ತುಮಕೂರು : ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದ ಅಪರಾಧ ಪ್ರಕರಣಗಳು

 ತುಮಕೂರು : 

     ಎರಡೂವರೆ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರವಾಡ್ ತಾವು ಅಧಿಕಾರ ವಹಿಸಿಕೊಳ್ಳುತ್ತಲೇ ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿನ ಕೆಲವು ಲೋಪಗಳನ್ನು ಸರಿಪಡಿಸಲು ಮುಂದಾಗಿ, ತಾವೇ ಮಾರುವೇಷದಲ್ಲಿ ಠಾಣೆಗಳಿಗೂ ಭೇಟಿ ಕೊಟ್ಟು ಜಡ್ಡುಗಟ್ಟಿದ್ದ ಪೊಲೀಸರಲ್ಲಿ ಚುರುಕು ಮೂಡಿಸುವ ಕೆಲಸವನ್ನು ಮಾಡಿದರು. ಕೆಲವರಿಗೆ ವರ್ಗಾವಣೆ, ಅಮಾನತ್ತಿನ ಶಿಕ್ಷೆಯೂ ಆಯಿತು.

      ಇನ್ನೇನೂ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುತ್ತದೆ, ಅಪರಾಧಕೃತ್ಯಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ನಿರೀಕ್ಷಿಸಿದ್ದ ತುಮಕೂರು ಜಿಲ್ಲೆಯ ಜನತೆಗೆ ಹೆಚ್ಚುತ್ತಿರುವ ಅಪರಾಧಕೃತ್ಯಗಳು ಭಯಭೀತರಾಗುವಂತೆ ಮಾಡಿದೆ. ಹೆಚ್ಚುತ್ತಿರುವ ಕ್ರೈಂರೇಟ್ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಟೀಕಿಸುವಂತೆ ಮಾಡಿದೆ.

      ಕಳೆದ ವಾರ ತುಮಕೂರು ತಾಲೂಕು ಹಿರೇಹಳಿಯ ಛೋಟಾಸಾಬ್ ಪಾಳ್ಯದಲ್ಲಿ ನಡೆದ ಗೃಹಿಣಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ, ಮೈಸೂರಿನ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಷ್ಟೇ ಗಂಭೀರತೆ ಪಡೆಯುತ್ತಿದ್ದು, ರಾಜಕೀಯ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿಭಟನೆ, ಆಕ್ರೋಶಕ್ಕೆ ಎಡೆಮಾಡಿದೆ. ಆರೋಪಿಗಳು ಇನ್ನೂ ಸೆರೆಸಿಕ್ಕದಿರುವುದು ಪೊಲೀಸ್ ಇಲಾಖೆ ವೈಫಲ್ಯವೆಂಬ ದೂಷಣೆಗೆ ಗುರಿಯಾಗಿಸಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದ ಎಸ್ಪಿ ಅವರು ಈ ಅಪರಾಧಗಳನ್ನು ಹತ್ತಿಕ್ಕಲು ಯಾವ ರೀತಿಯ ತ್ವರಿತ ಕ್ರಮಕೈಗೊಳ್ಳುವರು ಕಾದು ನೋಡಬೇಕಿದೆ. ದಿಢೀರನೇ ಅಪರಾಧಕೃತ್ಯಗಳು ಹೆಚ್ಚಲು ಕಾರಣಗಳ್ಯಾದರೂ ಏನು ಎಂಬ ಚರ್ಚೆಯು ಪೊಲೀಸ್ ನಾಗರಿಕ ವಲಯದಲ್ಲೂ ನಡೆಯತೊಡಗಿದೆ.

ಜಿಲ್ಲೆಯ 3 ಕಡೆ ಸರಕಸಿಯುವ ಯತ್ನ:

      ಇನ್ನೂ ಜಿಲ್ಲೆ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ ನಾಗರಿಕರ ನೆಮ್ಮದಿ ಕೆಡಿಸಿದೆ. ತುಮಕೂರಿನ ಮಾರುತಿ ನಗರದ ಮುಖ್ಯರಸ್ತೆ ಹಾಗೂ ಬಂಡೆಪಾಳ್ಯದಲ್ಲಿ ಹಗಲಿನಲ್ಲೇ ಮಹಿಳೆಯರಿಬ್ಬರ ಸರ ಕಸಿಯುವ ವಿಫಲ ಯತ್ನ ಸೋಮವಾರ ಜರುಗಿದ್ದು, ಮಧುಗಿರಿ ಪಟ್ಟಣದಲ್ಲಿ ಅಂಗಡಿಗೆ ವ್ಯಾಪಾರಸ್ಥರ ಸೋಗಿನಲ್ಲಿ ಬಂದು ಸರ ಕಸಿದು ಪರಾರಿಯಾಗಿದ್ದಾರೆ ಮಹಿಳೆಯರು ಹಗಲಿನ ವೇಳೆಯಲ್ಲೂ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.

      ದ್ವಿಚಕ್ರವಾಹನನಲ್ಲಿ ಬಂದ 16 ರಿಂದ 20 ವರ್ಷ ವಯಸ್ಸಿನ ಯುವಕರು ಮಧ್ಯಾಹ್ನ 1.30ರವೇಳೆಯಲ್ಲಿ ಮಾರುತಿ ನಗರದ ನಿವಾಸಿ ಆರ್.ಭಾನುಶ್ರೀ ಅವರು ಆಸ್ಪತ್ರೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರನ್ನು ಹಿಂಬಾಲಿಸಿ ಕುತ್ತಿಗೆಯಲ್ಲಿ ಧರಿಸಿದ್ದ ಮಾಂಗಲ್ಯ ಸರ ಕೀಳುವ ಪ್ರಯತ್ನ ಮಾಡಿದ್ದು, ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ಬರೀ ವೇಲ್ ಮಾತ್ರ ಅವರ ಕೈಗೆ ಸಿಕ್ಕಿದ್ದು, ವೇಲ್ ಅನ್ನು ಅಲ್ಲಿಯೇ ಬಿಸಾಡಿದ್ದಾರೆ. ಈ ಘಟನೆ ನಡೆಯುವ ವೇಳೆ ಮಹಿಳೆ ಕಿರುಚಾಡಿದ ಪರಿಣಾಮ ಸ್ಥಳೀಯರು ತಕ್ಷಣ ಜಮಾಯಿಸಿ ಹಿಡಿಯುವ ಪ್ರಯತ್ನ ನಡೆಸಿದ್ದು, ಜನರನ್ನು ಕಂಡು ದುಷ್ಕರ್ಮಿಗಳು ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಜರುಗಿದ ಸ್ವಲ್ಪ ಹೊತ್ತಿಗೆ ಸಿದ್ಧಗಂಗಾ ಮಠಕ್ಕೆ ತೆರಳುವ ಬಂಡೆಪಾಳ್ಯದಲ್ಲೂ ಮಹಿಳೆಯೊಬ್ಬರು ಸರಕಸಿಯುವ ಯತ್ನ ಜರುಗಿದ್ದು, ಅಲ್ಲಿಯೂ ವಿಫಲರಾಗಿದ್ದಾರೆ.

      ಘಟನಾ ಸ್ಥಳಗಳಿಗೆ, ಕ್ಯಾತ್ಸಂದ್ರ ಹಾಗೂ ಜಯನಗರ ಪೊಲೀಸರು ತೆರಳಿ, ಸ್ಥಳ ಪರಿಶೀಲನೆ ನಡೆಸಿದರು. ಬೈಕ್‍ನಲ್ಲಿ ಬಂದಿದ್ದ ಸರಗಳ್ಳರು ತಮ್ಮ ವಾಹನಕ್ಕೆ ಅತೀ ಸಣ್ಣದಾಗಿ ಕಾಣುವ ನಂಬರ್ ಪ್ಲೇಟ್ ಅನ್ನು ಅಳವಡಿಸಿದ್ದು, ಎರಡು ಕಡೆ ಈ ಇಬ್ಬರೇ ಕೃತ್ಯ ನಡೆಸಿದರೆ ಅಥವಾ ಇಂತಹ ಹಲವು ಮಂದಿ ಗ್ಯಾಂಗ್ ಮಾಡಿಕೊಂಡು ಪ್ರತ್ಯೇಕ ಪ್ರತ್ಯೇಕವಾಗಿ ಸರಗಳ್ಳತನದ ಕಾರ್ಯಚರಣೆಗಿಳಿದಿರುವರೇ ತನಿಖೆಯೆಂದ ತಿಳಿಯಬೇಕಿದೆ.

      ದುಡಿಮೆಯಿಲ್ಲದೆ ಹೆಚ್ಚುತ್ತಿರುವ ಅಪರಾಧಗಳು: ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ದುಡಿಮೆ, ಕೆಲಸವಿಲ್ಲದೆ ಎದುರಾದ ಆರ್ಥಿಕ ಸಂಕಷ್ಟ, ಲಾಕ್‍ಡೌನ್ ತೆರವಿನ ಬಳಿಕ ಅಪರಾಧ ಕೃತ್ಯಗಳು ಹೆಚ್ಚಲು ಕಾರಣವಾಗಿದ್ದು, ಕೆಲಸವಿಲ್ಲದೆ ತಿರುಗುತ್ತಿರುವವರು ಬೇಗ ಹಣ ಲಪಟಾಯಿಸುವ ಮಾರ್ಗವಾಗಿ ಸರಗಳ್ಳತನ, ಕೊಲೆ, ಸುಲಿಗೆಯ ಹಾದಿ ಹಿಡಿದಿರುವುದು ನಾಗರಿಕರ ನೆಮ್ಮದಿಗೆ ಭಂಗ ತಂದಿದೆ.

ರಾಹುಲ್‍ಕುಮಾರ್ ಶಹಾಪುರವಾಡ್, ಎಸ್ಪಿ

– ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap