ತುಮಕೂರು :
ಗೌರಿ-ಗಣೇಶ ಹಬ್ಬದ ಆಚರಣೆಯ ಸಡಗರ ಒಂದೆಡೆಯಾದರೆ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಂದ ಜಿಲ್ಲೆಯ ಜನಸಾಮಾನ್ಯರಿಗೆ ಏರಿರುವ ದುಬಾರಿ ಬೆಲೆ ಹೊರೆಯಾಗಿ ಪರಿಣಮಿಸಿದೆ.
ಹಣ್ಣು-ಹೂಗಳ ಬೆಲೆ ತುಟ್ಟಿಯಾಗಿದ್ದು, ಕೆಜಿ ಬಿಡಿ ಹೂ 160 ರಿಂದ 180 ರೂ., ಹೂವ್ವಿನ ಹಾರ ಜೊತೆ 200, ಬಾಳೆಕಂದು ಜೋಡಿ 30 ರಿಂದ 80ರೂ.ವರೆಗೆ, ಸೇವಂತಿಗೆ ಮಾರೊಂದಕ್ಕೆ 80 ರಿಂದ 120 ರೂ.,ಬಟನ್ಸ್ 60 ರೂ. ಮಲ್ಲಿಗೆ -ಕಾಕಡ 80 ರಿಂದ 100 ರೂ.ವರೆಗೆ ಮಾರಾಟವಾಗುತ್ತಿದ್ದುದು ಕಂಡುಬಂತು. ಹಣ್ಣುಗಳ ಪೈಕಿ ಸೇಬು 100 ರಿಂದ 150 ರೂ.ಗಳವರೆಗೆ ಪ್ರತಿ ಕೆಜಿಗೆ ಧಾರಣೆಯಿದ್ದರೆ, ಮರಸೇಬು 120ರೂ. ಮೂಸಂಬಿ 60 ರೂ. ಸಪೋಟ 80 ರೂ. ಕೆಜಿಗೆ ದರ ನಿಗದಿಯಾಗಿತ್ತು.
ಬಾಳೆಹಣ್ಣು ಪ್ರತೀ ಕೆಜಿಗೆ 50-60 ದರವಿದ್ದು, ತರಕಾರಿಗಳ ದರವೂ ಸಾಮಾನ್ಯ ದಿನಗಳಿಗಿಂತ ತುಟ್ಟಿಯಾಗಿತ್ತು. ಸೌತೆಕಾಯಿ ಒಂದಕ್ಕೆ 15 ರೂ. ಹೇಳುತ್ತಿದ್ದುದು, ದುಬಾರಿ ಬೆಲೆಗೆ ಸಾಕ್ಷಿಯಾಗಿತ್ತು.
ಖಾದ್ಯಗಳ ಸಾಮಗ್ರಿ ದರವೂ ಏರಿಕೆ:
ಗೌರಿ ಗಣೇಶ ಹಬ್ಬಕ್ಕೆ ವಿಶೇಷವಾಗಿ ಸಿಹಿ, ಕಾರದ ಖಾದ್ಯಗಳನ್ನು ಮಾಡುವುದು ಸಂಪ್ರದಾಯ. ಮೋದಕ, ಕರಗಡುಬು ಗಣೇಶನಿಗೆ ಪ್ರಿಯ. ಗೌರಿಗೆ ಒಬ್ಬಟ್ಟು, ಚಿಗಳಿ ತಂಬಿಟ್ಟು ನೈವೇದ್ಯ ಮಾಡುತ್ತಾರೆ. ಇವುಗಳ ತಯಾರಿಗೆ ಅಗತ್ಯವಾದ ಅಡುಗೆ ಎಣ್ಣೆ , ಬೆಲ್ಲ, ಸಕ್ಕರೆ ದರ ತುಟ್ಟಿಯಾಗಿದ್ದು, ತಯಾರಿಗೆ ಅಗತ್ಯವಾದ ಗೃಹಬಳಕೆ ಸಿಲಿಂಡರ್ ದರವನ್ನು ಕೇಳಿಯೇ ಗಾಬರಿ ಬೀಳುವ ಸ್ಥಿತಿ ಜನಸಾಮಾನ್ಯರದ್ದಾಗಿದೆ.
ಹಳ್ಳಿಯಿಂದ ಮಾವಿನಸೊಪ್ಪು, ಬಾಳೆಕಂದು, ಹೂವ್ವನ್ನು ಪಟ್ಟಣಕ್ಕೆ ಮಾರಾಟಕ್ಕೆ ತಂದಿರುವ ರೈತರು ಗ್ರಾಹಕರು ಕೇಳುವ ಕಡಿಮೆ ರೇಟಿಗೆ ಕೊಡಲು ಆಗದೆ, ಏರುತ್ತಿರುವ ತೈಲ ಬೆಲೆಯಲ್ಲಿ ವಾಹನದಲ್ಲಿ ವಾಪಸ್ ಕೊಂಡೊಯ್ಯಲು ಆಗದೆ ಗೊಣಗಾಡುತ್ತಿದ್ದುದು ಕಂಡುಬಂತು. ಇನ್ನೂ ದೇವಾಲಯಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆಗೆ ದೇವಾಲಯವನ್ನು ಶುಚಿಗೊಳಿಸಿ ತಳಿರು-ತೋರಣಗಳಿಂದ ಅಲಂಕರಿಸುತ್ತಿದ್ದುದು ಗಮನಸೆಳೆಯಿತು.
ನಾರಿಯರ ಖರೀದಿ ಭರಾಟೆ, ಊರಿನತ್ತ ಪಯಣ
ಜಿಲ್ಲಾ ಕೇಂದ್ರದ ನಗರದ ಅಂತರಸನಹಳ್ಳಿ ಮಾರುಕಟ್ಟೆ, ಚಿಕ್ಕಪೇಟೆ, ಸೊಮೇಶ್ವರಪುರಂ, ಶೆಟ್ಟಿಹಳ್ಳಿಮುಖ್ಯರಸ್ತೆ, ಕ್ಯಾತ್ಸಂದ್ರ ರಿಂಗ್‍ರಸ್ತೆ, ಕುಣಿಗಲ್ ರಸ್ತೆ, ಸರಸ್ವತಿಪುರಂ, ಶಿರಾಗೇಟ್, ಗುಬ್ಬಿಗೇಟ್ ಹೀಗೆ ನಗರದ ಸುತ್ತಲೂ ಹಬ್ಬದ ಸಾಮಗ್ರಿಗಳು, ಗೌರಿ ಗಣೇಶ ಮೂರ್ತಿಗಳ ಮಾರಾಟ ಗಮನಸೆಳೆಯಿತು. ಹೆಣ್ಣು ಮಕ್ಕಳು ಗೌರಿ ಬಾಗಿನ ನೀಡಲು ಮರಗಳು, ಬಳೆಬಿಚ್ಚೋಲೆ, ಕನ್ನಡಿ, ಪಂಚಫಲಗಳು, ರವಿಕೆ, ಸೀರೆ, ವೀಳ್ಯದೆಲೆ ಅಡಿಕೆಗಳನ್ನು ವಿಶೇಷವಾಗಿ ಖರೀದಿಸಿದರು.
ಚಿನ್ನಾಭರಣ, ಹೊಸ ಬಟ್ಟೆ ಖರೀದಿ ಭರಾಟೆಯೂ ಕಂಡುಬಂತು. ಹಬ್ಬಕ್ಕೆ ಊರಿಗೆ ತೆರಳಲು ನೌಕರರು ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬಸ್‍ನಿಲ್ದಾಣಗಳಲ್ಲಿ ಕಂಡುಬಂದರು. ಹಬ್ಬಕ್ಕಾಗಿ ಹೆಚ್ಚುವರಿ ಬಸ್‍ಗಳನ್ನು ಕೆಎಸ್‍ಆರ್‍ಟಿಸಿಯವರು ಬಿಟ್ಟಿದ್ದು, ಶುಕ್ರವಾರ ಹಬ್ಬದ ರಜೆ, ಶನಿವಾರ ಒಂದು ರಜೆ ಹಾಕಿ, ಭಾನುವಾರ ಮಾಮೂಲಿ ರಜೆಯ ಕ್ಷಣಗಳನ್ನು ಊರಿನಲ್ಲಿ ಕಳೆಯಲು ನೌಕರರುಗಳು ಪ್ರಯಾಣ ಬೆಳೆಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ