ಗ್ರಾಪಂಗಳಲ್ಲಿ ಪಕ್ಷಗಳ ಪಡೆ ಕಟ್ಟುವುದು ಪಂಚಾಯತ್ ವ್ಯವಸ್ಥೆಗೆ ಮಾರಕ

    ಪ್ರಜಾಪ್ರಗತಿ-ಪ್ರಗತಿವಾಹಿನಿ ಸಂವಾದದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕೆ.ಎ.ತಿಪ್ಪೇಸ್ವಾಮಿ, ಎಂ.ಬಿ.ನಂದೀಶ್ ಭಾಗಿ

ತುಮಕೂರು:

      ಗ್ರಾಮ ಪಂಚಾಯತ್ ಚುನಾವಣೆ, ಗ್ರಾಮ ಆಡಳಿತ ವೇದಿಕೆಗಳನ್ನು ಪಕ್ಷಗಳ ಪಡೆ ಕಟ್ಟಲು ಬಳಸಿಕೊಳ್ಳುವುದು ಪಂಚಾಯತ್ ವ್ಯವಸ್ಥೆ ಆಶಯಕ್ಕೆ ಮಾರಕವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

      ಪ್ರಜಾಪ್ರಗತಿ-ಪ್ರಗತಿ ವಾಹಿನಿ ವಿಶೇಷ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಂಚಾಯತ್ ವ್ಯವಸ್ಥೆ ಪ್ರಜಾಪ್ರಭುತ್ವದ ತಳಹದಿಯನ್ನು ಭದ್ರಗೊಳಿಸಲಿರುವ ಸಾಧನವಾಗಿದೆ. ಅಧಿಕಾರವನ್ನು ವಿಕೇಂದ್ರಕರಣಗೊಳಿಸಿ ಗ್ರಾಮೀಣ ಜನರನ್ನು ಆಡಳಿತದಲ್ಲಿ ಭಾಗೀಧಾರರಾಗಿ ಮಾಡುವುದು ಇದರ ಮೂಲ ಉದ್ದೇಶ. ಗ್ರಾಮ ಮಟ್ಟದಲ್ಲಿ ಇದನ್ನು ಪಕ್ಷ ರಾಜಕಾರಣಕ್ಕೊಳಪಡಿಸಿ, ಪಕ್ಷಗಳ ಪಡೆ ಕಟ್ಟಲು ಗ್ರಾಮ ಪಂಚಾಯತ್ ಚುನಾವಣೆಯನ್ನು ವೇದಿಕೆಯಾಗಿ ಬಳಸಿಕೊಳ್ಳುವುದು ಗಾಂಧೀಜಿಯವರ ಗ್ರಾಮಸ್ವರಾಜ್ಯ, ಮಾಜಿ ಪ್ರಧಾನಿ ರಾಜೀವ್‍ಗಾಂಧಿಯವರು ಜಾರಿಗೊಳಿಸಿದ ಪಂಚಾಯತ್ ರಾಜ್ ವ್ಯವಸ್ಥೆಗೆ ವ್ಯತಿರಿಕ್ತವಾಗಲಿದೆ ಎಂದರು.

      ಬಿಜೆಪಿಯವರು ಗ್ರಾಮಸ್ವರಾಜ್ ಸಮಾವೇಶದ ಮೂಲಕ ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಹೊರಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ ಪಕ್ಷ ರಾಜಕಾರಣವನ್ನು ಗ್ರಾಮಮಟ್ಟಕ್ಕೆ ತಂದು ಸೌಹಾರ್ಧತೆ ಹಾಳು ಮಾಡಬಾರದೆಂಬುದೇ ಪಂಚಾಯತ್ ರಾಜ್‍ವ್ಯವಸ್ಥೆಯ ಮೂಲ ಆಶಯವಾಗಿದ್ದು, ಇದನ್ನು ಕಾಪಾಡುವುದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾರಾಜಕೀಯ ಪಕ್ಷಗಳ ಜವಾಬ್ದಾರಿ. ಇದು ಬೇಡ ಎನ್ನುವುದಾದರೆ ಕಾಯ್ದೆಗೆ ತಿದ್ದುಪಡಿತಂದು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನಂತೆ ಪಕ್ಷ, ಚಿಹ್ನೆಯಡಿ ಗ್ರಾಮಮಟ್ಟದಲ್ಲೂ ಚುನಾವಣೆ ಎದುರಿಸಲು ಅವಕಾಶ ಮಾಡಿಕೊಡಲಿ. ಆಗ ಪಕ್ಷಗಳ ಪರೋಕ್ಷ ಹಸ್ತಕ್ಷೇಪ ತಪ್ಪುತ್ತದೆ. ಪಂಚಾಯತ್ ವ್ಯಾಪ್ತಿಯಲ್ಲೂ ಅವರವರ ಪಕ್ಷಗಳ ಬಲಾಬಲ, ಸಂಘಟನೆಯನ್ನು ಅಧಿಕೃತವಾಗಿ ಮಾಡಿಕೊಳ್ಳಬಹುದಾಗುತ್ತದೆ ಎಂದು ಸಲಹೆ ನೀಡಿದರು.

ತಳಸಮುದಾಯಕ್ಕೆ ವೇದಿಕೆ:

      ಪಂಚಾಯತ್ ವ್ಯವಸ್ಥೆ ತಳಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಅವಕಾಶ ಸೃಷ್ಟಿಗೆ ವೇದಿಕೆಯಾಗಿದೆ ಎಂದು ಉದಾಹರಣೆಯೊಂದಿಗೆ ವಿವರಿಸಿದ ಪರಮೇಶ್ವರ್ ಅವರು ಮಧುಗಿರಿಯಲ್ಲಿ ಪ್ರಬಲ ಜಾತಿಯ ಸಿರಿವಂತರೊಬ್ಬರ ಮನೆಯಲ್ಲಿ ಎಮ್ಮೆ ಕಾಯುವ ಕಾಯುಕ ಮಾಡುತ್ತಿದ್ದ ವೃದ್ಧ ಮಹಿಳೆಯೊಬ್ಬರಿಗೆ ಪಂಚಾಯತ್ ಮೀಸಲಿನಿಂದಾಗಿ ಸ್ಪರ್ಧೆಗೆ ಅವಕಾಶ ದೊರೆತು ಸದಸ್ಯೆಯಾಗಿ ಗೆದ್ದರು. ಬಳಿಕ ಅಧ್ಯಕ್ಷರಾದರು. ಮುಂದೆ ಆಕೆ ಕೆಲಸ ಮಾಡುತ್ತಿದ್ದ ಮನೆಯ ಯಜಮಾನನೇ ಮನೆಯ ಲೈಸೆನ್ಸ್ ಬಳಿ ಪಡೆಯಲು ಅಧ್ಯಕ್ಷೆ ಬಳಿ ಬರಬೇಕಾಯಿತು. ಇದೇ ತಳಮಟ್ಟದ ಪಂಚಾಯತ್ ರಾಜ್ ವ್ಯವಸ್ಥೆಯ ಹಿರಿಮೆ-ಗರಿಮೆ ಎಂದರು.

ಲಾಭಕ್ಕಿಂತ ಶೋಷಣೆಯೇ ಹೆಚ್ಚು:

      ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ, ಭೂ ಸಂಬಂಧಿತ ಕಾಯ್ದೆಗಳು ಖಂಡಿತವಾಗಿಯೂ ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದ ಮಾಜಿ ಡಿಸಿಎಂ ಅವರು ರೈತರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಬೆಂಬಲ ಬೆಲೆಗೆ ಬೆಳೆ ಮಾರಾಟಮಾಡಬೇಕೆಂದು ಎಪಿಎಂಸಿಯನ್ನು ಇಡೀ ದೇಶಾದ್ಯಂತ ಜಾರಿಗೆ ತರಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಮಾಯಕ ರೈತರ ಬೆಳೆಯನ್ನು ಮಾರಾಟಕ್ಕೆ ಬಿಡುವುದರಿಂದ ಲಾಭಕ್ಕಿಂತ ಶೋಷಣೆಯೇ ಹೆಚ್ಚು. ಭೂ ಸುಧಾರಣಾ ಕಾಯ್ದೆ ಖರೀದಿ ಮಿತಿ ತೆಗೆಯುವುದರಿಂದ ರೈತನ ಭೂಮಿ ಕಾರ್ಪೋರೇಟ್ ವಲಯದವರ ಪಾಲಾಗಲಿದೆ ಎಂದು ಪ್ರತಿಪಾದಿಸಿದರು.

ಅನುದಾನವಿಲ್ಲದೇ ಪಂಚಾಯತ್ ಸಬಲೀಕರಣ ಅಸಾಧ್ಯ : ಎಂಎಲ್ಸಿ ತಿಪ್ಪೇಸ್ವಾಮಿ

      ಗ್ರಾಪಂಗಳಲ್ಲಿ ಪಕ್ಷಾತೀತ ಚುನಾವಣೆ ಎನ್ನುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿರುವ ಜೊತೆಗೆ ಪಂಚಾಯತ್‍ಗಳ ಸಬಲೀಕರಣಕ್ಕೆ ಅನುದಾನದ ಕೊರತೆ ತೀವ್ರವಾಗಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಹೇಳಿದರು.

      ಸಂವಾದದಲ್ಲಿ ಮಾತನಾಡಿದ ಅವರು ಚುನಾವಣೆ ಅಖಾಡದಲ್ಲಿ ಕಣಕ್ಕಿಳಿಯುವವರು ಯಾವುದೇ ಒಂದು ಪಕ್ಷದ ಕಾರ್ಯಕರ್ತರು, ಗುರುತಿಸಿಕೊಂಡಿರುವವರೇ ಆಗಿರುತ್ತಾರೆ. ಹಾಗಾಗಿ ಪಕ್ಷರಹಿತವೆಂಬುದು ಬರೀ ನೆಪಮಾತ್ರಕ್ಕೆ ಎನಿಸುತ್ತಿದೆ. ಇನ್ನೂ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿದವರು ನಜೀರ್‍ಸಾಬ್ ಅವರು. ಆಗ ಜಿಲ್ಲಾ ಪರಿಷತ್, ಮಂಡಲ ಪಂಚಾಯತ್‍ಗಳು ಹೆಚ್ಚಿನ ಅಧಿಕಾರ ಕೊಟ್ಟು ಕ್ರಾಂತಿಯನ್ನೇ ಮಾಡಿದರು. ನೌಕರರನ್ನು ವರ್ಗಾವಣೆ ಮಾಡುವ ಅಧಿಕಾರವೂ ಪರಿಷತ್ ಅಧ್ಯಕ್ಷರಿಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ನಾರಾಯಣಸ್ವಾಮಿ ಅವರು ಇಡೀ ರಾಜ್ಯಕ್ಕೆ ಮಾದರಿ ಹಾಕಿಕೊಟ್ಟರು. ಪ್ರಸಕ್ತ ಮೂರು ಹಂvದಲ್ಲಿನ ಪಂಚಾಯತ್ ವ್ಯವಸ್ಥೆಯಲ್ಲೇ ಅಧಿಕಾರ ಕಸಿದುಕೊಂಡಿದ್ದು, ಅನುದಾನ ಕೊರತೆ ತೀವ್ರವಾಗಿ ಕಾಡುತ್ತಿದೆ. 15ನೇ ಹಣಕಾಸು ಆಯೋಗ, ರಾಜ್ಯ ಹಣಕಾಸು ಆಯೋಗದಿಂದ ಅನುದಾನ ಸಮರ್ಪಕವಾಗಿ ದೊರೆಯುತ್ತಿಲ್ಲ. ಅನುದಾನವೇ ಇಲ್ಲದೇ ಪಂಚಾಯತ್ ವ್ಯವಸ್ಥೆ ಕುಂಠಿತಗೊಳ್ಳುತ್ತಿದೆ. 2ಲಕ್ಷಕ್ಕೂ ಅಧಿವವಿರುವ ಇಡೀ ದೇಶದ ಪಂಚಾಯತ್ ವ್ಯವಸ್ಥೆಗೆ 60 ಸಾವಿರ ಕೋಟಿ ಅನುದಾನ ಸಾಕೇ ಎಂದು ಪ್ರಶ್ನಿಸಿದರು.

      ಮೀಸಲು ಕಲ್ಪಿಸಿ ತಳಸಮುದಾಯಕ್ಕೆ ರಾಜಕೀಯ ಅಧಿಕಾರಕೊಟ್ಟರು: ಗ್ರಾಮ ಪಂಚಾಯತ್‍ನಲ್ಲಿ ಮೀಸಲು ವ್ಯವಸ್ಥೆ ತಂದು ತಳ ಸಮುದಾಯಕ್ಕೆ ಮಹಿಳೆಯರಿಗೆ ಅಧಿಕಾರ ಕೊಡಿಸಿದವರು ಎಚ್.ಡಿ.ದೇವೇಗೌಡ ಅವರು ರಾಜಕೀಯವಾಗಿ ಈ ಅವಕಾಶ ಕಲ್ಪಿಸದಿದ್ದರೆ ಪ.ಜಾತಿ, ವರ್ಗ, ಹಿಂದುಳಿದವರು, ಸಮಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಜೆಡಿಎಸ್ ಸಹ ರಾಜ್ಯಮಟ್ಟದ ಸಭೆ ನಡೆಸಿ ಪಂಚಾಯತ್‍ಚುನಾವಣೆಗೆ ಸಿದ್ಧತೆ ನಡೆಸಿದ್ದು, ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರಿಗೆ ಜವಾಬ್ದಾರಿ ವಹಿಸಿದೆ ಎಂದರು.

1 ರೂ.ನಲ್ಲಿ 15 ಪೈಸೆ ಮಾತ್ರ ತಲುಪುವುದನ್ನು ತಪ್ಪಿಸುವ ಗುರಿ: ಎಂ.ಬಿ.ನಂದೀಶ್

      ಬಿಜೆಪಿ ರಾಜ್ಯ ಉಪಾಧ್ಯಕ್ಷ, ಎಂಎಸ್‍ಐಎಲ್ ಮಾಜಿ ಅಧ್ಯಕ್ಷ ಎಂ.ಬಿ.ನಂದೀಶ್ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದು, ಅಭಿವೃದ್ಧಿ ಯೋಜನೆಗಳು ಪಾರದರ್ಶಕವಾಗಿನುಷ್ಟಾನಗೊಳ್ಳುತ್ತಿವೆ. ಇದನ್ನು ಜನತೆ ಬೆಂಬಲಿಸಿ ಬಿಜೆಪಿಯನ್ನು ಹಲವು ಹಂತದ ಚುನಾವಣೆಗಳಲ್ಲಿ ಗೆಲ್ಲಿಸಿದ್ದು,ಪ್ರತೀ ಗ್ರಾಮ ಪಂಚಾಯತ್‍ಗೆ ಹತ್ತು ಕೋಟಿಯಷ್ಟು ಅನುದಾನ ಹರಿದುಬರುತ್ತಿದೆ.

      ರಾಜೀವ್‍ಗಾಂಧಿಅವರೇ ಹೇಳುತ್ತಿದ್ದಂತೆ ಕೇಂದ್ರದಿಂದ ಕಳುಹಿಸಿದ 1 ರೂ.ನಲ್ಲಿ 15 ಪೈಸೆ ಮಾತ್ರ ಪಂಚಾಯತ್ ಮಟ್ಟಕ್ಕೆ ತಲುಪುವುದನ್ನು ತಪ್ಪಿಸಿ ಪೂರ್ತಿ ಹಣ ತಳಮಟ್ಟದ ಗ್ರಾಮಭಿವೃದ್ಧಿಗೆ ಮೀಸಲಾಗಿರಸಬೇಕೆಂದೇ ಬಿಜೆಪಿ ಗುರಿ, ಆಶಯವಾಗಿದೆ. ಇದಕ್ಕಾಗಿಯೇ ಪಂಚಾಯತ್ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂದರು.

      ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರಬಲ ನಾಯಕತ್ವವಿದ್ದಂತೆ ಗ್ರಾಮಮಟ್ಟದಲ್ಲೂ ಪ್ರಬಲ, ಯುವ ನಾಯಕತ್ವದ ಅವಶ್ಯಕವಿದೆ. ಅನ್ಯಾಯವನ್ನು ಪ್ರಶ್ನಿಸುವ ವಿದ್ಯಾವಂತರು ಆಯ್ಕೆಯಾಗಬೇಕಿದೆ. ಅದೇ ತರನಾಗಿ ಯೋಗ್ಯ ಕಾರ್ಯಕರ್ತರು, ಜನಸ್ನೇಹಿ ಸೇವಕರನ್ನು ಗುರುತಿಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲ ನೀಡುತ್ತಿದ್ದೇವೆ. ಶೇ.80ರಷ್ಟು ಸ್ಥಾನದಲ್ಲಿ ಪಕ್ಷದ ಬೆಂಬಲಿಗರು ಗೆಲ್ಲುವ ವಿಶ್ವಾಸವಿದ್ದು, ಸೂಕ್ತ ಅಭ್ಯರ್ಥಿ, ನಿಷ್ಟಾವಂತ ಮತದಾರರಿದ್ದರೆ ಪಂಚಾಯತ್ ಚುನಾವಣೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಎದುರಿಸಬಹುದು. ಕಳೆದ ಸಾಲಿನಲ್ಲಿ ಗುಬ್ಬಿತಾಲೂಕಿನ ಚೇಳೂರು, ನಿಟ್ಟೂರಿನಲ್ಲಿ ಕೇವಲ 2500 ರೂಪಾಯಿಗೆ ವೆಚ್ಚ ಮಾಡಿ ಬಿಜೆಪಿ ಬೆಂಬಲಿಗರು ಆರಿಸಿಬಂದಿದ್ದರು ಎಂದು ಉದಾಹರಿಸಿದರು.

      ಪಟ್ಟಭದ್ರರ ಅಪಪ್ರಚಾರ: ಕೃಷಿ ಸಂಬಂಧಿತ ಕಾಯ್ದೆಗಳು ರೈತ ವಿರೋಧಿ ಎಂದು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದೇರೆ ಹೊರತು, ನಿಜವಾದ ರೈತರ್ಯಾರು ವಿರೋಧಿಸುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ದೊರೆಯಲು ಸಾಧ್ಯ ಎಂದು ನಂದೀಶ್ ಸಮರ್ಥಿಸಿಕೊಂಡರು.

ಹಣದ ಹರಿವು ತಡೆಯಲು ಆಯೋಗಕ್ಕೆ ಸಾಧ್ಯವಿಲ್ಲವೇ?: ಡಾ.ಜಿ.ಪರಮೇಶ್ವರ

      ಇತ್ತೀಚಿನ ಉಪಚುನಾವಣೆಯಲ್ಲಾದ ಹಣದ ಹರಿವು ಗ್ರಾಪಂ ಪಂಚಾಯತ್ ಚುನಾವಣೆಯಲ್ಲೂ ಹಣದ ಹೊಳೆ ಹರಿಯಲು ಕಾರಣವಾಗಿದೆಯೆಲ್ಲ ಎಂಬ ಪ್ರಶ್ನೆಗೆ ರಾಜಕೀಯ ಪಕ್ಷಗಳು ಗೆಲುವಿನ ಮಾನದಂಡವಿರಿಸಿಕೊಂಡು ನಾನಾ ಕಸರತ್ತುಗಳನ್ನು ನಡೆಸುತ್ತಿವೆ.

     ಅದರಲ್ಲೂ ಒಂದು ಪಕ್ಷ ಹೆಚ್ಚು ನಡೆಸುತ್ತಿರಬಹುದು. ಮತ್ತೊಂದು ಪಕ್ಷದವರು ಕಡಿಮೆ ನಡೆಸುತ್ತಿರಬಹುದು. ಆದರೆ ಸಂವಿಧಾನಬದ್ಧ ಅಧಿಕಾರ ಹೊಂದಿರುವ ಚುನಾವಣಾ ಆಯೋಗ ಏನು ಮಾಡುತ್ತಿದೆ. ಟಿ.ಎನ್.ಶೇಷನ್ ಅಂತಹ ಒಬ್ಬ ವ್ಯಕ್ತಿ ಇಡೀ ದೇಶದಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಾಂತಿ ಮಾಡಿದರು. ಈಗಿನ ಚುನಾವಣಾ ಆಯೋಗ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ರಾಜಕೀಯಪಕ್ಷ, ಅಭ್ಯರ್ಥಿಗಳು ನೈತಿಕ ಹಾದಿಯಲ್ಲಿ ಚುನಾವಣೆ ಎದುರಿಸಬೇಕೆಂಬುದು ಎಷ್ಟು ನಿಜವೋ ಅಷ್ಟೇ ಪ್ರಮಾಣದಲ್ಲಿ ಚುನಾವಣಾ ಆಯೋಗವೂ ಹಣದ ಹಂಚಿಕೆಗೆ ತಡೆಯೊಡ್ಡಬೇಕು. ಇದನ್ನು ಮಾಡುವಲ್ಲಿ ಸದ್ಯ ಆಯೋಗವೂ ವಿಫಲವಾಗಿದೆ. ರಾಜಕೀಯ ಪಕ್ಷಗಳು ಅಂತಹ ವಾತವಾರಣವನ್ನು ಸೃಷ್ಟಿಸಲು ಬಿಡುತ್ತಿಲ್ಲ. ಇದು ವ್ಯವಸ್ಥೆಯ ದುರಂತ. ಮತದಾರರು ಪ್ರಜ್ಞಾವಂತಿಕೆಯಿಂದ ಎಚ್ಚರಿಕೆ ವಹಿಸಿ ಯಾವುದೆ ಆಮಿಷಕ್ಕೊಳ್ಳಪಡದೇ ಯೋಗ್ಯ ಮತದಾನ ಮಾಡುವುದೊಂದೇ ಪರಿಹಾರ ಮಾರ್ಗ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap