ತುಮಕೂರು :
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಬೆಂಕಿ ಹಚ್ಚಿ ಕೊಲೆಗೈದಿದ್ದ ಆರೋಪಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, ಹತ್ತು ಸಾವಿರ ದಂಢ ವಿಧಿಸಿ ತೀರ್ಪು ನೀಡಿದೆ.
ಸಿರಾ ತಾಲೂಕು ತಾವರೆಕೆರೆ ರಂಗಣ್ಣ ಅಲಿಯಾಸ್ ರಂಗನಾಥ್ ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿದ್ದು, ಈತ 2018 ಮಾ.1ರಂದು ರಾತ್ರಿ ಅನೈತಿಕ ಸಂಬಂಧ ಹೊಂದಿದ್ದ ಜಯಮ್ಮ ಎಂಬಾಕೆ, ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲವೆಂದು ಹಲ್ಲೆಗೆ ಮುಂದಾಗಿ, ಆಕೆ ಹೊರಗೆ ಓಡಿದರೂ ಬಿಡದೆ ಒಳಗಡೆ ಎಳೆತಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ತೀವ್ರ ಸುಟ್ಟಗಾಯಗಳಿಗೆ ಒಳಗಾದ ಜಯಮ್ಮಳನ್ನು ಬೆಂಗಳೂರಿನ ವಿಕ್ಟೋರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಾ.3ರಂದು ಮೃತಪಟ್ಟಿದ್ದಳು. ಈ ಸಂಬಂಧ ಅಂದಿನ ಶಿರಾ ಗ್ರಾಮಾಂತರ ಸಿಪಿಐ ಎಚ್.ವಿ.ಸುದರ್ಶನ್ ತನಿಖೆ ನಡೆಸಿ ಆರೋಪಿ ರಂಗಣ್ಣನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜಿ.ವಿ.ಚಂದ್ರಶೇಖರ್ ಅವರು ಮಾ.27ರಂದು ಆರೋಪಿತನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಅಭಿಯೋಜಕಿ ಆರ್.ಟಿ.ಅರುಣ ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ