ತುಮಕೂರು : ಇದು ರಾಷ್ಟ್ರೀಯ ಹೆದ್ದಾರಿಯೋ? ಯಮನೆಡೆಗೆ ದಾರಿಯೋ?

 ತುಮಕೂರು : 

ತುಮಕೂರಿನ ಹನುಮಂತಪುರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಿದ್ದಿರುವ ಗುಂಡಿಗಳು.

     ವಾಹನಗಳು ಓಡಾಡುವುದಕ್ಕೆ ವ್ಯವಸ್ಥಿತವಾದ ರಸ್ತೆ ಇರಬೇಕಾದದ್ದು ಅತ್ಯಂತ ಅವಶ್ಯಕ, ಅದರಲ್ಲೂ ಸರಕುಸಾಗಣೆ, ಅಂತರ್‍ಜಿಲ್ಲಾ, ಅಂತರ್‍ರಾಜ್ಯ ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ದೇಶಕ್ಕೆ ಶೋಭಾಯಮಾನವಾಗುವಂತೆ ವ್ಯವಸ್ಥಿತರೀತಿಯಲ್ಲಿರಬೇಕು. ಆದರೆ ಸುಂಕ ಕಟ್ಟಿಸಿಕೊಳ್ಳುವ ಹೆದ್ದಾರಿ ಗ್ರಾಮೀಣ ರಸ್ತೆಗಳಿಗೆ ಕಡೆಯೆಂಬಂತೆ ಗುಂಡಿಗಳಿಂದ ಆವೃತ್ತವಾಗಿರುವುದು ಅಪಘಾತ ಸಾವು-ನೋವುಗಳಿಗೆ ಎಡೆಮಾಡುತ್ತಿದೆ.

      ತುಮಕೂರು ನಗರದ ಬಟವಾಡಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹನುಮಂತಪುರದಿಂದ ಕೋರಾದವರೆಗೆ ಹತ್ತು ಅಡಿಗೊಂದರಂತೆ ಗುಂಡಿಬಿದ್ದಿದ್ದು, ಪ್ರತಿನಿತ್ಯ ಪ್ರಯಾಣಿಕರ ಬಲಿ ಪಡೆಯಲು ಕಾದು ಕುಳಿತಂತೆ ಕಂಡುಬರುತ್ತಿದೆ.

      7 ರಾಜ್ಯ 2807 ಕಿ.ಮೀ ಸಾಗುವ ಹೆದ್ದಾರಿ: 

      ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಈ 7 ರಾಜ್ಯಗಳನ್ನು ಹಾದು ಹೋಗುವ ಎನ್.ಎಚ್ 48, 2807 ಕಿ.ಮೀ ಉದ್ದವನ್ನು ಕ್ರಮಿಸಲಿದ್ದು, ತುಮಕೂರು ಜಿಲ್ಲಾ ಕೇಂದ್ರಕ್ಕೆ ಈ ಹೆದ್ದಾರಿಯ ಮೂಲಕವೇ ಪ್ರವೇಶ ಪಡೆಯಲಿದೆ. ಅದರಲ್ಲೂ ದೇಶದ ವಾಣಿಜ್ಯ ನಗರಿಗಳಾದ ಚೆನ್ನೈ- ಮುಂಬೈಗೆ ನಿತ್ಯ ಸಾವಿರಾರು ಸರಕು ಸಾಗಣೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಕರ್ನಾಟಕ ಗಡಿ ದಾಟುವಾಗಲೇ ಸುಮಾರು 15ಕ್ಕೂ ಅಧಿಕ ಸುಂಕ ವಸೂಲಿ ಟೋಲ್‍ಗಳನ್ನು ದಾಟಿ ಸಾಗಬೇಕಿದೆ. ಸಿರಾಕ್ಕೆ ಹೋಗುವ ಮಾರ್ಗ ಮಧ್ಯೆ ಸಿಗುವ ಕರಜೀವನಹಳ್ಳಿ ಟೋಲ್‍ವೊಂದರಲ್ಲೇ 57ಕಿ.ಮೀ. ವ್ಯಾಪ್ತಿಗೆ ಒಮ್ಮೆ ಪ್ರಯಾಣಕ್ಕೆ ಬಸ್‍ಟ್ರಕ್‍ಗಳಿಗೆ 295 ರೂ. ಶುಲ್ಕ ನಿಗದಿಪಡಿಸಿದ್ದು, ಕಾರು ಜೀಪುಗಳಿಗೆ 85 ರೂ. ನಿಗದಿಪಡಿಸಲಾಗಿದೆ. ಹೀಗೆ ರಾಜ್ಯದ ಗಡಿ ದಾಟುವಷ್ಟರಲ್ಲೇ ಟೋಲ್ ಶುಲ್ಕವಾಗಿಯೇ ಟ್ರಕ್, ಬಸ್ ಚಾಲಕರು ಸಾವಿರಾರು ರೂ.ಗಳನ್ನು ಶುಲ್ಕವಾಗಿ ತೆತ್ತಬೇಕಿದೆ.

     ಸುಂಕ ಕೊಟ್ಟು, ಪ್ರಾಣಬಲಿ:

     ಇಷ್ಟೊಂದು ದುಬಾರಿ ಟೋಲ್ ಸುಂಕ ತೆತ್ತರೂ ರಸ್ತೆಗಳು ಮಾತ್ರ ಪ್ರಯಾಣಿಕರ ಸ್ನೇಹಿಯಾಗಿಲ್ಲ. ಗುಂಡಿಗಳಿಂದ ಕೂಡಿರುವುದರಿಂದ ಪ್ರತಿನಿತ್ಯ ಅಪಫಾತಗಳು ಸಂಭವಿಸುತ್ತಲೇ ಇರುತ್ತಿದ್ದು, ಇದುರಾಷ್ಟ್ರೀಯ ಹೆದ್ದಾರಿಯೋ?- ಯಮನೆಡೆಗೆ ದಾರಿಯೋ ಎಂಬ ಪ್ರಶ್ನೆಯನ್ನು ವಾಹನ ಸವಾರರಲ್ಲಿ ಮೂಡಿಸಿದೆ. ಸುಂಕ ವಸೂಲಿ ಮಾಡುವ ಕಂಪನಿಗಳು ಬರೀ ಹಣ ಸಂಗ್ರಹಿಸುತ್ತಿರುವೇ ತಮ್ಮ ಜವಾಬ್ದಾರಿಯಾದ ರಸ್ತೆ ದುರಸ್ತಿ ಕಡೆಗೆ ಗಮನಹರಿಸುತ್ತಿಲ್ಲ. ಇದರಿಂದ ಅಮಾಯಕ ಸವಾರರ ಜೀವಗಳು ಬಲಿಯಾಗುತ್ತಿವೆ.

ನಿಯಂತ್ರಣ ತಪ್ಪಿ ಕೆಳಗುರುಳುವ ವಾಹನಗಳು:

ರಸ್ತೆ ವಿಭಜಕದಲ್ಲಿ ಅಳವಡಿಸಿರುವ ನಿಯಂತ್ರಣ ಕಂಬಿಗಳ ದುಃಸ್ಥಿತಿ.

       ವಾಹನ ಸವಾರರಿಗೆ ಇಲ್ಲಿ ತಮ್ಮ ವಾಹನಗಳನ್ನು ಚಾಲನೆ ಮಾಡುವುದು ದೊಡ್ಡ ಸವಾಲೆನಿಸಿದ್ದು, ಬೇಸಿಗೆಯಲ್ಲಿ ಗುಂಡಿಗಳಿಂದ ದೂಳಿನ ಸಮಸ್ಯೆ ಕಂಡುಬರುತ್ತದೆ, ಮಳೆಗಾಲದಲ್ಲಿ ನೀರು ತುಂಬಿಕೊಂಡು ಯಾವ ಗುಂಡಿ ಎಷ್ಟು ಆಳವಿದೆ ಎಂದೇ ಗೊತ್ತಾಗದೆ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳುವಂತಾಗಿದೆ. ಇನ್ನೂ ಈ ಹಾಳಾದ ರಸ್ತೆಯ ಮೂಲಕ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪಿ ಪಕ್ಕದ ವಾಹನಕ್ಕೆ ಮತ್ತು ಡಿವೈಡರ್ ಗೆ ಡಿಕ್ಕಿ ಹೊಡೆದ ಅನೇಕ ಉದಾಹರಣೆಗಳು ಕಣ್ಣ ಮುಂದಿವೆ.

ಹಾಳಾಗಿರುವ ಡಿವೈಡರ್ ಕಂಬಿಗಳು:

      ಇದು ಸಾಲದು ಎಂಬಂತೆ ಡಿವೈಡರ್ ಗೆ ಅಳವಡಿಸಿರುವ ನಿಯಂತ್ರಣ ಕಂಬಿಗಳು ಹಾಳಾಗಿದ್ದು ಅದರ ಪಕ್ಕದಲ್ಲಿ ಓಡಾಡುವ ವಾಹನಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಸುಳ್ಳಲ್ಲ. ಇದು ಅಧಿಕಾರಿಗಳಿಗೆ ಕಂಡು ಬರುತ್ತಿಲ್ಲವೇ ಅಥವಾ ಕಂಡೂಕಾಣದಂತೆ ಕುರುಡು ಮೌನವನ್ನು ಜನರಿಗೆ ತೋರಿಸುತ್ತಿದೆಯೇ ಗೊತ್ತಿಲ್ಲ. ಈ ಹಾಳಾದ ರಸ್ತೆಯಿಂದಾಗಿ ಕೆಲವು ಕಡೆ ಬ್ರಿಡ್ಜ್ ಗಳ ಮೇಲೆ ಬೃಹತ್ ವಾಹನಗಳು ಸಂಚಾರ ಮಾಡಿದರೆ, ಇಡೀ ಬ್ರಿಡ್ಜ್ ಒಂದುಕ್ಷಣ ಅಲುಗಾಡಿದ ಅನುಭವವಾಗುತ್ತದೆ. ಈ ರಸ್ತೆಯಲ್ಲಿ ಕಾರು ಮತ್ತು ಬೃಹತ್ ವಾಹನಗಳು ಸಂಚಾರ ಮಾಡುವುದಕ್ಕೆ ಹರಸಾಹಸ ಪಡುತ್ತಿರುವಾಗ ಇನ್ನು ದ್ವಿಚಕ್ರವಾಹನದ ಸವಾರರ ಕಥೆ ಹೇಳತೀರದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ