ತುಮಕೂರು :
ಜಿಲ್ಲಾ ಕಾಂಗ್ರೆಸ್ ಸಂಘಟನೆ ಹಾಗೂ ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಕೈ ಅಭ್ಯರ್ಥಿ ಆಯ್ಕೆ ಕುರಿತು ಮಹತ್ವದ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹಾಗೂ ಕಾರ್ಯಾಧ್ಯಕ್ಷರುಗಳು ನೇತೃತ್ವದಲ್ಲಿ ಶನಿವಾರ ರಾಜಧಾನಿಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ಬಹುತೇಕ ಕಾಂಗ್ರೆಸ್ ನಾಯಕರೆಲ್ಲರೂ ಭಾಗವಹಿಸಿದ್ದು, ಮುಂಬರುವ ವಿಧಾನಪರಿಷತ್ ಸ್ಥಳೀಯಸಂಸ್ಥೆ ಚುನಾವಣೆಗೆ ಕೈ ಅಭ್ಯರ್ಥಿಯನ್ನು ಮೊದಲೇಘೋಷಿಸಿ ಪಕ್ಷ ಸಂಘಟಿಸಲು ತೀರ್ಮಾನಿಸಿದ್ದು, ಶೀಘ್ರದಲ್ಲಿ ಆಕಾಂಕ್ಷಿಗಳ ಅರ್ಜಿ ವಿಲೆ ಮಾಡಲು ತೀರ್ಮಾನಿಸಲಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುವ ಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ, ಆಡಿಟರ್ ನಾಗರಾಜ್ ಯಲಚವಾಡಿ, ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ನರಸೀಯಪ್ಪ ಮತ್ತಿತರರು ಈ ಬಾರಿ ಕೈ ಅಭ್ಯರ್ಥಿಯಾಗಲು ಉತ್ಸಕರಾಗಿದ್ದು, ಶೀಘ್ರ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲು ಮುಖಂಡರು ಚರ್ಚಿಸಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಘಟಕಗಳ ಪುನರ್ರಚನೆ: ಜಿಲ್ಲೆಯ ಬ್ಲಾಕ್ ಕಾಂಗ್ರೆಸ್, ವಿವಿಧ ಘಟಕಗಳನ್ನು ವಿಸರ್ಜಿಸಿ ಪುನರ್ರಚಿಸುವ ಜೊತೆಗೆ ಬೂತ್ ಸಮಿತಿಯನ್ನು ಅಸ್ಥಿತ್ವಕ್ಕೆ ತರುವುದಾಗಿ ಕೆಪಿಸಿಸಿ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದ್ದು,ಹೊಸ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆಯೂ ಚರ್ಚೆಗಳು ನಡೆದಿವೆ.
ಸಭೆಯಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ವೆಂಕಟರವಣಪ್ಪ, ಶಾಸಕ ಡಾ.ಕೆ.ರಂಗಾಥ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಎಸ್ಷಫಿಅಹಮದ್, ಡಾ.ರಫೀಕ್ ಅಹಮದ್, ಕೆ.ಷಡಕ್ಷರಿ, ಆರ್.ನಾರಾಯಣ್, ಎಂ.ಡಿ.ಲಕ್ಷ್ಮಿನಾರಾಯಣ್, ಬಿ.ಬಿ.ರಾಮಸ್ವಾಮಿಗೌಡ, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರಾದ ಹೊನ್ನಗಿರಿಗೌಡ, ಆರ್.ರಾಜೇಂದ್ರ, ರಾಯಸಂದ್ರ ರವಿ, ಆಡಿಟರ್ ನಾಗರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ