ತುಮಕೂರು :
ಸಾರ್ವಜನಿಕ ಸಂಪರ್ಕ ರಸ್ತೆಗೆ ವ್ಯಕ್ತಿಯೊಬ್ಬರು ಗೋಡೆ ನಿರ್ಮಿಸಿಕೊಳ್ಳುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ತುಮಕೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದಾರೆ.
ನಗರದ ಮಹಾಲಕ್ಷ್ಮಿ ನಗರ, 8ನೇ ಕ್ರಾಸ್ ಬಳಿ ಈ ರೀತಿ ರಸ್ತೆಗೆ ಗೋಡೆ ನಿರ್ಮಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದ್ದಾರೆ.
40 ಅಡಿ ರಸ್ತೆಗೆ ಇದು ಸಂಪರ್ಕ ರಸ್ತೆಯಾಗಿದ್ದು, ವ್ಯಕ್ತಿಯೊಬ್ಬರು ಗೋಡೆ ಹಾಕಿಕೊಳ್ಳುವ ಹವಣಿಕೆಯಲ್ಲಿದ್ದರು. ಈ ಹಿಂದೆಯೇ ಈ ಬಗ್ಗೆ ಪಾಲಿಕೆಯ ಗಮನ ಸೆಳೆಯಲಾಗಿತ್ತು. ಇದೀಗ ದಿಢೀರ್ ಗೋಡೆ ಕಟ್ಟುತ್ತಿರುವುದರಿಂದ ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ನಗರ ಪಾಲಿಕೆಯ ಎಇಇ ಮೇಘನಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಲ್ಲಿನ ಜಮೀನು ವಿವಾದದ ಬಗ್ಗೆ ದಾಖಲಾತಿಗಳ ಪರಿಶೀಲನೆ ನಡೆಯುತ್ತಿತ್ತು. ಮಾಲೀಕರಿಗೆ ಒಂದು ನೋಟಿಸ್ ನೀಡಿ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದೆವು. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಈ ನಡುವೆ ಗೋಡೆ ಕಟ್ಟುತ್ತಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ಹಾಗೂ ದೂರವಾಣಿ ಮೂಲಕವೂ ಮನವಿ ಮಾಡಿ ಜಾಗ ಗುರುತಿಸಿಕೊಡುವಂತೆ ತಿಳಿಸಲಾಗಿದೆ. ಟೂಡಾದವರು ಮಾರ್ಕ್ ಮಾಡಿ ಕೊಟ್ಟ ಕೂಡಲೇ ಗೋಡೆಯನ್ನು ತೆರವುಗೊಳಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಥಳೀಯರನೇಕರು ದಾಖಲಾತಿಗಳನ್ನು ಪಡೆದುಕೊಳ್ಳಲು ಇಷ್ಟು ದಿನ ಕಾಯಬೇಕೆ? ಲೈಸೆನ್ಸ್ ಪಡೆದುಕೊಳ್ಳದೆ, ದಾಖಲೆಗಳನ್ನು ಸಲ್ಲಿಸದೆ ವಿಳಂಬ ಮಾಡುತ್ತಲೆ ಗೋಡೆ ಕಟ್ಟಿಕೊಳ್ಳುತ್ತಿದ್ದು, ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
