ತುಮಕೂರು :

ವಿದ್ಯುತ್ ತಂತಿ ಸ್ಪರ್ಶದಿಂದ ಸಾವು-ನೋವಿನ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಆ ಸಂದರ್ಭಕ್ಕೆ ಎಂಬಂತೆ ಒಂದಷ್ಟು ಎಚ್ಚರಿಕೆಯ ಮಾತುಗಳನ್ನಾಡಿ ಮತ್ತದೆ ಸ್ಥಿತಿ ಮರುಕಳಿಸುವ ಸಂದರ್ಭಗಳೇ ಹೆಚ್ಚು. ಶಾಲೆಗಳ ಬಳಿ ಮಕ್ಕಳ ಕೈಗೆಟಕದಂತೆ ವಿದ್ಯುತ್ ಲೈನ್ ಮತ್ತು ಪರಿವರ್ತಕಗಳ ಬಗ್ಗೆ, ಜಮೀನುಗಳಲ್ಲಿ ಹಾದು ಹೋಗಿರುವ ಲೈನ್ಗಳ ಬಗ್ಗೆ, ಜನನಿಬಿಡ ರಸ್ತೆ ಹಾಗೂ ಬಡಾವಣೆಗಳಲ್ಲಿ ತೆರೆದುಕೊಂಡಿರುವ, ಮಕ್ಕಳಿಗೆ ಸಿಗುವಂತೆ ಇರುವ ವಿದ್ಯುತ್ ಕಂಬಗಳು, ಪರಿವರ್ತಕಗಳ ಬಗ್ಗೆ ತೀವ್ರ ನಿಗಾ ವಹಿಸುವ ಎಚ್ಚರಿಕೆಗಳು ಕಂಡುಬರುತ್ತಲೇ ಇಲ್ಲ.
ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ತಾಲ್ಲೂಕು ಕೋರಾ ಹೋಬಳಿ ಕರೀಕೆರೆ ಗ್ರಾಮದಲ್ಲಿ ಧ್ವಜಾರೋಹಣಕ್ಕೆ ಕಂಬ ನಿಲ್ಲಿಸಲು ಸಾಗಿಸುವಾಗ ಲೋಹದ ಕಂಬವು ವಿದ್ಯುತ್ ತಂತಿಗೆ ತಗುಲಿ 16 ವರ್ಷದ ಬಾಲಕ ಮೃತಪಟ್ಟ. ಆತನ ಜೊತೆಗೆ ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಂದೆರಡು ದಿನಗಳ ಕಾಲ ಇದು ರಾಜ್ಯವ್ಯಾಪಿ ಸುದ್ದಿಯಾಯಿತು. ರಾಜಕಾರಣಿಗಳು ಆ ಕುಟುಂಬದವರನ್ನು ಸಂಪರ್ಕಿಸಿ ಒಂದಷ್ಟು ಪರಿಹಾರ ನೀಡಿದರು. ಇದೆಲ್ಲವೂ ತಾತ್ಕಾಲಿಕ. ಶಾಶ್ವತ ಪರಿಹಾರದತ್ತ ಇಲಾಖೆಗಳು ಗಮನ ಹರಿಸಬೇಕಲ್ಲವೆ?

ಈ ಘಟನೆ ಮಾಸುವ ಮುನ್ನವೆ ಕೊರಟಗೆರೆ ತಾಲ್ಲೂಕಿನಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದೆ. ಹೊಳವನಹಳ್ಳಿ ಹೋಬಳಿ ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ವೃದ್ಧೆ ಹಾಗೂ ನಾಲ್ಕು ಎಮ್ಮೆಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ವಿದ್ಯುತ್ ಪರಿವರ್ತಕದಿಂದ ಕಂಬಕ್ಕೆ ಹಾದು ಹೋಗಿದ್ದ ವಿದ್ಯುತ್ ತಂತಿ ಜೋತುಬಿದ್ದು ಜಮೀನಿನಲ್ಲಿ ಹಾದು ಹೋಗಿದ್ದರಿಂದ ಅದನ್ನು ಗಮನಿಸದ ವೃದ್ಧೆ ಮತ್ತು ಎಮ್ಮೆಗಳು ತಂತಿಗೆ ಸಿಲುಕಿ ಸಾವನ್ನಪ್ಪಿವೆ.
ಕಳೆದ ತಿಂಗಳು ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ವೀರಬೊಮ್ಮನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ನಾಲ್ಕು ಕುರಿಗಳು ಸಾವನ್ನಪ್ಪಿದ್ದವು. ವಿದ್ಯುತ್ ಲೈನ್ ತುಂಡಾಗಿ ಕೆಳಗೆ ಬಿದ್ದಿದ್ದು, ಅದರ ಮೇಲೆ ಸಾಗಿ ಹೋದ ಕುರಿಗಳ ಹಿಂಡು ವಿಲವಿಲನೆ ಒದ್ದಾಡಿ ಅಸುನೀಗಿವೆ. ಮಹಾಲಿಂಗಪ್ಪ ಅವರಿಗೆ ಸೇರಿದ ಕುರಿಗಳ ಪೈಕಿ 4 ಮರಣ ಹೊಂದಿದ್ದು, ಇನ್ನಷ್ಟು ಕುರಿಗಳು ಗಾಯಗೊಂಡಿದ್ದವು.
ಹೀಗೆ ಪ್ರತಿ ತಿಂಗಳು ಒಂದಲ್ಲ ಒಂದು ಕಡೆ ವಿದ್ಯುತ್ ಸ್ಪರ್ಶದಿಂದ ಜನ –ಜಾನುವಾರುಗಳು ಸಾಯುತ್ತಲೇ ಇದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆಗಳು ವೈಫಲ್ಯ ಎಲ್ಲಿ ಎಂಬುದನ್ನು ಪತ್ತೆ ಹೆಚ್ಚಲು ವಿಫಲವಾಗಿವೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಮರಣ ಹೊಂದಿದವರಿಗೆ ಒಂದಿಷ್ಟು ಪರಿಹಾರ ಕಲ್ಪಿಸಿ ಕೈತೊಳೆದುಕೊಂಡರೆ ಮುಗಿದು ಹೋಯಿತೆ? ಮುಂದಿನ ಅನಾಹುತಗಳನ್ನು ತಪ್ಪಿಸಲು ಸೂಕ್ತಕ್ರಮ ಕೈಗೊಳ್ಳಬೇಕಲ್ಲವೆ?

ಕರಿಕೆರೆಯಲ್ಲಿ ಸಂಭವಿಸಿದ ವಿದ್ಯಾರ್ಥಿ ಸಾವಿನ ಪ್ರಕರಣವನ್ನು ರಾಜ್ಯ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ. ಇದರ ಜೊತೆಗೆ ಇಂತಹ ನಿರ್ಲಕ್ಷ್ಯಗಳ ಬಗ್ಗೆ ಗಮನ ಹರಿಸುವಂತೆ ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಮೃತಪಟ್ಟ ಬಾಲಕನ ಪೋಷಕರಿಗೆ ಕೂಡಲೇ ಪರಿಹಾರ ಒದಗಿಸುವುದರ ಜೊತೆಗೆ ಉಳಿದ ಗಾಯಾಳು ಬಾಲಕರಿಗೆ ವೈದ್ಯಕೀಯ ಚಿಕಿತ್ಸೆ ಸಿಗುವಂತೆಯೂ ನೋಡಿಕೊಳ್ಳಬೇಕು. ಅದರ ಸಂಪೂರ್ಣ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಶಾಲಾ ಆವರಣದಲ್ಲಿ ವಿದ್ಯುತ್ ಲೈನ್ಗಳು ಜೋತುಬಿದ್ದಿರುವ ಕೆಲವು ಉದಾಹರಣೆಗಳನ್ನು ಗಮನಿಸಿ ಈ ಹಿಂದೆಯೇ ಅಂದರೆ 2021ರ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳು ಬೆಂಗಳೂರು ವಿದ್ಯುತ್ ಪ್ರಸರಣ ನಿಗಮದ ಅಧೀಕ್ಷಕ ಇಂಜಿನಿಯರ್ ಅವರಿಗೆ ಒಂದು ಪತ್ರ ಬರೆದು ಶಾಲಾ ಆವರಣದಲ್ಲಿ ಅಳವಡಿಸಲಾಗಿರುವ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ತೆರವುಗೋಳಿಸಲು ಸೂಚಿಸಿದ್ದರು.
ಜಿಲ್ಲಾಧಿಕಾರಿಗಳು ಈ ಪತ್ರ ಬರೆಯಲು ಕಾರಣವೂ ಇದೆ. ನವೆಂಬರ್ ತಿಂಗಳಿನಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳು ನಡೆಯುತ್ತವೆ. ಆ ಸಂದರ್ಭದಲ್ಲಿ ಬಹಳಷ್ಟು ಶಾಲಾಮಕ್ಕಳು ಸಭೆಯ ಮುಂದೆ ವಿದ್ಯುತ್ ಲೈನ್ ಮತ್ತು ಟ್ರಾನ್ಸ್ಫಾರ್ಮರ್ ಅಪಾಯಗಳ ಬಗ್ಗೆ ಗಮನ ಸೆಳೆಯುತ್ತಲೇ ಬಂದಿದ್ದಾರೆ. ವಿದ್ಯಾರ್ಥಿಗಳ ಈ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಜಿಲ್ಲಾಧಿಕಾರಿಗಳಿಗೆ ಒಂದು ವರದಿ ಸಮೇತ ಮನವಿ ಸಲ್ಲಿಸಿತ್ತು.
ತುಮಕೂರು ಜಿಲ್ಲೆಯಲ್ಲಿ ಒಟ್ಟು 508 ಶಾಲಾ ಆವರಣಗಳಲ್ಲಿ ಇಂತಹ ಪರಿಸ್ಥಿತಿ ಇದ್ದು, ಕೂಡಲೇ ಇವುಗಳನ್ನು ತೆರವುಗೊಳಿಸಿ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಈವರೆಗೂ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಮಾಹಿತಿಯೇ ಇಲ್ಲ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಶಾಲಾ ಕಾಲೇಜು ಆವರಣದ ಬಳಿ ವಿದ್ಯುತ್ ಲೈನ್ಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿವೆ ಎಂಬುದು. ಪ್ರತಿ ಶಾಲಾ ಆವರಣದ 100 ಮೀಟರ್ ಒಳಗೆ ತಂಬಾಕು ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ವಿದ್ಯುತ್ ಸುರಕ್ಷತೆಯ ಬಗ್ಗೆ ಯಾವುದೇ ಮಾನದಂಡಗಳಿಲ್ಲ. ಇದರಿಂದಾಗಿ ಆಟ ಆಡುವ ಮಕ್ಕಳು ವಿದ್ಯುತ್ ಲೈನ್ ಸ್ಪರ್ಶಿಸಿಯೋ, ಕೈಗೆಟಕುವಂತೆ ಇರುವ ವಿದ್ಯುತ್ ಕಂಬ, ಪರಿವರ್ತಕಗಳ ಬಳಿ ಸುಳಿದು ಹಾನಿಗೊಳಗಾಗುತ್ತಿರುವ ಸಂದರ್ಭಗಳೇ ಹೆಚ್ಚು. ನಗರ ಪ್ರದೇಶಗಳಲ್ಲಿಯೂ ಇಂತಹ ದೃಶ್ಯಗಳು ಕಂಡುಬರುತ್ತವೆ. ಶಿಕ್ಷಣ ಇಲಾಖೆ ಇಂತಹವುಗಳನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಇಲಾಖೆಯ ಗಮನಕ್ಕೆ ತರಬೇಕು. ವಿದ್ಯುತ್ ಮಂಡಳಿಯವರು ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಆದರೆ ನಮ್ಮ ಮನವಿಗಳನ್ನು ವಿದ್ಯುತ್ ಮಂಡಳಿಯವರು ಪರಿಗಣಿಸುವುದೇ ಇಲ್ಲ ಎಂಬ ವ್ಯಾಪಕ ಆಕ್ರೋಶ ಹಾಗೂ ಅಸಮಾಧಾನಗಳು ವಿವಿಧ ಇಲಾಖೆಗಳು ಹಾಗೂ ಜನಸಾಮಾನ್ಯರ ವಲಯದಲ್ಲಿ ಇವೆ.
ಸಾ.ಚಿ. ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








