊಡುವ ಪರಿ ಹಾಗೂ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವುದು ಜೆಸಿಎಂ ಅವರು ಮಂತ್ರಿಮಂಡಲದಲ್ಲಿ ಮತ್ತೆ ಮುಂದುವರಿಯುವಂತೆ ಮಾಡಿದೆಯೆಂಬುದು ವಾಸ್ತವ.

 ಪಕ್ಷನಿಷ್ಟರಾಗಿದ್ದಕ್ಕೆ ಸಿಕ್ಕ ಮನ್ನಣೆ :

      ಮೂಲ ಬಿಜೆಪಿ ಕಾರ್ಯಕರ್ತರಾಗಿರುವ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಪಕ್ಷ ನಿಷ್ಠೆ ಅವರಿಗೆ ಮಂತ್ರಿಗಾದಿ ಸುಲಭವಾಗಿ ಧಕ್ಕುವಂತೆ ಮಾಡಿತೆಂದರೆ ಅತಿಶಯೋಕ್ತಿಯಲ್ಲ. ಬ್ರಾಹ್ಮಣ ಸಮುದಾಯಕ್ಕೆ ಸೇರಿ ಕ್ಷೇತ್ರದಲ್ಲಿ ಸಮುದಾಯದವರ ಮತಗಳು ಕಡಿಮೆ ಸಂಖ್ಯೆಯಲ್ಲಿದ್ದರೂ, 2ನೇ ಬಾರಿಗೆ ತಿಪಟೂರಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ನಾಗೇಶ್ ಅವರನ್ನು ಪಕ್ಷ, ಸಂಘ ಪರಿವಾರದವರು ಗುರುತಿಸಿ ಮಂತ್ರಿ ಮಾಡಿದ್ದು, ಇವರು ಸಹ ಮಂತ್ರಿಗಿರಿಗಾಗಿ ಯಾರ ಮನೆ ಬಾಗಿಲಿಗೂ ಅಲೆಯಲಿಲ್ಲ ಎಂಬುದು ಗಮನಾರ್ಹ ಸಂಗತಿ. ಬಿಎಸ್‍ವೈ ಸರಕಾರದಲ್ಲಿ ತೆಂಗುನಾರುಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ, ಕಾರ್ಮಿಕ ಕಲ್ಯಾಣಮಂಡಳಿ ಅಧ್ಯಕ್ಷಸ್ಥಾನ ನೀಡಿದರೂ ಅಧಿಕಾರದಲ್ಲಿ ಕೂರದೆ ಶಾಸರಾಗಿಯೇ ಉಳಿದಿದ್ದ ನಾಗೇಶ್ ಅವರಿಗೆ ಈ ಬಾರಿ ಮಂತ್ರಿಗಿರಿ ತಾನಾಗಿಯೇ ಒಲಿದುಬಂದಿದೆ.

ಅಭಿವೃದ್ಧಿಯ ಶಕೆ ಇನ್ನಾದರೂ ಆಗುವುದೇ?:

      ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ 29 ಮಂದಿ ಸಚಿವರು ಹೊಸದಾಗಿ ನಿಯುಕ್ತಿಗೊಂಡರೂ 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಆದರೆ ತುಮಕೂರು ಜಿಲ್ಲೆಯ ಇಬ್ಬರು ಶಾಸಕರಿಗೆ ಮಂತ್ರಿಗಿರಿ ಸಿಕ್ಕಿದ್ದು,ಇಬ್ಬರದ್ದು ಸರಕಾರದ ಮಟ್ಟದಲ್ಲಿ ಪ್ರಭಾವ ಬೀರುವ ವ್ಯಕ್ತಿತ್ವ.ಕಳೆದ ಎರಡು ವರ್ಷದ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ಹಿನ್ನಡೆ ಆಗಿವೆ. ಪ್ರಮುಖವಾಗಿ ಹೇಮಾವತಿ ನಾಲಾ ಆಧುನೀಕರಣ, ಕೆರೆಗಳಿಗೆ ನೀರುತುಂಬಿಸುವ ಯೋಜನೆ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ, ಹೆದ್ದಾರಿ ಕಾಮಗಾರಿಗಳು ಕುಂಠುತ್ತಾ ಸಾಗಿತ್ತು, ನರೇಗಾ, ಸ್ಮಾರ್ಟ್‍ಸಿಟಿಯಂತಹ ಕಾಮಗಾರಿಗಳ ಅನುಷ್ಠಾನದಲ್ಲಿ ಹಲವು ಲೋಪಗಳು ಕಂಡುಬಂದಿವೆ. ರಾಜಧಾನಿಗೆ ಸನಿಹದಲ್ಲಿ ಕೈಗಾರಿಕಾ ನೋಡ್ ಆಗುವತ್ತಾ ದಾಪುಗಾಲಿಟ್ಟಿರುವ ಜಿಲ್ಲೆಯ ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಪ್ರವಾಸಿತಾಣಗಳ ಅಭಿವೃದ್ಧಿಗೆ ಜಿಲ್ಲೆಯನ್ನು ಪ್ರತಿನಿಧಿಸುವ ಇಬ್ಬರು ಸಚಿವರು ಯಾವ ಮಟ್ಟಿನ ಕೊಡುಗೆ ನೀಡುವರು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ತಿಪಟೂರು ಉಪವಿಭಾಗ ಇನ್ನೂ ಅಧಿಕಾರ ಕೇಂದ್ರ ; ಗರಿಗೆದರಿದ ಪ್ರತ್ಯೇಕ ಜಿಲ್ಲೆಯಾಗುವ ಬೇಡಿಕೆ

      ತಿಪಟೂರು ಉಪವಿಭಾಗ ವ್ಯಾಪ್ತಿಯ ಚಿ.ನಾ.ಹಳ್ಳಿ, ತಿಪಟೂರು ಕ್ಷೇತ್ರಗಳಿಗೆ ಮಂತ್ರಿಸ್ಥಾನ ದೊರೆತಿರುವುದು ಜಿಲ್ಲೆಯ 3 ಉಪವಿಭಾಗಗಳಲ್ಲಿ ತಿಪಟೂರು ವಿಭಾಗ ಅಧಿಕಾರ ಕೇಂದ್ರಸ್ಥಾನವಾಗಿ ಪರಿಣಮಿಸಿದೆಯಲ್ಲದೆ, ದಶಕಗಳಿಂದ ಇರುವ ತಿಪಟೂರು ಉಪವಿಭಾಗವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಬೇಡಿಕೆ ಮತ್ತೆ ಗರಿಗೆದರುವಂತೆ ಮಾಡಿದೆ. ಟಿ.ಎಂ.ಮಂಜುನಾಥ್ ಅವರ ಬಳಿಕ 2ನೇ ಬಾರಿಗೆ ತಿಪಟೂರಿಗೆ ಮಂತ್ರಿಸ್ಥಾನ ದೊರೆತಿದ್ದು, ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್ ಅವರೇ ಮಂತ್ರಿಯಾಗಿರುವುದು ಜಿಲ್ಲಾ ರಚನೆ ಒತ್ತಡ ಶಾಸಕರ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಜಾಲತಾಣಗಳಲ್ಲಿ ತಿಪಟೂರನ್ನು ಜಿಲ್ಲೆಯಾಗಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿದೆ.

      ಕಳೆದ ಎರಡು ವರ್ಷಗಳಲ್ಲಿ ಕೋವಿಡ್, ನೆರೆ, ಲಾಕ್‍ಡೌನ್‍ಗಳ ಕಾರಣದಿಂದ ಸರಕಾರಕ್ಕೂ ಅನುದಾನ ಕೊರತೆ ಉಂಟಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆಡಳಿತ ನಡೆಸುವುದೇ ಸವಾಲಾಗಿತ್ತು. ಉಳಿಕೆ ಅವಧಿಗೆ ಮತ್ತೆ ಸಚಿವರಾಗುವ ಅವಕಾಶ ದೊರೆತಿದ್ದು ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶ್ರಮಿಸುತ್ತೇವೆ. ಜನರ ನಿರೀಕ್ಷೆಯ ಶೇ.60-70ಭಾಗವನ್ನಾದರೂ ಈಡೇರಿಸುತ್ತೇವೆ. ಖಾತೆ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟಿದ್ದು ಇಂತಹುದೇ ಖಾತೆ ಬೇಕೆಂದು ಕೇಳೊಲ್ಲ.

-ಜೆ.ಸಿ.ಮಾಧುಸ್ವಾಮಿ, ನೂತನ ಸಚಿವರು.

      ನಮ್ಮ ಬಿಜೆಪಿ ಸರಕಾರದಲ್ಲಿ ಜಿಲ್ಲೆಯ ಇಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಸರಕಾರದಲ್ಲಿ ಮಾಧುಸ್ವಾಮಿ ಅವರಂತಹ ಪ್ರಜ್ಞಾವಂತಿಕೆಯ ಮಂತ್ರಿಗಳು ಇರಬೇಕು. ಅಂತೆಯೇ ಸರಳ, ತತ್ವ ಸಿದ್ಧಾಂತದ ನಾಗೇಶ್ ಅವರಿಗೆ ಸಚಿವಸ್ಥಾನ ಸಿಕ್ಕಿರುವುದು ಪಕ್ಷ, ಜಿಲ್ಲೆಗೆ ಒಳಿತಾಗಲಿದೆ.

-ಜಿ.ಬಿ.ಜ್ಯೋತಿಗಣೇಶ್, ನಗರ ಬಿಜೆಪಿ ಶಾಸಕ.

 

    ಕೇಂದ್ರ ಮತ್ತು ರಾಜ್ಯದಲ್ಲೇ ನಮ್ಮದೇ ಸರಕಾರವಿದ್ದರೆ ಅಭಿವೃದ್ಧಿ ಹೊಳೆಯೇ ಹರಿಯಲಿದೆ ಎಂದ ಬಿಜೆಪಿಯವರು ಕೋವಿಡ್, ಅಭಿವೃದ್ಧಿ ವಿಚಾರದಲ್ಲಿ ವಿಫಲವಾಗಿರುವ ಉದಾಹರಣೆ ಕಣ್ಮುಂದಿದೆ. ಜಿಲ್ಲೆಗೆ ಬಿಜೆಪಿ ಸರಕಾರದಿಂದ 3 ತಿಂಗಳಿಗೊಮ್ಮೆ ಕೆಡಿಪಿ ಸಭೆ ಸರಿಯಾಗಿ ನಡೆಯುತ್ತಿದೆ ಬಿಟ್ಟರೆ ಯಾವ ಕೊಡುಗೆಯೂ ಇಲ್ಲ.ಅಭಿವೃದ್ಧಿಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲ. ಈಗ ಮತ್ತೆ ಇಬ್ಬರಿಗೆ ಮಂತ್ರಿಸ್ಥಾನ ಸಿಕ್ಕಿರುವುದು ಸ್ವಾಗತಾರ್ಹ. ಜಿಲ್ಲೆಯ ಪ್ರಗತಿ ಯಾವ ರೀತಿ ಆಗುತ್ತದೆ ಮುಂದಿನ ದಿನಗಳಲ್ಲಿ ಕಾದು ನೋಡೋಣ.

-ಡಾ.ಎಚ್.ಡಿ.ರಂಗನಾಥ್, ಕುಣಿಗಲ್ ಶಾಸಕರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap