ಹೂ-ಹಣ್ಣು ಬೆಳೆಗಾರರ ಬದುಕಿಗೆ ಬರೆ ಎಳೆದ ಹಾರ-ತುರಾಯಿ ನಿಷೇಧ!

 ತುಮಕೂರು :

     ರಾಜ್ಯ ಸರಕಾರ ಆ.10ರಂದು ಆದೇಶವೊಂದನ್ನು ಹೊರಡಿಸಿ ಸರಕಾರ ಹಾಗೂ ಸರಕಾರಿ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಸಮಾರಂಭಗಳಲ್ಲಿ ಹೂಗುಚ್ಛ ಹಾರ ತುರಾಯಿ, ಹಣ್ಣಿನ ಬುಟ್ಟಿ ಶಾಲು ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ನಿಷೇಧಿಸಿ, ಇದಕ್ಕೆ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ನಿರ್ದೇಶಿಸಿದೆ. ಕನ್ನಡ ಪುಸ್ತಕಗಳನ್ನು ನೀಡುವುದು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಜ್ಞಾನಶಾಖೆಯನ್ನು ವಿಸ್ತರಿಸುವ ದಿಸೆಯಲ್ಲಿ ಸ್ವಾಗತಾರ್ಹವೇ. ಆದರೆ ಹಣ್ಣು, ಹೂ ನಿಷೇಧ ಪುಷ್ಪ, ಹಣ್ಣಿನ ಬೆಳೆಗಾರರು, ಮಾರಾಟದ ಮೇಲೆ ದೊಡ್ಡ ಹೊಡೆತ ನೀಡುತ್ತಿರುವುದಲ್ಲದೇ ಜೀವನದಲ್ಲಿ ಒಮ್ಮೆ ಸರಕಾರಿ ವೇದಿಕೆಯಲ್ಲಿ ಸ್ಮರಣೀಯ ಸನ್ಮಾನ ಸ್ವೀಕರಿಸಬೇಕೆಂದು ಬಯಸಿದವರಲ್ಲಿ ನಿರಾಶೆಗೆ ಕಾರಣವಾಗಿದೆ.

ಹಿಂದಿನಿಂದಲೂ ಜಿಲ್ಲಾ, ರಾಜ್ಯಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಗಣರಾಜ್ಯೋತ್ಸವ, ಕಾರ್ಮಿಕ ದಿನಾಚರಣೆ ಹೀಗೆ ನಾನಾ ಜಯಂತಿಗಳ ಆಚರಣೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಗಣ್ಯರನ್ನು, ಉಪನ್ಯಾಸ ನೀಡುವ ಸಂಪನ್ಮೂಲ ವ್ಯಕ್ತಿಗಳು, ಪ್ರಸಿದ್ಧ ವಿದ್ವಾಂಸರನ್ನು ಸರಕಾರಿ ವೇದಿಕೆಯಲ್ಲಿ ಸನ್ಮಾನಿಸುವ ಸಂದರ್ಭದಲ್ಲಿ ಅವರಿಗೆ ಫಲತಾಂಬೂಲವಾಗಿ ಹಣ್ಣಿನ ಬುಟ್ಟಿ, ಹೂವ್ವು ಇಲ್ಲವೇ ಗಂಧದ ಹಾರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಗುತ್ತಿತ್ತು. ಚುನಾವಣೆ ಸಂದರ್ಭಗಳಲ್ಲಿ ಗೆದ್ದಾಗ, ಸಭೆ, ಸಮಾರಂಭ, ತರಬೇತಿ ಕಾರ್ಯಗಾರಗಳಲ್ಲಿ ಸಾಂಕೇತಿಕವಾಗಿ ಹಾರ, ಹೂ ಹಾಕಿ ಅಭಿನಂದಿಸಲಾಗುತ್ತಿತ್ತು. ಆದರೆ ಸರಕಾರಿ ಆದೇಶ ಇವಕ್ಕೆಲ್ಲ ಕೊಕ್ಕೆ ಹಾಕಿದ್ದು, ಕನ್ನಡಪುಸ್ತಕ ಪ್ರೇಮ ಬೆಳೆಸುವ ಹೆಸರಲ್ಲಿ ಹೂ ಹಣ್ಣು ಬೆಳೆಗಾರರನ್ನು ಸರಕಾರದ ಪ್ರೋತ್ಸಾಹದಿಂದಲೇ ವಂಚಿಸಲಾಗುತ್ತಿದೆ ಎಂಬ ಅಸಮಾಧಾನಗಳು ಚಿಂತಕರು, ರೈತಾಪಿ ವಲಯದಿಂದಲೇ ಕೇಳಿಬಂದಿದೆ.

      ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಏನಿಲ್ಲವೆಂದರೂ ವಿವಿಧ ಜಯಂತಿ ಗ್ರಾಮಸಭೆಗಳಲ್ಲೇ ವರ್ಷಕ್ಕೆ ಕನಿಷ್ಠ 10 ಸಾವಿರದಷ್ಟು ಹಣವನ್ನು ಹಣ್ಣು, ಹೂ ಖರೀದಿಗೆ ವಿನಿಯೋಗ ಮಾಡಲಾಗುತ್ತಿತ್ತು. ತಾಲೂಕು ಮಟ್ಟದ ವಿವಿಧ ಇಲಾಖೆ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಯೊಬ್ಬರು ವಾರ್ಷಿಕ 20 ಸಾವಿರ ಮೊತ್ತದಷ್ಟು ಹಣ್ಣು, ಹೂಗಳಿಗೆ ವ್ಯಯ ಮಾಡುತ್ತಿದ್ದರು. ಜಿಲ್ಲಾಮಟ್ಟದಲ್ಲೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‍ಗಳು, ಕನ್ನಡ ಸಂಸ್ಕøತಿ ಇಲಾಖೆ, ಪಾಲಿಕೆ, ವಿಶ್ವವಿದ್ಯಾಲಯ ಮಟ್ಟದಲ್ಲೂ ಪ್ರತೀ ಸಂಸ್ಥೆಯೂ ವಾರ್ಷಿಕ 25 ರಿಂದ 50 ಸಾವಿರ ಮೊತ್ತಕ್ಕೂ ಮೀರಿ ಹಾರ ತುರಾಯಿ, ನೆನಪಿನ ಕಾಣಿಕೆಗಳಿಗೆ ಖರ್ಚು ಮಾಡುತ್ತಿತ್ತು.

    ಕೋಟ್ಯಾಂತರ ರೂ. ಆದಾಯ ನಷ್ಟ:

      ತುಮಕೂರು ಜಿಲ್ಲೆಯನ್ನೇ ಅವಲೋಕಿಸುವುದಾದರೆ 330 ಗ್ರಾಮಪಂಚಾಯ್ತಿಗಳ ಪೈಕಿ ಪ್ರತಿ ಪಂಚಾಯ್ತಿ ವಾರ್ಷಿಕ ಹತ್ತು ಸಾವಿರ ಹಣ್ಣು- ಹಾರಕ್ಕೆ ಖರ್ಚು ಲೆಕ್ಕ ಹಾಕಿದರೂ ಇದರ ಬಾಬ್ತೇ 33 ಲಕ್ಷವಾಗುತ್ತದೆ. ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆಗಳು, ತಾಲೂಕು ಮಟ್ಟದ ಇಲಾಖೆಗಳಿಂದಲೂ ಸಹ ವಾರ್ಷಿಕ ಕನಿಷ್ಠ 10-15 ಲಕ್ಷ, ಇನ್ನೂ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ಹಬ್ಬ, ನಾಡಹಬ್ಬ, ದಸರಾ, ಕ್ರೀಡಾಕೂಟ, ಪ್ರಶಸ್ತಿ ಪ್ರಧಾನ ಸಮಾರಂಭಗಳು, ವಿಶ್ವವಿದ್ಯಾಲಯದ ಘಟಿಕೋತ್ಸವಗಳು, ವಿಚಾರ ಸಂಕಿರಣಗಳು, ಶಾಲಾ ಕಾಲೇಜುಗಳ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳು, ಇಲಾಖಾವಾರು ತರಬೇತಿ ಕಾರ್ಯಗಾರ, ಪುರಸ್ಕಾರಗಳು.., ಹೀಗೆ ಕನಿಷ್ಠ ಜಿಲ್ಲಾ ಕೇಂದ್ರದಲ್ಲೇ ವಾರ್ಷಿಕ ಎಲ್ಲಾ ಇಲಾಖೆಯಿಂದ ಕೋಟಿಗೂ ಮೀರಿ ಹೂವ್ವು, ಹಣ್ಣು, ನೆನಪಿನ ಕಾಣಿಕೆಯ ವಹಿವಾಟು ನಡೆಯುತ್ತಿತ್ತು. ಆದರೆಸರಕಾರಿ ಆದೇಶ ಇದಕ್ಕೆಲ್ಲ ಕೊಕ್ಕೆ ಹಾಕಿದ್ದು, ರೈತರಿಗೆ, ವರ್ತಕರಿಗೆ ಕೋಟ್ಯಾಂತರ ರೂ. ಆದಾಯಕ್ಕೆ ಧಕ್ಕೆ ತಂದಿದೆ.

ಸ್ಪಷ್ಟತೆಯಿಲ್ಲದ ಸರಕಾರಿ ಆದೇಶದಿಂದ ಜಿಲ್ಲಾಡಳಿತಕ್ಕೆ ಗೊಂದಲ :

      ಆ.10ರಂದು ಹೊರಡಿಸಿರುವ ಸರಕಾರಿ ಆದೇಶದಲ್ಲಿ ಸರಕಾರಿ ಸಭೆ, ಸಮಾರಂಭಗಳಲ್ಲಿ, ಹಾರ, ತುರಾಯಿ ನೆನಪಿನ ಕಾಣಿಕೆ ನೀಡಬಾರದು ಎಂದು ಹೇಳಲಾಗಿದೆ ಹೊರತು ಅದು ಯಾರಿಗೆಲ್ಲ ಅನ್ವಯ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕಾರಣದಿಂದಆ.15ರಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ ಮಾಡಲಾದ ಕೊರೊನಾ ಮುಂಚೂಣಿ ಕಾರ್ಯಕರ್ತರು, ಪೌರಕಾರ್ಮಿಕರು, ವಿವಿಧ ಕ್ಷೇತ್ರದ ಸಾಧಕರಿಗೂ ಬರೀ ಪುಸ್ತಕವೊಂದನ್ನು ಮಾತ್ರ ನೀಡಿ ಪುರಸ್ಕರಿಸಲಾಯಿತು. ಪೌರಕಾರ್ಮಿಕರಿಗೂ ಕನಿಷ್ಠ ಹಣ್ಣಿನ ಬುಟ್ಟಿಯೂ ಕೊಡಲಾಗದ್ದು ಇದೆಂಥಹಾ ಸನ್ಮಾನ ಎಂಬ ಟೀಕೆಗೆ ಗುರಿಯಾಯಿತು. ಆದರೆ ಆ.18ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯಮಟ್ಟದ ವಿವಿಧ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕøತರಿಗೆ ಶಾಲು, ಹಾರ, ತುರಾಯಿ, ಫಲಕ ನೀಡಿಯೇ ಸನ್ಮಾನಿಸಲಾಗಿದೆ. ಸರಕಾರ ಆದೇಶ, ರಾಜ್ಯಮಟ್ಟಕ್ಕೊಂದು ರೀತಿ, ಜಿಲ್ಲಾಮಟ್ಟಕ್ಕೊಂದು ರೀತಿಯೇ ಅಥವಾ ಜಿಲ್ಲಾಡಳಿತ, ಸ್ಥಳೀಯ ಆಡಳಿತಗಳು ಅರ್ಥೈಸಿಕೊಳ್ಳುವಲ್ಲಿ ಎಡವಿದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ. ಸರಕಾರಿ ವೇದಿಕೆಗಳಲ್ಲಿ ಸಾಧಕರಿಗೆ ಜೀವಿತದಲ್ಲೊಮ್ಮೆ ನಡೆಯುವ ಸನ್ಮಾನವನ್ನು ಸ್ಮರಣೀಯವಾಗುವಂತೆ ಮಾಡಬೇಕಲ್ಲವೇ. ಸಾಂಪ್ರದಾಯಿಕ ಸನ್ಮಾನದ ಜೊತೆಗೆ ಕನ್ನಡ ಪುಸ್ತಕವನ್ನು ಉಡುಗೊರೆ ಕೊಡಲಿ ಎಂಬ ಹಕ್ಕೊತ್ತಾಯ ಪ್ರಜ್ಞಾವಂತರಿಂದ ಕೇಳಿಬಂದಿದೆ.

ಕನ್ನಡ ಪುಸ್ತಕಗಳಿಗೆ ಹೆಚ್ಚಿದ ಬೇಡಿಕೆ

      ಆ.10ರಂದು ಸರಕಾರಿ ಸಭೆ ಸಮಾರಂಭದಲ್ಲಿ ಹಾರ-ತುರಾಯಿ ಬದಲಾಗಿ ಕನ್ನಡಪುಸ್ತಕ ನೀಡಬೇಕೆಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ ಬೆನ್ನಲ್ಲೇ ಕನ್ನಡ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆಂದೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 8,500 ರೂ. ಮೊತ್ತದ ಪುಸ್ತಕವನ್ನು ವಿವಿಧ ಇಲಾಖೆಯವರು ಖರೀದಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಕುಲಪತಿಯವರು ಸುತ್ತೋಲೆಯೊಂದನ್ನು ಕಳುಹಿಸಿ ಕಾಲೇಜುಗಳವರು ವಿವಿ ಪ್ರಸಾರಾಂಗದಲ್ಲಿ ರಿಯಾಯಿತಿ ದರದ ಪುಸ್ತಕ ಖರೀದಿಸುವಂತೆ ಹೇಳಿರುವುದು ಮೂಲೆ ಸೇರಲ್ಪಟ್ಟಿದ್ದ ಗ್ರಂಥಗಳಿಗೆ ಡಿಮ್ಯಾಂಡ್ ಹೆಚ್ಚಿಸಿದೆ.

      ತುಮಕೂರು ಜಿಲ್ಲೆಯ ಹಣ್ಣು ಹೂ ವ್ಯಾಪಾರದಲ್ಲಿ ಶೇ.30ರಷ್ಟು ಸರಕಾರಿ ಸಭೆ ಸಮಾರಂಭಗಳ ಪಾಲಾಗಿತ್ತು. ಹಾರ ತುರಾಯಿ ನಿಷೇಧದ ಸರಕಾರದ ಹೊಸ ಆದೇಶ, ರೈತರು ಮತ್ತು ವರ್ತಕರಿಬ್ಬರ ಮೇಲೂ ಗದಾ ಪ್ರಹಾರ ಮಾಡುವಂತಹುದಾಗಿದ್ದು, ಸರಕಾರ ವೆಚ್ಚ ಕಡಿತ ಮಾಡುವುದಾದರೆ ಅನಗತ್ಯ ನೇಮಕಾತಿಗಳನ್ನು ರದ್ದುಮಾಡಲಿ. ಬಡವರು, ರೈತರು ಬದುಕು ಕಟ್ಟಿಕೊಂಡಿರುವ ಹಾರ, ಹಣ್ಣಿನ ಬುಟ್ಟಿಯ ಮೇಲೆಕೆ ಕೆಂಗಣ್ಣು ಬೀರುತ್ತಿದೆ ತಿಳಿಯದು. ತಕ್ಞಣ ಆದೇಶ ಹಿಂಪಡೆಯಬೇಕು

-ಟಿ.ಎಚ್.ಜಯರಾಂ, ಉಪಾಧ್ಯಕ್ಷರು ವರ್ತಕರ ಸಂಘ ಅಂತರಸನಹಳ್ಳಿ ಹಣ್ಣು, ಹೂ ಮಾರುಕಟ್ಟೆ.

ಪುಸ್ತಕ ಕೊಡುವುದು ಸ್ವಾಗತಾರ್ಹ, ರೈತರ ಹಿತವನ್ನು ಕಾಪಾಡಬೇಕಲ್ಲವೇ?

      ಸರಕಾರಿ ಸಭೆ ಸಮಾರಂಭಗಳಲ್ಲಿ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು ಸ್ವಾಗತಾರ್ಹ. ನಾವ್ಯಾರು ಅಕ್ಷರದ್ವೇಷಿಗಳಲ್ಲ. ಆದರೆ ಹಣ್ಣು, ಹಾರವನ್ನು ನಿಷೇಧಿಸಿ ರೈತರು, ಹೂ, ಹಣ್ಣಿನ ವ್ಯಾಪಾರದಿಂದ ಬದುಕು ಕಟ್ಟಿಕೊಂಡುವವರನ್ನು ನಷ್ಟಕ್ಕೆ ದೂಢುವಂತಹ ತೀರ್ಮಾನ ಸಮಂಜಸವಾದುದಲ್ಲ. ರೈತರಿಗೆ ಪ್ರೋತ್ಸಾಹ ಕೊಡಬೇಕಾದ ಸರಕಾರ ಅವರು ಅದರಿಂದ ವಿಮುಕ್ತರಾಗುವಂತೆ ಮಾಡಬಾರದು. ಸರಕಾರ ಆದೇಶವನ್ನು ಮಾರ್ಪಡಿಸಿ ಹಾರ, ಹಣ್ಣಿನ ಬುಟ್ಟಿ ಜೊತೆಗೆ ಕನ್ನಡಪುಸ್ತಕವನ್ನು ಕೊಡಲಿ. ಇದರಿಂದ ಪುಸ್ತಕ ಸಂಸ್ಕøತಿಯು ಬೆಳೆಯುವ ಜೊತೆಗೂ ಕೃಷಿಕರು ಅನ್ಯಾಯವಾಗುವುದಿಲ್ಲ.

-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

      ಸರಕಾರಿ ಸಭೆ ಸಮಾರಂಭಗಳಲ್ಲಿ ಅನಗತ್ಯವಾಗಿ ಹಾರ ತುರಾಯಿ, ಫಲಕಗಳ ಹೆಸರಲ್ಲಿ ಆಗುತ್ತಿದ್ದ ದುಂಧುವೆಚ್ಚದ ಕಡಿವಾಣ ಹಾಗೂ ಕನ್ನಡಿಗರಲ್ಲಿ ಕನ್ನಡದ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ದಿಸೆಯಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಸಭೆಗಳಲ್ಲಿ ಸ್ವಾಗತಕ್ಕೆ ಪುಷ್ಪಗುಚ್ಚ, ಹಾರಗಳನ್ನು ಕೊಟ್ಟರೆ ಅನೇಕರು ಸ್ವೀಕರಿಸಿ ಅಲ್ಲಿಯೇ ಬಿಟ್ಟುಹೋಗುತ್ತಾರೆ. ಪುಸ್ತಕಗಳನ್ನಾದರೆ ಮನೆಗೆ ಕೊಂಡೊಯ್ಯುತ್ತಾರೆ. ಹೊಸ ತಲೆಮಾರಿನವರಿಗೆ ಪುಸ್ತಕಗಳ ಪರಿಚಯವಾದಂತಾಗಿತ್ತು. ಆದರೆ ವೇದಿಕೆ ಅಲಂಕಾರ, ಸಾಧಕರಿಗೆ ಸನ್ಮಾನದಂತಹ ಸಂದರ್ಭದಲ್ಲಿ ಹಾರ, ಹೂವ್ವಿನ ಬುಟ್ಟಿ ನೀಡುವುದು ಸೂಕ್ತವೆನಿಸುತ್ತದೆ.

-ಚಿದಾನಂದ ಎಂ.ಗೌಡ, ವಿಧಾನಪರಿಷತ್ ಸದಸ್ಯರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap