ತುಮಕೂರು :
ಮದಲೂರು ಕೆರೆಗೆ ನೀರು ಹರಿಸುವ ವಿಚಾರವಾಗಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ನಾವು ಬಲಿಯಾಗಲು ಸಿದ್ದರಿಲ್ಲ. ಕಳ್ಳಂಬೆಳ್ಳ ಕೆರೆಗೆ ಅಲೋಕೇಷನ್ ಆಗಿರುವ 0.89 ಟಿಎಂಸಿಯಲ್ಲಿ ಮದಲೂರು ಕೆರೆಗಾದರೂ ಹರಿಸಲಿ, ಶಿರಾಕ್ಕಾದರೂ ಹರಿಸಲಿ. ಅಲೋಕೇಷನ್ ಬಿಟ್ಟು ಸಿರಾ ಒಂದು ಡ್ರಾಪ್ ಹೆಚ್ಚುವರಿ ನೀರು ಕೊಡಲು ಸಾಧ್ಯವಿಲ್ಲ. ಮದಲೂರು ಕೆರೆಗೆ ನೀರು ಹರಿಸುವ ಔದಾರ್ಯತೆ ಟಿಬಿಜೆಗಿದ್ದರೆ ಕಳ್ಳಂಬೆಳ್ಳದಿಂದ ಸಿರಾವರೆಗೆ ಮಾಡಿರುವ ಪಿಕಪ್‍ಗಳನ್ನು ತೆಗೆಸಿ ಮದಲೂರು ಕೆರೆಗೂ ಹೇಮೆ ನೀರು ಹರಿಸಲಿ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿರಾಕ್ಕೆ 0.89 ಟಿಎಂಸಿಗಿಂತ ಹೆಚ್ಚುವರಿ ನೀರು ಅಲೋಕೇಟ್ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದು, ನಾವು ತೀರ್ಪನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಮದಲೂರು ಕೆರೆಗೆ ಕುಡಿಯುವ ನೀರಿನ ಯಾವುದೇ ಸ್ಕೀಂ ಮಾಡಿಲ್ಲ. ಆರ್‍ಡಿಪಿಆರ್ ಇಲಾಖೆಯಿಂದ ನಾಲೆಯನ್ನು ತೆಗೆದು, ಅಲೋಕೇಟ್ ಆಗಿರುವ 0.89 ಟಿಎಂಸಿಯಲ್ಲಿ 0.4 ಟಿಎಂಸಿಯಷ್ಟು ಮದಲೂರು ಕೆರೆಗೆ ನೀರನ್ನು ಹರಿಸಬಹುದೆಂದು ಜಯಚಂದ್ರ ಅವರು ಆದೇಶ ಮಾಡಿಸಿದ್ದಾರೆ ಹೊರತು ಮದಲೂರಿಗೆ ಹೇಮಾವತಿ ನೀರಿನಲ್ಲಿ ಪ್ರತ್ಯೇಕ ಅಲೋಕೇಟ್ ಆಗಿಲ್ಲ. ನಮಗೆ ಕಳ್ಳಂಬೆಳ್ಳ, ಸಿರಾ ನಗರದ 60000 ಜನರಿಗೆ ಕುಡಿಯುವ ನೀರು, ಯಲಿಯೂರು ಬಹುಗ್ರಾಮ ಯೋಜನೆಗೆ ನೀರೊದಗಿಸುವುದು ಮೊದಲ ಆದ್ಯತೆಯಾಗಿದೆ. ಅಲೋಕೇಟ್ ಆಗಿರುವ ನೀರಿನಲ್ಲಿ ಸಿರಾ ಕೆರೆಯನ್ನೇ ಪೂರ್ಣತುಂಬಿಸಲು ಸಾಧ್ಯವಿಲ್ಲದಿರುವಾಗ ಮದಲೂರಿಗೆ ಹೇಗೆ ನೀರು ಹರಿಸುತ್ತಾರೆ. ಈ ವಾಸ್ತವಾಂಶ ತಿಳಿದಿದ್ದರೂ ಉಪಚುನಾವಣೆಯ ಫಲಿತಾಂಶ ಆಧರಿಸಿ ಜಯಚಂದ್ರ ರಾಜಕೀಯ ಮಾಡಲು ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಸದರೇ ಗೈಡ್ ಮಾಡದೆ ಸುಮ್ಮನಿದ್ದಿದ್ದೇಕ್ತೆ:
ಸಿರಾಗಿರುವ ಅಲೋಕೇಷನ್‍ನಲ್ಲಿ ಮದಲೂರು ಕೆರೆಗೆ 0.4 ಟಿಎಂಸಿ ನೀರು ಹರಿಸಬಹುದೆಂದು ಆಗಿರುವ ಆದೇಶವನ್ನು ಸಂಸದ ಜಿ.ಎಸ್.ಬಸವರಾಜು ಕಾವೇರಿ ನೀರಾವರಿ ನಿಗಮದ ಎಂಡಿ ಅವರಿಂದ ಮಾಹಿತಿ ಪಡೆದು ನನಗೆ ಅಧಿಕಾರಿಗಳು ಮಿಸ್‍ಗೈಡ್ ಮಾಡಿದ್ದಾರೆಂದು ಎಂದು ಹೇಳಿಕೆ ನೀಡಿದ್ದಾರೆ. ನನಗ್ಯಾರು ಮಿಸ್‍ಗೈಡ್ ಮಾಡಿಲ್ಲ. ನನಗೆ ಈ ಮಾಹಿತಿ ಮೊದಲೇ ಅರಿವಿದ್ದೇ ಹೈಕೋರ್ಟ್ ತೀರ್ಪನ್ನು ಆಧರಿಸಿ ನೀರು ಹರಿಸುವ ಇರುವ ಕಾನೂನು ಅಡಚಣೆಯನ್ನು ನೇರವಾಗಿ ಪ್ರಸ್ತಾಪಿಸಿದ್ದೇನೆ. ನನಗೆ ಯಾರಾದರೂ ಮಿಸ್‍ಗೈಡ್ ಮಾಡಿದ್ದರೆ, ನನ್ನ ಜೊತೆಯಲ್ಲಿ ಸಭೆಗಳಿಗೆ ಹಾಜರಾಗುತ್ತಿದ್ದ ಸಂಸದರೇ ಗೈಡ್ ಮಾಡಬಹುದಿತ್ತಲ್ಲಾ. ಹಲವು ಸಭೆಗಳಲ್ಲಿ ಸಂಸದರೆ ಶಿರಾಗೆ ಕಾನೂನಿನನ್ವಯ ನೀರು ಹರಿಸಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಡಿಸಿ ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.
ಇನ್ನೆರೆಡು ದಿನದಲ್ಲಿ ಹತ್ಯೆ ಆರೋಪಿಗಳ ಮಾಹಿತಿ
ಚಿಕ್ಕಹಳ್ಳಿಯಲ್ಲಿ ನಡೆದ ಮಹಿಳೆ ಅತ್ಯಾಚಾರ, ಕೊಲೆ ಪ್ರಕರಣವನ್ನು ಮೈಸೂರು ಪ್ರಕರಣಕ್ಕಿಂತಲೂ ಗಂಭೀರವಾಗಿ ಪರಿಗಣಿಸಿ 3 ತಂಡಗಳಾಗಿ ತನಿಖೆ ನಡೆಸುತ್ತಿದ್ದು, ಇನ್ನೆರೆಡು ದಿನಗಳಲ್ಲಿ ಆರೋಪಿಗಳ ಸುಳಿವಿನ ಶುಭ ಸುದಿ ನೀಡಲಿದ್ದೇವೆ ಎಂದ ಸಚಿವ ಮಾಧುಸ್ವಾಮಿ ಅವರು ಡಿಸಿ, ಎಸ್ಪಿ ಜೊತೆ ತಾವೂ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಅವಲೋಕಿಸಿದ್ದು, ನಿರ್ಜನ ಪ್ರದೇಶದಲ್ಲಿ ದುಷ್ಕøತ್ಯ ನಡೆದಿದೆ. ಅಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಿಲ್ಲ. ಶ್ರಮಜೀವಿಯಾದ ಮಹಿಳೆಯ ಮೇಲೆ ದೌರ್ಜನ್ಯವೆಸಗಿದವರಿಗೆ ತಕ್ಕ ಶಿಕ್ಷೆ ಕೊಡಿಸಲಾಗುವುದು ಎಂದರು.
ನಾವ್ಯಾರು ಅತೃಪ್ತರಲ್ಲ, ಕಡೆಯವರೆಗೂ ಬಿಜೆಪಿಯಲ್ಲಿ ಉಳಿಯುವೆ : ಎಂಟಿಬಿ ನಾಗರಾಜು
ಬಿಜೆಪಿಗೆ ಬಂದಿರುವ 17 ಮಂದಿಯು ನಾವ್ಯಾರು ಅತೃಪ್ತರಲ್ಲ. ತೃಪ್ತರಾಗಿದ್ದೇವೆ. ಮುಂದಿನ 2 ವರ್ಷ ಬಿಜೆಪಿ ಸರಕಾರ ಸುಸ್ಥಿರ ಆಡಳಿತ ನಡೆಸಲಿದ್ದು, 2023ರಲ್ಲೂ ಬಿಜೆಪಿ ಸರಕಾರವೇ ಅಸ್ಥಿತ್ವಕ್ಕೆ ಬರಲಿದೆ. ನಾನಂತೂ ಅಧಿಕಾರ, ಯಾವುದೇ ಆಮಿಷಕ್ಕಾಗಿ ಬಿಜೆಪಿಗೆ ಬಂದವನಲ್ಲ. ನನಗೀಗ 72 ವರ್ಷ ವಯಸ್ಸು. ರಾಜಕೀಯ ಅಂತ್ಯಕಾಲದಲ್ಲಿದ್ದೇನೆ. ಅಧಿಕಾರ ಬರಲಿ, ಬಿಡಲಿ, ಬಿಜೆಪಿಯಲ್ಲೇ ಉಳಿಯುವೆ. ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ ಎಂದರು