ತುಮಕೂರು :
ತುಮಕೂರು ಗ್ರಾಮಾಂತರದ ಚಿಕ್ಕಹಳ್ಳಿ ಗ್ರಾಮದ ರೈತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡಲೇ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಗ್ರಾಮಾಂತರದಲ್ಲಿ ಹೆಚ್ಚಾಗಿರುವ ಇಸ್ಪೀಟ್ ದಂಧೆ, ಅಕ್ರಮ ಮದ್ಯ ಮಾರಾಟ, ಕೊಲೆ-ಸುಲಿಗೆ ಮೊದಲಾದ ಅಪರಾಧಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಆಗ್ರಹಿಸಿದರು.
ಶುಕ್ರವಾರ ನಗರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಅನ್ಯಾಯಕ್ಕೊಳಗಾದ ಕುಟುಂಬಸ್ಥರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿ ಮಾತನಾಡಿದ ಅವರು, ಮೊನ್ನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಉತ್ತರ ಭಾರತದ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರದ ಸ್ಥಳಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು, ಡಿಜಿಪಿ ಸೇರಿ 120 ಕಿ.ಮೀ. ವೇಗದಲ್ಲಿ ಸರ್ಕಾರವೇ ಹೋಗಿ ಪರಿಶೀಲನೆ ನಡೆಸಿ, ನ್ಯಾಯ ಕೊಡಿಸಲೇಬೇಕು ಎಂದು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ, ನಗರ ಪ್ರದೇಶದಲ್ಲಿ ನಡೆದ ಘಟನೆಗೆ ಒತ್ತು ಕೊಟ್ಟಂತೆ ಗ್ರಾಮೀಣ ಪ್ರದೇಶದ ಪ್ರಕರಣಕ್ಕೆ ಯಾಕೆ ಒತ್ತುಕೊಟ್ಟಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವೈಫಲ್ಯ :
ತುಮಕೂರು ಗ್ರಾಮಾಂತರ ಹಿರೇಹಳ್ಳಿ ಭಾಗದ ಚಿಕ್ಕಹಳ್ಳಿ ಗ್ರಾಮದ ರೈತ ಮಹಿಳೆಯು ಗುಡ್ಡದ ಬುಡಕ್ಕೆ ದನ ಮೇಯಿಸಲು ಹೋಗಿದ್ದಾಗ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಬಲವಂತದಿಂದ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ್ದಾರೆ. ಮಾತ್ರವಲ್ಲದೆ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರವನ್ನು ಕೂಡ ಕಿತ್ತುಕೊಂಡು ಹೋಗಿದ್ದಾರೆ. ಈ ಘಟನೆ ನಡೆದು 3-4 ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದರು.
ದೃಷ್ಟಿಕೋನ ಬದಲಾಗಬೇಕು :
ಘಟನೆಯು ಇಷ್ಟು ಗಂಭೀರವಾಗಿದ್ದರೂ ಇಡೀ ತುಮಕೂರು ಜಿಲ್ಲೆ ಏನು ಆಗಿಲ್ಲವೆನೋ ಎಂಬುವಂತೆ ಶಾಂತವಾಗಿದೆ. ಜನಪ್ರತಿನಿಧಿಗಳು ಕೂಡ ಈ ಪ್ರಕರಣದ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಅಧಿಕಾರಿಗಳು ಕೂಡ ಪ್ರಕರಣದ ಗಂಭೀರತೆ ಅರಿತು ಕೇಸು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದಂತೆ ಕಂಡುಬರುತ್ತಿಲ್ಲ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಎರಡು ಪ್ರಕರಣಗಳನ್ನು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಬೇಕಾದುದು ಅವರ ಜವಾಬ್ದಾರಿ ಕೂಡ. ಆದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ ಈ ಎರಡು ಗಂಭೀರ ಅತ್ಯಾಚಾರ ಪ್ರಕರಣಗಳ ಳು ಎಂದು ಕಿಡಿಕಾರಿದರು.
ಪ್ರಕರಣ ಕಡೆಗಣನೆ :
ಉತ್ತರ ಪ್ರದೇಶದಿಂದ ಮೈಸೂರಿಗೆ ವಿದ್ಯಾಭ್ಯಾಸಕ್ಕೆಂದು ಬಂದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಇಡೀ ಸರ್ಕಾರವೇ ಗಂಭೀರವಾಗಿ ಪರಿಗಣಿಸಿದ್ದು, ಗ್ರಾಮಾಂತರದ ಒಬ್ಬ ಸಾಮಾನ್ಯ ಬಡ ರೈತ ಮಹಿಳೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕಡೆಗಣಿಸಿದ್ದೇಕೆ ಎಂದು ಪ್ರಶ್ನಿಸಿದರು. ಕಳೆದ ಒಂದು ವರ್ಷದ ಹಿಂದೆ ತುಮಕೂರು ಗ್ರಾಮಾಂತರದಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಕುಂಭಯ್ಯ, ಹಿರಿಯ ಉಪಾಧ್ಯಕ್ಷ ಗಂಗಣ್ಣ, ದೇವರಾಜು, ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸಮೂರ್ತಿ, ಹೆಚ್.ಡಿ.ಕೆ.ಮಂಜುನಾಥ್, ಶ್ರೀನಿವಾಸ್, ಮುಖಂಡರಾದ ರವೀಶ್ ಜಾಂಗೀರ್, ನರಸೇಗೌಡ, ಲಕ್ಷ್ಮಮ್ಮ, ತಾಹೇರಾ ಕುಲ್ಸುಮ್, ಜಯಶ್ರೀ, ವಿಜಯ್‍ಕುಮಾರ್, ಕೈದಾಳ ರಮೇಶ್, ಪ್ರೆಸ್ ರಾಜಣ್ಣ, ಪಾಲನೇತ್ರ, ಸಗಂಗಹನುಮಯ್ಯ, ಬೆಳಗುಂಬ ವೆಂಕಟೇಶ್, ಬೈರೇಗೌಡ, ಎಂ.ಆರ್.ಮಂಜುನಾಥ್, ಹಿರೇಹಳ್ಳಿ ಮಹೇಶ್, ಪಾಲನೇತ್ರಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆಗಳಿಂದ ಅತ್ಯಾಚಾರ :
ರಾಜ್ಯದ ವಿವಿಧ ಭಾಗಗಗಳಿಂದ ತುಮಕೂರಿನ ದೇವರಾಯನದುರ್ಗ, ಹಿರೇಹಳ್ಳಿ ಸೇರಿದಂತೆ ವಿವಿಧ ಕಡೆ ಇಸ್ಪೀಟ್ ದಂಧೆ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಅತ್ಯಾಚಾರದಂತಹ ಅಪರಾಧ ಚಟುವಟಿಕೆಗಳಿಗೆ ಕಾರಣವಾಗಿವೆ. ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡರಿಗೆ ದೂರವಾಣಿ ಕರೆ ಮಾಡಿ ಹೇಳಿದರೆ ಉಡಾಫೆಯಾಗಿ ಮಾತನಾಡುತ್ತಾರೆ. ಕೂಡಲೇ ಅವರನ್ನು ಅಮಾನತ್ತುಪಡಿಸಬೇಕು ಹಾಗೆಯೇ ಕೋರಾ ಠಾಣೆಯ ಎಸ್‍ಐ ಹರೀಶ್ ಮತ್ತು ತುಮಕೂರು ಗ್ರಾಮಾಂತರ ಸಿಪಿಐ ರಾಮಕೃಷ್ಣಪ್ಪ ಅವರು ಠಾಣೆಗೆ ಬರುವ ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಾರೆ. ಇಂತಹ ಅಧಿಕಾರಿಗಳಿಂದ ಜನ ಸಾಮಾನ್ಯರು ನ್ಯಾಯ ನಿರೀಕ್ಷೀಸಲು ಸಾಧ್ಯವೇ? ನನ್ನಲ್ಲೂ ಪೊಲೀಸ್ ರಕ್ತವೇ ಹರಿಯುತ್ತಿದೆ. ನಮ್ಮ ತಂದೆ ಮಾಜಿ ಸಚಿವರಾಗಿದ್ದ ದಿ.ಚನ್ನಿಗಪ್ಪ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಕರ್ನಾಟಕ ಪೋಲಿಸರಿಗೆ ಅಗ್ರ ಸ್ಥಾನವಿದೆ. ನೂತನವಾಗಿ ಬಂದಿರುವ ಎಸ್‍ಪಿ ಅವರು ಸಜ್ಜನರಾಗಿದ್ದು, ಅವರಿಗಿರುವ ಸೌಜನ್ಯ ಅವರ ಕೆಳಹಂತದ ಅಧಿಕಾರಿಗಲ್ಲಿ ಇಲ್ಲವಾಗಿದೆ. ಆದ್ದರಿಂದ ಕರ್ತವ್ಯ ನಿರ್ಲಕ್ಷದ ಆರೋಪದ ಮೇಲೆ ಈ ಮೂರು ಜನ ಜನ ವಿರೋಧಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯಿಸಿದರು. ಪ್ರತಿಭಟನೆ ನಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದರು.
ನನ್ನ ಕ್ಷೇತ್ರದ ಹೆಣ್ಣು ಮಗಳೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದ್ದು, ಪ್ರಕರಣದ ವಿರುದ್ಧ ಧ್ವನಿ ಎತ್ತ ಬೇಕಾಗಿರುವುದು ಕ್ಷೇತ್ರದ ಶಾಸಕನಾದ ನನ್ನ ಧರ್ಮ. ಪೊಲೀಸರು ಇನ್ನೂ ಹದಿನೈದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು, ಕುಮಾರಣ್ಣನವರ ನೇತೃತ್ವದಲ್ಲಿ ್ಲ ಹೋರಾಟವನ್ನು ತೀವ್ರಗೊಳಿಸಲಾಗುವುದು.
– ಡಿ.ಸಿ.ಗೌರಿಶಂಕರ್, ಶಾಸಕರು, ತುಮಕೂರು ಗ್ರಾಮಾಂತರ
ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಕಾರ್ಯೋನ್ಮುಖವಾಗಿದ್ದು, ಜನಸ್ಮೇಹಿ ಆಡಳಿತ ನೀಡಲು ಸದಾ ಬದ್ಧನಿದ್ದೇನೆ.
-ರಾಹುಲ್‍ಕುಮಾರ್, ಎಸ್‍ಪಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
