ತುಮಕೂರು :
ಜಿಲ್ಲೆಯ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1189 ಕ್ಷೇತ್ರಗಳ 2543 ಸದಸ್ಯ ಸ್ಥಾನಗಳಿಗೆ 1321 ಮತಗಟ್ಟೆಗಳಲ್ಲಿ ಡಿಸೆಂಬರ್ 27ರಂದು ನಡೆಯಲಿರುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು(ಡಿ.16) ಕಡೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.
ನಾಮಪತ್ರಗಳನ್ನು ಡಿಸೆಂಬರ್ 17ರಂದು ಪರಿಶೀಲನೆ ನಡೆಸಲಾಗುವುದು. ನಂತರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 19ರವರೆಗೆ ಅವಕಾಶ ನೀಡಲಾಗಿದೆ. ಮತದಾನದ ಅವಶ್ಯವಿದ್ದರೆ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನವಿದ್ದಲ್ಲಿ ಡಿಸೆಂಬರ್ 29ರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮತ ಎಣಿಕೆಯು ಡಿಸೆಂಬರ್ 30ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಡಿ.31ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಉಮೇದುವಾರರು ನಾಮಪತ್ರಗಳನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗಿನ ಅವಧಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ